ಬೀದರ
ಮಾನವನ ಗುರಿ ಸುಖದ ಅನ್ವೇಷಣೆ. ಪ್ರತಿಯೊಬ್ಬರು ಸುಖವನ್ನೇ ಬಯಸುತ್ತಾರೆ. ಆದರೆ ಯಾವುದರಿಂದ ಸುಖಿಯಾಗುತ್ತೇವೆ ಎಂಬ ಸತ್ಯ ಗೊತ್ತಿಲ್ಲದೆ ಮನುಕುಲ ಬಳಲುತ್ತಿದೆ. ಸುಖಿಯಾಗುವ ಸೂತ್ರ ಶರಣರು ನಮಗೆ ನೀಡಿದ್ದಾರೆ. ಅದನ್ನು ನಾವು ಅರಿಯಬೇಕಾಗಿದೆ ಎಂದು ಲಿಂಗಾಯತ ಮಹಾಮಠದ ಪೂಜ್ಯಶ್ರೀ ಪ್ರಭುದೇವ ಮಹಾಸ್ವಾಮೀಜಿ ಹೇಳಿದರು.
21 ದಿನಗಳ ಕಾಲ ಶಿವಯೋಗ ಅನುಷ್ಠಾನ ಪೂರೈಸಿರುವ ಸಂದರ್ಭದಲ್ಲಿ ಲಿಂಗಾಯತ ಮಹಾಮಠ ಗೋರಟಾ (ಬಿ) ನೀಲಮ್ಮನ ಬಳಗದ ಶರಣೆಯರು ಪೂಜ್ಯ ಪ್ರಭುದೇವ ಮಹಾಸ್ವಾಮೀಜಿಯವರಿಗೆ ಅಭಿನಂದಿಸಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪೂಜ್ಯರು, ಮಾನವ ಜೀವನದ ಗುರಿ ಸುಖವೇ ಆಗಿದೆ, ಆದರೆ ಸುಖ ದೊರೆತಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎನ್ನುವುದೇ ಉತ್ತರವಾಗಿದೆ. ಕಾರಣ ಭೌತಿಕ ಸುಖ ಸುಖವಲ್ಲ. ಸುಖ ಯಾವುದು? ಎನ್ನುವ ಪ್ರಶ್ನೆಗೆ ಚನ್ನಬಸವಣ್ಣನವರು ಉತ್ತರಿಸುತ್ತಾರೆ.
ಸುಖ ಲಿಂಗ, ಸುಖಿ ಶರಣ, ಸುಖದ ಅನುಭಾವ ಸುಸಂಗ, ಸಾಕೆನಿಸದ ಸವೆಯದ ಮತ್ತೊಂದು ಬೇಕೆನಿಸದ ಸುಖವೇ ನಿಜವಾದ ಸುಖ. ಆ ಸುಖದ ಅನುಭವ ಆಗಬೇಕಾದರೆ ಅದು ಇಷ್ಟಲಿಂಗ ಪೂಜೆಯಿಂದ ಮಾತ್ರ ಸಾಧ್ಯ.
ಗುರು ಬಸವಣ್ಣನವರು ಹೇಳುವಂತೆ ಇಷ್ಟಲಿಂಗ ಪೂಜೆಯದು ಅಷ್ಟೈಶ್ವರ್ಯ ಪ್ರದವಾಯಿತು. ಪ್ರಾಣಲಿಂಗ ಪೂಜೆಯದು ಚಿದೈಶ್ವರ್ಯ ಪ್ರದವಾಯಿತು. ಇಷ್ಟಲಿಂಗ ಪೂಜೆಯಿಂದ ಅಷ್ಟೈಶ್ವರ್ಯ ದೊರೆತರೆ ಪ್ರಾಣಲಿಂಗ ಪೂಜೆಯಿಂದ ಪರಮಾತ್ಮನ ಅನುಭೂತಿ ಪ್ರಾಪ್ತವಾಗುತ್ತದೆ. ಅಂತಹ ಆನಂದ ಪಡೆದರೆ ಮಾತ್ರ ನಿಜವಾದ ಸುಖಿಯಾಗಲು ಸಾಧ್ಯ. ಆ ಸುಖವನ್ನು ಅನುಭವಿಸಿದವರು ಶರಣರು.
ಅರಿವಿಲ್ಲದೆ ಬಳಲುವ ಮಾನವನಿಗೆ ಅರುವಿನ ಕುರುಹಾದ ಇಷ್ಟಲಿಂಗವನ್ನು ನೀಡಿ ಆನಂದವಾಗಿ ಬದುಕಲು ಕಲಿಸುತ್ತಾರೆ. ವಚನಗಳು ಓದುತ್ತಾ ನಿಜವಾದ ಸುಖಿಗಳಾಗಬೇಕೆಂದು ತಿಳಿಸಿದರು.
ನೀಲಮ್ಮನ ಬಳಗದ ಪ್ರಮುಖರಾದ ವಿಜಯಲಕ್ಷ್ಮಿ ರಾಜೋಳೆ ಮಾತನಾಡಿ, 21 ದಿನಗಳ ಕಾಲ ಶಿವಯೋಗ ಅನುಷ್ಠಾನ ಪೂರೈಸಿದ ಪೂಜ್ಯರು ನಮ್ಮೆಲ್ಲರಿಗೂ ಸತ್ಯದ ದಾರಿಯನ್ನು ತೋರಿಸುತ್ತಿದ್ದಾರೆ.
ಮನ ಬಹಿರ್ಮುಖವಾದಡೇ ಮಾಯ ಪ್ರಪಂಚೀಯಾಗುತ್ತಾನೆ. ಮನ ಅಂತರ್ಮುಖವಾದರೆ ಅವಿರಳ ಜ್ಞಾನಿಯಾಗುತ್ತಾನೆ. ಮನ ಅಂತರ್ಮುಖವಾಗಲು ಮೌನವಾಗಿದ್ದು ಶಿವಯೋಗ ಸಾಧನೆಯನ್ನು ಮಾಡುತ್ತಾ ಸಮಾಜಕ್ಕೆ ಸತ್ಯದ ದಾರಿಯನ್ನು ತೋರುತ್ತಿದ್ದಾರೆ. ಅದಕ್ಕಾಗಿ ನೀಲಮ್ಮನ ಬಳಗದ ಎಲ್ಲಾ ಶರಣೆಯರು ಪೂಜ್ಯರನ್ನು ಅಭಿನಂದಿಸುತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀಲಮ್ಮನ ಬಳಗದ ಶರಣೆಯರು ಭಾಗಿಯಾಗಿಗಳಾಗಿದ್ದರು.