ನಂಜನಗೂಡು:
ತಾಲ್ಲೂಕಿನ ದೇವೀರಮ್ಮನಹಳ್ಳಿ ಗ್ರಾಮದ ನಂದೀಶ ಮತ್ತು ಪವಿತ್ರಾ ಶರಣ ದಂಪತಿಗಳ ‘ಶ್ರೀಗುರು ಮಲ್ಲೇಶ ನಿಲಯ’ ನೂತನ ಮನೆಯ ಗುರುಪ್ರವೇಶವು ಜನೇವರಿ 11ರಂದು ಬಸವಣ್ಣನವರ “ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ” ಎಂಬ ನುಡಿಯಂತೆ ನಡೆಯಿತು.


ಗುರುಪ್ರವೇಶ ಕಾರ್ಯಕ್ರಮ ಧನುರ್ಮಾಸದಲ್ಲಿ (ಮೂಲ ಮಾಸ) ನಡೆಸುವ ಮೂಲಕ ಮೌಢ್ಯಾಚರಣೆ ಸಲ್ಲದು ಎಂಬ ಸಂದೇಶವನ್ನು ಕುಟುಂಬದವರು ಗ್ರಾಮದ ಜನರಿಗೆ ಸಾರಿದರು.
ಲಿಂಗಾಯತ ಆಚರಣೆಯಂತೆ ಗುರುಪ್ರವೇಶ ಆಗಿದೆ. ಬಸವತತ್ವದ ಆಚರಣೆಗಳು ಜಗತ್ತಿಗೆ ದಾರಿದೀಪವಿದ್ದಂತೆ, ಆ ದೀಪದ ಬೆಳಕಿನಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳಬೇಕು ಎಂದು ವೇದಿಕೆಯಲ್ಲಿದ್ದ ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.

ರೈತ ಸಂಘದ ಮುಖಂಡರಾದ ಹೊನ್ನುರು ಪ್ರಕಾಶ ಅವರು ಇದೇ ಸಂದರ್ಭದಲ್ಲಿ ಕೃಷಿಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.


ಮುಂಜಾನೆ ಪೂಜ್ಯ ಇಮ್ಮಡಿ ಉದ್ದಾನ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಪೂಜೆ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಾದಿ ಶರಣರ ಜಯಘೋಷಗಳೊಂದಿಗೆ ವಚನ ಸಾಹಿತ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಬಸವ ಕಲಾಲೋಕ ತಂಡದ ಬಸವ ಧ್ವಜ ಕುಣಿತ ಎಲ್ಲರನ್ನು ಆಕರ್ಷಿಸಿತು.


ವೇದಿಕೆ ಕಾರ್ಯಕ್ರಮದಲ್ಲಿ ಶರಣ ನಿಂಗರಾಜಪ್ಪನವರ ನೇತೃತ್ವದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಿತು.
ನಂಜದೇವನಪುರದ ಮಾದಪ್ಪ ಮತ್ತು ತಂಡದವರಿಂದ ವಚನ ಗಾಯನ ನಡೆಯಿತು. ನಂದೀಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೃಷಬೇಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದೇವೀರಮ್ಮನಹಳ್ಳಿ ಗ್ರಾಮದ ಪ್ರಮುಖ ರೈತರನ್ನು ಸನ್ಮಾನಿಸಲಾಯಿತು. ರಾತ್ರಿ ದಾವಣಗೆರೆ ಬಸವಲೋಕ ತಂಡದವರಿಂದ ವಚನ ಗಾಯನ ನಡೆಯಿತು.
ವೇದಿಕೆಯಲ್ಲಿ ಪೂಜ್ಯ ಬಸವಯೋಗಿ ಸ್ವಾಮೀಜಿ, ಜಯದೇವಿ ತಾಯಿ, ಚಿನ್ಮಯ ತಾಯಿ, ಪೂಜ್ಯ ಮಾದಪ್ಪ ಸ್ವಾಮೀಜಿ ಮತ್ತಿತರರು ಇದ್ದರು.


ವಿವಿಧ ಬಸವಪರ ಸಂಘಟನೆಗಳ ಸದಸ್ಯರು, ಬಂಧು-ಭಾಂಧವರು ಮತ್ತು ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ, ಹಳ್ಳಿಯಲ್ಲಿ ಹಬ್ಬದ ವಾತಾವರಣ ಮೂಡಿಸಿದರು.

ಇಡೀ ಹಳ್ಳಿಗೆ ಶರಣ ಸಂಸ್ಕೃತಿಯ ಪರಿಚಯ ಮಾಡಿಸಿದಂತ ಮಾದಪ್ಪನವರ ಕುಟುಂಬ ವರ್ಗದವರಾದ ಭಾಗ್ಯಮ್ಮ, ಗುರುಸಿದ್ದಪ್ಪ, ನಂದೀಶ, ಪವಿತ್ರ ಮತ್ತು ಹೃತಿಕ್ ನಂದೀಶ್ ಅವರಿಗೆಲ್ಲಾ ಬಸವಾದಿ ಶರಣರ ಕೃಪೆಯಿರಲೆಂದು ಬಂದವರೆಲ್ಲ ಶುಭ ಹಾರೈಸಿದರು. ಎಲ್ಲರೂ ಪ್ರಸಾದ ಸೇವಿಸಿ ಸಂತೃಪ್ತರಾದರು.
