ಹುಬ್ಬಳ್ಳಿ
ಉಣಕಲ್ಲ ಚೆನ್ನಬಸವ ಸಾಗರದ ದಂಡೆಯ ಮೇಲಿರುವ ಚೆನ್ನಬಸವಣ್ಣನವರ ದೇವಸ್ಥಾನದ ಆವರಣದಲ್ಲಿ ಅವಿರಳಜ್ಞಾನಿ ಚೆನ್ನಬಸವಣ್ಣನವರ ಸಂಭ್ರಮದ ಜಯಂತಿ ಹಾಗೂ ದೀಪೋತ್ಸವ ನಡೆಯಿತು.
ಚೆನ್ನಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಉಣಕಲ್ಲ ಚನ್ನಬಸವ ಸಾಗರ ಸಂರಕ್ಷಣಾ ಸಮಿತಿ ಅಡಿಯಲ್ಲಿ ಕಾರ್ಯಕ್ರಮ ಜರುಗಿತು.
ವಚನಗಳ ರಕ್ಷಣೆಗಾಗಿ ಶರಣರು ಅಪಾರ ತ್ಯಾಗ ಬಲಿದಾನ ಮಾಡಿದ್ದಾರೆ. ಅವರಲ್ಲಿ ಚೆನ್ನಬಸವಣ್ಣನವರು ಒಬ್ಬರು. ಚೆನ್ನಬಸವಣ್ಣನವರು ವಚನ ಸಂರಕ್ಷಣೆಯ ಸಂದರ್ಭ, ಭೇಟಿ ನೀಡಿದ ಸ್ಥಳ ಉಣಕಲ್ಲ ಸ್ಥಳವೂ ಒಂದು. ಅವರ ಸ್ಮರಣಾರ್ಥ ಕಟ್ಟಲ್ಪಟ್ಟ ಚೆನ್ನಬಸವೇಶ್ವರ ದೇವಸ್ಥಾನ ಇದಾಗಿದೆ. ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸಲಾಯಿತು, ವಚನ ಪ್ರಾರ್ಥನೆ ಹಾಗೂ ಶರಣರ ಹೋರಾಟದ ಕುರಿತು ಚಿಂತನೆ ನಡೆಸಲಾಯಿತು.
ಮೂಲಭೂತವಾದಿಗಳ ವಿರುದ್ಧ ಹೋರಾಡುತ್ತಾ, ಶರಣರು ಕಲ್ಯಾಣವನ್ನು ತೊರೆದು, ವಚನಗಳನ್ನು ರಕ್ಷಿಸಲು ಉಣಕಲ್ಲ ಮೂಲಕ ಹಾಯ್ದು ವಿವಿಧ ಸ್ಥಳಗಳ ಮೂಲಕ ಉಳವಿ ತಲುಪಿದ್ದನ್ನು ಅನೇಕರು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀಶೈಲ ತುಂಗಳದ, ಪ್ರಭು ಶೆಟ್ಟರ, ಓಂಕಾರ ಶಂಭು, ಸುನೀಲ ಪಾಟೀಲ, ಶ್ರೀದೇವಿ ಪಾಟೀಲ, ಈರಣ್ಣ ಉಮಚಗಿ, ಗಂಗಾಧರ ಕ್ಯಾತಾನವರ, ಶಿವಣ್ಣ ಹೆಬ್ಬಳ್ಳಿ , ನೂಲ್ವಿ ಎನ್.ವಿ. ಬೆಳ್ಳಿಗಟ್ಟಿ, ಶರಣ್ ಪಾಟೀಲ, ಬಸವರಾಜ ಹುಲ್ಲೋಳಿ, ಚಿಂತಾಮಣಿ ಸಿಂದಗಿ, ಗುರು ಅವರಾದಿ, ಭೀಮನಗೌಡ್ರ, ಸುನೀಲ ನಿಡವಣಿ, ಕುಮಾರಣ್ಣ ಪಾಟೀಲ, ಶಾರದಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.