ಗದಗ:
ತ್ರಿಪದಿ ಕವಿ ಸರ್ವಜ್ಞ ಬಸವಾದಿ ಶರಣರ ನಿಜವಾದ ಅನುಯಾಯಿಯಾಗಿದ್ದರು. ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಗುರುಗಳು. ಅವರಿಂದಲೇ ಲಿಂಗವು ಜನಿಸಿತೆಂದು ಹೇಳಿದವರು ಸರ್ವಜ್ಞರಾಗಿದ್ದಾರೆ. ಅವರು ಹೇಳದ ವಿಷಯವೇ ಇಲ್ಲವೆನ್ನಬಹುದೆಂದು ಶರಣ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಹೇಳಿದರು.
ಅವರು ಬಸವದಳದ ೧೬೮೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ತ್ರಿಪದಿ ಕವಿ ಸರ್ವಜ್ಞ’ನವರ ಕುರಿತ ಚಿಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವಜ್ಞ ಕವಿಯ ಮೇಲೆ ೧೨ನೇ ಶತಮಾನದ ಬಸವಾದಿ ಶರಣರ ಪ್ರಭಾವ ದಟ್ಟವಾಗಿತ್ತು. ಆ ಕಾರಣದಿಂದಾಗಿಯೇ ಅವರ ಅನೇಕ ತ್ರಿಪದಿಗಳಲ್ಲಿ ಬಸವಣ್ಣ ಹಾಗೂ ಹಲವು ಶರಣರ ಬಗೆಗೆ ಪ್ರಸ್ತಾಪಿಸಿದ್ದಾರೆ.
ಇಂದು ಲಿಂಗಾಯತ ಧರ್ಮ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸರ್ವಜ್ಞನ ತ್ರಿಪದಿಗಳಲ್ಲಿ ಸ್ಪಷ್ಟ ಉತ್ತರವಿದೆ ಎಂದರು. ಸರ್ವಜ್ಞ ತ್ರಿಪದಿಗಳ ಬ್ರಹ್ಮ. ನಾಡಿನಲ್ಲಿ ಹೊಸ ಸಾಹಿತ್ಯ ಪ್ರಾಕಾರ ಹುಟ್ಟು ಹಾಕಿದವರು. ಅವರ ತ್ರಿಪದಿಗಳಲ್ಲಿ ಈ ಸಮಾಜದ ತಪ್ಪು, ಒಪ್ಪುಗಳ ಬಗ್ಗೆ ಮನೋಜ್ಞವಾದ ಚಿತ್ರಣವಿದೆ ಎಂದು ಗಿರಿಜಕ್ಕ ಹೇಳಿದರು.
ಎಸ್. ಎನ್. ಹಕಾರಿ ಗುರುಗಳು ಉಪನ್ಯಾಸ ನೀಡುತ್ತಾ, ಸರ್ವರೊಳು ತಾನೊ ಒಂದೊಂದೆ ನುಡಿ ಕಲಿಯುತ್ತ ಸರ್ವಜ್ಞನಾದೆ ಎಂಬ ಮಾತೇ ಸಾಕು ಸರ್ವಜ್ಞ ಕವಿ ಸಾಕಷ್ಟು ಜ್ಞಾನಿಯಾಗಿದ್ದರು, ಇನ್ನೂ ತಿಳಿಯುವ ಕಲಿಯುವ ಹಂಬಲವಿಟ್ಟುಕೊಂಡಿದ್ದರೆಂಬುದಕ್ಕೆ ಸಾಕ್ಷಿ. ತ್ರಿಪದಿಗಳ ಜನಕರೆಂದೇ ಖ್ಯಾತರಾದ ಸರ್ವಜ್ಞ ಈ ನಾಡು ಕಂಡ ಅಪರೂಪದ ಕವಿ ಎಂದರು.

ಉತ್ತಂಗಿ ಚೆನ್ನಪ್ಪನವರು ಸರ್ವಜ್ಞನವರ ತ್ರಿಪದಿಗಳನ್ನು ಸಂಶೋಧಿಸಿ, ಪರಿಷ್ಕರಿಸಿ ಬೆಳಕಿಗೆ ತಂದರು. ನಾವು ಈ ವಿಷಯದಲ್ಲಿ ಉತ್ತಂಗಿ ಚೆನ್ನಪ್ಪನವರಿಗೂ ಕೃತಜ್ಞರಾಗಿರಬೇಕು.
ಸರ್ವಜ್ಞ ಕವಿ ೧೬ನೇ ಶತಮಾನದಲ್ಲಿ ಹಿರೇಕೆರೂರು ತಾಲೂಕು ಅಬಲೂರಿನಲ್ಲಿ ಜನಿಸಿದರು. ಅವರು ಕಂಡುಂಡ ಅನುಭವಗಳೇ ಅವರ ತ್ರಿಪದಿಗಳ ರೂಪದಲ್ಲಿ ಹೊರಹೊಮ್ಮಿವೆ. ಈ ತ್ರಿಪದಿಗಳಲ್ಲಿ ಸಾಮಾಜಿಕ ಕೆಡುಕುಗಳು, ರಾಜಕೀಯ ಚಿತ್ರಣ, ಅದರಲ್ಲೂ ಮೂಢನಂಬಿಕೆಗಳ ವಿರುದ್ಧವಾಗಿ ಚಾಟಿ ಏಟನ್ನು ಬೀಸಿದ್ದಾರೆ.
ಹಾಗೆ ನೋಡಿದಲ್ಲಿ ಸರ್ವಜ್ಞನ ತ್ರಿಪದಿಗಳು ವಚನದ ಇನ್ನೊಂದು ರೂಪು ಎಂದೆನ್ನಿಸುತ್ತವೆ. ಪ್ರಸ್ತುತ ಸಮಾಜದಲ್ಲಿ ಇಂದು ಘಟಿಸುತ್ತಿರುವ ಸಮಸ್ಯೆಗಳಿಗೆ ಸರ್ವಜ್ಞ ಕವಿ ಸಮರ್ಥವಾಗಿ ಉತ್ತರ ನೀಡಿದ್ದಾರೆ.
“ಬೆಚ್ಚನ ಮನೆಯಾಗಿ, ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನ್ನರಿವುಳ್ಳ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ” ಈ ತ್ರಿಪದಿ ಬಿಡಿಸುತ್ತಾ ನಾವು ಕಾಣದ ಸ್ವರ್ಗ, ನರಕಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಬದುಕಿನಲ್ಲಿ ಸ್ವರ್ಗ, ನರಕಗಳು ಇಲ್ಲಿಯೇ ಇವೆ. ಓರ್ವ ವ್ಯಕ್ತಿಗೆ ಸ್ವರ್ಗ ಬೇರೆ ಜಗತ್ತಲ್ಲ ಮನೆಯೇ ಆಗಿದೆ. ದೊಡ್ಡ ಅರಮನೆ ಇಲ್ಲದಿದ್ದರೂ ಚೊಕ್ಕ ಚಿಕ್ಕಮನೆಯಿದ್ದರೆ ಸಾಕು, ಆತ ಕಾಯಕ ಮಾಡಿ ತಂದುದನ್ನು ಸಮಾಧಾನಿಯಾದ ಸತಿ ಪತಿಯ ಇಂಗಿತವನ್ನರಿತುಕೊಂಡು ನಡೆದರೆ ಸತಿ-ಪತಿಯರ ಬದುಕು ಸ್ವರ್ಗವಾಗುತ್ತದೆ ಎಂದರು. ಅದನ್ನೇ ಬಸವಾದಿ ಶರಣರು ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂದಿದ್ದನ್ನು ಉದಾಹರಿಸಿದರು.

“ಬಸವ ಪೀಠವು ಎದ್ದು, ಒಸೆದು ನಾಣ್ಯವ ಹುಟ್ಟಿ, ಬಸವನಾ ಮುದ್ರೆ ಅವಗೆ ವಶವಾಗದಿಹುದೇ ಸರ್ಜ್ಞಜ್ಞ.” ಸುಮಾರು ೫೦೦ ವರ್ಷಗಳ ಹಿಂದೆ ಸರ್ವಜ್ಞ ಕವಿಯ ಮಾತು ಇಂದು ಸತ್ಯವಾಗುತ್ತಿದೆ. ಲಿಂಗಾಯತರಲ್ಲಿ ಬಸವಾದಿ ಶರಣರ ಬಗ್ಗೆ ಸ್ಪಷ್ಟವಾಗಿ ಜ್ಞಾನದ ಅರಿವಾಗಿದೆ ಎಂದರು. ಈ ಕಾರಣದಿಂದಾಗಿ “ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ” ಎಂಬುದು ನಾಣ್ಣುಡಿ ಆಗಿದೆ ಎಂದು ಹಕಾರಿ ಅರ್ಥಸಹಿತ ವಿವರಣೆ ನೀಡಿದರು.
ವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗಮ್ಮ ಹೂಗಾರ ಪ್ರಾರ್ಥನೆ, ಮಲ್ಲಿಕಾರ್ಜುನ ನಿಂಗೋಜಿ ನಿರೂಪಣೆ, ಸ್ವಾಗತವನ್ನು ರಾಮಣ್ಣ ಕಳ್ಳಿಮನಿ, ಶರಣು ಸಮರ್ಪಣೆಯನ್ನು ಎಂ.ಬಿ. ಲಿಂಗಧಾಳ ಮಾಡಿದರು.
ಆರಂಭದಲ್ಲಿ ಶರತ್ ಲಿಂಗದಾಳ ಬಸವಣ್ಣನವರ ಬಗ್ಗೆ ಸುಂದರವಾಗಿ ಹಾಡಿದರು. ವೇದಿಕೆಯಲ್ಲಿ ಕಸ್ತೂರೆಮ್ಮಾ ಗೋಣಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಬಸವದಳದ ಸದಸ್ಯರು ಭಾಗಿಗಳಾಗಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
