ಚನ್ನಬಸವಣ್ಣನವರು ಪಂಚಾಚಾರಗಳ ಜೊತೆಗೆ ಮತ್ತಷ್ಟು ಆಚಾರಗಳನ್ನು ತಿಳಿಸುತ್ತಾರೆ. ಇದು ಒಂದು ಬಗೆಯ ಧರ್ಮರಹಸ್ಯ ಎನ್ನುತ್ತಾರೆ. ನಿಜವಾದ ಧರ್ಮದ ಅಂತಃಸತ್ವವನ್ನು ತಿಳಿದುಕೊಳ್ಳಬೇಕಾದರೆ, ಈ ಸಪ್ತಾಚಾರಗಳನ್ನೂ ಆಚರಿಸಬೇಕು ಎಂಬುದು ಅವರ ಅಂಬೋಣ. ಈ ಸಪ್ತಾಚಾರಗಳು ಅಂತರ‍್ಮುಖಿ ಆಗಿರುವುದರಿಂದ, ಇವುಗಳನ್ನು ಗುರುವಿನಿಂದಲೇ ಕಲಿಯಬೇಕೆಂದು ತಿಳಿಸುತ್ತಾರೆ. ಪಂಚ ಆಚಾರವನ್ನು ಒಳಗೊಂಡಂತೆ ಮತ್ತೆ ಆರು ಬಗೆಯ ಆಚಾರಗಳನ್ನು ವಿವರಿಸಿ, ಸಪ್ತಾಚಾರ ನಿರ್ಣಯವನ್ನು ಚನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಸುದೀರ್ಘವಾಗಿ ವಿವೇಚಿಸಿದ್ದಾರೆ. ಆ ವಚನವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ
ಲಿಂಗ ಜಂಗಮವಲ್ಲದೆ,
ಅನ್ಯದೈವಂಗಳ ತ್ರೈಕರಣದಲ್ಲಿ
ಅರ್ಚಿಸದಿರ್ಪುದೆ ಲಿಂಗಾಚಾರ ವೆಂಬೆನಯ್ಯಾ.
ಶ್ರೀಗುರು ಅನುಗ್ರಹಿಸಿ ಕೊಟ್ಟ ಲಿಂಗವನ್ನು ಪೂಜಿಸಬೇಕಲ್ಲದೆ, ಮತ್ತೆ ಬೇರೆ ದೈವಗಳನ್ನು ಹುಡುಕಿ ಹೋಗಬಾರದು. ಕಾಯಾ, ವಾಚಾ, ಮನಸಾ ಎಂಬ ತ್ರೈಕರಣದಿಂದ ಭಕ್ತಿ ಶ್ರದ್ಧೆಗಳಿಂದ ಲಿಂಗವನ್ನು ಅರ್ಚಿಸುವುದೇ ಲಿಂಗಾಚಾರ.
ಭಕ್ತನಾದಡೆ ಸತ್ಯಶುದ್ಧ ಕಾಯಕ[ವ ಮಾಡಿ],
ಮಹೇಶನಾದಡೆ ಸತ್ಯಶುದ್ಧ ಭಿಕ್ಷವ ಬೇಡಿ
ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ
ತಿಳಿದು ಹಸಿವು ತೃಷೆ ಶೀತಕ್ಕೆ
ಪರಹಿತಾರ್ಥಿಯಾಗಿರ್ಪುದೆ
ಸದಾಚಾರ ವೆಂಬೆನಯ್ಯಾ.
ಧರ್ಮಮಾರ್ಗದಲ್ಲಿ ನಡೆಯಬೇಕಾದ ವ್ಯಕ್ತಿ ಕೇವಲ ಬಾಹ್ಯ ಲಾಂಛನಗಳನ್ನು ಧರಿಸಿಕೊಂಡು ಇರುವುದು ಮಾತ್ರ ನಿಜವಾದ ಆಚರಣೆ ಅಲ್ಲ. ಅದಕ್ಕಾಗಿ ನೈತಿಕ ಮೂಲದ ಆಚಾರಗಳನ್ನು (ಸದಾಚಾರ) ಪರಿಪಾಲಿಸಬೇಕು. ಭಕ್ತಸ್ಥಲದಲ್ಲಿ ಇರುವಂತಹ ಸಾಧಕನು ಅಧ್ಯಾತ್ಮ ಸಾಧನೆಗೆ ಪೂರಕವಾಗಿ ಸತ್ಯಶುದ್ಧ ಕಾಯಕವನ್ನು ಮಾಡಬೇಕು. ಭಕ್ತಸ್ಥಲದಿಂದ ಮಹೇಶ ಸ್ಥಲಕ್ಕೆ ಬಂದ ತರುವಾಯ ತನ್ನ ಮನೆಯ ಹಂಗು ಹರಿದುಕೊಳ್ಳಬೇಕು. ತಂದೆ-ತಾಯಿ ಆಶ್ರಯದಿಂದ ಬದುಕುವ ಪರಾವಲಂಬಿತನ ಬಿಡಬೇಕು. ಸಮಾಜದ ಮಧ್ಯೆ ನಿರ್ಲಪ್ತವಾಗಿ ಬದುಕಬೇಕಾದರೆ ಮಾಹೇಶ ನಿಷ್ಠೆಯಿಂದ ಭಿಕ್ಷೆ ಮಾಡಿ, ದಾಸೋಹ ಸೇವೆ ಸಲ್ಲಿಸಬೇಕು. ಇದು ಇಂದಿನ ವಿರಕ್ತಮಠಾಧೀಶರಿಗೆ ಬೋಧಿಸಿದ ಆಚಾರವಾಗಿರಬೇಕಿನಿಸುತ್ತದೆ. ಭಿಕ್ಷೆ ಮಾಡುವ ಕಾಯಕದಿಂದ ಸಂಗ್ರಹಿಸಿದ್ದನ್ನು ದಾಸೋಹದ ಮೂಲಕ ವಿನಿಯೋಗಿಸಬೇಕು ಎಂಬ ಕಟ್ಟಳೆ ಇಲ್ಲಿದೆ. ಹೀಗೆ ಸಮಸ್ತ ಪ್ರಾಣಿಪ್ರಪಂಚದ ಹಿತಾರ್ಥವಾಗಿ ದಾಸೋಹ ಮಾಡಬೇಕೆ ಹೊರತು, ಆಡಂಬರಕ್ಕಾಗಿ ಮಾಡಬಾರದು. ಯಾರಿಗೆ ನಿಜವಾಗಿಯೂ ಹೊಟ್ಟೆ ಹಸಿದಿರುವುದೇ ಅವರಿಗೆ ದಾಸೋಹ ಮಾಡಿದರೆ ಉತ್ತಮ, ಉಳ್ಳವರಿಗೆ ಶ್ರೀಮಂತರಿಗೆ ದಾಸೋಹ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇನ್ನೂ ಮುಂದುವರಿದು ಅಪಾತ್ರರಾದವರಿಗೆ ಎಂದಿಗೂ ದಾಸೋಹ ಮಾಡಬಾರದು ಎಂಬುದೇ ಸದಾಚಾರದ ಲಕ್ಷಣವೆನ್ನುತ್ತಾರೆ.
ಗುರುಮಾರ್ಗಾಚಾರದಲ್ಲಿ ನಿಂದ
ಶಿವಲಾಂಛನಧಾರಿಗಳೆಲ್ಲಾ
ಪರಶಿವಲಿಂಗವೆಂದು ಭಾವಿಸಿ,
ಅರ್ಥ ಪ್ರಾಣಾಭಿಮಾನವನರ್ಪಿಸುವುದೆ
ಶಿವಾಚಾರ ವೆಂಬೆನಯ್ಯಾ.
ಗುರುಮಾರ್ಗದ ಆಚಾರದಲ್ಲಿ ಇರುವಂತಹ ಎಲ್ಲ ಲಾಂಛನಧಾರಿಗಳನ್ನು ಪರಶಿವಲಿಂಗದ ಸ್ವರೂಪವೆಂದೇ ಭಾವಿಸಬೇಕು. ಕಾವಿ-ಕಪನಿ, ಆವುಗೆ, ವಿಭೂತಿ, ರುದ್ರಾಕ್ಷಿ, ಲಿಂಗ ಧರಿಸಿದ ಎಲ್ಲ ಜಂಗಮರೂಪದ ಮಹಾತ್ಮರನ್ನು ಒಂದೇ ಬಗೆಯಾಗಿ ಕಾಣಬೇಕು. ಇಂತಹ ಪರಶಿವಲಿಂಗ ಸ್ವರೂಪದ ಮಹಾತ್ಮರಿಗೆ ಅರ್ಥ, ಪ್ರಾಣ, ಅಭಿಮಾನ ಅಂದರೆ ತನು, ಮನ, ಧನಗಳನ್ನು ಅರ್ಪಿಸುವುದೇ ಶಿವಾಚಾರ ಎಂಬುದು ಇಲ್ಲಿಯ ಅಭಿಪ್ರಾಯ.
ಅಷ್ಟಾವರಂಣಗಳ ಮೇಲೆ ಅನ್ಯರಿಂದ
ಕುಂದು ನಿಂದೆಗಳು ಬಂದು ತಟ್ಟಿದಲ್ಲಿ
ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ
ಗಣಾಚಾರ ವೆಂಬೆನಯ್ಯಾ.
ಭಕ್ತನಾದವನ ಅಂಗಸ್ವರೂಪವಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಎಂಬ ಎಂಟು ಆವರಣಗಳ ಬಗ್ಗೆ ಯಾರಾದರೂ ಕುಂದುನಾಡಿದರೆ, ನಿಂದೆಯನಾಡಿದರೆ ತನ್ನ ಎಲ್ಲ ಸಮುದಾಯದ ಜೊತೆಗೆ ಆ ಸ್ಥಳವನ್ನೇ ತೊರೆದು ಹೋಗುವುದು ಉತ್ತಮ ಎಂಬ ನಿಲುವು ಇಲ್ಲಿದೆ. ೧೨ನೇ ಶತಮಾನದಲ್ಲಿ ಅಂತೆಯೆ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಲಿಂಗವಂತ ಧರ್ಮಕ್ಕೆ ಅಪಾಯ ಒದಗಿದಾಗ, ಆ ಸ್ಥಳವನ್ನೇ ಶರಣರು ತೊರೆದು, ಉಳವಿಯತ್ತ ದಯಮಾಡಿಸಿದರು ಎಂಬ ಘಟನೆ ಇದಕ್ಕೆ ಸಾಕ್ಷಿಯಾಗಿದೆ.
ಜಾತ್ಯಾಶ್ರಮ ಕುಲಗೋತ್ರ ನಾಮರೂಪ ಕ್ರಿಯಾರಹಿತನಾಗಿ,
ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ,
ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು,
ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ
ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ
ಷಟ್ಸ್ಥಲಮಾರ್ಗದಲ್ಲಿ ನಿಂದ ಭಕ್ತಗಣಂಗಳಲ್ಲಿ
ಪಂಚಸೂತಕಂಗಳ ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ,
ತನುಮನಧನಂಗಳ ಸಮರ್ಪಿಸಿ, ಅವರೊಕ್ಕುಮಿಕ್ಕುದ ಹಾರೈಸಿ
ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ
ಭೃತ್ಯಾಚಾರ ವೆಂಬೆನಯ್ಯಾ.
ಭೃತ್ಯಾಚಾರದ ನಿಲುವನ್ನು ಮೇಲಿನ ವಚನದಲ್ಲಿ ವಿವರಿಸಿದ್ದಾರೆ. ಭೃತ್ಯನೆಂದರೆ ವಿನಯವಂತ ಸೇವಕ. ನಿಜವಾದ ಲಿಂಗಾಯತನು ಗುರು-ಲಿಂಗ-ಜಂಗಮಕ್ಕೆ ಭೃತ್ಯನಂತೆ ಸೇವೆ ಮಾಡಬೇಕು. ಜಾತಿ, ಕುಲ, ಗೋತ್ರ, ವರ್ಣಾಶ್ರಮ ಇವುಗಳನ್ನು ನಿರ್ಲಕ್ಷಿಸಿ, ಯಾವು ಜಾತಿ, ಕುಲ, ಗೋತ್ರದ ವ್ಯಕ್ತಿಯೇ ಆಗಿರಲಿ, ಆತ ಲಿಂಗ ಅನುಭಾವಿ ಶರಣನಾಗಿದ್ದರೆ, ಅವನಿಂದ ಇಷ್ಟಲಿಂಗವನ್ನು ಪಡೆದುಕೊಂಡು, ಭಕ್ತಿ, ಜ್ಞಾನ, ವೈರಾಗ್ಯಗಳಿಂದ ಪಾದೋದಕ, ಪ್ರಸಾದ ವಿಭೂತಿ, ರುದ್ರಾಕ್ಷಿ, ಮಂತ್ರ ಎಂಬ ಅಷ್ಟಾವರಣದ ಇವುಗಳಿಂದ ಷಟ್ಸ್ಥಲ ಮಾರ್ಗದಲ್ಲಿ ನಿಂತಿರುವ ಭಕ್ತ ಸಮುದಾಯದಲ್ಲಿ ಪಂಚಸೂತಕಗಳನ್ನು ತೊರೆದು, ಅವರಿರುವ ಜಾಗಕ್ಕೆ ಹೋಗಿ ತನ್ನ ತನು ಮನ ಧನಗಳನ್ನು ಅರ್ಪಿಸಿ, ಅವರಿಂದ ಹರಕೆ ಹಾರೈಕೆ ಪಡೆದುಕೊಂಡು, ಅವರಿಗೆ ಇದಿರಾಡದಿರುವುದೇ ಭೃತ್ಯಾಚಾರವಾಗಿದೆ.
ಮಲ ಮಾಯಾ ಪಾತಕ ಸೂತಕ
ರಹಿತವಾದ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುವಿನಿಂದ
ವೇಧಾಮಂತ್ರ ಕ್ರಿಯಾದೀಕ್ಷೆಯ ಪಡೆದು,
ದ್ವಾದಶ ಮಲಪಾಶ ಕರ್ಮವ ತ್ಯಜಿಸಿ,
ಮನ ಮಾರುತ ಮೊದಲಾದ ದ್ವಾದಶ ಇಂದ್ರಿಯಂಗಳ
ಗುರುಪಾದಜಲದಿಂದ ಪ್ರಕ್ಷಾಲಿಸಿ
ದಂತಪಂಕ್ತಿಕ್ರಿಯೆಗಳ ಮಾಡಿ, ಕಟಿಸ್ನಾನ, ಕಂಠಸ್ನಾನ, ಮಂಡೆಸ್ನಾನ
ಸರ್ವಾಂಗಸ್ನಾನವ ಮಾಡಿ,
ಕ್ರಿಯಾಭಸಿತದಿಂದ ಸ್ನಾನ ಧೂಲನ
ಧಾರಣದ ಮರ್ಮವ ತಿಳಿದಾಚರಿಸಿ,
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ
ಷೋಡಷೋಪಚಾರದಿಂದ
ಗುರು-ಲಿಂಗ-ಜಂಗಮವನರ್ಚಿಸಿ,
ನಿರ್ವಂಚಕತ್ವದಿಂದ ಘನಪಾದತೀರ್ಥಪ್ರಸಾದ
ಮಂತ್ರದಲ್ಲಿ ನಿಂದ ನಿಜಾವಸ್ಥೆಯ ಕ್ರಿಯಾಚಾರ ವೆಂಬೆನಯ್ಯಾ.
ಮಲತ್ರಯ(ಆಣವ, ಮಾಯಾ, ಕಾರ್ಮಿಕ)ಗಳನ್ನು ಮೀರಿದ, ಪಾತಕ ಸೂತಕಗಳಿಲ್ಲದ ಮೂರು ಬಗೆಯ ಗುರುಗಳಿದ್ದಾರೆ. ದೀಕ್ಷಾ, ಶಿಕ್ಷಾ, ಜ್ಞಾನ ಈ ಮೂರು ಬಗೆಯ ಗುರುಗಳಿಂದ ವೇಧಾದೀಕ್ಷೆ ಪಡೆದುಕೊಂಡು ದ್ವಾದಶ ಮಲ ಪಾಶ (ಹೊನ್ನು, ಹೆಣ್ಣು, ಮಣ್ಣು, ಅನ್ನ, ನೀರು, ವಸ್ತ್ರ, ಆಭರಣ, ವಾಹನ, ಪುತ್ರ, ಮಿತ್ರ, ಅನಾಚಾರ ಮತ್ತು ದುಸ್ಸಂಗ ಎಂಬ ಹನ್ನೆರಡು ಬಗೆಯ ಮಲಗಳು) ಇವುಗಳನ್ನು ನಿವಾರಿಸುವುದೇ ನಿಜವಾದ ಆಧ್ಯಾತ್ಮಿಕ ಜೀವನದ ಗುರಿಯಾಗಿದೆ. ೧೨ ಬಗೆಯ ಇಂದ್ರಿಯಗಳಿಗೆ (ಇಡೀ ದೇಹದಲ್ಲಿರುವ ಅಂಗಗಳಿಗೆ) ಗುರುಪಾದೋದಕದಿಂದ ಸಿಂಪಡಿಸಿ ಬೆಳಗಿನ ಎಲ್ಲ ಶೌಚಕ್ರಿಯೆಗಳನ್ನು ಪೂರೈಸಿ, ಸಾಕಾರ ನಿರಾಕಾರದ ಪೂಜೆಯನ್ನು ಎಂಟು ವಿಧದಿಂದ ಆರಂಭಿಸಬೇಕು. ಹದಿನಾರು ಬಗೆಯ ಉಪಚಾರಗಳಿಂದ ಗುರು ಲಿಂಗ ಜಂಗಮ ಅರ್ಚಿಸಬೇಕು. ಮಂತ್ರ ಮೊದಲಾದವುಗಳನ್ನು ಸರಿಯಾದ ಕ್ರಮದಲ್ಲಿ ಉಚ್ಚರಿಸಿ, ನಿಜದ ಅವಸ್ಥೆಯನ್ನು ಹೊಂದುವುದೇ ಕ್ರಿಯಾಚಾರ ಎನಿಸುವುದು.
ಅಂತರಂಗದಲ್ಲಿ ಕರಣವಿಷಯ
ಕರ್ಕಶದಿಂದ ಅಹಂಕರಿಸಿ,
ಗುರುಹಿರಿಯರಲ್ಲಿ ಸಂಕಲ್ಪ ವಿಕಲ್ಪಗಳಿಂದ
ಕುಂದು-ನಿಂದೆ ಹಾಸ್ಯ-ರೋಷಂಗಳೆಂಬ
ಅಜ್ಞಾನವ ಬಳಸದೆ,
ಪರಮಪಾತಕರ ದರ್ಶನಸ್ಪರ್ಶನಸಂತರ್ಪಣೆ
ಪಂಕ್ತಿಪಾಕವ ಕೊಳ್ಳದೆ,
ಸತ್ಯ ನಡೆನುಡಿಯುಳ್ಳ ಶಿವಶರಣಗಣಂಗಳಲ್ಲಿ
ಷಡ್ವಿಧಭಕ್ತಿ ಮುಂದುಗೊಂಡು,
ಎರಡೆಂಬತ್ತೆಂಟುಕೋಟಿ ವಚನಾನುಭವದಲ್ಲಿ
ನಿಂದ ನಿಲುಕಡೆಯೆ ಜ್ಞಾನಾಚಾರ ವೆಂಬೆನಯ್ಯಾ.
ಕ್ರಿಯಾಚಾರದಲ್ಲಿ ತನ್ನ ಅಂತರಂಗ ಬಹಿರಂಗ ಶುದ್ಧಿಯನ್ನು ಮಾಡಿಕೊಂಡ ಸಾಧಕನು ನಂತರ ಜ್ಞಾನಾಚಾರವನ್ನು ಅರಿತುಕೊಳ್ಳಬೇಕು. ಅಂತರಂಗದಲ್ಲಿ ಇಂದ್ರಿಯವಾಸನೆಯ ಭಾವ ತುಂಬಿಕೊಂಡು, ಅಹಂಕಾರ ಮತ್ತನಾಗಿ, ಗುರು ಹಿರಿಯರಲ್ಲಿ (ಸಂಕಲ್ಪ ವಿಕಲ್ಪ) ನಿರ್ಧಾರ, ಅನಿರ್ಧಾರ ರೂಪದ ಅಜ್ಞಾನದ ಎರಡು ಮುಖಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ. ಅವರಿಗೆ ಅಗೌರವ ತೋರಿಸಬಾರದು. ಅವರಲ್ಲಿ ಕುಂದು ಎನಿಸಬಾರದು, ನಿಂದೆಯಾಡಬಾರದು. ಅಪಹಾಸ್ಯ ಮಾಡಬಾರದು, ಅವರನ್ನು ಸಿಟ್ಟಿಗೇಳಿಸಬಾರದು. ಈ ಬಗೆಯ ಎಲ್ಲ ಅಜ್ಞಾನಗಳಿಂದ ಮುಕ್ತನಾಗಿ ಪರಮ ಪಾತಕರು ಎನ್ನಿಸಿಕೊಂಡವರ ಭೇಟಿ ಮಾಡದೆ, ಅವರನ್ನು ಸ್ಪರ್ಶಿಸದೆ, ಅವರಿಗೆ ಸಂತರ್ಪಣೆ ಕೊಡದೆ, ಅವರೊಂದಿಗೆ ಜೊತೆಯಾಗಿ ಕುಳಿತು ಊಟ ಮಾಡದೆ ಇರುವುದು ಜ್ಞಾನಾಚಾರ ಸಾಧಕನ ಪರಮ ಕರ್ತವ್ಯವಾಗಿದೆ. ಒಟ್ಟಾರೆ ದುಷ್ಟರ ಸಂಗದಿಂದ ದೂರವಿದ್ದು, ಸತ್ಯದ ನಡೆ ನುಡಿಯುಳ್ಳ ಶಿವಶರಣರ ಸಮೂಹದಲ್ಲಿ ಯಾವಾಗಲೂ ಉಳಿದುಕೊಂಡು, ಶ್ರದ್ಧಾ, ನಿಷ್ಠಾ, ಅವಧಾನ, ಅನುಭಾವ, ಆನಂದ, ಸಮರಸ ಎಂಬ ಆರು ವಿಧದ ಭಕ್ತಿಗಳಿಂದ ದೀಪ್ತನಾಗಿ ಎರಡು ಎಂಬತ್ತು ಕೋಟಿ ವಚನಾನುಭವ ಮಾಡಿದ ಶರಣರ ಸಂಗದಲ್ಲಿ ನಿಲ್ಲುವುದೇ ಜ್ಞಾನಾಚಾರ.
ತನುವಿಕಾರದಿಂದ ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರಂಗಳ ಬಳಕೆ ಮಾಡದೆ,
ಲೋಕದಂತೆ ನಡೆನುಡಿಗಳ ಬಳಸದೆ,
ತನ್ನ ಗುಣಾವಗುಣಂಗಳ
ಸ್ವಾತ್ಮಾನುಭವದಿಂದರಿದು,
ದುರ್ಗುಣವ ತ್ಯಜಿಸಿ, ಸದ್ಗುಣವ
ಹಿಡಿದು ಬಿಡದಿಪ್ಪುದೆ ಭಾವಾಚಾರ ವೆಂಬೆನಯ್ಯಾ.
ತನ್ನ ದೇಹದ ವಿಕಾರಗಳಿಂದ ಉಗಮವಾಗಬಹುದಾದ ಕಾಮ ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಬಳಕೆ ಮಾಡಿಕೊಳ್ಳದೆ, ನಡೆ ನುಡಿಗಳಲ್ಲಿ ಒಂದಾಗಿ, ತನ್ನ ಗುಣಾವಗುಣಗಳನ್ನು ತಾನೇ ಆತ್ಮಾವಲೋಕನ ಮಾಡಿಕೊಂಡು ತನ್ನ ಸ್ವಂತ ಅನುಭವದಿಂದಲೇ ತನ್ನೊಳಗೆ ಅಡಗಿರುವ ಎಲ್ಲ ಬೆಗ ದುರ್ಗುಣಗಳನ್ನು ತ್ಯಜಿಸಿ, ಸದ್ಗುಣಗಳನ್ನು ಯಾವಾಗಲೂ ಹಿಡಿದು ಬಿಡದೆ ಪರಿಪಾಲಿಸುವುದೇ ಭಾವಾಚಾರ.
ಕೊಡುವಲ್ಲಿ ಕೊಂಬಲ್ಲಿ ಅತಿಯಾಸೆಯಿಂದ
ಹುಸಿಯ ನುಡಿಯದೆ,
ಕೊಟ್ಟ ಭಾಷೆಗಳ ಪ್ರಾಣಾಂತ್ಯ ಬಂದಡೆಯೂ
ನುಡಿಯಂತೆ ನಡೆವುದೆ ಸತ್ಯಾಚಾರ ವೆಂಬೆನಯ್ಯಾ.
ಸತ್ಯ ಆಚಾರದ ಪರಿಭಾಷೆಯನ್ನು ಚನ್ನಬಸವಣ್ಣನವರು ತುಂಬ ಸರಳವಾಗಿ ನಿರೂಪಿಸಿದ್ದಾರೆ. ಕೊಡುವುದರಲ್ಲಿ ಮತ್ತು ತೆಗೆದುಕೊಳ್ಳುವುದರಲ್ಲಿ ಅತಿಯಾದ ದುರಾಶೆಯಿಂದ ಸುಳ್ಳು ಹೇಳದೆ, ತಾನು ಕೊಟ್ಟ ಭಾಷೆ(ವಚನ)ಯಂತೆ ತನ್ನ ಪ್ರಾಣ ಹೋದರೂ ಬಿಡದೆ ಆಚರಿಸಿ, ನುಡಿದಂತೆ ನಡೆವುದೇ ಸತ್ಯಾಚಾರ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ- ‘ಕೊಲುವೆನೆಂಬ ಭಾಷೆ ದೇವನದಾದರೆ, ಗೆಲ್ಲುವುನೆಂಬ ಭಾಷೆ ಭಕ್ತನದು, ಸತ್ಯವೆಂಬ ಕೂರಲಗವನೆ ಹಿಡಿದು, ಸದ್ಭಕ್ತರು ಗೆದ್ದರು’ ಎಂದು ಹೇಳುತ್ತಾರೆ. ಸತ್ಯಮಾರ್ಗದಲ್ಲಿ ನಡೆಯುವಾಗ ಅಡೆತಡೆಗಳು ವಿಪರೀತ ಬರುತ್ತವೆ. ಸಾಧಕನನ್ನು ವಿಚಲಿತಗೊಳಿಸುವ ಘಟನೆಗಳು ಜರುಗುತ್ತವೆ. ಈ ಸಂದರ್ಭದಲ್ಲಿ ತನ್ನ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಅಧ್ಯಾತ್ಮದಲ್ಲಿ ಕ್ರಿಯಾಮಥನ ಸಾಧಿಸಿ, ಕೊಟ್ಟ ಮಾತಿಗೆ ತಪ್ಪದೆ ನಡೆದುಕೊಳ್ಳುವುದೇ ಸತ್ಯಾಚಾರವಾಗಿದೆ.
ಕಾಲ ಕಾಮರ ಬಾಧೆಗೊಳಗಾಗದ
ಹಠಯೋಗ ಫಲಪದಂಗಳ
ತಟ್ಟುಮುಟ್ಟು ಸೋಂಕುಗಳಿಲ್ಲದೆ
ಲಿಂಗಾಣತಿಯಿಂದ ಬಂದೊದಗಿದ
ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿರ್ಪುದೆ
ನಿತ್ಯಾಚಾರ ವೆಂಬೆನಯ್ಯಾ.
ಮಾನವ ಜೀವಿಗಳೆಲ್ಲ ಈ ಕಾಲ ಮತ್ತು ಕಾಮ ಎಂಬ ಎರಡು ಬಾಧೆಗೊಳಗಾಗಿ ತಮ್ಮತನವನ್ನು ಮರೆತಿವೆ. ಹಠಯೋಗ ಸಾಧನೆಯಿಂದ ಏನೆಲ್ಲ ಸಾಧಿಸಿಬಹುದೆಂಬ ಭ್ರಮೆಯಲ್ಲಿ ಬದುಕುವ ಮನುಷ್ಯ ತಟ್ಟು ಮುಟ್ಟು ಎಂಬ ಮಡಿ ಮೈಲಿಗೆಯ ಆಚರಣೆಯಲ್ಲಿಯೇ ತನ್ನ ಸಮಯವನ್ನು ಹಾಳು ಮಾಡುತ್ತಾನೆ. ಇದನ್ನೆಲ್ಲ ಬಿಟ್ಟು, ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗಭೋಗ ಎಂಬ ಭಾವವನ್ನು ಹೊಂದಿ ಲಿಂಗಪೂಜೆಯಿಂದ ಒದಗುವ ಪರಿಣಾಮ ಪ್ರಸಾದದಲ್ಲಿ ಲೋಲುಪ್ತನಾಗಿ ಬದುಕುವುದೇ ನಿತ್ಯಾಚಾರ.
ಸರ್ವಾವಸ್ಥೆಯಲ್ಲಿ ದಶವಿಧಪಾದೋದಕ
ಏಕಾದಶಪ್ರಸಾದ ಛತ್ತೀಸ ಪ್ರಣವ
ಮೊದಲಾದ ಮಹಾಮಂತ್ರಂಗಳಲ್ಲಿ
ಎರಕವನುಳ್ಳುದೆ ಧರ್ಮಾಚಾರ ವೆಂಬೆನಯ್ಯಾ.
ಎಲ್ಲ ವಿಧದ ಅವಸ್ಥೆಯಲ್ಲಿಯೂ ಹತ್ತು ಬಗೆಯ ಪಾದೋದಕ (ಗುರು, ಲಿಂಗ, ಜಂಗಮ, ಸ್ಪರ್ಶೋನದಕ, ಅವಧಾನೋದಕ, ಆಪ್ಯಾಯೋನದಕ, ಹಸ್ತೋದಕ, ಪರಿಣಾಮೋದಕ, ನಿರ್ನಾಮೋದಕ ಮತ್ತು ಸತ್ಯೋದಕ ಎಂಬ ದಶವಿಧ ಪಾದೋದಕ), ಹನ್ನೊಂದು ಬಗೆಯ ಪ್ರಸಾದ (ಗುರುಪ್ರಸಾದ, ಲಿಂಗಪ್ರಸಾದ, ಜಂಗಮ ಪ್ರಸಾದ, ಪ್ರಸಾದಿ ಪ್ರಸಾದ, ಆಪ್ಯಾಯನ ಪ್ರಸಾದ, ಸಮಯಪ್ರಸಾದ, ಪಂಚೇಂದ್ರಿಯವಿರಹಿತ ಪ್ರಸಾದ, ಅಂತಃಕರಣ ಚತುಷ್ಟಯವಿರಹಿತ ಪ್ರಸಾದ, ಸದ್ಭಾವ ಪ್ರಸಾದ, ಸಮತಾಪ್ರಸಾದ ಮತ್ತು ಜ್ಞಾನಪ್ರಸಾದ ಎಂಬ ಏಕಾದಶ ಪ್ರಸಾದ) ಒಳಗೊಂಡು, ಛತ್ತೀಸ ಪ್ರಣವ (ಮೂವತ್ತಾರು ಪ್ರಣವಗಳ) ಮಹಾಮಂತ್ರಗಳನ್ನು ಸರಿಯಾದ ಕ್ರಮದಲ್ಲಿ ಆಚರಿಸುವುದೇ ಧರ್ಮಾಚಾರ.
ಇಂತೀ ಏಕಾದಶವರ್ಮವ
ಗುರುಕೃಪಾಮುಖದಿಂದರಿದು,
ಆಚಾರವೆ ಅಂಗ ಮನ ಪ್ರಾಣ ಭಾವಂಗಳಾಗಿ,
ಇಹಪರವ ಮೀರಿ, ಪಿಂಡಾದಿ ಜ್ಞಾನಶೂನ್ಯಾಂತವಾದ
ಏಕೋತ್ತರಮಾರ್ಗದಲ್ಲಿ ನಿಂದು,
ಬಯಲೊಳಗೆ ಬಚ್ಚಬರಿಯ ನಿರ್ವಯಲ ಸಾಧಿಸುವುದೆ
ಸರ್ವಾಚಾರ ಸಂಪತ್ತಿನಾಚಾರದ ನಿಲುಕಡೆ ನೋಡಾ.
ಇಂತು ಆಚಾರದ ಕುರುಹ ತಿಳಿದು
ಪಂಚಾಚಾರವ ಬಹಿಷ್ಕರಿಸಿ; ಸಪ್ತಾಚಾರವ ಗೋಪ್ಯವ ಮಾಡಿ,
ದರಿದ್ರನಿಗೆ ನಿಧಿನಿಧಾನ ದೊರೆತಂತೆ,
ರೋಗಿಗೆ ವೈದ್ಯದ ಲತೆ ದೊರೆತಂತೆ,
ಮೂಕ ಫಲರಸವ ಸವಿದಂತೆ,ಕಳ್ಳಗೆ ಚೇಳೂರಿದಂತೆ,
ತಮ್ಮ ಚಿದಂಗಸ್ವರೂಪರಾದ ಶರಣಗಣಂಗಳಲ್ಲಿ ಉಸುರಿ,
ದುರ್ಜನಾತ್ಮರಲ್ಲಿ ಬಳಸದೆ ನಿಂದ
ಪರಮಸುಖಿ ನಿಮ್ಮ ಶರಣನಲ್ಲದೆ
ಉಳಿದ ಕಣ್ಗೆಟ್ಟಣ್ಣಗಳೆತ್ತ ಬಲ್ಲರಯ್ಯಾ
ಕೂಡಲಚೆನ್ನಸಂಗಮದೇವಾ.
ಇದು ಏಕಾದಶವರ್ಮ ಎಂದರೆ ಹನ್ನೊಂದು ಬಗೆಯ ರಹಸ್ಯ ಮರ್ಮ. ಇದನ್ನು ಗುರುಮುಖದಿಂದಲೇ ಅರಿತುಕೊಳ್ಳಬೇಕೆಂದು ಚನ್ನಬಸವಣ್ಣನವರು ಇಲ್ಲಿ ಹೇಳುತ್ತಾರೆ. ಹೀಗೆ ಆಚಾರವಂತನಾದ ಸಾಧಕನ ಅಂಗ ಮನ ಪ್ರಾಣ ಭಾವಗಳೆಲ್ಲ ಇಹ ಪರವನ್ನು ಮೀರಿನಿಲ್ಲುತ್ತವೆ. ಆಗ ಆ ಸಾಧಕ ಪಿಂಡಜ್ಞಾನದಿಂದ ಜ್ಞಾನಶೂನ್ಯಾಂತವಾದ ನೂರೊಂದು ಸ್ಥಲ(ಏಕೋತ್ತರ ಶತಸ್ಥಲ)ದ ನೆಲೆಯಲ್ಲಿ ನಿಲ್ಲುತ್ತಾನೆ. ಇರುವುದೇ ಬಯಲು, ಆ ಬಯಲಿನೊಳಗೆ ಮತ್ತೆ ಬಚ್ಚ ಬರಿಯ ಬಯಲ ನಿರ್ವಯಲವನ್ನು ಸಾಧಿಸುವುದೇ ಸರ್ವಾಚಾರ ಸಂಪತ್ತು ಎನ್ನುತ್ತಾರೆ. ಹೀಗೆ ಪಂಚಾಚಾರಗಳು ಸಪ್ತಾಚಾರದಲ್ಲಿ ಲೀನವಾಗುವುದರಿಂದ ಈ ಸಪ್ತಾಚಾರದ ತಿಳಿವಳಿಕೆ ಮಾಡಿಕೊಂಡರೆ ಅದೇ ಮುಕ್ತಿಪಥದ ನಿಲುವು ಎನ್ನುತ್ತಾರೆ. ಹೀಗೆ ಮಾಡಿಕೊಂಡಾಗ ಏನಾಗುವುದು ಎಂಬುದನ್ನು ಅರುಹುತ್ತ- ದರಿದ್ರನಾದವನಿಗೆ ನಿಧಿ ಸಿಕ್ಕಂತೆ, ರೋಗಿಗೆ ಔಷಧದ ಬಳ್ಳಿ ದೊರೆತಂತೆ, ಮೂಕನಾದವನು ಹಣ್ಣಿನ ರಸ ಸವಿದಂತೆ, ಚಿದಂಗ ಸ್ವರೂಪ (ದಿವ್ಯವಾದ ಅಂಶ) ಪಡೆದ ಶರಣ ಸಮೂಹದಲ್ಲಿ ಉಸಿರು, ದುರ್ಜನರನ್ನು ದೂರ ಮಾಡಿಕೊಂಡವನೇ ಪರಮ ಸುಖಿಯಾದ ಶರಣ ಎನ್ನುತ್ತಾರೆ ಚನ್ನಬಸವಣ್ಣನವರು. ಪಂಚಾಚಾರ ಸಪ್ತಾಚಾರಗಳ ಸಂಹಿತೆ ರೂಪಿಸಿದ ತರುವಾಯದಲ್ಲಿ ಚನ್ನಬಸವಣ್ಣನವರು ಐವತ್ತು ತರಹದ ಆಚಾರಗಳನ್ನು ಪ್ರತಿಪಾದಿಸುತ್ತಾರೆ. ಈ ಆಚಾರಗಳು ಇಂದಿಗೂ ಹೆಚ್ಚು ಪ್ರಸ್ತುತವೆನಿಸುತ್ತವೆ. ಕಲ್ಯಾಣಕ್ಕೆ ಬಂದ ಸಿದ್ಧರಾಮರಿಗೆ ಲಿಂಗದೀಕ್ಷೆಯನ್ನು ಕೊಡುವ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಪ್ರಾಣಸ್ವರೂಪವಾದ ಈ ಆಚಾರಗಳನ್ನು ಮನಮುಟ್ಟುವಂತೆ ಉಪದೇಶಿಸುತ್ತಾರೆ. ಆಚಾರವೆನ್ನುವುದು ಹರಿತವಾದ ಅಲಗು(ಕೂರಲಗು) ತಪ್ಪಿ ಬಂದಡೆ ಪ್ರಾಣಕ್ಕೆ ಆಪತ್ತು. ಅದರಂತೆ ಹರಿತವಾದ ಈ ಆಚಾರಗಳನ್ನು ಅರಿದರಿದು ಆಚರಿಸಬೇಕು. ಆಗ ಮಾತ್ರ ಸಾರ್ಥಕ್ಯ ದೊರೆಯುವುದು ಎನ್ನುತ್ತಾರೆ ಚನ್ನಬಸವಣ್ಣನವರು. ಅವರು ನಿರೂಪಿಸಿದ ಐವತ್ತು ತರಹದ ಆಚಾರಗಳಿಗೆ ಬೇರೆ ವ್ಯಾಖ್ಯಾನ ಬೇಕಿಲ್ಲವಾದ್ದರಿಂದ ಇದ್ದಕ್ಕಿದ್ದಂತೆ ಕೊಡಲಾಗಿದೆ.
ಐವತ್ತು ತರಹದ ಆಚಾರಗಳು
ಆಚಾರವೆಂಬುದು ಕೂರಲಗು,
ತಪ್ಪಿ ಬಂದಡೆ ಪ್ರಾಣವ ತಗಲುವುದು.
ಅದು ಕಾರಣ, ಅರಿದರಿದು ಆಚರಿಸಬೇಕು.
ಆಚಾರವಿಚಾರ ಉಭಯದ ವಿಚಾರವ ನೋಡದೆ,
ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ:
ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ.
ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ.
ಸುಳ್ಳಾಡದಿರವುದೆ ಮೂರನೆಯ ಆಚಾರ.
ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ.
ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ.
ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ.
ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ.
ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ.
ಕೆಟ್ಟಜನರ ಸಹವಾಸವ ಮಾಡದಿಹುದೆ ಒಂಬತ್ತನೆಯ ಆಚಾರ.
ಸಜ್ಜನಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ.
ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ.
ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ
ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ.
ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ.
ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ.
ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ.
ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ
ಹದಿನಾರನೆಯ ಆಚಾರ.
ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ
ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ
ಹದಿನೆಂಟನೆಯ ಆಚಾರ.
ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ
ಹತ್ತೊಂಬತ್ತನೆಯ ಆಚಾರ.
ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ,
ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ
ಇಪ್ಪತ್ತನೆಯ ಆಚಾರ.
ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ.
ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ.
ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ.
ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು
ಇಪ್ಪತ್ತುನಾಲ್ಕನೆಯ ಆಚಾರ.
ಮಂತ್ರಸಹಿತ ಗೋಮಯವ ಹಿಡಿದು,
ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ
ಇಪ್ಪತ್ತೈದನೆಯ ಆಚಾರ.
ಆ ಭಸ್ಮದ ರಾಶಿಯ ಪಾದೋದಕದೊಡನೆ
ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ.
ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗಳ ಧರಿಸುವುದೆ
ಇಪ್ಪತ್ತೇಳನೆಯ ಆಚಾರ.
ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ
ಇಪ್ಪತ್ತೆಂಟನೆಯ ಆಚಾರ.
ಮನವ ನೋಯಿಸಿ ಮಾತನಾಡದಿಹುದೆ
ಇಪ್ಪತ್ತೊಂಬತ್ತನೆಯ ಆಚಾರ.
ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ
ಮೂವತ್ತನೆಯ ಆಚಾರ.
ಗುರುಮುಖದಿಂದ `ತಾನಾರು’ ತನ್ನ ನಿಜವೇನೆಂದು
ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ.
ಷಡ್ವರ್ಗಂಗಳ ಮೆಟ್ಟಿ ಷಟ್ ಸ್ಥಲವನಿಂಬುಗೊಂಡುದೆ
ಮೂವತ್ತೆರಡನೆಯ ಆಚಾರ.
ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ
ಮೂವತ್ತುಮೂರನೆಯ ಆಚಾರ.
ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ
ಮೂವತ್ತುನಾಲ್ಕನೆಯ ಆಚಾರ.
ಜಂಗಮದಲ್ಲಿ ಕುಲವನರಸದಿಹುದೆ ಮೂವತೈದನೆಯ ಆಚಾರ.
ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ.
ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ
ಮೂವತ್ತೇಳನೆಯ ಆಚಾರ.
ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ.
ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ.
ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತನೆಯ ಆಚಾರ.
ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ
ನಾಲ್ವತ್ತೊಂದನೆಯ ಆಚಾರ.
ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ
ನಾಲ್ವತ್ತೆರಡನೆಯ ಆಚಾರ.
ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ
ನಾಲ್ವತ್ತುಮೂರನೆಯ ಆಚಾರ.
ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ
ನಾಲ್ವತ್ತುನಾಲ್ಕನೆಯ ಆಚಾರ.
ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ
ನಾಲ್ವತ್ತೈದನೆಯ ಆಚಾರ.
ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ
ನಾಲ್ವತ್ತಾರನೆಯ ಆಚಾರ.
ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ
ನಾಲ್ವತ್ತೇಳನೆಯ ಆಚಾರ.
ತಾನಾರು ಲಿಂಗವಾರು ಎಂಬ ಭೇದವು
ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ.
ತನ್ನ ನಿಜವಿಚಾರವ ತಾ ಮರೆಯದೆ
ಷಟ್ಸ್ಥಲದವರಿಗೆ ಅರುಹಿ
ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ.
ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ,
ಕೂಡಲಚೆನ್ನಸಂಗಮದೇವರಲ್ಲಿ
ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
ಸಿದ್ಧರಾಮರಿಗೆ ಲಿಂಗದೀಕ್ಷೆ ನೀಡಿದ ಸಂದರ್ಭದಲ್ಲಿ ಲಿಂಗಾಯತನಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುವ ಮಹತ್ವದ ವಚನವಿದು. ‘ಆಚಾರವಿಲ್ಲದ ಕಾಯ ಪ್ರಯೋಜನಕ್ಕೆ ಸಲ್ಲದು’ ಎಂಬ ಭಾವದಿಂದ ಸಿದ್ಧರಾಮರಿಗೆ ತಿಳಿಸಿ ಹೇಳಿದ ವಚನವಿದು. ನಾಥ-ಸಿದ್ಧ ಪಂಥದ ಅನುವಾಯಿಯಾಗಿದ್ದ ಸಿದ್ಧರಾಮದೇವರು ಲಿಂಗವನ್ನು ಧರಿಸಿಕೊಂಡು ಪರಿಪಾಲಿಸಿದ ಸೂತ್ರಗಳಿವು. ಚನ್ನಬಸವಣ್ಣನವರ ನಿಜವಾದ ಆಚಾರ ಸಂಹಿತೆ ಈ ವಚನದಲ್ಲಿ ಮಡುಗಟ್ಟಿ ನಿಂತಿದೆ. ಈ ಸೂತ್ರಗಳನ್ನು ಪ್ರತಿಯೊಬ್ಬರೂ ಪರಿಪಾಲಿಸಿದರೆ, ಅವರೆಲ್ಲರ ಬದುಕು ಪಾವನವಾಗುವುದರಲ್ಲಿ ಸಂದೇಹವಿಲ್ಲ.