ವಚನಗಳು ಕ್ರಾಂತಿಯಲ್ಲ, ಚಳುವಳಿಯಲ್ಲ ಎನ್ನುವ ಹೇಳಿಕೆಗಳು ಲಿಂಗಾಯತರನ್ನು ಪ್ರಚೋದಿಸುವ, ಭಾವನಾತ್ಮಕವಾಗಿ ಕೆರಳಿಸುವ ಪ್ರಯತ್ನ. ಬಸವಣ್ಣನವರ ಅನುಯಾಯಿಗಳಲ್ಲಿ ಜೀವಂತವಾಗಿರುವ ಕಲ್ಯಾಣದ ನೆನಪನ್ನು ಅಳಿಸುವ ಪ್ರಯತ್ನ ಕೂಡ. ಇದು ತಕ್ಷಣ ನಿಲ್ಲಬೇಕು.
ವಿವಾದಿತ ವಚನ ದರ್ಶನ ಪುಸ್ತಕದ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ್ ಅವರು ಬಸವ ಮೀಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಶ್ನೆ) ವಿಜಯಪುರದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಮಾಡುತ್ತಾ ಆರ್.ಎಸ್.ಎಸ್ ನ ಶಂಕರಾನಂದ ಬಿ. ಆರ್. ವಚನಗಳು ಯಾರೂ ಬರೆದಿದ್ದಲ್ಲ, ಅವು ಈ ಪವಿತ್ರ ನೆಲದ ದೈವೀ ಶಕ್ತಿಯಿಂದ ಪ್ರಕಟವಾಗಿವೆ, ಸ್ವಯಂ ಉದ್ಬವವಾಗಿವೆ ಎಂದು ಭಾಷಣ ಮಾಡಿದರು…
ಇದು ನೂರಕ್ಕೂ ನೂರು ಸುಳ್ಳು. ಇದು ಇತಿಹಾಸವನ್ನು ಪುರಾಣವನ್ನಾಗಿ ಬದಲಿಸುವ ಪ್ರಯತ್ನ.
ಬೇರೆ ಬೇರೆ ಜಾತಿ, ವರ್ಗ, ಕಾಯಕಗಳಿಂದ ಬಂದ ನೂರಾರು ವಚನಕಾರರು ತಮ್ಮದೇ ಅಂಕಿತ ನಾಮ ಬಳಸಿಕೊಂಡು ವಚನಗಳನ್ನು ಬರೆದರು. ಅಂಕಿತ ನಾಮಗಳು ಅವರ ಹಿನ್ನಲೆ, ವ್ಯಕ್ತಿತ್ವ, ವಿಚಾರಗಳನ್ನು ಪರಿಚಯ ಮಾಡಿಕೊಡುತ್ತವೆ.
ಇದನ್ನೆಲ್ಲಾ ನೋಡದೆ ವಚನಗಳು ಸ್ವಯಂ ಉದ್ಭವ ಅನ್ನುವುದು ಇತಿಹಾಸಕ್ಕೆ ಭಂಗ ತರುವ ಹೇಳಿಕೆ.
ಪ್ರಶ್ನೆ) ವಚನಗಳು ಕ್ರಾಂತಿಯೂ ಅಲ್ಲ, ಚಳುವಳಿಯೂ ಅಲ್ಲ ಅಂತಲೂ ಶಂಕರಾನಂದ ಹೇಳಿದರು…
ಇದು ಕೂಡ ನೂರಕ್ಕೂ ನೂರು ಸುಳ್ಳು. ಅವರ ಮಾತಿಗೆ ಯಾವ ಆಧಾರವೂ ಇಲ್ಲ.
ಇದು ಸನಾತನಿಗಳು ಮತ್ತೆ ಮತ್ತೆ ನಡೆಸುತ್ತಿರುವ ಹಳೇ ಪ್ರಯತ್ನ. ಕಲ್ಯಾಣದಲ್ಲಿ ಕ್ರಾಂತಿ ನಡೆಯಿತು ಅಂತ ಅವರು ಒಪ್ಪಿಕೊಂಡರೆ ನಡೆದದ್ದು ಯಾವ ಕ್ರಾಂತಿ, ಯಾರ ವಿರುದ್ಧ ಎನ್ನುವ ಪ್ರಶ್ನೆಗಳು ಸಹಜವಾಗಿ ಬರುತ್ತವೆ. ಇಂತಹ ಪ್ರಶ್ನೆಗಳು ಜನ ಸಾಮಾನ್ಯರು ಕೇಳಬಾರದು ಅನ್ನುವುದು ಅವರ ಉದ್ದೇಶ.
12ನೇ ಶತಮಾನದಲ್ಲಿ ಇದ್ದ ಬಸವಾದಿ ಶರಣರು ಐತಿಹಾಸಿಕ ವ್ಯಕ್ತಿಗಳು. ಕಲ್ಯಾಣದಲ್ಲಿ ನಡೆದದ್ದು ಐತಿಹಾಸಿಕ ಘಟನೆಗಳು. ಇದಕ್ಕೆ ಶಾಸನಗಳು ಸೇರಿದಂತೆ ಅನೇಕ ಆಧಾರಗಳಿವೆ.
ಕ್ರಾಂತಿ ನಡೆದಿದ್ದರಿಂದ ಲಿಂಗಾಯತ ಧರ್ಮ ಹುಟ್ಟಿತು. ವಚನಗಳು ಕ್ರಾಂತಿಯ ಕಿಡಿಗಳಾಗಿ ಹೊರಹೊಮ್ಮಿದವು.
ಪ್ರಮುಖ ಶರಣರ ನೂರಾರು ವಚನಗಳು ಆ ಕಾಲದಲ್ಲಿದ್ದ ಪರಿಸ್ಥಿತಿಯನ್ನು ನೇರವಾಗಿ, ತೀವ್ರವಾಗಿ ವಿರೋಧಿಸುತ್ತವೆ. ದಲಿತ-ಬ್ರಾಹ್ಮಣ ಕುಟುಂಬಗಳ ನಡುವ ವೈವಾಹಿಕ ಸಂಬಂದವನ್ನು ನಡೆಸುತ್ತಾರೆಂದರೆ ಅದು ಕ್ರಾಂತಿಯಲ್ಲದೆ ಮತ್ತೇನು. ಕಲ್ಯಾಣದಲ್ಲಿ ಕ್ರಾಂತಿ ನಡೆಯದೇ ಇದ್ದಿದ್ದರೆ ಅನುಭವ ಮಂಟಪ ಹುಟ್ಟಿದ್ದು ಹೇಗೆ.
ಇದನೆಲ್ಲ ನಿರಾಕರಿಸುವುದು ಒಂದು ಸಂಘಟಿತ, ದುರುದ್ದೇಶಪೂರಿತ ಪ್ರಯತ್ನ. ಕ್ರಾಂತಿಯೂ ಅಲ್ಲ ಚಳುವಳಿಯೂ ಅಲ್ಲ ಅಂತ ಹೇಳುವುದು ಪ್ರಚೋದನಾತ್ಮಕವಾದ ಸನ್ನಿವೇಶ ಸೃಷ್ಟಿಸುತ್ತ ಇವೆ. ಅದನ್ನು ಸಂಘ ಪರಿವಾರದವರು ನಿಲ್ಲಿಸಬೇಕು.
ಇದೊಂದು ಸಾಂಕೇತಿಕ ದಾಳಿಯೂ ಕೂಡ ಎಂಬುದನ್ನು ಗಮನಿಸಬೇಕು.
ಬಸವಣ್ಣನವರು ಹುಟ್ಟಿದ ಬಸವನ ಬಾಗೇವಾಡಿ ಇರುವುದು ಬಿಜಾಪುರ ಜಿಲ್ಲೆಯ ಒಂದು ತಾಲೂಕಿನಲ್ಲಿ. ಅವರು ಐಕ್ಯವಾದ ಕೂಡಲ ಸಂಗಮವಿರುವುದು ಬಿಜಾಪುರ ಜಿಲ್ಲೆಯ ಇನ್ನೊಂದು ತಾಲೂಕಿನಲ್ಲಿ.
ಇಂತಹ ಸ್ಥಳಕ್ಕೆ ಹೋಗಿ ನಾನು ಯಾವುದೊ ದೊಡ್ಡ ಸಂಘಟನೆಯವನು, ನಾನು ಯಾವ statement ಕೊಟ್ಟರೂ ನಡೆಯುತ್ತದೆ, ಎಲ್ಲರೂ ಸುಮ್ಮನಿರುತ್ತಾರೆ ಅಂತ ಅಂದುಕೊಂಡರೆ ಅದು ತಪ್ಪು.
ಪ್ರಶ್ನೆ) ವಚನ ದರ್ಶನವನ್ನು ಲಿಂಗಾಯತರು ಗಂಭೀರವಾಗಿ ತೆಗೆದುಕೊಳ್ಳಬೇಕೇ
ಇದು ಬರಿ ಲಿಂಗಾಯತ ಧರ್ಮದ ಮೇಲೆ ನಡೆಯುತ್ತಿರೋ ದಾಳಿಯಲ್ಲ. ಇದು 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಮೇಲೆ ನಡೆಯುತ್ತಿರೋ ದಾಳಿ.
ಲಿಂಗಾಯತರಲ್ಲಿ ಮುಖ್ಯವಾದ ಅಂಶವೆಂದರೆ ಕಲ್ಯಾಣದ ನೆನಪು. ಇವರು ಅದರ ಬುಡಕ್ಕೆ ಕೈ ಹಾಕಿ ಆ ನೆನಪ ಅಳಿಸಲು ಹೊರಟಿದ್ದಾರೆ.
ಪ್ರಶ್ನೆ) ಕಲ್ಯಾಣ ನೆನಪ ಅಳಿಸಿಹಾಕುವ ಒತ್ತಡವೇನು ಬಂದಿದೆ ಸಂಘ ಪರಿವಾರಕ್ಕೆ ?
ಈ ದೇಶದಲ್ಲಿ ಸನಾತನ ಧರ್ಮ ಮಾತ್ರ ಉಳಿಯಬೇಕು. ಒಂದು ರಾಷ್ಟ್ರ, ಒಂದು ಧರ್ಮ, ಒಂದು ಚುನಾವಣೆ ಮಾಡೋ ಅವರ ಸಂಚಿಗೆ ಇವೆಲ್ಲ ಪೂರಕವಾಗಿ ನಡೆಯುತ್ತಿವೆ.
ಪ್ರಶ್ನೆ) ಕಲ್ಯಾಣ ನೆನಪ ಅಳಿಸುವ ಪ್ರಯತ್ನ ಈಗ, ಅಂದರೆ 2024ರಲ್ಲಿ, ಇಷ್ಟು ಜೋರಾಗಿ ಮಾಡುತ್ತಿರುವ ಕಾರಣವೇನು?
ಹತ್ತು ವರ್ಷದಿಂದ ಅವರ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಈಗ ಮೂರನೇ ಅವಧಿಗೂ ಸಂಯುಕ್ತ ಸರಕಾರ ರಚಿಸಿಕೊಂಡು ಬಂದಿದ್ದಾರೆ. ಈ ಬಲ, ಅಧಿಕಾರ ಬಳಸಿಕೊಂಡು ಕ್ರಾಂತಿ ಅನ್ನೋ ಶಬ್ದಾನೆ ಹೋಗಬೇಕು, ಚಳುವಳಿ ಅನ್ನೋ ಶಬ್ದಾನೆ ಹೋಗಬೇಕು, ವಚನಗಳು ವಚನಗಳಲ್ಲ ಉಪನಿಷತ್ತುಗಳು ಅನ್ನೋ ಭ್ರಮೆ ಹುಟ್ಟಬೇಕು…
ಕಲ್ಯಾಣ ಕ್ರಾಂತಿಯ ನೆನಪನ್ನ, ಗುರುತನ್ನ, ಸಂಘಟನೆಯನ್ನ ಅಳಿಸಿಹಾಕೋ ಪ್ರಯತ್ನ ಅವರದು.
ಕ್ರಾಂತಿ ಆಗಿದ್ದು ಎಲ್ಲಿ ಕಲ್ಯಾಣದಲ್ಲಿ. ಆಗಿದ್ದು ಯಾವಾಗ 12ನೇ ಶತಮಾನದ ಮದ್ಯಭಾಗದಲ್ಲಿ. ಇದನ್ನು ಸಂಪೂರ್ಣವಾಗಿ ನಿರಾಕರಿಸಿ ಜನರಿಂದ ಕಲ್ಯಾಣ ಕ್ರಾಂತಿಯ ನೆನಪನ್ನೇ ಅಳಿಸಿಹಾಕುವ ಪ್ರಯತ್ನ ಇದು.
ಪ್ರಶ್ನೆ) ಒಂದೇ ಪುಸ್ತಕವನ್ನು 9 ಜಿಲ್ಲೆಗಳಲ್ಲಿ ಇಷ್ಟೊಂದು ದುಡ್ಡು ಖರ್ಚುಮಾಡಿಕೊಂಡು ಹಠ ಹಿಡಿದು ಬಿಡುಗಡೆ ಮಾಡಿದ್ದಾರೆ. ಯಾಕೆ?
