ಬಸನಗೌಡ ಪಾಟೀಲ ಯತ್ನಾಳರನ್ನು ಬೆಂಬಲಿಸಲು ಕರೆ ನೀಡಿರುವ ಜಯಮೃತ್ಯುಂಜಯ ಶ್ರೀಗಳಿಗೆ ಪಂಚಮಸಾಲಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ
ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಸಮಾಜವನ್ನು ಸಂಘಟಿಸಲು ಪ್ರಯತ್ನಿಸುತ್ತಿರುವ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ನಡೆಗೆ ಪಂಚಮಸಾಲಿ ಸಮಾಜದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದೂ ಪರ ಸಂಘಟನೆಗಳ ಜೊತೆ ಸೇರಿಕೊಂಡು ರವಿವಾರ (ಏ.06) ರಂದು ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಏಪ್ರಿಲ್ 11ರಂದು “ಸ್ವಾಭಿಮಾನದ ನಡೆ ವಿಜಯಪುರದ ಕಡೆ” ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನೆ ಮಾಡಲೂ ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ “ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ” ಹಾಗೂ ಸಮಾಜದ ಮುಖಂಡರು ಚಿಂತನ- ಮಂಥನ ಸಭೆ ನಡೆಸಿ ಶ್ರೀಗಳ ನಡೆ ಬಗ್ಗೆ ತೀವ್ರವಾಗಿ ಖಂಡಿಸಿದರು.
ಹುಬ್ಬಳ್ಳಿ -ಧಾರವಾಡ, ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಪಂಚಮಸಾಲಿ ಸಮಾಜದ ಮುಖಂಡರು ಭಾಗಿಯಾಗಿದ್ದರು.
ಚಿಂತನ -ಮಂಥನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ಹೇಳಿಕೆ ನೀಡದೇ ಸಮಾಜ ಕಟ್ಟುವ ಕೆಲಸ ಮಾಡುವಂತೆ ಶ್ರೀಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
“ನಮ್ಮ ಸಮಾಜ ಇರುವುದು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಅಲ್ಲ. ಶ್ರೀಗಳು ಹೀಗೆ ವ್ಯಕ್ತಿಯ ಪರವಾಗಿ ಹೇಳಿಕೆ ನೀಡಬಾರದು,” ಎಂದು ಹೇಳಿದರು.
ಸಮಾಜವನ್ನು ಆರ್ಥಿಕ, ಶೈಕ್ಷಣಿಕವಾಗಿ ಗಟ್ಟಿಗೊಳಿಸುವ ಉದ್ದೇಶದಿಂದ 2008ರಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಆದರೆ, ಇಂದು ಪೀಠದ ಗುರಿ ಮರೆತು ಬೇರೆ ಮಾರ್ಗದೆಡೆಗೆ ಸಾಗುತ್ತಿದೆ. ವ್ಯಕ್ತಿ ಅಥವಾ ಪಕ್ಷದ ಪರವಾಗಿ ಶ್ರೀಗಳು ಹೇಳಿಕೆ ನೀಡುತ್ತಿರುವುದು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ ಸ್ವಾಮೀಜಿ, ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಸ್ವತ್ತಾಗಬಾರದು. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂಬುದು ನಮ್ಮೆಲ್ಲರ ಉದ್ದೇಶ ಎಂದರು.
ನಮ್ಮ ಮಾತಿಗೆ ಸಹಮತ ವ್ಯಕ್ತಪಡಿಸದೇ ಇದೇ ರೀತಿ ಶ್ರೀಗಳು ಮುಂದುವರೆದಲ್ಲಿ ಎಲ್ಲ ಪಕ್ಷಗಳಲ್ಲಿರುವ ಸಮಾಜದ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಎಲ್.ಎಂ.ಪಾಟೀಲ, ರಾಜಶೇಖರ ಮೆಣಸಿನಕಾಯಿ, ಸೋಮಣ್ಣ ಬೇವಿನಮರದ, ನಂದಕುಮಾರ ಪಾಟೀಲ, ಕಲ್ಲಪ್ಪ ಯಲಿವಾಳ, ಜಿ.ಜಿ. ದ್ಯಾಮನಗೌಡ್ರ, ಎಂ.ಎಸ್. ಮಲ್ಲಾಪುರ ಸೇರಿದಂತೆ ಹಲವರಿದ್ದರು.