ಶ್ರೀ ಮಠದ ಹಾಗೂ ಶ್ರೀಗಳ ವಿರುದ್ಧ ನಿರಂತರ ಅಪಪ್ರಚಾರ; ಭಕ್ತರ ಭಾವನೆಗಳಿಗೆ ಧಕ್ಕೆ
ಗದಗ
ನಗರದ ತೋಂಟದಾರ್ಯ ಮಠದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರನ್ನು ಭಕ್ತರ ನಿಯೋಗ ಬುಧವಾರ ಭೇಟಿ ಮಾಡಿ ದೂರು ನೀಡಿದೆ.
ಶ್ರೀ ಮಠದ ಮಠದ, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹಾಗೂ ಇಂದಿನ ಪೀಠಾಧಿಪತಿಗಳಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ
ವಿರುದ್ಧ ಅಪಪ್ರಚಾರ ಮಾಡುತ್ತಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ರಾಜು ಖಾನಪ್ಪನವರ ಹಾಗೂ ಅವನ ಸಹಚರರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಬಿ.ಎಸ್. ನೇಮಗೌಡರನ್ನು ಮಠದ ಸದ್ಭಕ್ತರು ಆಗ್ರಹಿಸಿದ್ದಾರೆ.
ಅಪಮಾನಕರ ಹೇಳಿಕೆಗಳನ್ನು ನೀಡುತ್ತಾ ಅಪಪ್ರಚಾರ ಮಾಡಿ ಮಠದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ಮನವಿ ಪತ್ರದಲ್ಲಿ ಹೇಳಲಾಗಿದೆ.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಧನೇಶ ದೇಸಾಯಿ ಮಾತನಾಡಿ, ‘ಗದುಗಿನ ತೋಂಟದಾರ್ಯ ಮಠ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರ. ಭಾವೈಕ್ಯದ ಕ್ಷೇತ್ರ, ಸರ್ವಜನಾಂಗದ ಶಾಂತಿಯ ತೋಟ ಎನಿಸಿದೆ. ಇಂತಹ ಮಠದ ವಿರುದ್ಧ ಶ್ರೀರಾಮ ಸೇನೆ ಸೇರಿದಂತೆ ಕೆಲವು ಸಂಘಟನೆಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿವೆ’ ಎಂದು ಆರೋಪ ಮಾಡಿದರು.
ಮನವಿ ಪತ್ರ
‘ನಮ್ಮ ಶ್ರೀಮಠ ಪ್ರತಿನಿತ್ಯ ಸಹಸ್ರಾರು ಭಕ್ತರಿಗೆ ಗದಗ-ಡಂಬಳ, ಎಡೆಯೂರು, ಹಾವೇರಿ, ಕಗ್ಗೆರೆ ಮುಂತಾದ ಕಡೆ ಯಾವುದೇ ಪಂಕ್ತಿಭೇದವಿಲ್ಲದೆ ಉಚಿತ ಅನ್ನದಾಸೋಹವನ್ನು ನಡೆಸುತ್ತಿದೆ. ಹಿಂದುಳಿದ ಹಾಗೂ ಬಡಮಕ್ಕಳಿಗಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸಾವಿರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡದ ಮಠ ಎನಿಸಿದೆ.
