ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗ, ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟ ನೈತಿಕ ಬೆಂಬಲ ನೀಡಿದೆ.
ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿದ 10 ಸ್ವಾಮೀಜಿಗಳನ್ನು ಒಳಗೊಂಡ ನಿಯೋಗ, ಅವರಿಗೆ ಆತ್ಮಸ್ಥೈರ್ಯ ತುಂಬಿತು. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಖಾಸಗಿ ದೂರು ಆಧರಿಸಿ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ನಿಯೋಗದಲ್ಲಿದ್ದ ಸ್ವಾಮೀಜಿಗಳು ಖಂಡಿಸಿದರು.
‘ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರಿಂದ ಚುನಾಯಿತವಾದ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜಭವನ ಷಡ್ಯಂತ್ರ ನಡೆಸಿವೆ. ಸರ್ಕಾರ ಪತನಗೊಳಿಸುವ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಪ್ರಯತ್ನ ಮುಂದುವರಿಸಿದರೆ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಮಾದರ ಚನ್ನಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಮಹಾಸ್ವಾಮೀಜಿ, ಕನಕ ಗುರುಪೀಠ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ನಾರಾಯಣ ಗುರುಪೀಠ ರೇಣುಕಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಸರೂರು ಪೀಠದ ಶಾಂತಮ್ಮಯ್ಯ ಸ್ವಾಮೀಜಿ ನಿಯೋಗದಲ್ಲಿದ್ದರು.