ವಿಜಯಪುರ:
ಆರೋಗ್ಯ ಪೂರ್ಣ ಸಮಾಜಕ್ಕೆ ನಮ್ಮ ದೇಶದ ಸಂವಿಧಾನವೇ ಅಡಿಗಲ್ಲು. ಅದು ಬುದ್ಧನ ಗ್ರಂಥ, ಬಸವಣ್ಣನ ಆತ್ಮ, ಕನಕದಾಸರ ಆಶಯಗಳು, ನಮ್ಮ ಸಂಸ್ಕೃತಿಯ ಬೇರೆ-ಬೇರೆ ಪರಪಂಪರೆಯ ಪ್ರತೀಕ. ಕವಿರಾಜ ಮಾರ್ಗದಿಂದ ಹಿಡಿದು ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಸಂತರ ಸಾಹಿತ್ಯದವರೆಗಿನ ಎಲ್ಲ ಅಂಶಗಳನ್ನು ಸಮಗ್ರವಾಗಿ ನಮ್ಮ ಸಂವಿಧಾನ ಒಳಗೊಂಡಿದೆ. ಹೀಗಾಗಿ ನಮ್ಮ ಸಂವಿಧಾನಕ್ಕೆ ಏನೂ ಮಾಡಲು ಆಗಲ್ಲ” ಎಂದು ಮೈಸೂರಿನ ಜನಪರ ಗಾಯಕ ಜನಾರ್ಧನ(ಜನ್ನಿ) ಹೇಳಿದರು.
ವಿಜಯಪುರ ಪಟ್ಟಣದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾ ಬಳಗಸೇರಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜನಕಲಾ ಸಾಂಸ್ಕೃತಿಕ ಮೇಳ’ದಲ್ಲಿ ಅವರು ಮಾತನಾಡಿದರು.
”ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದಡಿ ದೇಶವನ್ನು ಕಟ್ಟಬೇಕೆಂಬ ರಚನೆ ಹೊಂದಿದೆ. ‘ನಮ್ಮ ಸಂವಿಧಾನವು ವಿಶ್ವದ ಸಮೃದ್ಧತೆ ಮತ್ತು ಪ್ರಬುದ್ಧತೆ ಹೊಂದಿದೆʼ ಎಂದು ಜಗತ್ತಿನ ಅನೇಕರು ಕರೆಯುತ್ತಾರೆ. ಹೀಗೆ ಕರೆದವರು ಹುಚ್ಚರಾ? ಆದರೆ, ನಮ್ಮ ದೇಶದಲ್ಲಿರುವ ಕೆಲವರಿಗೆ ಅದರ ಬಗ್ಗೆ ಅಸಮಾಧಾನವಿದೆ. ಸಮಾನತೆ ಬಂದರೆ, ಎಲ್ಲಿ ತಮ್ಮ ಹಿಡಿತ ತಪ್ಪಲಿದೆ ಎಂಬ ಭಯ ಕೆಲವರನ್ನು ಕಾಡುತ್ತಿದೆ. ನಾವು ನೇರವಾಗಿ ದ್ವೇಷ ಬಿಟ್ಟು ದೇಶ ಕಟ್ಟೋಣ ಎಂದು ಹೇಳುತ್ತೇವೆ. ಇದರಲ್ಲಿ ತಪ್ಪೇನಿದೆ? ಎಲ್ಲಿಯವರೆಗೆ, ಯಾರಿಗಾಗಿ ದ್ವೇಷ ಸಾಧಿಸುತ್ತೀರಿ, ನಮಗೆ ಸಮಾನತೆ, ಸೌಹಾರ್ದತೆ, ಶಾಂತಿ ಸಮನ್ವಯ ತತ್ವ ಮತ್ತು ಸಹಬಾಳ್ವೆ ಬೇಕೆಂದು ಕೇಳುವುದು ತಪ್ಪಾ? ಇವೆಲ್ಲವೂ ನಾವು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಹಕ್ಕಿನಡಿ ಕೇಳುತ್ತಿದ್ದೇವೆ” ಎಂದು ಹೇಳಿದರು.

“ದಲಿತರು ದಯನೀಯ ಸ್ಥಿತಿಗೆ ತಲುಪಿದಾಗ ಹುಟ್ಟಿದ್ದೆ ದಲಿತ ಚಳುವಳಿ. ದಲಿತ ಚಳುವಳಿ ಈಗ ಸ್ವಲ್ಪ ಮಂಕಾಗಿದೆ ಅಷ್ಟೇ, ಇದಕ್ಕೆ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಸಂಘಟನೆಗೆ ಸೇರಿಕೊಳ್ಳುತ್ತಿರುವುದೇ ಕಾರಣ. ಹೀಗಾಗಿ ನಮಗೆಲ್ಲ ಅಂಬೇಡ್ಕರ್, ಬಸವಣ್ಣನ ತತ್ವಗಳ ಸ್ಪಷ್ಟತೆ ಇರಬೇಕು. ತಾತ್ವಿಕ ನೆಲೆ ಸ್ಪಷ್ಟವಾಗಿರಬೇಕು” ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಹಾಡುಗಾರರಾದ ಬಸಮ್ಮ ಪೀರಪ್ಪ ನಡುವಿನಮನಿ, ಆದಮ್ಮ ಚಂದ್ರಪ್ಪ ಕದ್ರಿ, ಸಾವಿತ್ರಿಬಾಯಿ ನೀಡೋಣಿ, ರಮಾಬಾಯಿ ಸಂಗಪ್ಪ ಬೆಳ್ಳೆಣ್ಣವರ, ಪದ್ಮಾವತಿ ಸಂಗಪ್ಪ ವಾಘಮೋರೆ ಅವರುಗಳು ಡಾ. ಅಂಬೇಡ್ಕರ್ ಕುರಿತು ಹಾಡುಗಳನ್ನು ಹಾಡುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಸಂಜೆ ರಾಯಚೂರ ಸಮುದಾಯ ತಂಡ ವಿಕ್ರಮ ವಿಸಾಜಿ ರಚಿಸಿದ ನಾಟಕ “ರಕ್ತ ವಿಲಾಪ”ವನ್ನು ಅಭಿನಯಿಸಿತು. ಇದೊಂದು ಅತ್ಯುತ್ತಮ ರಂಗಪ್ರಯೋಗವೆಂದು ಪ್ರೇಕ್ಷಕರು ಹೇಳಿದರು. ಬಿಜಾಪುರದಲ್ಲಿದ್ದ ಎಂ.ಎಂ. ಕಲ್ಬುರ್ಗಿ ಸರ್ ಸಂಬಂಧಿಕರು, ಅವರ ಶಿಷ್ಯರು ನಾಟಕ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಹಿರಿಯ ಪತ್ರಕರ್ತ ಅನಿಲ ಹೊಸಮನಿ ಸ್ವಾಗತಿಸಿದರು. ದಾವಣಗೆರೆಯ ಬಿ. ಶ್ರೀನಿವಾಸ, ಕಲಬುರಗಿಯ ಬಸವರಾಜ ಹೂಗಾರ, ದಾವಣಗೆರೆಯ ಎ.ಬಿ.ರಾಮಚಂದ್ರಪ್ಪ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ತುಕಾರಾಂ ಚಂಚಲಕರ, ಪ್ರಭುಗೌಡ ಪಾಟೀಲ, ಚನ್ನು ಕಟ್ಟಿಮನಿ, ನಾಗರಾಜ ಲಂಬು, ಜೊತೆ.ಎಸ್.ಪಾಟೀಲ, ಪರಶುರಾಮ ಲಂಬು, ಚಂದ್ರಕಾಂತ ಶಿಂಗೆ, ಅಶೋಕ ಚಲವಾದಿ, ರೆಹಮಾನ್ ಬಿದರಕುಂದಿ ಮತ್ತೀತರರು ಉಪಸ್ಥಿತರಿದ್ದರು.

ಜನಸಾಮಾನ್ಯರಲ್ಲಿ ಬಹುಮುಖ್ಯವಾಗಿ ಎಲ್ಲಾ ವರ್ಗದ ಬಡವರು ತಳವರ್ಗದವರಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಎಲ್ಲೇ ಮೀರಿ ಆಡಳಿತದ ಯಾವುದೇ ನಿಯಂತ್ರಣ ಭಯ ಇಲ್ಲದೆ ಮೆರೆಯುತ್ತಿರುವ ಸಂವಿಧಾನ ವಿರೋಧಿ ವರ್ಗಗಳ ತಂತ್ರಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಇಂಥಾ ಸಭೆಗಳು ಹೆಚ್ಚು ಹೆಚ್ಚು ನಡೆಯಬೇಕು ಸಂವಿಧಾನದ ಮಹತ್ವ ಮತ್ತದರ ಆಶಯಗಳ ಬಗ್ಗೆ ಅರಿವು ಮೂಡಿಸಬೇಕು