ಇವರು ಮಾರ್ಚ್ ತಿಂಗಳಲ್ಲಿ ಸನಾತನಿ ಜಂಗಮರು, ಮೇ ತಿಂಗಳಲ್ಲಿ ಬೇಡ ಜಂಗಮರು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಒಳ ಮೀಸಲಾತಿ ಸಮೀಕ್ಷೆಯಲ್ಲಿ ‘ಬೇಡ ಜಂಗಮ’ ಅಂತ ಬರೆಸಿ ಎಂದು ‘ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ’ ‘ಜಂಗಮ ಬಂಧುಗಳಿಗೆ’ ಮನವಿ ಮಾಡಿಕೊಂಡಿದೆ.

ಇದು ಸುಳ್ಳು ಜಾತಿ ಕಲ್ಪಿಸಿಕೊಂಡು ಮೀಸಲಾತಿ ಪಡೆಯುವ ಸಂಚೆಂದು ಪರಿಶಿಷ್ಟ ವರ್ಗಗಳ ಮುಖಂಡರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ದೂರನ್ನೂ ನೀಡಿದ್ದಾರೆ.

‘ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ’ಯ ಮನವಿ ಪತ್ರ ಸಂಘಟನೆಯ ಲೆಟ್ಟರ್ ಹೆಡ್ಡಿನಲ್ಲಿ ಮುದ್ರಣವಾಗಿದೆ. ಅದರಲ್ಲಿ ಮೂವರು ಪದಾಧಿಕಾರಿಗಳ ಹೆಸರು ಮತ್ತು ಫೋನ್ ನಂಬರುಗಳೂ ಇವೆ: ಡಿ. ಸೋಮಶೇಖರ ಮಂಡಿಮಠ (ಅಧ್ಯಕ್ಷರು); ಎಂ ಟಿ ಮಲ್ಲಿಕಾರ್ಜುನ ಸ್ವಾಮಿ (ಕಾರ್ಯಧ್ಯಕ್ಷರು); ಎಸ್ ಷಡಾಕ್ಷರಯ್ಯ (ಪ್ರಧಾನ ಕಾರ್ಯದರ್ಶಿ).

ಮನವಿ ಪತ್ರದಲ್ಲಿರುವ ಮಾಹಿತಿ ‘ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ’ಯ ಪರವಾಗಿಯೇ ಹೊರಡಿಸಲಾಗಿದೆ ಎಂದು ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಖಚಿತ ಪಡಿಸಿದರು.

ಸೋಮಶೇಖರ ಮಂಡಿಮಠ ಮತ್ತು ಷಡಕ್ಷರಯ್ಯ ಬಸವ ಮೀಡಿಯಾದ ಕರೆ ಸ್ವೀಕರಿಸಲಿಲ್ಲ. ನಮ್ಮ ವಾಟ್ಸ್ ಆಪ್ ಸಂದೇಶಗಳಿಗೂ ಸ್ಪಂದಿಸಲಿಲ್ಲ.

ವೀರಶೈವ ಜಂಗಮರ ವಿರುದ್ಧ ನಾಗಮೋಹನ್ ದಾಸ್ ಅವರಿಗೆ ದೂರು ನೀಡುತ್ತಿರುವ ಪರಿಶಿಷ್ಟ ವರ್ಗಗಳ ಮುಖಂಡರು

ಆದರೆ ಷಡಾಕ್ಷರಯ್ಯ ಬಸವ ಮೀಡಿಯಾದ ಜೊತೆ ಏಪ್ರಿಲ್ ತಿಂಗಳಲ್ಲಿ ಬೇರೊಂದು ವಿಷಯದ ಮೇಲೆ ವಿವರವಾಗಿ ಮಾತನಾಡಿದ್ದರು.

ಮುರುಘಾ ಮಠಕ್ಕೆ ಜಂಗಮ ಶ್ರೀ

ನಿಮಗೆ ನೆನಪಿರಬಹುದು ಏಪ್ರಿಲ್ ತಿಂಗಳಲ್ಲಿ ಮತ್ತೊಂದು ಚಿತ್ರದುರ್ಗದ ಸಂಘಟನೆ ಸುದ್ದಿ ಮಾಡಿತ್ತು.

ಮುರುಘಾ ಮಠಕ್ಕೆ ಜಂಗಮ ಸಮಾಜದ ಶ್ರೀಗಳನ್ನು ಉಸ್ತುವಾರಿ ಗುರುಗಳನ್ನಾಗಿ ನೇಮಿಸಿ ಜಂಗಮ ಪರಂಪರೆಯ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ‘ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜ ಸಂಸ್ಥೆ’ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಬರೆದಿತ್ತು.

‘ನಮ್ಮ ಹಿಂದೂ ಸನಾತನ ಪಂಚಾಂಗದ ಪ್ರಕಾರ ವರ್ಷದ ಮೊದಲನೇ ಹಬ್ಬ ಯುಗಾದಿಯಂದು ಚಂದ್ರ ದರ್ಶನದ ನಂತರ ಮಠದಲ್ಲಿ ಜಂಗಮ ಶ್ರೀಗಳ ದರ್ಶನ ಪಡೆಯುವ ಸಂಪ್ರದಾಯವನ್ನು ಮುಂದುವರೆಸಬೇಕೆಂದು’ ಪತ್ರದಲ್ಲಿ ಆಗ್ರಹಿಸಲಾಗಿತ್ತು.

ಮಠದ ಪ್ರಮುಖರೊಬ್ಬರು ಈ ಪತ್ರದ ಬಗ್ಗೆ ಮಾತನಾಡುತ್ತ, ಇಲ್ಲಿಯವರೆಗೆ ಮಠದ ಗುರುಗಳೆಲ್ಲರೂ ಜಂಗಮ ಸಮಾಜದಿಂದ ಬಂದಿದ್ದರು. ಈಗ ಉಸ್ತುವಾರಿಯಾಗಿರುವ ಪೂಜ್ಯ ಬಸವಕುಮಾರ ಶ್ರೀಗಳು ಜಾತಿ ಜಂಗಮರಲ್ಲ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು.

ಮುರುಘಾ ಮಠಕ್ಕೆ ಜಂಗಮ ಶ್ರೀಗಳನ್ನು ನೇಮಿಸಲು ‘ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜ ಸಂಸ್ಥೆ’ ಪತ್ರ ಬರೆದಿದೆ.

ಮಾರ್ಚ್ ಪತ್ರವನ್ನು ‘ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜ ಸಂಸ್ಥೆ’ಯ ಲೆಟರ್ ಹೆಡ್ ನಲ್ಲಿ ಹೊರಡಿಸಲಾಗಿತ್ತು. ಅದರಲ್ಲಿ ಸಂಘಟನೆಯ ಮೂವರು ಪದಾಧಿಕಾರಿಗಳ ಹೆಸರು ಮುದ್ರಣವಾಗಿತ್ತು: ಡಿ. ಸೋಮಶೇಖರ ಮಂಡಿಮಠ (ಅಧ್ಯಕ್ಷರು); ಎಂ ಟಿ ಮಲ್ಲಿಕಾರ್ಜುನ ಸ್ವಾಮಿ (ಕಾರ್ಯಧ್ಯಕ್ಷರು); ಎಸ್ ಷಡಾಕ್ಷರಯ್ಯ (ಪ್ರಧಾನ ಕಾರ್ಯದರ್ಶಿ).

ಇವರಲ್ಲಿ ಷಡಾಕ್ಷರಯ್ಯ ಅವರಿಗೆ ಕರೆ ಮಾಡಿದಾಗ ಅವರು “ಮುರುಘಾ ಮಠಕ್ಕೆ ಇಲ್ಲಿಯವರೆಗೆ 25 ಜನ ಪೀಠಾಧಿಪತಿಗಳು ಆಗಿದ್ದರಲ್ಲ, ಅವರೆಲ್ಲ ಯಾರು ಅಂತ ದಾಖಲೆ ಕೊಡ್ತೀವಿ, ಅದೇ ಪರಂಪರೆ ಮುಂದುವರೆಯಬೇಕು. ಅದಕ್ಕೆ ಜಂಗಮರನ್ನೇ ಮಠಕ್ಕೆ ಉಸ್ತುವಾರಿ ಮಾಡಿ ಅಂತ ಕೇಳಿದ್ದೀವಿ,” ಎಂದು ಹೇಳಿದರು.

“ಸಂವಿಧಾನವು ಎಲ್ಲಾ ಪರಂಪರೆಗಳು ಹಾಗೆಯೇ ಉಳಿಯಬೇಕು ಅಂತ ಹೇಳಿದೆ. ಮುಸ್ಲಿಮರು ಮುಸ್ಲಿಮರಾಗಿಯೇ ಉಳಿಬೇಕು, ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಉಳಿಬೇಕು ಅಂತ ಹೇಳಿದೆ. ಅದಕ್ಕೆ ಮುರುಘಾಮಠ ಜಂಗಮ ಪರಂಪರೆಯ ಮಠವಾಗಿಯೇ ಉಳಿಯಬೇಕು,” ಎಂದೂ ಹೇಳಿದರು.

ಸಂವಿಧಾನ ಜಂಗಮರಿಗೂ ಜಂಗಮರಾಗಿಯೇ ಉಳಿಯಲು ಅವಕಾಶ ನೀಡಿದ್ದರೂ ಎರಡು ತಿಂಗಳಲ್ಲಿಯೇ ಸನಾತನ ಜಂಗಮರು ದಲಿತ ಬೇಡ ಜಂಗಮರಾಗಿ ಬದಲಾಗಿರುವುದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಪವಾಡ.

ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂದು ಕೆಲವರು ಹೇಳುತ್ತಾರೆ. ಆದರೆ ತಿಂಗಳಿಗೆ ತಕ್ಕಂತೆ ಬದಲಾಗುವವರನ್ನು ನೋಡಿದ್ದು ಇದೇ ಮೊದಲು ಎಂದು ಈ ವರದಿ ಬರೆಯುವಾಗ ಅನಿಸಿತು.

ಕೆಳಗೆ ಎರಡೂ ಲೆಟ್ಟರ್ ಹೆಡ್ಡುಗಳನ್ನು ಲಗತ್ತಿಸಿದ್ದೇವೆ. ಅದರಲ್ಲಿ ಮೊದಲನೆಯದು ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಹೆಸರಿನಲ್ಲಿದೆ. ಎರಡನೆಯದು ‘ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜ ಸಂಸ್ಥೆ’ಯ ಹೆಸರಿನಲ್ಲಿದೆ.

ಇದರಲ್ಲಿ ಮೊದಲನೆ ಸಂಘಟನೆಯ ಕಚೇರಿ ಇರುವುದು: ಜೆ ಸಿ ಆರ್ ಸರ್ಕಲ್, ಸೆಂಟ್ರಲ್ ಬ್ಯಾಂಕ್ ಬಿಲ್ಡಿಂಗ್, ಮೊದಲನೇ ಮಹಡಿ, ಚಿತ್ರದುರ್ಗ – 577 501.

ಈಗ ಎರಡನೇ ಸಂಘಟನೆಯ ಕಚೇರಿ ವಿಳಾಸ ಎಲ್ಲಿದೆ ಎಂದು ನೀವೇ ನೋಡಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
3 Comments
  • ಜನಗಣತಿ, ಜಾತಿಗಣತಿ ನಂತರ ಯಾವ ಜಂಗಮರಾಗುತ್ತಾರೋ ಕಾದು ನೋಡ ಬೇಕು. ಒಟ್ಟಿನಲ್ಲಿ ಎಲ್ಲಾ ಜಂಗಮರೂ ಪರಿಶಿಷ್ಟ ಜಾತಿಗೆ ಸಾಮೂಹಿಕವಾಗಿ ಸೇರ್ಪಡೆಯಾಗಲು ಹೊರಟಿದ್ದಾರೆ. ಏಕೆಂದರೆ, ಇದುವರೆವಿಗು ಯಾವುದೇ ಜಂಗಮ ಯಾವುದೇ ರೀತಿ ವಿರೋದಿಸಿಲ್ಲ. ಬಹುಶಃ ಇದಕ್ಕೆಲ್ಲ ಕಾರಣ ‌ಅ.ಭಾ.ವಿ. ಮಹಾಸಭೆಯ ದಾವಣಗೆರೆಯ ಮಹಾ ಅಧಿವೇಶನದ ‍ನಿರ್ಣಯಗಳು ಕಾರಣ ಇರಬಹುದು. ಪರಿಶಿಷ್ಟರನ್ನು ಉದ್ದಾರ ಮಾಡಲು ಪರಿಶಿಷ್ಟರಾಗಿ ಹೋಗುತ್ತಿರುವುದು ಉತ್ತಮ ಬೆಳವಣಿಗೆ.

  • ಇವರುಗಳು ಲಿಂಗಾಯತರು ಗಳಲ್ಲವೇ? ಅಲ್ಲದೇ ಇದ್ದಲ್ಲಿ ಇವರುಗಳು ವೀರಶೖವರು ಎಂದು ಬರೆಸಲು ಬಾರದು.

    • ಬಸವ ಮಿಡಿಯಾದವರೆ, ಬೇಡ ಜಂಗಮರ ಒಕ್ಕೂಟದ ಅಧ್ಯಕ್ಷರ ಮತ್ತು ಮುಖಂಡರನ್ನು ಭೇಟಿಯಾಗಿ ಯಾರು ಬೇಡ ಜಂಗಮರು ಮತ್ತು ಅದಕ್ಕೆ ಬೇಕಾದ ದಾಖಲೆಗಳು ಸಂವಿಧಾನದ ಪ್ರಕಾರ ವೀರಶೈವ ಅಥವಾ ಲಿಂಗಾಯತ ಜಂಗಮರೆ ಬೇಡ ಜಂಗಮರು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ಪುರಾವೆಗಳು ಇವೆ. ಮೊದಲು ಅದನ್ನು ಓದಿಬಿಟ್ಟು ಮಾತಾಡಿ ಜನರನ್ನ ದಾರಿ ತಪ್ಪಿಸಬೇಡಿ.

Leave a Reply

Your email address will not be published. Required fields are marked *