ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬೀದರ್‌

ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.

ಚಳಕಾಪುರದ ಹನುಮಾನ ಜಾತ್ರೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರು ಹಾಗೂ ಲಿಂಗಾಯತರ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಸುದ್ದಿಘೋಷ್ಠಿಯಲ್ಲಿ ಖಂಡ್ರೆ ಮಾತನಾಡುತ್ತ ಗ್ರಾಮದಲ್ಲಿ ನಡೆದಿರುವ ಘಟನೆ ಅತ್ಯಂತ ನೋವಿನ ಸಂಗತಿ. ಸಮಾಜದ ಸ್ವಾಸ್ಥ್ಯ ಕದಡದಂತೆ, ಶಾಂತಿಗೆ ಭಂಗ ಬಾರದಂತೆ ಪ್ರಜ್ಞಾವಂತರಾದ ಬೀದರ್ ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಕೋರಿದ್ದಾರೆ.

ಜಾತಿಯತೆಯ ನಿರ್ಮೂಲನೆಗೆ ಶ್ರಮಿಸಿದ ಬಸವಾದಿ ಶರಣರ ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಅಪಾರ ಗೌರವ ನೀಡಲಾಗುತ್ತದೆ. ಇಂತಹ ಭಾವೈಕ್ಯತೆಯ ನೆಲದಲ್ಲಿ ನಡೆಯುವ ಸಣ್ಣ ಘಟನೆಗಳೂ ಜಿಲ್ಲೆಯ ಖ್ಯಾತಿಗೆ ಕಳಂಕ ತರುತ್ತವೆ ಎಂದು ಬುಧವಾರ ತಿಳಿಸಿದ್ದಾರೆ.

ರವಿವಾರ (ನ.3) ಹನುಮಾನ ದೇವರ ಜಾತ್ರಾ ಮಹೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಘಟನೆ ಜರುಗಿದೆ.

‘ಜಾತ್ರೆಯಲ್ಲಿ ಭಾಗವಹಿಸಲು ಹೋದಾಗ ನಮ್ಮನ್ನು ತಡೆದು ಹೀಯಾಳಿಸಿದ್ದಾರೆ. ನಂತರ ಪರಿಶಿಷ್ಟ ಜಾತಿ ಜನರಿರುವ ಓಣಿಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರು, ಯುವಕರನ್ನು ಮನಬಂದಂತೆ ಥಳಿಸಿದ್ದರಿಂದ ಗಂಭೀರ ಸ್ವರೂಪದ ಗಾಯಗಳಾಗಿವೆ’ ಎಂದು ಎಂದು ಧನರಾಜ್ ಎಂಬುವವರು ದೂರಿನಲ್ಲಿ ಆರೋಪಿದ್ದಾರೆ.

ಹಲ್ಲೆಗೊಳಗಾದವರ ಜತೆಗೆ ಪರಿಶಿಷ್ಟ ಜನಾಂಗದವರು ಸೋಮವಾರ (ನ.4) ಖಟಕಚಿಂಚೋಳಿ ಠಾಣೆ ಎದುರು ಪ್ರತಿಭಟನೆ ನಡೆಸಿದ ನಂತರ ಲಿಂಗಾಯತ ಸಮುದಾಯದ 73 ಜನರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪೈಕಿ 69 ಜನರನ್ನು ಮಂಗಳವಾರ ಬಂಧಿಸಲಾಗಿದೆ.

ಘಟನೆ ನಂತರ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ದೂರಿನಲ್ಲಿ ತಮ್ಮ ಮೇಲೆ ದಾಳಿ ನಡೆಸಿದವರ ಹೆಸರನ್ನೂ ದೂರಿನಲ್ಲಿ ಧನರಾಜ್ ಅವರು ಉಲ್ಲೇಖಿಸಿದ್ದಾರೆ.

ಕೈಲಾಸ ಮಸಲ್ದಾರ್, ರಾಜಕುಮಾರ ಮಸಲ್ದಾರ್, ಲೋಕೇಶ್ ಮಸಲ್ದಾರ್, ಪ್ರಶಾಂತ ಕಣಜಿಕರ್, ಪ್ರದೀಪ್ ಕಣಜಿಕರ್, ಮಂಜುನಾಥ ಪಾಟೀಲ್, ಸುನೀಲ್ ಹೆಳವ, ಲೋಕೇಶ್ ಕಣಜಿಕರ್, ನಿಕಿಲ್ ಹುಲ್ಲೇಪ್ಪನವರ, ಶಿವಪ್ಪನವರ್ ರೊಟ್ಟೆ, ಸಂತೋಷ ಹೆಳವ, ಕಿರಣ್ ರುದ್ರಪ್ಪನವರ್, ಬಸವಕಿರಣ ಮನಕೋಜಿ, ಪವನ್ ರುಯಿದ್ರಪ್ಪನವರ್, ಸಾಗರ್ ಕೋರೆ, ಸುರೇಶ ಜಮಾದಾರ್, ಅನಿಲ್ ಉಪ್ಪಾರ್, ಮಲ್ಲಿಕಾರ್ಜುನ ಕೋಲಾರೆ, ವಿಕಾಶ ಹುಗ್ಗೇಗೌಡ, ಪ್ರವೀಣ ಸೋಂಕೆರೆ ಹಾಗೂ ಹುನುಮಾನ ಜಾತ್ರಾ ಮಹೋತ್ಸವ ಸಮಿತಿಯ ಸರ್ವ ಸದಸ್ಯರು, ಮೆರವಣಿಗೆಯ ಪದಾಧಿಕಾರಿಗಳು ಸೇರಿ ಒಟ್ಟು 73 ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *