ಚಿತ್ರದುರ್ಗ
ರಾಜ್ಯದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಗೊಂಡು ಸಮಾರೋಪ ಕಂಡಿದೆ.
ಈ ಬಗ್ಗೆ ಯಾರಿಗಾದರೂ ಯಾವುದೇ ವಿಚಾರದಲ್ಲಾಗಲಿ, ನಡೆಯಲ್ಲಾಗಲಿ ದೋಷ ಕಂಡರೆ ಅಥವಾ ಭಿನ್ನಾಭಿಪ್ರಾಯವಿದ್ದರೆ ತಾತ್ವಿಕವಾಗಿ ಬಗೆಹರಿಸಿಕೊಳ್ಳುವುದು ಉಚಿತ ನಡೆ.
ಬಹಿರಂಗವಾಗಿ, ಸಾರ್ವಜನಿಕ ಸಮಾರಂಭದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ನೋವಾಗದಂತೆ ಅಭಿವ್ಯಕ್ತಿಸುವುದು ಸದ್ವರ್ತನೆ.
ಮಾತನಾಡುವ ಭರಾಟೆಯಲ್ಲಿ ಅದರಲ್ಲಿಯೂ ಈಗಿನ ನಾಜೂಕಿನ ಕಾಲದಲ್ಲಿ ಒಬ್ಬ ಜವಾಬ್ದಾರಿಯುತ ಸ್ವಾಮಿಗಳು ಅಶ್ಲೀಲ ಪದ ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದುವರೆದು ಅವರು ಒಂದು ಮಠಾಧೀಶರ ಒಕ್ಕೂಟವನ್ನು ನಾಟಕ ಕಂಪನಿಗೆ ಹೋಲಿಸಿರುವುದು ಸಲ್ಲದ ನಡೆ.
ನಮ್ಮ ನಾಟಕ ಅಥವಾ ರಂಗಭೂಮಿಗೆ ಅತ್ಯದ್ಭುತ ಚರಿತ್ರೆಯೇ ಇದೆ. ರಂಗಭೂಮಿಯ ನಟನೆಯಿಂದ ತಮ್ಮ ನಡೆ ನುಡಿ ಶುದ್ಧೀಕರಿಸಿಕೊಂಡ ಎಷ್ಟೋ ಕಲಾವಿದರಿದ್ದಾರೆ.
ಹಾಗೆಯೇ ಒಳ್ಳೆಯ ನಾಟಕಗಳನ್ನ ನೋಡಿ ತಮ್ಮಲ್ಲಿನ ಅಂಕು ಡೊಂಕು ತಿದ್ದಿಕೊಂಡು ದಾರ್ಶಕನಿಕರಾಗಿ ಹೋಗಿದ್ದಾರೆ. ನಾಟಕ ಅಥವಾ ರಂಗಭೂಮಿಯನ್ನು ಕೇವಲವಾಗಿ ಕಾಣುವುದು ಕಲೆಯನ್ನು ಮತ್ಯಾರಿಗೋ ಹೋಲಿಸಿ ಮಾತನಾಡುವುದು ತರವಲ್ಲ.
ಹಾಗೆಯೇ ಮನುಷ್ಯರ ವರ್ತನೆಯನ್ನು ಯಾವುದೇ ಪ್ರಾಣಿ-ಪಕ್ಷಿ ಇತರ ಜೀವರಾಶಿಗೆ ಹೋಲಿಸುವುದು ಸಲ್ಲ.
ವಚನಕಾರರು ಜೀವರಾಶಿಯಲ್ಲಿನ ಪ್ರಾಣಿ ಪಕ್ಷಿಗಳ ಸದ್ಗುಣವನ್ನು ಕಂಡುಹಿಡಿದು ವಚನ ರಚಿಸಿದ ಉದಾಹರಣೆ ಇದೆ. ಕಾಗೆ ಕೋಳಿಗಳ ದಾಸೋಹ ಗುಣವನ್ನು ಬಸವಣ್ಣನವರು ಹೇಳಿರುವುದು ಸರಿಯಷ್ಟೇ.
ಮನುಷ್ಯ ಆ ದಾರಿಯಲ್ಲಿ ಸಾಗಬೇಕಿದೆ ಎಂಬುದು ಆ ಪಕ್ಷಿಗಳ ನಡೆಯಿಂದ ಗೊತ್ತಾಗುತ್ತದೆ. ಸಾರ್ವಜನಿಕ ಸ್ಥಾನದಲ್ಲಿರುವ ಯಾರೇ ಆಗಲಿ ತಮ್ಮ ಇತಿ ಮಿತಿಯನ್ನು ಅರಿತುಕೊಂಡು ತಮ್ಮ ವರ್ತನೆಗೆ ಸರಿದೂಗುವಂತೆ ಸ್ವಯಂ ಕಡಿವಾಣ ಹಾಕಿಕೊಂಡು ಮಾತನಾಡಿದರೆ ತೂಕ ಹೆಚ್ಚುತ್ತದೆ.