ಬಸವ ಜಯಂತಿ: ಸುವರ್ಣಗಿರಿ ಮಠಕ್ಕೆ ಬಸವ ಬುತ್ತಿ ಅರ್ಪಿಸಿದ ಲಂಬಾಣಿ ಮಹಿಳೆಯರು

ಕನಕಗಿರಿ :

ಬಸವಣ್ಣನವರ ಜಯಂತಿ ಭಾಗವಾಗಿ ಇಲ್ಲಿನ ಸುವರ್ಣಗಿರಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಸುವರ್ಣಗಿರಿ ವೈಭವ ಭವ್ಯ ಸಮಾರಂಭಕ್ಕೆ ತಾಲೂಕಿನ ಅಡವಿಬಾವಿ ತಾಂಡಾದ ಮಹಿಳೆಯರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಜನೆಯೊಂದಿಗೆ ಶ್ರೀಮಠಕ್ಕೆ ಬಂದು “ಬಸವ ಬುತ್ತಿ” ಅರ್ಪಿಸಿ ಸೌಹಾರ್ದತೆ ಬೆಸೆದಿದ್ದಾರೆ.

ಸಮಾನತೆಯ ಹರಿಕಾರ ಬಸವಣ್ಣವರ ಜಯಂತಿ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಿಂಗಳ ಪರ್ಯಂತ ಆಧ್ಯಾತ್ಮ ಪ್ರವಚನ ಹಮ್ಮಿಕೊಂಡು, ದುಶ್ಚಟಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಡಾ. ಚನ್ನಮಲ್ಲ ಶ್ರೀಗಳು ಪಣತೊಟ್ಟು ನಿಂತಿದ್ದು, ಯುವ ಸಮೂಹದ ಪರಿವರ್ತನೆಗೆ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಹಿಂದುಳಿದ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚು ಒತ್ತು ನೀಡಿದ್ದು, ಮಾನಸಿಕ ರೋಗಿಗಳಿಗೆ ಉಚಿತ ಔಷಧ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹೀಗೆ ನಾನಾ ಸಾಮಾಜಿಕ ಸೇವೆಯನ್ನು ಶ್ರೀಮಠವು ಮಾಡುತ್ತಿದೆ.

ಈ ಎಲ್ಲ ಸೇವೆಗಳ ಕಾರಣ ಹಳ್ಳಿ-ಹಳ್ಳಿಗೂ ಬಸವೇಶ್ವರರ ಬಗ್ಗೆ ಪರಿಕಲ್ಪನೆ ಮೂಡಿ, ಅವರ ದಾಸೋಹ ವಿಚಾರ ಅರಿತು, ಬಸವ ಬುತ್ತಿ ಹೊತ್ತು ಲಂಬಾಣಿ ಮಹಿಳೆಯರು, ಗ್ರಾಮಸ್ಥರು ಮೆರವಣಿಗೆಯೊಂದಿಗೆ ಮಠಕ್ಕೆ ಬಂದು ಬುತ್ತಿ ಅರ್ಪಿಸಿದರು.

ಚನ್ನಮಲ್ಲ ಶ್ರೀಗಳು ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳುತ್ತಿದ್ದು, ಜನರಿಗೆ ಸದ್ವಿಚಾರ ತಿಳಿಸಿಕೊಟ್ಟು ದುಶ್ಚಟ ಮುಕ್ತರಾಗಿಸಲು ಸಮಾಜ ಪರಿವರ್ತನೆಯ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶ್ರೀಗಳ ಕಾರ್ಯ ಮೆಚ್ಚಿ ತಾಲೂಕಿನ ಅಡವಿಬಾವಿ ತಾಂಡಾ, ಆಗೋಲಿ, ಗಾಣದಾಳ ಹಾಗೂ ಬಸರಿಹಾಳ ಗ್ರಾಮದ ನೂರಾರು ಭಕ್ತರು ಸೇರಿ ರೊಟ್ಟಿ, ಕಾಳು ಪಲ್ಯ, ಚಟ್ನಿಪುಡಿ, ಮಾದಲಿ ಸೇರಿ ನಾನಾ ದಿನಸಿ ಖಾದ್ಯ ತಂದು ಶ್ರೀಮಠಕ್ಕೆ ಸಮರ್ಪಣೆ ಮಾಡಿ ಧನ್ಯತೆ ಮೆರೆದರು.

ತಾಲೂಕಿನ ಅಡವಿಬಾವಿ ತಾಂಡಾದ ಲಂಬಾಣಿ ಭಕ್ತರು ಇಲ್ಲಿನ ವೀರಭದ್ರೇಶ್ವರ ದೇಗುಲದಿಂದ ಶ್ರೀಮಠದವರೆಗೆ ಮಹಿಳೆಯರು ತಮ್ಮದೇ ಸಾಂಪ್ರದಾಯಿಕ ವೇಷಭೂಷಣದಲ್ಲಿ ತಾವೇ ತಯಾರಿಸಿದ ಖಾದ್ಯವನ್ನು ಬಿದರಿನ ಬುಟ್ಟಿಯಲ್ಲಿ ಹೊತ್ತು ಲಂಬಾಣಿ ಹಾಡು ಹಾಡುತ್ತಾ ಮೆರವಣಿಗೆ ಮೂಲಕ ಮಠಕ್ಕೆ ಅರ್ಪಣೆ ಮಾಡುವುದು ವಿಶೇಷವಾಗಿತ್ತು. ಹೀಗೆ ಶ್ರೀಮಠದ ಮುಖ್ಯದ್ವಾರದಲ್ಲಿ ಬಂದಿದ್ದ ಬಸವ ಬುತ್ತಿ ವಿಶೇಷ ಪೂಜೆ, ಆರತಿಯೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮ ಸಂಪನ್ನದ ನಂತರ ಈ ಬುತ್ತಿಯನ್ನು ಸಾಮೂಹಿಕ ಭೋಜನದ ಮೂಲಕ ಎಲ್ಲ ಬಸವಭಕ್ತರು ಸವಿದರು.

ಹಲವು ವರ್ಷಗಳಿಂದ ಭಕ್ತರು ಬಸವ ಜಯಂತಿ ವೇಳೆ ಭಕ್ತರಿಗೆ ಉಣಬಡಿಸುವುದಕ್ಕಾಗಿ ಬಸವಣ್ಣನವರ ಹೆಸರಿನಲ್ಲಿ ಬುತ್ತಿ ತರುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಹೊಸ ರೂಪ ಬರುತ್ತಿದ್ದು, ಜನರಲ್ಲಿ ಸೌಹಾರ್ದತೆ ಬೆಳೆಯುತ್ತಿದೆ.

ಏನಿದು ಬಸವ ಬುತ್ತಿ ಕಾರ್ಯಕ್ರಮ?

ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಆಚರಿಸುವ ಕಾರ್ಯಕ್ರಮ ಇದಾಗಿದ್ದು, ಸಂಸ್ಕೃತಿಯಲ್ಲಿ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯಾಗಿದೆ. ಇದು ಮುಖ್ಯವಾಗಿ ಬಸವೇಶ್ವರರ ಜಯಂತಿಯಲ್ಲಿ ಆಚರಿಸಲಾಗುತ್ತದೆ. ಸಾಮಾಜಿಕ ಸೌಹಾರ್ದತೆಗಾಗಿ ಎಲ್ಲ ವರ್ಗದ ಮನಸ್ಸು ಕೂಡಿಕೊಂಡು ಬಸವಣ್ಣನಿಗೆ ಅರ್ಪಿಸುವ ಸಂಕೇತವಾಗಿ ಇದನ್ನು ಆಚರಿಸಲಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment
  • ತುಂಬಾ ಅದ್ಭುತವಾದ ಮತ್ತು ವಿನೂತನವಾದ ಪರಿಕಲ್ಪನೆ. ಬಸವ ಭಕ್ತಿ, ಬಸವ ಅರಿವು ಮತ್ತು ಬಸವ ಜ್ಯೋತಿ ಬೆಳಗಲಿ ಬೆಳಗುತ್ತಿರಲಿ 🙏

Leave a Reply

Your email address will not be published. Required fields are marked *