ಲಿಂಗಾಯತ ಧರ್ಮದ ಮೇಲೆ ವಚನಾನಂದ ಶೀಗಳದು ಗೊಂದಲ, ಸಾಣೇಹಳ್ಳಿ ಶ್ರೀಗಳದು ಸತ್ಯದ ಮಾತು: JLM ನ ರುದ್ರಮುನಿ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ನಾವು ಭೌಗೋಳಿಕವಾಗಿ ಮಾತ್ರ ಹಿಂದೂಗಳು

ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗ ಎಂದು ಹೇಳಿಕೆ ನೀಡುತ್ತಿರುವ ವಚನಾನಂದ ಸ್ವಾಮೀಜಿಗೆ ಲಿಂಗಾಯತ ಧರ್ಮದ ಬಗ್ಗೆ ಸ್ಪಷ್ಟತೆ ಇಲ್ಲ, ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಅವರಗೆರೆ ರುದ್ರಮುನಿ ಶನಿವಾರ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆಯ ಕಾರ್ಯಕ್ರಮದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿರುವುದು ಸತ್ಯದ ಮಾತು ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಅವರಗೆರೆ ರುದ್ರಮುನಿ

ಆದರೆ, ಅದೇ ವೇದಿಕೆಯಲ್ಲಿದ್ದ ಶ್ರೀ ವಚನಾನಂದ ಸ್ವಾಮೀಜಿ ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗ ಎಂದು ಹೇಳಿ ಗೊಂದಲ ಸೃಷ್ಟಿಸಿರುವುದು ತಪ್ಪು, ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಭೌಗೋಳಿಕವಾಗಿ ಸಿಂಧೂ ನದಿಯ ಭೂಪ್ರದೇಶದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳೆಂದು ಕರೆಯಲಾಗಿತ್ತು. ಆ ಪ್ರದೇಶದಲ್ಲಿ ಬೌದ್ಧ, ಜೈನ, ಸಿಖ್, ಲಿಂಗಾಯತ, ಇಸ್ಲಾಮ್, ಕ್ರೈಸ್ತ ಸೇರಿ ಇತರ ಧರ್ಮ ಪಾಲಿಸುವ ಜನಸಮೂಹಗಳಿವೆ,” ಎಂದರು.

ಈ ಧರ್ಮಗಳಂತೆಯೇ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದರು., ಎಂದರು.

“ನಮ್ಮಲ್ಲಿ ಶ್ರೇಣಿಕೃತ ಭಾವನೆ ಇಲ್ಲ. ನಾವು ಸಕಲ ಜೀವ ರಾಶಿಗಳಿಗೂ ಒಳಿತನ್ನು ಬಯಸುತ್ತೇವೆ. ನಮ್ಮ ಧಾರ್ಮಿಕ ಆಚರಣೆಗಳೇ ಬೇರೆ. ನಾವು ಭೌಗೋಳಿಕವಾಗಿ ಮಾತ್ರ ಹಿಂದೂಗಳು,” ಎಂದರು.

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಉಪಾಧ್ಯಕ್ಷೆ ಮಧುಮತಿ ಗಿರೀಶ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರುದ್ರಗೌಡರು, ಬಸವ ಬಳಗದ ಸದಸ್ಯ ಮಹಾಂತೇಶ ಅಂಗಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *