ವಾಡಿ:
ವಿವಿಧ ರಂಗಗಳಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ 6 ಜನ ಸಾಧಕರನ್ನು 2025 / 26ನೇ ಸಾಲಿನ “ಬಸವ ಶ್ರೀ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಟ್ಟಣದ ಶ್ರೀ ಬಸವ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಜಗದೀಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡುವ ಅವರು, ಪೊಲೀಸ್ ಅಧಿಕಾರಿಯಾಗಿ ದಕ್ಷ ಆಡಳಿತ ನೀಡುತ್ತಿರುವ ಜನಪರ ವರದಿಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಹಾಗೂ ಸಾಹಿತ್ಯ ಕೃಷಿಯಲ್ಲಿ ಗುರುತಿಸಿಕೊಂಡಿರುವ ಮಡಿವಾಳಪ್ಪ ಹೇರೂರ, ಶಹಾಬಾದ್ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಶೈಕ್ಷಣಿಕ ಕಲಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಜ್ಯೋತಿ ಆರ್. ತೆಗನೂರ, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿರುವ ಅರ್ಚನಾ ಮ. ಹಿರೇಮಠ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಚಂದ್ರಕಲಾ ಎಸ್. ಜೈನ ಹಾಗೂ ಸಾಮಾಜಿಕ ಸೇವೆಯಲ್ಲಿರುವ ಸಿದ್ದಣ್ಣ ಎನ್. ಮುಗುಟಿ ಅವರನ್ನು ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾ.7 ರಂದು ಸಂಜೆ 6 ಗಂಟೆಗೆ ಪಟ್ಟಣದ ಶ್ರೀ ಬಸವ ಶಾಲೆಯ ಮೈದಾನದಲ್ಲಿ ನಡೆಯಲಿರುವ ಬಸವ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
