ಬೆಳಗಾವಿ:
ಲಿಂಗಾಯತ ಸಂಘಟನೆ ವತಿಯಿಂದ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ವಚನ ವಿಶ್ಲೇಷಣೆ ಚಿಂತನೆ ಕಾರ್ಯಕ್ರಮ ಜರುಗಿತು.
ನ್ಯಾಯವಾದಿ ಸುನೀಲ ಸಾಣಿಕೊಪ್ಪ ಅವರು ‘ನಂಬಿಕೆ, ಮೂಢನಂಬಿಕೆ ಮತ್ತು ವೈಚಾರಿಕತೆ’ ಕುರಿತು ಚಿಂತನೆ ಮಂಡಿಸಿದರು.
ಸಾತ್ವಿಕ ನಂಬಿಕೆಯೆಂಬುದು ವ್ಯಕ್ತಿಯು ಆತ್ಮಸಾಕ್ಷಾತ್ಕಾರ, ಮುಕ್ತಿ ಇತ್ಯಾದಿಗಳಿಗಾಗಿ ದೇವರೆಂಬ ಕಾಣದ ಶಕ್ತಿಯಲ್ಲಿ ಹೊಂದಿರುವ ಶ್ರದ್ಧೆಯನ್ನು ಬಿಂಬಿಸುತ್ತದೆ. ಮೂಢನಂಬಿಕೆ ಎಂಬುದು “ಹೇರಲ್ಪಟ್ಟ ನಂಬಿಕೆ” ಮತ್ತು “ಸ್ವಮೂಢ ನಂಬಿಕೆ” ಎಂದು ವರ್ಗೀಕರಿಸಬಹುದು.
“ಅಂಧಶ್ರದ್ಧೆ ಎಂದರೆ, ಆಧುನಿಕ ವಿಜ್ಞಾನವು ನಿರಾಕರಿಸುವ, ಅತಿಮಾನುಷವೆಂಬ ಕಾಲ್ಪನಿಕ ಶಕ್ತಿಯಲ್ಲಿ ನಂಬಿಕೆಯಿರಿಸಿ, ಅದನ್ನು ಒಲಿಸಿಕೊಳ್ಳಲು ಮಾಡುವ ತಪ್ಪು ಆಚರಣೆ”.
ಮೂಢನಂಬಿಕೆಗಳ ಮತ್ತು ದೆವ್ವ-ಭೂತಗಳ ಇತಿಹಾಸವು ಧರ್ಮ ಮತ್ತು ದೇವರ ಇತಿಹಾಸದಷ್ಟೇ ಪ್ರಾಚೀನವಾಗಿದೆ.
ಈಜಿಪ್ತಿನಲ್ಲಿಯ ಜನ ವಿವೇಚನೆ ಇಲ್ಲದೇ ಮೌಢ್ಯದಿಂದ ಸತ್ತವರ ಸಲುವಾಗಿ ದೊಡ್ಡದೊಡ್ಡ ಪಿರಾಮಿಡ್ಡುಗಳನ್ನು ಕಟ್ಟಲು ತಮ್ಮ ಸಮಯ, ಶ್ರಮ, ಹಣವನ್ನೆಲ್ಲ ವ್ಯಯಿಸುತ್ತಾ ಹೋದ ಕಾರಣ, ಆ ಜನರ ನಾಗರೀಕತೆಯೇ ಹಾಳಾಗಿ ಹೋಯಿತು.
ಮೊಟ್ಟಮೊದಲಿಗೆ ಭೂಮಿ ದುಂಡಾಗಿದ್ದು, ತನ್ನ ಮೈಸುತ್ತ ಸುತ್ತುತ್ತ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಕೋಪರ್ನಿಕಸ್ ವಿಜ್ಞಾನಿ ಹೇಳಿದ್ದನ್ನು ಅಂದಿನ ಜನ ಹುಚ್ಚಿನ ಪರಮಾವಧಿ ಎಂದು ಗೇಲಿ ಮಾಡಿ ಅವನ ಪ್ರಬಂಧವನ್ನು ನಿಷೇಧಿಸಿದರು.
೧೬ನೇ ಶತಮಾನದಲ್ಲಿ ಇದೇ ಮಾತನ್ನು ಹೇಳಿದ ಬ್ರುನೋ ವಿಜ್ಞಾನಿಯನ್ನು ಸಜೀವದಹನ ಮಾಡಿದರು. ಅದೇ ರೀತಿ ೧೭ನೇ ಶತಮಾನದಲ್ಲಿ ಹೇಳಿದ ಗೆಲಿಲಿಯೋನಿಗೆ ಬಲವಂತವಾಗಿ ಕ್ಷಮೆ ಕೇಳುವಂತೆ ಮಾಡಲಾಯಿತು.
ಆದರೆ ಕೆಪ್ಲರ ಮತ್ತು ನ್ಯೂಟನ್ನರ ಗುರುತ್ವಾಕರ್ಷಣೆ ನಿಯಮವು ಅಂಗೀಕರಿಸಲ್ಪಟ್ಟು, ಜ್ಯೋತಿಷ್ಯ ಶಾಸ್ತ್ರವು ಮಾನ್ಯತೆ ಕಳೆದುಕೊಂಡಿತು.
ಎಡಗಾಲು ಮುಂದಿಟ್ಟರೆ, ಬೆಕ್ಕು ಅಡ್ಡಬಂದರೆ, ಒಂದು ಸೀನು ಸೀನಿದರೆ, ಹಲ್ಲಿ ನುಡಿದರೆ ಅಪಶಕುನವಾಗುವುದಿಲ್ಲ. ಬೆಕ್ಕು ತನ್ನ ಅಹಾರ ಹುಡುಕಿ ಹೋಗುತ್ತಿರುವಾಗ ಮನುಷ್ಯ ಅಡ್ಡಬಂದರೆ ಆ ಬೆಕ್ಕಿಗೂ ಸಹ ಅಪಶಕುನವಾಗುತ್ತದೆಯೇ?
ಮೌಢ್ಯಕ್ಕೆ ಒಳಗಾಗುವ ಜನ ಪ್ರಾಣಿಬಲಿ, ನರಬಲಿಗಳನ್ನು ಸಹ ಕೊಡುತ್ತಾರೆ. ಮೊದಲು ಹಳ್ಳಿಗಳಲ್ಲಿ ಮಾತ್ರ ಕೇಳಸಿಗುತ್ತಿದ್ದ ಮಾಟ, ಮಂತ್ರಗಳು ಇಂದು ಎಲ್ಲೆಡೆ ಜೋರಾಗಿ ನಡೆಯುತ್ತಿವೆ. ಇವುಗಳಿಗೆ ವಾಮಾಚಾರ, ಮಾಟ, ಮೋಹಿನಿವಿದ್ಯೆ ಎಂದೂ ಕರೆಯುತ್ತಾರೆ.
ಜನ ತಮ್ಮ ಆರೋಗ್ಯ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳನ್ನು ಹೊತ್ತುಕೊಂಡು ಈ ಮಂತ್ರವಾದಿಗಳ ಬಳಿಗೆ ಹೋಗುತ್ತಾರೆ. ಮಂತ್ರವಾದಿಗಳು ಇಂಥವರಿಗೆ ಟೆಂಗಿನಕಾಯಿ, ಲಿಂಬೆಕಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಬಾಳೆಹಣ್ಣು, ಅರಿಷಿಣ, ಕುಂಕುಮ, ಎಲುಬುಗಳು, ಮೊಟ್ಟೆ, ಬೇರುಗಳು, ತಾಯತ ಇತ್ಯಾದಿಗಳಿಂದ ಮಂತ್ರಿಸಿಕೊಡುತ್ತಾರೆ.
ಈ ಜಗತ್ತಿನಲ್ಲಿ ತಮ್ಮ ಹಿತವನ್ನು ಬಯಸದವರು ಯಾರೂ ಇಲ್ಲ. ಎಲ್ಲರೂ ಹಿತದ ಬದುಕಿಗಾಗಿಯೇ ಬಡಿದಾಡುವರು. ಅದಕ್ಕಾಗಿಯೇ ಎಲ್ಲರಲ್ಲೂ ಸ್ಫರ್ಧೆ. ಕೆಲವರಿಗೆ ಜಯ; ಕೆಲವರಿಗೆ ಅಪಜಯ. ಅದಕ್ಕೆ ಹಲವಾರು ಕಾರಣಗಳಿರುತ್ತವೆ.
ಅವುಗಳಲ್ಲಿ ಮುಖ್ಯವಾಗಿ, ವ್ಯಕ್ತಿಯ ಸಾಮರ್ಥ್ಯ, ಅವನ ಮತ್ತು ಸಮಾಜದ ಸಾಂದರ್ಭಿಕ ವರ್ತನೆ, ನಿಸರ್ಗದ ಕ್ರಮಗಳು (ವಿಕೋಪಗಳು) ಇತ್ಯಾದಿಗಳು.
ಇವೆಲ್ಲವೂ ತಮ್ಮ ಪಾಡಿಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿದ್ದು, ಇವನ್ನು ನಿಯಂತ್ರಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ; ಮಂತ್ರ, ತಂತ್ರಂಗಳಿಂದಲಂತೂ ಸಾಧ್ಯವೇ ಇಲ್ಲ. ಜ್ಯೋತಿಷ್ಯ ಮತ್ತು ಭವಿಷ್ಯಗಳಂತೂ ಭಾರತೀಯರ ಬದುಕಿನ ಭಾಗವೇ ಆಗಿವೆ.
ಈ ಜ್ಯೋತಿಷ್ಯವು ಎಷ್ಟು ಸುಳ್ಳು ಎಂಬುದಕ್ಕೆ ಒಂದು ಅಂಶ ಸಾಕು. ಸೌರವ್ಯೂಹದಲ್ಲಿ ಸೂರ್ಯ ಒಂದು ನಕ್ಷತ್ರ ಮತ್ತು ಅದಕ್ಕೆ ಭೂಮಿಯನ್ನು ಒಳಗೊಂಡಂತೆ 9 ಗ್ರಹಗಳು ಸುತ್ತುತ್ತವೆ. ಚಂದ್ರ ಭೂಮಿಯ ಉಪಗ್ರಹ. ಆದರೆ ಜ್ಯೋತಿಷ್ಯದ ಪ್ರಕಾರ ಸೂರ್ಯ, ಚಂದ್ರರೂ ಗ್ರಹಗಳು.
ರಾಹು, ಕೇತು, ಕುಜಗಳೆಂಬ ಜ್ಯೋತಿಷ್ಯದ ಗ್ರಹಗಳು ಆಸ್ತಿತ್ವದಲ್ಲಿಯೇ ಇಲ್ಲ. ಆಸ್ತಿತ್ವದಲ್ಲಿರುವ ಯುರೇನಸ್, ನೆಪ್ಚೂನ ಮತ್ತು ಪ್ಲೂಟೋ ಗ್ರಹಗಳನ್ನು ಜ್ಯೋತಿಷ್ಯವು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ತಾಯಿ ಗರ್ಭದಲ್ಲಿ 9 ತಿಂಗಳು ಮೊದಲೇ ಬೀಜವಂಕುರಿಸುವುದು. ತಾಯಿಯಿಂದ ಮಗು ಬೇರ್ಪಡುವ ಕ್ಷಣ ಇದೇ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಜನಿಸಿದ ಅವಧಿಯನ್ನು ಆಧಾರವಾಗಿಟ್ಟುಕೊಂಡು ಹೇಳುವ ಭವಿಷ್ಯಕ್ಕೆ ಯಾವುದೇ ಅರ್ಥವಿಲ್ಲ.
ಟಿ.ವ್ಹಿ. ಮಾಧ್ಯಮಗಳು ಟಿ.ಆರ್.ಪಿ. ಸಲುವಾಗಿ ಭವಿಷ್ಯಕಾರರ ಭವಿಷ್ಯಗಳನ್ನು ಪದೇ ಪದೇ ಭಿತ್ತರಿಸಿ ಭೀತಿ ಉಂಟು ಮಾಡಬಾರದು. ಅಂತಹ ಅನೇಕ ಭವಿಷ್ಯಗಳು ಸುಳ್ಳು ಎಂದು ಸಾಬೀತಾಗಿವೆ.
ಮಗುವಿಗೆ ಊಟ ಮಾಡಿಸಲು ತಾಯಿಯು ದೆವ್ವ-ಭೂತಗಳ ಅಂಜಿಕೆ ಉಂಟು ಮಾಡುವ ಕಾರಣ, ಬಾಲ್ಯದಿಂದಲೇ ಜನ ಮೌಢ್ಯದ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಾಗಿ ಜನ ಜಾಗ್ರತರಾಗಬೇಕು. ಮನಸ್ಸು ಗಟ್ಟಿಯಾಗಿದ್ದರೆ ಯಾರದೇ ಯಾವುದೇ ಮೌಢ್ಯದ ಪ್ರಭಾವಕ್ಕೆ ಒಳಗಾಗುವುದಿಲ್ಲ.
ಸಮಾಜ ವೈಚಾರಿಕ-ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸುನೀಲ ಸಾಣಿಕೊಪ್ಪ ತಮ್ಮ ಚಿಂತನೆ ನೀಡಿದರು.
ಪ್ರಾರoಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿ ಕೊಟ್ಟರು. ಬಸವರಾಜ ಬಿಜ್ಜರಗಿ, ವಿ. ಕೆ. ಪಾಟೀಲ ಅಕ್ಕಮಹಾದೇವಿ ತೆಗ್ಗಿ, ಶಿವಲೀಲಾ ಗೌಡರ, ರುದ್ರಮ್ಮ ಅಕ್ಕನವರ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಗುರಸಿದ್ದಪ್ಪ ರೇವಣ್ಣವರ, ಶಂಕ್ರಪ್ಪ ಮೆಣಸಗಿ, ಮಹದೇವ ಘಾಟೆ, ಲಕ್ಸ್ಮಿ ಜೇವಣಿ, ಸುದೀಪ ಪಾಟೀಲ, ಲಕ್ಸ್ಮಿಕಾoತ ಗುರವ, ರಾಮಾಪೂರಿ ದಂಪತಿ ಹಾಗೂ ಇನ್ನುಳಿದ ಶರಣ ಶರಣೆಯರು ಭಾಗವಹಿಸಿದ್ದರು.
ಸಂಗಮೇಶ ಅರಳಿ, ನಿರೂಪಿಸಿದರು. ಶಾಂತಾ ಚಿನಿವಾಲರ ದಾಸೋಹ ಸೇವೆಗೈದರು.
