ಬಸವ ಕಲ್ಯಾಣ
“22 ವರ್ಷಗಳಿಂದ ನಗರದಲ್ಲಿ ಆಯೋಜಿಸುತ್ತಿರುವ ಕಲ್ಯಾಣ ಪರ್ವದ ಹೆಸರನ್ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಎಂದು ಇಟ್ಟು ಅದೇ ದಿನಾಂಕಕ್ಕೆ ಕಾರ್ಯಕ್ರಮ ಆಯೋಜಿಸುತ್ತಿರುವ ಕಾರಣಕ್ಕೆ ಚನ್ನಬಸವಾನಂದ ಸ್ವಾಮೀಜಿ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು,” ಎಂದು ಅಲ್ಲಮಗಿರಿಯ ಬಸವಕುಮಾರ ಸ್ವಾಮೀಜಿ ಮಂಗಳವಾರ ಹೇಳಿದರು.
ಬಸವಧರ್ಮ ಪೀಠದಲ್ಲಿ ಒಡಕು ಹುಟ್ಟಿಸುವ ಬದಲು ಅನ್ಯ ಸ್ವಾಮೀಜಿಯವರಂತೆ ಇವರು ಸಹ ಸ್ವಂತ ಮಠ ಕಟ್ಟಿಕೊಳ್ಳುವುದು ಒಳಿತು. ಮಾತೆ ಗಂಗಾದೇವಿಯವರು ಅಧ್ಯಕ್ಷರಾಗಿರಲು ಎಲ್ಲರ ಬೆಂಬಲವಿದೆ, ಎಂದು ನಗರದ ಬಸವ ಮಹಾಮನೆಯಲ್ಲಿ ಬಸವಧರ್ಮ ಪೀಠದ ಟ್ರಸ್ಟಿಗಳಾದ ಸ್ವಾಮೀಜಿಯವರ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೂಡಲಸಂಗಮ–ಬಸವಕಲ್ಯಾಣ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ, ಮಾದೇಶ್ವರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ ಪಾಲ್ಗೊಂಡು, ಹಲವಾರು ದಾಖಲೆಗಳನ್ನು ಪ್ರದರ್ಶಿಸಿದರು.
ಚನ್ನಬಸವಾನಂದ ಸ್ವಾಮೀಜಿ ಅವರು ನಾನೇ ಬಸವಧರ್ಮ ಪೀಠದ ಅಧ್ಯಕ್ಷರೆಂದು ಹೇಳಿಕೆ ಕೊಟ್ಟು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಪೀಠದ ಅಧ್ಯಕ್ಷರಾಗುವ ಹುನ್ನಾರ ನಡೆಸಿದ್ದರಿಂದಲೇ ಅವರನ್ನು ಉಚ್ಚಾಟಿಸಲಾಗಿದೆ, ಎಂದು ಮಾತೆ ಗಂಗಾದೇವಿ ಹೇಳಿದರು.
‘ನಾನು ಚೆಕ್ ಪಡೆದು ಕಾರ್ಯಕ್ರಮ ಮಾಡಿಲ್ಲ. ಪ್ರವಚನ ಹೇಳಿ ಲಕ್ಷಾಂತರ ಹಣ ಸಂಗ್ರಹಿಸಿ ಮಾತೆ ಮಹಾದೇವಿ ಅವರಿಗೆ ಕೊಟ್ಟಿದ್ದೇನೆ. ಅಧ್ಯಕ್ಷರಾಗಲು ಭಾಷಾ ಪಾಂಡಿತ್ಯ ಅಲ್ಲ, ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಅಗತ್ಯವಿದೆ. ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠಕ್ಕೂ ಅನ್ಯರ ಹೆಸರು ಘೋಷಿಸಿಕೊಂಡಿರುವುದು ಕಾನೂನು ಬಾಹಿರವಾಗಿದೆ. ನಮ್ಮಲ್ಲಿ ಕಾನೂನಿನ ಪ್ರಕಾರ ಎಲ್ಲ ದಾಖಲೆಗಳಿದ್ದು ಎಲ್ಲ ಅಂಗ ಸಂಸ್ಥೆಗಳ ಪದಾಧಿಕಾರಿಗಳು ನಮ್ಮೊಂದಿಗಿದ್ದಾರೆ. ಹೀಗಿದ್ದಾಗ ನಮ್ಮನ್ನು ಅಲ್ಲಾಡಿಸಲು ಬರುವುದಿಲ್ಲ’ ಎಂದರು.
ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಲಿಂಗೈಕ್ಯ ಮಾತೆ ಮಹಾದೇವಿ ಅವರಿಂದಲೇ ಮಾತೆ ಗಂಗಾದೇವಿ ಅವರನ್ನು 2012 ರಲ್ಲೇ ಬಸವಧರ್ಮ ಪೀಠದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಮಾತಾಜಿಯವರು ಲಿಂಗೈಕ್ಯರಾದ ನಂತರ ಎಲ್ಲ ಟ್ರಸ್ಟಿಗಳ ಅನುಮತಿ ಮೇರೆಗೆ ಲಕ್ಷಾಂತರ ಜನರ ಎದುರಲ್ಲಿ ಇವರ ಪೀಠಾರೋಹಣ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚನ್ನಬಸವಾನಂದ ಸ್ವಾಮೀಜಿಯೂ ಹಾಜರಿದ್ದರು,’ ಎಂದರು.
‘ಬಸವ ಮಹಾಮನೆ ಚಾರಿಟಬಲ್ ಟ್ರಸ್ಟ್, ವಿಶ್ವಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಜಗನ್ಮಾತೆ ಅಕ್ಕಮಹಾದೇವಿ ಅನುಭಾವ ಪೀಠ, ಜಗದ್ಗುರು ಅಲ್ಲಮ ಪ್ರಭುದೇವರ ಪೀಠ, ಅಕ್ಕನಾಗಲಾಂಬಿಕಾ ಪೀಠ, ಅಲ್ಲಮಪ್ರಭು ಶೂನ್ಯ ಪೀಠ ಮತ್ತು ನವದೆಹಲಿಯ ಮಾತಾ ಆಶ್ರಮ ಬಸವಮಂಟಪ ಇವೆಲ್ಲ ಬಸವಧರ್ಮ ಪೀಠದ ಅಂಗ ಸಂಸ್ಥೆಗಳಾಗಿವೆ. ಹೀಗಾಗಿ ಈ ಪೀಠದ ಅಧ್ಯಕ್ಷರೇ ಇದರ ಪದಾಧಿಕಾರಿಗಳನ್ನು ನೇಮಿಸುತ್ತಾರೆ. ಹೀಗಿದ್ದಾಗ ರಾಷ್ಟ್ರೀಯ ಬಸವದಳ ಮತ್ತು ಅಕ್ಕ ಮಹಾದೇವಿ ಅನುಭಾವ ಪೀಠಾಧ್ಯಕ್ಷರ ನೇಮಕ ಮಾಡುವ ಅಧಿಕಾರ ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.