ಈ ಕೆಲಸದ ಹಿಂದೆ ಒಂದು ಭೀತಿ ಇದೆ. ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು.
ಲಿಂಗಾಯತ ಸ್ವತಂತ್ರ ಧರ್ಮ, ಲಿಂಗಾಯತರು ಹಿಂದೂಗಳಲ್ಲ ಎನ್ನುವುದರ ಬಗ್ಗೆ ಇಂದು ಲಿಂಗಾಯತ ಸಂಘಟನಗೆಳಲ್ಲಿ ಒಮ್ಮತ ಮೂಡಿದೆ. ಕಳೆದ ಕೆಲವು ವರ್ಷಗಳಲ್ಲಿ ವೀರಶೈವ ಮಹಾಸಭಾ ಕೂಡ ಅನೇಕ ನಿರ್ಣಯಗಳಲ್ಲಿ ಇದೇ ನಿಲುವು ತೆಗೆದುಕೊಂಡಿದೆ.
ಬಿಜೆಪಿಗೆ ಲಿಂಗಾಯತ ಸಮುದಾಯದ ಮತಗಳು ಕಡಿಮೆಯಾಗಿವೆ. 2023 ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 139 ಸೀಟು ಬರಲು ಇದೂ ಮುಖ್ಯ ಕಾರಣ. ಯಡಿಯೂರಪ್ಪನವರಿಗೆ ಮೊದಲಿನ ಹಾಗೆ ಲಿಂಗಾಯತ ಮತಗಳನ್ನು ಸೆಳೆಯುವ ಸಾಮರ್ಥ್ಯವಿಲ್ಲ ಎಂದು ಅವರಿಗೆ ಅರ್ಥವಾಗಿದೆ.
ಈ ಎರಡೂ ಬೆಳವಣಿಗೆಗಳು ಅವರನ್ನು ಬೆಚ್ಚಿಬೀಳಿಸಿವೆ. ಅದಕ್ಕೆ ಲಿಂಗಾಯತರು ಹಿಂದೂಗಳು ಎನ್ನುವ ಸುಳ್ಳು ವದಂತಿ ಹರಡಿ ಅವರ ಮತ ಉಳಿಸಿಕೊಳ್ಳುವ ಶೋಚನೀಯ ಪ್ರಯತ್ನ ಇದು.
ಪ್ರಶ್ನೆ) ಕಲ್ಯಾಣದಲ್ಲಿ ಕ್ರಾಂತಿ ನಡೆಯಲಿಲ್ಲ ಅನ್ನುವ ಅವರ ವಾದವನ್ನು ಲಿಂಗಾಯತರು ಒಪ್ಪಿಕೊಳ್ಳುತ್ತಾರೆಯೇ?
ಪ್ರತಿಯೊಬ್ಬ ಲಿಂಗಾಯತನಲ್ಲಿ ಕಲ್ಯಾಣದ ನೆನಪು ಜಾಗೃತವಾಗಿದೆ. ಬಸವಣ್ಣನವರ ಬಗ್ಗೆ, ವಚನಗಳ ಬಗ್ಗೆ ಅಪಾರವಾದ ಪ್ರೀತಿ, ಗೌರವ, ಭಕ್ತಿಯಿದೆ. ಇದರ ವಿರುದ್ಧವಾಗಿ ಯಾರ ಮಾತನ್ನು ಲಿಂಗಾಯತರು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ.
ವಚನ ದರ್ಶನದ ಸುಳ್ಳು ಮಾತುಗಳು ಅವರಿಗೆ ತಿರುಗು ಬಾಣವಾಗುತ್ತಿದ್ದೆ. ಅದು ಲಿಂಗಾಯತರನ್ನು ಬದಲಿಸುತ್ತಿಲ್ಲ. ಅವರನ್ನು ಒಗ್ಗೊಡಿಸುತ್ತಿದೆ, ಜಾಗೃತಗೊಳಿಸುತ್ತಿದೆ.
ಒಂದು ಕರಾಳ ಇತಿಹಾಸ ಮತ್ತು ಬದಲಾವಣೆ ಕ್ರಾಂತಿಯನ್ನು ಅಳಿಸಿ ಹಾಕುವ ಸಾಹಸವನ್ನು ಪ್ರಜಾಪ್ರಭುತ್ವದಲ್ಲಿ ಮಾಡ್ತಾ ಇದಾರೆ ಅಂದ್ರೆ….. ರಾಜಪ್ರಭುತ್ವದ ಕೈ ಹೇಗೆ ಇವರೆಲ್ಲಾ ತಿರುವಿರಬಹುದು…….ಶಿವ ಶಿವ …ಈ ದುಷ್ಕರ್ಮಿಗಳ ,ದುಷ್ಟರ,ದುರುಳರು……ಮಾನವ ಕುಲದ…ಮಾನವೀಯತೆಯ ವಿರೋಧಿಗಳು ಬದಲಾಗಬೇಕು…..ಇವರಿಗೆ ಉಳಿಯಲು ಬಿಡಬಾರದು…
2ಜಾಮದಾರ್ ಸರ್.. ಶರಣರ ಬಗೆಗೆ, ಲಿಂಗಾಯತ ಧಮ೯ದ ಬಗೆಗೆ. ಕಲ್ಯಾಣ ಕ್ರಾಂತಿ , ಇವುಗಳ ಅರಿವು ಮೂಡಿಸುವ ಕಾಯ೯ಗಾರಗಳನ್ನು ನಮ್ಮ ಲಿಂಗಾಯತ ಯುವಜನರಿಗೆ ಏಪ೯ಡಿಸಬೇಕು. ಅಂದಾಗ ಮಾತ್ರ ಸಂಘಪರಿವಾರದವರಿಗೆ ತಕ್ಕ ಉತ್ತರ ಕೊಡಲು ಸಾಧ್ಯ. ಈ ಕಾಯ೯ವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಾಡಬೇಕು 🙏🙏
ಲಿಂಗಾಯತ ಯುವಕರಿಗೆ ಗಣಾಚಾರದ ಬಗ್ಗೆ ಜಾಗ್ರುತಿ ಶಿಬಿರ ಮೇಲಿಂದ ಮೇಲೆ ಬಸವಪರ ಸಂಘಟನೆಗಳು ಸ್ಥಳೀಯವಾಗಿ ಹಮ್ಮಿಕೊಳ್ಳದಿದ್ದರೆ ಬಸವ ಧರ್ಮಕ್ಕೆ ಭವಿಷ್ಯವಿಲ್ಲ!
ಕಲ್ಯಾಣ ಕ್ರಾಂತಿ, ಲಿಂಗಾಯತ ಹೇಗೆ ಒಂದು ಸ್ವತಂತ್ರ ಧರ್ಮ, ಎಲ್ಲ ದಾಖಲೆಗಳು ಒಳಗೊಂಡ ಒಂದು ಪುಸ್ತಕ. ಹೊಸ ಹೆಸರಿನಿಂದ ಬರೆದು ಪ್ರಿಂಟ್ ಮಾಡಿ. ಎಲ್ಲ ಬಸವ ಪರ ಸಂಘಟನೆಗಳು ಸೇರಿ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪತ್ರಿಕಾ ಪ್ರಕಟಣೆಯೊಂದಿಗೆ ಬಿಡುಗಡೆ ಮಾಡಿ. ಇದು ಜಾಗತಿಕ ಲಿಂಗಾಯತ ಮಹಾಸಭಾ ದಿಂದ ಸಾಧ್ಯ ಎಂಬುದು ನಮ್ಮ ಅಭಿಪ್ರಾಯ. ಆಗಬಹುದೇ?
ಕಲ್ಯಾಣ ಕ್ರಾಂತಿಯ ದಿನವನ್ನು ಕರಾಳ ದಿನವೆಂದು ಆಚರಿಸಬೇಕು
‘ಕಲ್ಯಾಣ ಕ್ರಾಂತಿಯ’ ಹೃದಯ ಮಿಡಿಯುವ ದಿನವನ್ನು ‘ಮರಣವೇ ಮಹಾನವಮಿ’ ಯ ಕಾರ್ಯಕ್ರಮವನ್ನು ಬೇರೆಯೇ ಹೆಸರಿಟ್ಟು ಡಿಜೆ ಹಚ್ಚಿ ರೋಡ್ ನಲ್ಲಿ ಡ್ಯಾನ್ಸ್ ಮಾಡ್ತಿದ್ದಾರೆ …ಇತಿಹಾಸವನ್ನು ಓದಿಕೊಂಡು ಅರ್ತೈಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವ ಬುದ್ಧಿಯೂ….ಸಹ ಇಲ್ಲಾ ಕೆಲವರಿಗೆ.