ಅರಕೇರಾ:
ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು ಸಮಸಮಾಜದ ಕನಸು ಕಂಡ ಧೀಮಂತರು. ಮಾನವತಾವಾದಿ ಮಂಜಪ್ಪನವರು ತೀವ್ರತೆರನಾದ ಸಂಕಷ್ಟದಲ್ಲೂ ರಾಷ್ಟ್ರೀಯತೆಯನ್ನೇ ಉಸಿರಾರಾಗಿಸಿಕೊಂಡು ಬದುಕಿದವರು ಎಂದು ಶರಣ ಚಿಂತಕ ಲೋಕೇಶ್ ಎನ್. ಮಾನ್ವಿ ಹೇಳಿದರು.
ತಾಲ್ಲೂಕಿನ ಜಾಗಿರಜಾಡಲದಿನ್ನಿ ಗ್ರಾಮದ ನೀಲಾಂಬಿಕೆ ಬಸವ ಯೋಗಾಶ್ರಮ ಬಡಿಗೇರ ಮರ್ಚಗುಡ್ಡದಲ್ಲಿ ಹಮ್ಮಿಕೊಂಡಿದ್ದ 82ನೇ ಬಸವತತ್ವ ಚಿಂತನಗೋಷ್ಟಿಯಲ್ಲಿ ಶರಣ ಹರ್ಡೇಕರ್ ಮಂಜಪ್ಪನವರ ಬಗ್ಗೆ ಮಾತನಾಡಿದರು.
ಮೊಟ್ಟಮೊದಲು ಸಾರ್ವಜನಿಕವಾಗಿ ಬಸವ ಜಯಂತಿ ಆಚರಿಸಿದ, ಸ್ತ್ರೀ ಸಮಾಜದ ಜಾಗೃತಿಗಾಗಿ ಅಕ್ಕಮಹಾದೇವಿ ಜಯಂತಿಯನ್ನು ಆರಂಭಿಸಿದ ಶ್ರೇಯಸ್ಸು ಹರ್ಡೇಕರ್ ಮಂಜಪ್ಪನವರಿಗೆ ಸಲ್ಲುತ್ತದೆ.
ಮಂಜಪ್ಪನವರು ಬಸವಣ್ಣನವರ ದಾಸಿಪುತ್ರನಾಗಲಿ, ವೇಶಾಪುತ್ರನಾಗಲಿ ಎಂಬ ವಚನದಿಂದ ಪ್ರಭಾವಿತರಾಗಿ ಲಿಂಗದೀಕ್ಷೆಯನ್ನು ಪಡೆದುಕೊಂಡು ಜೀವನದುದ್ದಕ್ಕೂ ಬಸವತತ್ವ ಪ್ರಸಾರ ಮಾಡಿದ ಮಹಾನುಭಾವರು.

ಮೊಟ್ಟಮೊದಲಿಗೆ ಬಸವ ಸೇವಾದಳ ಸ್ಥಾಪನೆ ಮಾಡಿದ ಮಂಜಪ್ಪನವರು, ಮಹಾತ್ಮಗಾಂಧೀಜಿಯವರಿಗೆ ಬಸವಣ್ಣನವರ ಜೀವನ ಸಂದೇಶ ಪರಿಚಯಿಸಿದರು. ಸುಮಾರು 82 ಕೃತಿಗಳನ್ನು ರಚಿಸಿದ್ದಾರೆ. ಬಂಥನಾಳ ಶಿವಯೋಗಿಗಳ ಜೊತೆಗೂಡುವ ಮೂಲಕ ಬಸವ ಪ್ರಜ್ಞೆಯೊಂದಿಗೆ ಸ್ವಾತಂತ್ರ್ಯ ಚಳವಳಿಯ ಕುರಿತು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತಾರೆ.
ಮಂಜಪ್ಪನವರಿಗೆ ಸಮಾಜ ಸೇವಕ, ಸಾಹಿತ್ಯ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ “ಕರ್ನಾಟಕ ಗಾಂಧಿ” ಎಂದು ಹೆಸರಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಸಮಾಜ ಸುಧಾರಣೆ, ಸ್ವಾತಂತ್ರ ಚಳವಳಿ ಮತ್ತು ಗಾಂಧಿವಾದ ತತ್ವಗಳ ಪ್ರಸಾರಕ್ಕೆ ಸಮರ್ಪಿಸಿದರೆಂದು ಲೋಕೇಶ ಹೇಳಿದರು.
ನೀಲಾಂಬಿಕೆ ಬಸವ ಯೋಗಾಶ್ರಮದ ಅಧ್ಯಕ್ಷ ವೀರಭದ್ರ ಸ್ವಾಮೀಜಿ ಮಾತನಾಡಿ, ಜ್ಞಾನದ ಬೆಳಕು ಬಸವಣ್ಣ ಕಾಯಕ ಮಹತ್ವವನ್ನು ವಿಶ್ವಕ್ಕೆ ಸಾರಿದರು.
12 ನೇ ಶತಮಾನದ ಪ್ರಮುಖ ವಚನಕಾರರು ವಚನಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು. ಕಾಯಕವೇ ಕೈಲಾಸ, ಜಾತಿ ಇಲ್ಲದ ಭಕ್ತಿ ಮುಂತಾದ ತತ್ವಗಳನ್ನು ಸಾರಿದರು.

ಮುಂದಿನ ದಿನಗಳಲ್ಲಿ ಮದ್ಯಪಾನ, ಗುಟ್ಕಾ, ಬೀಡಿ, ಸಿಗರೇಟ್, ತಂಬಾಕು ಚೀಟುಗಳ ದಾಸರಾಗಿರುವ ಜನರಲ್ಲಿ ಜಾಗೃತಿ ಮೂಡಿಸಿ ಚೀಟಿ ಬಿಡಿಸಲು ಪ್ರತಿಮನೆ ಮನೆಗೆ ಹೋಗಿ ಜೋಳಿಗೆ ಹಿಡಿದು, ದುಶ್ಚಟ ಬೇಡಲು ಅಭಿಯಾನ ಪ್ರಾರಂಭಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಸೂಗೂರೇಶ್ವರ ಎಸ್. ಗುಡಿ, ಲೋಕೇಶ್ ಮಾನ್ವಿ, ಅಮರೇಶ ಗೌಡ ಅವರಿಗೆ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೆಟ್ಟಪ್ಪ ಕಸ್ತೂರಿ ಅತ್ತನೂರು, ಚನ್ನಪ್ಪ ಸಿರವಾರ, ಅಮರಪ್ಪ ಶಾಖಾಪೂರ, ಮಸ್ತಾನಸಾಬ, ಹನುಮಂತಪ್ಪ ಮಾಸ್ಟರ್, ನಾಗಯ್ಯಸ್ವಾಮಿ ಚಿಕ್ಕಮಠ, ಅಮರೇಶ ಬಳೆಗಾರ, ಶಿವಕುಮಾರ ಗುಡಿ ಭಾಗವಹಿಸಿದ್ದರು. ದಾಸೋಹ ವ್ಯವಸ್ಥೆ ಮೌನೇಶ ಬುಡಿಗಿ ಸೇರಿದಂತೆ ಸುತ್ತಮುತ್ತಲಿನ ಶರಣ-ಶರಣೆಯರು ಮಾಡಿದ್ದರು.
