ಕಲಬುರಗಿ
‘ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುತ್ತಿರುವುದು ಬೇಸರದ ಸಂಗತಿ’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ ಮಂಗಳವಾರ ಹೇಳಿದರು.
‘ಕೆಲವರು ಗೋಡ್ಸೆ ಭಾರತ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ. ಗಾಂಧಿವಾದಿಗಳಿಗೆ ಗಾಂಧಿ ಭಾರತ ನಿರ್ಮಾಣಕ್ಕೆ ಸಿದ್ಧರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕೋಮುವಾದ ಹೆಚ್ಚುತ್ತಿದೆ. ಜಯಪ್ರಕಾಶ ನಾರಾಯಣರವರು ಇಂದು ಬದುಕಿದ್ದರೆ ಕೋಮುವಾದದ ವಿರುದ್ಧ ದೊಡ್ಡ ಕ್ರಾಂತಿ ಮಾಡುತ್ತಿದ್ದರು’ ಎಂದರು.
ಜೆ.ಪಿ ಚಿಂತಕರ ವೇದಿಕೆಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ‘ಲೋಕನಾಯಕ ಜಯಪ್ರಕಾಶ ನಾರಾಯಣ ಬದುಕು–ಸಾಧನೆ ನೆನಪು ಮತ್ತು ಪುನರ್ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜೆಪಿಯವರು ಯಾವ ವ್ಯವಸ್ಥೆ ಬದಲಾಗಬೇಕು ಎಂದು ಕನಸು ಕಂಡಿದ್ದರೋ ಅದು ಇನ್ನೂ ಅಸ್ತಿತ್ವದಲ್ಲಿದೆ. ಎಲ್ಲರೂ ಭ್ರಷ್ಟಾಚಾರ ಮೈಗೂಡಿಸಿಕೊಂಡಿದ್ದಾರೆ. ಚುನಾವಣೆ ವ್ಯಾಪಾರವಾಗಿ ಮಾರ್ಪಟ್ಟಿದೆ. ಬಂಡವಾಳಶಾಹಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದ ಸಂಪತ್ತನ್ನು ಅಂಬಾನಿ, ಅದಾನಿಗಳ ಕೈಗೆ ಕೊಟ್ಟು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ’ ಎಂದು ಹೇಳಿದರು.
ಚಿಂತಕ ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸಿದ್ದರು. ವಿನಾಯಕ ಫಡೆ, ವೆಂಕಟರಾವ ಪಾಟೀಲ, ಬಸಯ್ಯ ಗುತ್ತೇದಾರ, ಶಂಕರ ಪಾಟೀಲ ಹಾಗೂ ವಿಜಯಕುಮಾರ ಪಾಟೀಲ ಹಾಜರಿದ್ದರು.