೨೦೦ ವರ್ಷಗಳಿಗಿಂತ ಅಧಿಕ ಕಾಲ ಗದಗ ಮಠದ ಸುತ್ತಲೂ ಇರುವ ಅಂದಾಜು ೮೦ ಎಕರೆ ಮೂಲತಃ ಮಠದ ಮಾಲಿಕತ್ವದ ಪೈಕಿ ಜಾಗೆಯಲ್ಲಿ ಜಾತ್ರೆ ನಡೆಯುತ್ತ ಬಂದಿರುತ್ತದೆ. ಈ ಜಾಗೆಯಲ್ಲಿರುವ ಯಾವುದೇ ಒಂದು ರಸ್ತೆಯನ್ನು ನಾವು ನಗರಸಭೆಯ ಸ್ವಾಧೀನಕ್ಕೆ ಕೊಟ್ಟಿರುವದಿಲ್ಲ. ನಮ್ಮ ಮಠಕ್ಕೆ ಪರಿಹಾರ ನೀಡಿ ನಗರಸಭೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿರುವುದಿಲ್ಲ, ನಗರಸಭೆ ಸ್ಥಾಪನೆಯ ಪೂರ್ವದಲ್ಲಿ ಶ್ರೀಮಠದ ಜಾತ್ರೆ ನಡೆಯುತ್ತ ಬಂದಿರುತ್ತದೆ. ಈ ಜಾಗೆ ಮಠದ ಮಾಲಿಕತ್ವದ ಜಾಗೆ ಎಂಬುದಕ್ಕೆ ಸಾಕಷ್ಟು ದಾಖಲೆಗಳು ಮತ್ತು ನಗರಸಭೆಯ ಆದೇಶಗಳು ಇರುತ್ತವೆ.
ಮಠದ ಈ ಎಲ್ಲ ಬೆಳವಣಿಗೆಯನ್ನು ಸಹಿಸದ, ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಬೇಕೆಂಬ ಹಾಗೂ ಈ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಮತ್ತು ಹಿಂದಿನ ಹಾಗೂ ಇಂದಿನ ಶ್ರೀಗಳ ವ್ಯಕ್ತಿತ್ವಕ್ಕೆ ಚ್ಯುತಿ ತರಬೇಕೆಂಬ ಉದ್ದೇಶದಿಂದ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಬೇಕೆಂಬ ಉದ್ದೇಶದಿಂದ ಭಾರತೀಯ ನ್ಯಾಯಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸಿ ರಾಜು ಖಾನಪ್ಪನವರ ಹಾಗೂ ಇವನ ಸಹಚರರು ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಜಾತ್ರೆಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಹಾಗೂ ಶ್ರೀಗಳನ್ನು ವಿರೋಧಿಸಿ ಪತ್ರಿಕಾ ಗೋಷ್ಠಿಯನ್ನು ನಡೆಸಿ, ಸಾಕಷ್ಟು ಅವಮಾನ ಮಾಡಿದ್ದಾನೆ. ಅವನು ನೀಡಿದ ಎಲ್ಲ ಹೇಳಿಕೆಗಳು ಸಂಪೂರ್ಣ ನೂರಕ್ಕೆ ನೂರರಷ್ಟು ದುರುದ್ದೇಶದಿಂದ ಅಪಪ್ರಚಾರ ಮಾಡುವ ಉದ್ದೇಶದಿಂದ, ಸುಳ್ಳಿನಿಂದ ಕೂಡಿರುತ್ತವೆ.
ಅವನ ಈ ಹೇಳಿಕೆಗಳು ಹಾಗೂ ಕಾನೂನುಬಾಹಿರವಾಗಿ ಮಾಡುತ್ತಿರುವ ಹೋರಾಟ ಶ್ರೀಮಠದ ಭಕ್ತರ ಭಾವನೆಗಳಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಕಾರಣ ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಈ ಮೂಲಕ ನಾವು ಸರ್ವ ಸಮುದಾಯದ ಭಕ್ತರು ಒತ್ತಾಯಿಸುತ್ತೇವೆ,’ ಎಂದು ಭಕ್ತರ ಪರವಾಗಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಅವರು ಮನವಿ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೃಷ್ಣಾ ಪರಾಪೂರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಉಪಾಧ್ಯಕ್ಷ ಡಿ.ಜಿ. ಜೋಗಣ್ಣವರ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಎಸ್. ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸದಸ್ಯ ವಿನಾಯಕ ಮಾನ್ವಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ. ಆರ್. ಗೋವಿಂದಗೌಡ್ರ, ಕೆ.ಎಚ್. ಬೇಲೂರ, ಎಸ್.ಎನ್. ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ಮಾರ್ತಾಂಡಪ್ಪ ಹಾದಿಮನಿ, ಗಂಗಾಧರ ಹಿರೇಮಠ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್. ಅಂಗಡಿ, ಗುರುಬಸವ ತಡಸದ, ಮಲ್ಲಿಕಾರ್ಜುನ ಐಲಿ ಇಂಜೀನಿಯರ್, ದಾನಯ್ಯ ಗಣಾಚಾರಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಗದಗ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಬಲರಾಮ ಬಸವಾ, ಜಯಕರ್ನಾಟಕ ಸಂಘಟನೆ ಮುಖ್ಯಸ್ಥ ಚಂದ್ರಕಾಂತ ಚವ್ಹಾಣ, ರಾಮು ಬಳ್ಳಾರಿ, ಮುರುಘೇಶ ಬಡ್ನಿ, ವೀರಣ್ಣ ಜ್ಯೋತಿ, ಪ್ರಕಾಶ ಕೆರೂರ, ಎಂ.ಎಸ್. ಪಾಟೀಲ, ಜೆ.ಟಿ. ವಿದ್ಯಾಪೀಠದ ಕಾರ್ಯದರ್ಶಿ ಎಸ್. ಎಸ್. ಪಟ್ಟಣಶೆಟ್ಟರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ಸಿದ್ಧಣ್ಣ ಬಂಗಾರಶೆಟ್ಟರ, ಅಮರೇಶ ಅಂಗಡಿ, ಅಶೋಕ ಕುಡತಿನಿ, ಕೆ.ಎಸ್. ಪಲ್ಲೇದ, ರಾಚಪ್ಪ ಮಿಣಜಗಿ, ಶೇಖಣ್ಣ ಕಳಸಾಪೂರ, ಎಸ್.ಎಸ್. ಭಜಂತ್ರಿ, ಮಾರುತಿ ಬುರಡಿ, ಪ್ರಕಾಶ ಉಗಲಾಟದ, ವೀರಣ್ಣ ಗೋಟಡಕಿ, ಸಿದ್ಧರಾಮಪ್ಪ ಗೊಜನೂರ, ಜಯಣ್ಣ ಶೆಟ್ಟರ, ವೈಜನಾಥ ಕೌತಾಳ, ಕುಮಾರ ಮಾದರ, ಅಲ್ತಾಫ್ ಖಾನಾಪೂರ, ಪರಶುರಾಮ ಸಮಗಾರ, ಶಿವಯೋಗಿ ತಡಸದ ಸೇರಿದಂತೆ ಅನೇಕ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಗದುಗಿನ ತೋಂಟದಾರ್ಯ ಮಠಧ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಜೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆಯ ಪುಢಾರಿಗಳು ೩ ವರ್ಷದ ಹಿಂದೆ ತೋಂಟದಾರ್ಯ ಮಠದ ಶ್ರೀಗಳಿಗೆ ಒತ್ತಾಯ ಮಾಡಿದ್ದರು, ಅದನ್ನು ನಿರಾಕರಿಸಿದ್ಸಕ್ಕೆ ಈ ಪುಢಾರಿಗಳು ಸತತವಾಗಿ ಹೀನಹೇಳಿಕೆ ಕೊಡುತ್ರಿದ್ದಾರೆ, ಇಡೀ ಸಮಾಜದ ಭಾವೈಕ್ಯದ ಸ್ವಾಸ್ಥ್ಯ ಕೆಡಿಸಲು ಹವಣಿಸುವ ಶ್ರೀರಾಮಸೇನೆಯ ಸಹಚರರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ಹಾಕಬೇಕು ಹಾಗೂ ಜಿಲ್ಲೆಯಿಂದ ಗಡೀಪಾರು ಮಾಡಬೇಕು.
ಶ್ರೀರಾಮ ಸೇನೆ ಸಂಘಟನೆಯೇ ರೌಡಿಗಳು, ಪುಡಾರಿಗಳ ಕೂಟ…. ಅದು ಕಾನೂನುಬಾಹಿರ ಸಂಘ. ಜಿಲ್ಲಾಡಳಿತ ಕೂಡಲೇ ಅವರನ್ನು ಬಂಧಿಸುವ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕು