ಕಲ್ಯಾಣ ವೈಚಾರಿಕ ಪರಂಪರೆಯ ಗಟ್ಟಿನೆಲ: ಡಾ. ವಿವೇಕಾನಂದ ಸಜ್ಜನ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ವೈಚಾರಿಕ ಮತ್ತು ವೈಜ್ಞಾನಿಕ ಪರಂಪರೆಯ ಗಟ್ಟಿನೆಲ ಕಲ್ಯಾಣವಾಗಿದೆ. ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ ಎಂದು ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿವೇಕಾನಂದ ಸಜ್ಜನ ಹೇಳಿದರು.

ನಗರದ ಬಿಕೆಡಿಬಿ ಸಭಾಭವನದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅರಿವಿನ ಪಯಣ, ಸಾಹಿತ್ಯ ಮತ್ತು ವೈಜ್ಞಾನಿಕ ಚಿಂತನೆ ಕುರಿತ ಉಪನ್ಯಾಸ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಹೊಸ ಆಲೋಚನೆಗಳು ಹುಟ್ಟಿಸಿದ ಸಾಹಿತ್ಯ ಎಂದರು.

ಶಿಕ್ಷಣವು ಅರಿವು ವಿಸ್ತರಿಸುವ ದಾರಿ. ಯಾವುದು ಸರಿ, ಯಾವುದು ತಪ್ಪು ಎಂಬ ಆಲೋಚನೆ ಕಟ್ಟಿಕೊಡುತ್ತದೆ. ಅಧ್ಯಯನ ವ್ಯಾಪ್ತಿ ಹೆಚ್ಚಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.

ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ ಮೋಹನರಾವ ಮಾತನಾಡಿ, ಶಿಕ್ಷಣದಿಂದ ವಿಚಾರ ಮಾಡುವ ಮತ್ತು ವಿಮರ್ಶಿಸುವ ಗುಣ ಬೆಳೆಯುತ್ತದೆ. ಹನ್ನೆರಡನೇ ಶತಮಾನದ ಶರಣರು ವೈಚಾರಿಕ ಕ್ರಾಂತಿಯಿಂದ ಸಾಮಾಜಿಕ ಬದಲಾವಣೆ ತಂದರು.  ಜಗತ್ತಿನಲ್ಲಿ ವಚನಕಾರರು ಕಾಯಕ, ದಾಸೋಹದಂತಹ ಬಹುದೊಡ್ಡ ಫಿಲಾಸಫಿ ಕಟ್ಟಿಕೊಟ್ಟಿದ್ದಾರೆ. ಯೂರೋಪಿಗಿಂತ ಮೊದಲೇ ಕಲ್ಯಾಣದಲ್ಲಿ ವೈಚಾರಿಕ ಚಿಂತನೆ ನಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ರಗಟೆ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಚಲನೆ ನಿರ್ಧರಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಇಂದಿನ ಕಾಲ ಊಹಿಸಲು ಸಾಧ್ಯವಿಲ್ಲ.

ಹಾಗಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ. ವೈಜ್ಞಾನಿಕ ಮತ್ತು ವೈಚಾರಿಕ ತಾತ್ವಿಕತೆ ಹೊಂದಿರುವ ವಚನಗಳ ಗಂಭೀರ ಅಧ್ಯಯನ ಎಲ್ಲ ಶಿಸ್ತಿನ ವಿದ್ಯಾರ್ಥಿಗಳು ಮಾಡಲಿ ಎಂದು ಆಶಿಸಿದರು.

ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಕಾಲದ ಅಗತ್ಯ. ಅದರ ಜೊತೆಗೆ ಮಾನವೀಯ ಮೌಲ್ಯಗಳು ಮುಖ್ಯ. ಕೃತಕ ಬುದ್ಧಿಮತ್ತೆ, ಗಣಕಯಂತ್ರ ಯೋಚಿಸುವ ಶಕ್ತಿ ಹೊಂದಿಲ್ಲ. ಮನುಷ್ಯ ಮಾತ್ರ ಆಲೋಚಿಸುವ, ವಿವೇಚಿಸುವ, ಅಳುವ, ನಗುವ, ಸಂವೇದನೆ ಹೊಂದಿದ್ದಾನೆ. ಯಂತ್ರಕ್ಕಿಂತ ಮನುಷ್ಯ ಬದುಕು ದೊಡ್ಡದು ಎಂದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹಕಾರ್ಯದರ್ಶಿ ಸುನಿಲಕುಮಾರ ರಾಯವಾಡೆ, ನಿರ್ದೇಶಕರಾದ ಬಸವರಾಜ ತೊಂಡಾರೆ, ಪುಷ್ಪಾವತಿ ಮಾಮಾ, ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ ಪಿಜಿ ಪ್ರಾಚಾರ್ಯೆ ಶಾಂತಲಾ ಪಾಟೀಲ, ಶರಣಪ್ಪ ದುರ್ಗೆ,  ಅಶೋಕ ಸ್ವಾಮಿ, ಅಶೋಕ ರೆಡ್ಡಿ ಗದಲೇಗಾಂವ, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂಧೆ, ಪ್ರೀಯಾ ಹಿಂಸೆ, ನಾಗವೇಣಿ ವಟಗೆ, ನಾಗರಾಜ ನಾಸೆ, ಕೃಷ್ಣ ಗೌಳಿ, ರೋಷನ್ ಬಿ, ಚನ್ನಬಸಪ್ಪ ಗೌರ,  ಪ್ರವೀಣ ಬಿರಾದಾರ, ಗಂಗಾಧರ ಸಾಲಿಮಠ, ವೀರೇಶ ಸ್ವಾಮಿ, ಸನತ್ ರೆಡ್ಡಿ, ಶೀತಲ್ ರೆಡ್ಡಿ, ಸುಜಾವುದ್ದಿನ್, ಪ್ರಶಾಂತ ಬುಗ್ಗೆ, ಮೊದಲಾದವರು ಉಪಸ್ಥಿತರಿದ್ದರು.

ಬಸವರಾಜ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಪವನ್ ಪಾಟೀಲ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *