ಬಸವಣ್ಣನವರಂತೆ ಬದುಕಬೇಕು, ಸಂಕಷ್ಟ ಎದುರಾದಾಗ ಶಿವಾಜಿಯಂತೆ ಹೋರಾಡಬೇಕು – ಭೀಮಣ್ಣ ಖಂಡ್ರೆ
ಬೀದರ್
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ರಾತ್ರಿ ಲಿಂಗೈಕ್ಯರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ನಗರದ ಗುದಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅವರ ಇಚ್ಛೆಯ ಮೇರೆಗೆ ಜನವರಿ ೧೨ ಮನೆಗೆ ಕೊಂಡೊಯ್ಯಲಾಗಿತ್ತು. ಮನೆಯಲ್ಲಿಯೇ ನಡೆದ ವೈದ್ಯರ ಉಪಚಾರದಿಂದ ಸ್ವಲ್ಪ ಚೇತರಿಸಿಕೊಂಡಿದ್ದರೂ ಶುಕ್ರವಾರ ರಾತ್ರಿ ನಿಧನರಾದರು.
ಶನಿವಾರ ಅಂತ್ಯಕ್ರಿಯೆ
ಭೀಮಣ್ಣ ಖಂಡ್ರೆಯವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ ಎಂದು ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಸಂಜೆ ಭಾಲ್ಕಿ ಹೊರವಲಯದ ಚಿಕಲಚಂದಾ ಗ್ರಾಮ ಸಮೀಪದ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಪತ್ನಿ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲೇ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಶುಕ್ರವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೀಮಣ್ಣ ಖಂಡ್ರೆಯವರಿಗೆ ಈಶ್ವರ ಖಂಡ್ರೆ ಸೇರಿದಂತೆ ಇಬ್ಬರು ಪುತ್ರರು, ಐದು ಜನ ಪುತ್ರಿಯರು ಇದ್ದಾರೆ. ಪತ್ನಿ ಲಕ್ಷ್ಮೀಬಾಯಿ ಖಂಡ್ರೆ, ಗಂಡು ಮಕ್ಕಳ ಪೈಕಿ ಹಿರಿಯ ಮಗ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಆವರು ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದಾರೆ.

ಭೀಮಣ್ಣ ಖಂಡ್ರೆ ಅವರ 100ನೇ ಜನ್ಮಶತಮಾನೋತ್ಸವ ಆಚರಣೆಯ ದೃಶ್ಯ
ಗಣ್ಯರ ಸಂತಾಪ
ಭೀಮಣ್ಣ ಖಂಡ್ರೆ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಭೀಮಣ್ಣ ಖಂಡ್ರೆ ಅವರ ನಿಧನದ ಸುದ್ದಿ ನೋವು ತಂದಿದೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಅವರು ಸಲ್ಲಿಸಿದ್ದ ಕೊಡುಗೆ ಸದಾ ಸ್ಮರಣೀಯ, ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಭೀಮಣ್ಣ ಖಂಡ್ರೆಯವರು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಕಟ್ಟಾ ಶಿಷ್ಯರಾಗಿದ್ದರು. ಗುರುವಿನ ನೆಚ್ಚಿನ ಶಿಷ್ಯರಾಗಿ ಸಮಾಜೋಧಾರ್ಮಿಕ ಕೆಲಸ ಮಾಡಿದ್ದರು ಎಂದು ಪೂಜ್ಯ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
ಭೀಮಣ್ಣ ಖಂಡ್ರೆಯವರು ಅವರ ಕೆಲಸಗಳ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿದ್ದಾರೆ. ನಾಡು ನುಡಿಗಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ, ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.
ಮರೆಯಲಾಗದ ಎರಡು ಘಟನೆಗಳು
ದೇವರಾಜ ಅರಸು ಸರಕಾರದ ಕಾಲದಲ್ಲಿ ನಡೆದ ಎರಡು ಘಟನೆಗಳು ಭೀಮಣ್ಣ ಖಂಡ್ರೆ ಅವರನ್ನು ಇಡೀ ನಾಡಿಗೆ ಪರಿಚಯಿಸಿತು.
ಮಳೆಗಾಲ ಆರಂಭಗೊಂಡರೂ ಸರ್ಕಾರ ರೈತರಿಗೆ ಬೀಜ ವಿತರಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ಬೀಜ ಸಂಗ್ರಹಿಸಿದ ಗೋದಾಮುಗಳ ಬೀಗ ಒಡೆದು, ರೈತರಿಗೆ ವಿತರಿಸಿದರು. ಇದಕ್ಕಾಗಿ ಅವರ ಬಂಧನವಾಯಿತು. ಆದರೆ, ಇಡೀ ರೈತ ಕುಲ ಅವರ ಪರ ನಿಂತಿದ್ದರಿಂದ ಸರ್ಕಾರ ತಲೆಬಾಗಬೇಕಾಯಿತು.
ಹಾವನೂರು ವರದಿಯನ್ನು ವಿರೋಧಿಸಿ ವಿಧಾನಸಭೆಯಲ್ಲಿಯೇ ಅದರ ಕರಡು ಪ್ರತಿಗಳನ್ನು ಹರಿದು, ಅಲ್ಲಿಯೇ ಸುಟ್ಟು ಹಾಕಿದರು. ಹಿಂದುಳಿದವರಿಗೆ ಜಾತಿ ಆಧರಿಸಿ ಮೀಸಲಾತಿ ಕೊಡುವುದು ಸರಿಯಲ್ಲ. ಅವರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮೀಸಲಾತಿ ಕೊಡಬೇಕೆನ್ನುವುದು ಖಂಡ್ರೆಯವರ ಬಲವಾದ ವಾದವಾಗಿತ್ತು. ಸದನದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕುರ್ಚಿ ಮೇಲೆ ಕುಳಿತು ಗಮನ ಸೆಳೆದಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆಪ್ತರಾಗಿದ್ದ ಖಂಡ್ರೆ
ಸಾಧಕ ಜೀವನ
*ವಕೀಲ ವೃತ್ತಿ ಮಾಡುತ್ತಾ ರಾಜಕೀಯ ಪ್ರವೇಶ ಮಾಡಿದ್ದ ಡಾ. ಭೀಮಣ್ಣ ಖಂಡ್ರೆ
*ಹೈದ್ರಾಬಾದ್ ವಿಮೋಚನೆಯ ಹೋರಾಟಗಾರರಾಗಿ ರಜಾಕಾರರ ದೌರ್ಜನ್ಯ ಪ್ರತಿಭಟಿಸಿದ್ದರು
*ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿಯೇ ಉಳಿಸಲು ಶ್ರಮಿಸಿದ್ದರು.
*1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ರಾಜಕೀಯ ಪ್ರವೇಶ
*1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಖಂಡ್ರೆ
*ಒಟ್ಟು 4 ಬಾರಿ ಶಾಸಕರಾಗಿ, 2 ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಖಂಡ್ರೆ
*ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
*ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಖಂಡ್ರೆ
*ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಬೀದರ್ ನಲ್ಲಿ ಅಕ್ಕಮಹಾದೇವಿ ಕಾಲೇಜು ಸ್ಥಾಪನೆ
*ಸ್ವಕ್ಷೇತ್ರ ಭಾಲ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು.
*ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯಕ್ಕೆ ಕೊಡುಗೆ. ಪ್ರತ್ಯೇಕ ಧರ್ಮ ಸ್ಥಾನಕ್ಕೆ ಹೋರಾಡಿದ್ದರು.

ಶತಾ ಯುಷಿ ಲಿಂಗಐಕ್ಯ ಶ್ರೀ ಭೀಮಣ್ಣ ಖಂಡ್ರೆ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಸಾರ್ಥಕ ಬದುಕಾಗಿ ಬಾಳಿದರು.
ಬಿದರನ್ನು ಕರ್ನಾಟಕಕ್ಕೆ ಉಳಿಸಿದ ಹುಟ್ಟು ಹೋರಾಟಗಾರರ ನಿಧನ ನೈಸರ್ಗಿಕ ಹಿನ್ನೆಲೆಯಲ್ಲಿ ವಯೋ ಸಹಜ ತುಂಬು ಜೀವನಕ್ಕೆ ವಿದಾಯ ಹೇಳಿದೆ. ಇದು ದುಃಖದ ವಿಷಯ ಅನ್ನಲು ಸಾಧ್ಯವಿಲ್ಲ. ಅದೇ ರೀತಿ ಅವರನ್ನು ಕಳೆದುಕೊಂಡಿದ್ದು ಮಾತ್ರ ಸಮಾಜಕ್ಕೆ ತುಂಬಾ ಲಾರದ ನಷ್ಟ.
ಇಂತಹ ಹೋರಾಟಗಾರರಿಗೆ ವಕೀಲರಾದ ಇವರಿಗೆ, ಇವರ ಮಗನಿಗೆ ಲಿಂಗಾಯತ ಧರ್ಮ ಹಿಂದೂ ಧರ್ಮದಿಂದ ಸಂಪೂರ್ಣ ಸ್ವತಂತ್ರ ಅನ್ನುವುದು ಏಕೆ ಗೊತ್ತಾಗಲಿಲ್ಲ. ಅದು ತಿಳಿಯುತ್ತಿಲ್ಲ.
ಹಿಂದೂ ಧರ್ಮದ ಭಾಗ ಅನ್ನುವುದು ಆದರೆ ಸ್ವತಂತ್ರ ಧರ್ಮದ ಹೋರಾಟ ಯಾಕೆ ಮಾಡಿದರು?
ದ್ವಂದ್ವ ನಿಲುವು.
ಇವರ ಈ ದ್ವಂದ್ವ ನಿಲುವು ನಿಂದಾಗಿ ಲಿಂಗಾಯತರಿಗೆ ಹಾನಿ.
“2010ರಲ್ಲಿ ನಡೆದ ಲಿಂಗಾಯತ ಧರ್ಮದ ಜನಗಣತಿ ಜಾಗೃತಿ ಸಮಾವೇಶದಲ್ಲಿ, ಅಂದಿನ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಭೀಮಣ್ಣ ಖಂಡ್ರೆಯವರೊಡನೆ ನಾನು ಕೆಲವು ಬಾರಿ ವೇದಿಕೆಯನ್ನು ಹಂಚಿಕೊಂಡಿದ್ದೆ. ಧರ್ಮದ ಹೆಸರು ನೋಂದಾಯಿಸುವ ವಿಷಯದಲ್ಲಿ ನನ್ನ ಹಾಗೂ ಅವರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಒಂದೇ ವೇದಿಕೆಯ ಮೇಲಿದ್ದರೂ ಅವರು ‘ವೀರಶೈವ-ಲಿಂಗಾಯತ’ ಎಂದು ಬರೆಸಲು ಹೇಳುತ್ತಿದ್ದರು, ಆದರೆ ನಾನು ‘ಲಿಂಗಾಯತ’ ಎಂದು ಬರೆಸಬೇಕೆಂದು ಪ್ರತಿಪಾದಿಸುತ್ತಿದ್ದೆ. ಆದರೂ, ಲಿಂಗಾಯತ ಧರ್ಮೀಯರನ್ನು ಒಗ್ಗೂಡಿಸುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಅವರು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಸವಾದಿ ಶಿವಶರಣರಲ್ಲಿ ಪ್ರಾರ್ಥಿಸುತ್ತೇನೆ.
😞💐🙏”