ಧಾರವಾಡ
ಸಮಾನತೆ, ಸ್ತ್ರೀ ಸ್ವಾತಂತ್ರ‍್ಯ, ಲಿಂಗಸಮಾನತೆ ಅಂತಹ ಕ್ರಾಂತಿಕಾರ ವಿಚಾರಗಳನ್ನು ಅವಲೋಕಿಸಿದಾಗ ಬಸವಾದಿ ಶರಣರಲ್ಲಿ ಸಾಮ್ಯತೆ ಕಾಣುತ್ತದೆ. ಅನುಭವ ಮಂಟಪ, ವಚನ ಸಾಹಿತ್ಯ, ಶರಣರ ತತ್ತ್ವ, ವಿಚಾರಧಾರೆಗಳು, ಸಾಮಾಜಿಕ ಸುಧಾರಣೆಗಳು ಪ್ರಸ್ತುತ ಎಂದು ಸಾರುವ ಮೂಲಕ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಯನ್ನು ಯಾಲಕ್ಕಿಶೆಟ್ಟರ ಕಾಲೊನಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಪ್ರಮುಖ ಬಡಾವಣೆ ಮೂಲಕ ಹೊರಟ ಬಸವ ಸಾರೋಟ ವಿವಿಧ ರಸ್ತೆಗಳಲ್ಲಿ ಸಂಚರಿಸಿ
ಲಿಂಗಸಮಾನತೆ, ಮಹಿಳಾ ಸ್ವಾತಂತ್ರ‍್ಯ ಸೇರಿದಂತೆ ಅನೇಕ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದ ಶರಣರ ವೇಷಭೂಷಣ ಧರಿಸಿದ ಮಕ್ಕಳು ಸಂದೇಶ ಸಾರಿದರು.
ಬಸವಣ್ಣನವರ ವಚನ ಗಾಯನ ಮಾಡುವ ಮೂಲಕ ಜಾಥಾ ಹಮ್ಮಿಕೊಂಡು ಬಡಾವಣೆ ಜನರಿಗೆ ಅತ್ಯುತ್ತಮ ಸಂದೇಶ ನೀಡಿದರು.
ಶಾಲಾ ಮಕ್ಕಳಿಗೆ ಶರಣರ ಪಾತ್ರ ತೊಡಿಸಿ ಅನುಭವ ಮಂಟಪದ ಕಲ್ಪನೆಯನ್ನು ಬಿಂಬಿಸಿದರು. ಮಹಿಳೆಯರು ಕೋಲಾಟದಲ್ಲಿ ಭಾಗವಹಿಸಿದರೆ ಪುರುಷರು ಬಾರೋ ಬಸವಣ್ಣ ಹಾಡಿಗೆ ನೃತ್ಯ ಮಾಡಿದರು. ಮಾರ್ಗದುದ್ದಕ್ಕೂ ವಚನ ಸಂಗೀತ, ಭಜನೆ ಹಾಡು ನೆರವೇರಿದವು. ಬಡಾವಣೆ ಜನರು ತಳಿರು ತೋರಣ ಕಟ್ಟಿ, ಮನೆ ಮುಂದೆ ರಂಗೋಲಿ ಹಾಕಿ ಬಸವ ರಥಕ್ಕೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಬಡಾವಣೆ ಪ್ರಮುಖರು, ಬಸವ ಅನುಯಾಯಿಗಳು, ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.