ರವಿ ಹಂಜ್ ವಾಸ್ತವಿಕತೆಯನ್ನು ಅರಿತು ಬರೆಯಲಿ: ತೋಂಟದ ಸಿದ್ಧರಾಮ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಶನಿವಾರದ ವಿಶ್ವವಾಣಿ ದಿನಪತ್ರಿಕೆಯಲ್ಲಿ (೨೩-೦೫-೨೦೨೬) ರವಿ ಹಂಜ್ ಎನ್ನುವವರು “ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ?” ಎಂಬ ಲೇಖನ ಬರೆದು ನಮ್ಮನ್ನೂ ಒಳಗೊಂಡಂತೆ ಹಲವರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವುದು ದುರ್ದೈವದ ಸಂಗತಿ.

“ದಿನಪತ್ರಿಕೆಗಳು ಸಮಾಜದ ಕನ್ನಡಿ” ಎಂದು ಹೇಳಲಾಗುತ್ತದೆ. ಧರ್ಮ ಮತ್ತು ಸಮಾಜವನ್ನು ಮುನ್ನಡೆಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಅವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸಬೇಕೇ ಹೊರತು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶ ಕಲ್ಪಿಸಿಕೊಡಬಾರದೆಂದು ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ೨೦-೦೧-೨೦೧೮ರಂದು ನಮ್ಮ ಪ್ರಕಾಶನ ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಎಂಬುವವರು ಬಿಜ್ಜರಗಿ ಎಂಬುವವರಿಗೆ ಬರೆದ ಪತ್ರ ಉಲ್ಲೇಖಿಸಿ ನಮ್ಮ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಆಗ ನಾನಿನ್ನೂ ತೋಂಟದಾರ್ಯ ಮಠಕ್ಕೆ ಬಂದಿರಲಿಲ್ಲ. ವಾಸ್ತವಿಕತೆಯನ್ನು ಅರಿಯದೆ ತಮ್ಮ ಮನಸ್ಸಿಗೆ ತೋಚಿದಂತೆ ಏನೇನೋ ಬರೆದುಕೊಂಡಿದ್ದಾರೆ.

ಅವರು ಬರೆದ ಪತ್ರಿಕಾ ಲೇಖನಕ್ಕೆ ಪ್ರತಿಯಾಗಿ ಬಸವರಾಜಶಾಸ್ತ್ರಿ ಎಂಬುವವರು ನಾವು ತೋಂಟದಾರ್ಯ ಮಠದ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕಾರಣವಾದ ಹಿಂದಿನ ಶ್ರೀಗಳು ಬರೆದ ವುಯಿಲ್‌ನ್ನು ಪ್ರಶ್ನಿಸಿದ್ದಾರೆ. ಅವರಿಗೆ ಸಂದೇಹವಿದ್ದರೆ ಅವರು ಬಂದು ಅದನ್ನು ಪರಿಶೀಲನೆ ಮಾಡಬಹುದಿತ್ತು. ಹೀಗೆ ತಮ್ಮ ಧ್ವೇಷ, ಅಸೂಯೆ ಹಾಗೂ ಅಸಹನೆಗಳನ್ನು ವ್ಯಕ್ತಮಾಡುವುದಕ್ಕಾಗಿ ಪತ್ರಿಕೆಯನ್ನಾಗಲಿ, ಸಾಮಾಜಿಕ ಜಾಲತಾಣವನ್ನಾಗಲಿ ದುರುಪಯೋಗಪಡಿಸಿಕೊಳ್ಳುವುದು ಸರ್ವಥಾ ತಪ್ಪು.

ರವಿ ಹಂಜ್ ಇವರು ಬರೆದಂತೆ ನಾವು ಪಂಚಾಚಾರ್ಯರನ್ನಾಗಲಿ ಮತ್ತು ಇತರ ಯಾರನ್ನೇ ಆಗಲಿ ದ್ವೇಷಿಸಿಲ್ಲ. ಅವರ ಈ ಹೇಳಿಕೆ ವಾಸ್ತವಿಕತೆಗೆ ದೂರ. ಒಬ್ಬ ವ್ಯಕ್ತಿಯ ವಿಚಾರಗಳ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವುದು ಸರಿಯಾದ ಕ್ರಮವಲ್ಲ. ತತ್ವ ಮತ್ತು ಸಿದ್ಧಾಂತಗಳನ್ನು ತಾರ್ಕಿಕ ನೆಲೆಯಲ್ಲಿ ಸಾಧಾರಪೂರ್ವಕ ಪ್ರಸ್ತುತಪಡಿಸಬೇಕೇ ಹೊರತು ಚಾರಿತ್ರ್ಯಹನನದ ಮೂಲಕ ಅಥವಾ ಅಸಹನೆಯಿಂದ ಅಲ್ಲ ಎಂದು ಶ್ರೀಗಳು ರವಿ ಹಂಜ್ ಹಾಗೂ ಬಸವರಾಜ ಶಾಸ್ತ್ರಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *