ಬಸವ ಧರ್ಮವನ್ನು ಅಪ್ಪಿಕೊಂಡವರಿಂದ ಮಾತ್ರ ಸಮಾನತೆ ಬರಲು ಸಾಧ್ಯ: ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ.
ಕಂಪ್ಲಿ
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಕ್ತಿ ಭಂಡಾರಿ ಬಸವೇಶ್ವರ ಆಶ್ರಮದ ವತಿಯಿಂದ 892ನೇ ಗುರು ಬಸವಣ್ಣನವರ ಜಯಂತ್ಯೋತ್ಸವ ಸಂಭ್ರಮದಿಂದ ನಡೆಯಿತು. ಗಂಗಾವತಿಯ ರಾಷ್ಟ್ರೀಯ ಬಸವದಳದ ಶರಣ ಶರಣೆಯರು, ಗುಂಡ್ಲುಗೊದ್ದಿಗೇರಿ, ರಾಮಸಾಗರ, ಹೊಸಪೇಟೆಯ ನೂರಾರು ಜನ ಶರಣರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಪಥ ಸಂಚಲನ, ಶಾಲೆಯ ಮಕ್ಕಳ ನೃತ್ಯ, ಶ್ರೀ ರಕ್ಷಾ ಸ್ವಾಮಿಯವರ ವಚನ ಗಾಯನ ಮತ್ತು ಗಂಗಾಬಿಕೆ ವಚನ ನೃತ್ಯ ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಕಂಪ್ಲಿಯ ರಾಷ್ಟ್ರೀಯ ಬಸವದಳದ ಶರಣ ಹೇಮಯ್ಯಸ್ವಾಮಿ ಮಾತನಾಡಿ, ಭಕ್ತಿ ಭಂಡಾರಿ ಬಸವೇಶ್ವರ ಆಶ್ರಮದ ಪಾಮಯ್ಯ ಶರಣರು ಪ್ರತೀ ವರ್ಷ ಬಸವ ಜಯಂತಿಯನ್ನು ಆಚರಣೆ ಮಾಡುವುದರ ಮೂಲಕ ಹರಳಯ್ಯ ಸಮಾಜವನ್ನು ಬಸವ ಧರ್ಮಕ್ಕೆ ಜೋಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರಲ್ಲದೆ ಅವರಿಗೆ ಸದಾ ಕಾಲ ತನು ಮನ ಧನದೊಂದಿಗೆ ಸಹಕರಿಸುವುದಾಗಿ ಹೇಳಿದರು.

ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಬಸವಣ್ಣನವರ ಹೃದಯ ನಿಮ್ನ ವರ್ಗದ, ಮಹಿಳೆಯರ, ಪತೀತರ, ನೊಂದವರ, ದುಡಿಯುವ ವರ್ಗದವರ ಪರವಾಗಿ ಮಿಡಿಯುತ್ತಿತ್ತು. ಅವರು ಮೇಲರಿಮೆಯನ್ನು ಕಳೆದುಕೊಂಡಾಗಲೇ ಸರ್ವ ಕಾಯಕ ವರ್ಗವು ಅವರನ್ನು ಒಪ್ಪಿಕೊಂಡಿತು. ಇಂತಹ ಶ್ರೇಷ್ಟ ಗುರು ಬಸವಣ್ಣನವರ ಅನುಯಾಯಿಗಳಾದ ನಾವು ಬಸವಧರ್ಮವನ್ನು ಭಾವನಾತ್ಮಕವಾಗಿ ಅಪ್ಪಿಕೊಂಡಾಗ ಮಾತ್ರ ಸಮಾನತೆ ಸಾರಲು ಸಾಧ್ಯ ಎಂದು ಹೇಳಿದರು.

