ಮಕ್ಕಳ ಕೈಯಲ್ಲಿ ಲಾಠಿ ಬದಲು ಪೆನ್ನು ಕೊಡಲಿ: ಜ್ಞಾನಪ್ರಕಾಶ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಆರೆಸ್ಸೆಸ್‌ಗೆ ಸೆಡ್ಡು ಹೊಡೆದ ಭೀಮನಡೆ ಪಥ ಸಂಚಲನ

ಕಲಬುರಗಿ

ಚಿತ್ತಾಪುರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳು ಸೇರಿದಂತೆ ಇತರೆ ವಿವಿಧ ಸಮಾಜಗಳು ಒಳಗೊಂಡಂತೆ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾದ ದಿನದ ಅಂಗವಾಗಿ ನಡೆದ ಭೀಮ ನಡೆ ಪಥ ಸಂಚಲನವು ಸೋಮವಾರ ಅದ್ಧೂರಿಯಾಗಿ ನಡೆಯಿತು.

ಚಿತ್ತಾಪುರ ಪಟ್ಟಣದ ಚಿತ್ತಾವಲಿ ವೃತ್ತದಿಂದ ಆರಂಭವಾದ ಪಥ ಸಂಚಲನವು ಕಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಸಂವಿಧಾನ ಪೀಠಿಕೆಯೊಂದಿಗೆ ಒಟ್ಟು 22 ಸಮಾಜಗಳ ಗುರುಗಳ ಭಾವಚಿತ್ರಗಳು ನೋಡುಗರ ಗಮನ ಸೆಳೆಯಿತು.

ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್ ಮಹಾರಾಜ್, ಹಡಪದ ಅಪ್ಪಣ್ಣ, ಸಮಗಾರ ಹರಳಯ್ಯ, ಸವಿತಾ ಮಹರ್ಷಿ, ಭಗೀರಥ ಮಹಾರಾಜ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ್, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಗಾಯಿತ್ರಿ ದೇವಿ, ಶರಣ ಹೂಗಾರ ಮಾದಣ್ಣ, ಮಹಾವೀರ, ನುಲಿಯ ಚಂದಯ್ಯ ಅವರ ಭಾವಚಿತ್ರಗಳ ಜೊತೆಗೆ ಆಯಾ ಸಮಾಜದ ಧ್ವಜಗಳು ರಾರಾಜಿಸಿದವು.

ಬಳಿಕ ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡ ಭೀಮ ನಡೆ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಂವಿಧಾನ ಒಪ್ಪದವರು, ರಾಷ್ಟ್ರ ಧ್ವಜ ಹಿಡಿಯದವರು ದೇಶ ಭಕ್ತರು, ದೇಶದ ಪ್ರಜೆ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.

ಈ ಸಮಾವೇಶ ಯಾವ ಸಂಘಟನೆಯ ವಿರುದ್ಧ ಅಲ್ಲ. ಇದು ಸಾಮರಸ್ಯ ಕಾರ್ಯಕ್ರಮ, ನಮಗೆ ಧರ್ಮ, ಜಾತಿ ಮುಖ್ಯವಲ್ಲ. ದೇಶ ಮುಖ್ಯ. ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು ಎಂದು ಹೇಳಿದರು. ಮಕ್ಕಳ ಕೈಯಲ್ಲಿ ಲಾಠಿ ಕೊಡುವ ಬದಲು ಪೆನ್ನು ಕೊಟ್ಟು ಉತ್ತಮ ನಾಗರಿಕರನ್ನಾಗಿ ಮಾಡಬೇಕು.

ಒಂದು ದೇಶ ಒಂದು ಚುನಾವಣೆ ಎನ್ನುವವರು, ಒಂದು ದೇಶ ಒಂದೇ ಜಾತಿ, ಒಂದೇ ಶಿಕ್ಷಣ ಮಾಡಬೇಕು. ಎಲ್ಲರೂ ಸಮಾನರು, ಸಂವಿಧಾನದಿಂದಲೇ ಭಾರತ ದೇಶ ಸಮೃದ್ದವಾಗಲಿದೆ ಎಂಬ ಸಂದೇಶ ಚಿತ್ತಾಪುರದಿಂದ ಈ ದೇಶಾದ್ಯಂತ ಹರಡಲಿ ಎಂದರು.

ಬೆಲ್ದಾಳ ಶರಣರು, ಭಂತೆ ವರಜ್ಯೋತಿ, ಮನೋಹರ ಮೊರೆ, ಡಾ.ವಾಸು ಮಾತನಾಡಿದರು. ಬೇಲೂರ ಮಠದ ಷಡಕ್ಷರಿ ಸ್ವಾಮೀಜಿ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು.

ಬೀದರ್‌ ಭಾರತೀಯ ಬೌದ್ಧ ಮಹಾಸಭೆಯ 800 ಜನ ಸಮವಸ್ತ್ರದೊಂದಿಗೆ ಭೀಮ ನಡೆ ಪಥಸಂಚಲನಲ್ಲಿ ಭಾಗಿಯಾಗಿದ್ದರು.

ಮುಖಂಡರಾದ ಬಸವರಾಜ ಹೊಸಳ್ಳಿ, ಶಿವುಕುಮಾರ, ನಾಗಯ್ಯ ಗುತ್ತೇದಾರ, ಮಲ್ಲಿಕಾರ್ಜುನ, ನಿಂಗಣ್ಣ ಹೆಗಲೇರಿ, ಜಗಣ್ಣಗೌಡ, ಎಂ.ಎ.ರಶೀದ್, ಶಾಂತಪ್ಪ, ಭೀಮಸಿಂಗ್ ಚವ್ಹಾಣ, ಸುರೇಶ ಮೆಂಗನ್, ಓಂಕಾರೇಶ್ವರ ರೇಷ್ಮೆ, ಲಚ್ಚಪ್ಪ, ಮಲ್ಲಿಕಾರ್ಜುನ, ಪ್ರಭು ಕುಂಬಾರ, ರಮೇಶ, ಶರಣು ಹೂಗಾರ, ಸಾಬಣ್ಣ ಶಿವರುದ್ರ ಭೀಣಿ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ್, ಶಂಭುಲಿಂಗ, ಸುನೀಲ ದೊಡ್ಡಮನಿ, ಅಶೋಕ ವೀರನಾಯಕ, ರಾಜೀವ ಜಾನೆ, ಜಯಪ್ರಕಾಶ, ಶ್ರೀಕಾಂತ ಸಿಂಧೆ, ಶ್ರೀನಿವಾಸ, ವೀರಣ್ಣಗೌಡ, ಶಿವಯ್ಯ, ಶೀಲಾ ಕಾಶಿ, ಜಗದೀಶ ಚವ್ಹಾಣ, ಮುಕ್ತಾರ್ ಪಟೇಲ್, ಮಲ್ಲಿಕಾರ್ಜುನ, ಲೋಹಿತ ರವಿಸಾಗರ, ಮಲ್ಲಿಕಾರ್ಜುನ, ಸಂಜಯ, ಮಾರುತಿ, ಜಗನ್ನಾಥ, ಸೂರಜ್ ಇತರರು ಉಪಸ್ಥಿತರಿದ್ದರು.

ಹಿರಿಯ ದಲಿತ ಮುಖಂಡ ಮರಿಯಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಪ್ಪ ಹೊಸಮನಿ ಸ್ವಾಗತಿಸಿದರು. ಬಸವರಾಜ ಚಿನ್ನವಳ್ಳಿ ನಿರೂಪಣೆ ಮಾಡಿದರು, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ವಂದಿಸಿದರು.

(ಕೃಪೆ ವಾರ್ತಾ ಭಾರತಿ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *