ಬೆಂಗಳೂರು
ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ನಡೆದಿರುವ ವಿರುದ್ಧ ‘ಗೌರಿ ಬಳಗ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆ ವತಿಯಿಂದ ಮಂಗಳವಾರ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದವು.
ರಾಯಚೂರು, ಶಿವಮೊಗ್ಗ, ಧಾರವಾಡ, ಅಂಕೋಲಾ, ಶೃಂಗೇರಿ, ಚಿಕ್ಕಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ, ಗೃಹ ಸಚಿವರಿಗೆ ನಾಗರಿಕರ ಆಗ್ರಹ ಪತ್ರ ನೀಡಿ ಒತ್ತಾಯಿಸಲಾಯಿತು.
ಆರೋಪಿಗಳಿಗೆ ಸನ್ಮಾನ ಮಾಡುವುದು ಹತ್ಯೆಯನ್ನು ಪ್ರಚೋದಿಸುತ್ತದೆ. ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ. ಗೌರಿ ಹತ್ಯೆ ಆರೋಪಿಗಳಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಗೌರಿ ಬಳಗದ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, “ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆ ಜಾಮೀನು ಪಡೆದು ಹೊರಬಂದಿದ್ದರು. ಅವರಿಗೆ ವಿಜಯಪುರದಲ್ಲಿ ಸನ್ಮಾನ ಮಾಡಲಾಗಿದೆ. ಮತ್ತೋರ್ವ ಆರೋಪಿ ಶ್ರೀಕಾಂತ್ ಪಾಂಗಾರ್ಕರ್ ಎಂಬಾತನನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ (ಶಿಂಧೆ ಬಣ) ಪಕ್ಷಕ್ಕೆ ಸೇರಿಸಿಕೊಂಡಿದೆ. ಇದು, ಕೊಲೆಯನ್ನು ಪ್ರಚೋದಿಸುತ್ತದೆ. ಮತ್ತಷ್ಟು ಹತ್ಯೆಗಳಿಗೆ ಕುಮ್ಮಕ್ಕು ನೀಡುತ್ತದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಿ.ಎಸ್ ಶ್ರೀಧರ್, “ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು ದೊರೆತಿದೆಯಷ್ಟೆ, ಅವರು ಆರೋಪ ಮುಕ್ತರಾಗಿಲ್ಲ. ಜಾಮೀನು ಸಿಕ್ಕಾಗಲೇ ಅವರಿಗೆ ಸನ್ಮಾನ ಮಾಡಿರುವುದು ಆತಂಕದ ವಿಚಾರ. ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆಯ ಹಿಂದೆ ಇರುವುದು ನಾವೇ ಎಂದು ಸಂಘ ಪರಿವಾರ ಒಪ್ಪಿಕೊಳ್ಳುತ್ತಿದೆ” ಎಂದರು.

ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, “ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆ ಹಿಂದೆ ನಾವೇ ಇರುವುದು ಎಂದು ಸಂಘಪರಿವಾರ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದೆ. ಗೌರಿ ಹತ್ಯೆ ಪ್ರಕರಣದ ವಿಚಾರಣೆಯಲ್ಲೂ ವಿಳಂಬವಾಗುತ್ತಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೂ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ವಿಳಂಬವಾಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ತ್ವರಿತ ವಿಚಾರಣೆ ನಡೆಯಬೇಕಿದೆ” ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಚೆನ್ನಮ್ಮ, ವಕೀಲರಾದ ವಿನಯ್ ಶ್ರೀನಿವಾಸ್, ಪೂರ್ಣ, ಶ್ರೀಪಾದ್ ಭಟ್, ಹನುಮೇಗೌಡ, ಐಶ್ವರ್ಯ, ಕಾರ್ಮಿಕ ನಾಯಕಿ ಎಸ್ ವರಲಕ್ಷ್ಮೀ ಸೇರಿದಂತೆ ಗೌರಿ ಲಂಕೇಶ್ ಸಂಗಾತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಭಾಗವಹಿಸಿದ್ದರು.