ದಲಿತರು, ಮಹಿಳೆಯರಿಗೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅನ್ಯಾಯವಾದಾಗ ಅವರ ಧ್ವನಿಯಾಗಿ ನಿಂತವರು ಬಸವಣ್ಣನವರು, ಆದ್ದರಿಂದ ಬಸವಧರ್ಮವನ್ನು ಪಾಲಿಸಬೇಕು, ಬಸವಗುರುವಿನ ಸಮತೆಯ ಸಂತಾನಿಗಳಾಗಬೇಕು. ಎಂದರಲ್ಲದೆ ನಮ್ಮ ಜನ್ಮಭೂಮಿಯಾದ ಭಾರತ ದೇಶದ ಕರುನಾಡಿನ ನೆಲದಲ್ಲಿ ಹುಟ್ಟಿದ ಬಸವಧರ್ಮವನ್ನು ಜೀವನದ ಉಸಿರಾಗಿಸಿಕೊಳ್ಳುತ್ತೇವೆ ಎಂದು ಈ ಬಸವ ಜಯಂತೋತ್ಸವದಲ್ಲಿ ತೀರ್ಮಾನ ಮಾಡಬೇಕು ಎಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಕಂಪ್ಲಿಯ ರಾಷ್ಟ್ರೀಯ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ಎ.ಸಿ. ದಾನಪ್ಪ ಅವರು ಮಾತನಾಡಿ, ವೈದಿಕ ಧರ್ಮ ನಮಗೆ ನ್ಯಾಯ ಕೊಡದೆ ಕಾಕು ಪೋಕು ದೈವ ತೋರಿಸಿ ಭಯದಿಂದ ಬದುಕುವಂತೆ ಮಾಡಿತ್ತು, ಬುದ್ಧ ಬಸವಣ್ಣ ಅಂಬೇಡ್ಕರ್ ಅವರು ಬಂದು ದೈವದ ಭಯವನ್ನು ತೊಡೆದು ಹಾಕಿ ಅರಿವಿನಿಂದ, ವೈಚಾರಿಕತನದಿಂದ, ಸ್ವಾತಂತ್ರ್ಯದಿಂದ ಬದುಕಲು ಕಲಿಸಿದ್ದಾರೆ, ಈ ತ್ರೀಮೂರ್ತಿಗಳೇ ನಮಗೆ ದೇವರಾಗಬೇಕೇ ವಿನಾ ಬ್ರಹ್ಮ ವಿಷ್ಣು ಮಹೇಶ್ವರರಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಬಸವದಳದ ಹಿರಿಯ ಶರಣರಾದ ನಿಜಲಿಂಗಪ್ಪ ಮೆಣಸಿಗೆ ಮಾತಾನಾಡಿ, ಬಸವತತ್ವ ಎಂದರೆ 24 ಕ್ಯಾರೆಟ್ ಬಂಗಾರವಿದ್ದಂತೆ. ಇಂದಿನ ಜಾತಿ ವ್ಯವಸ್ಥೆಯನ್ನು ಹೊಡೆದೋಡಿಸಲು ಬಸವಧರ್ಮಕ್ಕೆ ಶಕ್ತಿಯಿದೆ. ಲಿಂಗಾಯತರು ಜಾತಿವಾದಿಗಳಾಗದೆ ಸರ್ವರನ್ನೂ ಬಸವತತ್ವದಡಿಯಲ್ಲಿ ಅಪ್ಪಿಕೊಂಡರೆ ಬಸವಧರ್ಮ ವಿಶ್ವಮಟ್ಟಕ್ಕೇರುವುದು, ಆದರೆ ಅದು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶರಣ ವಸಂತಕುಮಾರ, ಪಂಪಣ್ಣ ಶರಣರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶರಣ ದಿಲೀಪಕುಮಾರ, ಭೀಮಣ್ಣ, ತಿಪ್ಪಣ್ಣ ಗುಗ್ಗರಿ, ರುದ್ರಯ್ಯ ಸ್ವಾಮಿ, ಅಶೋಕ ಹಡಪದ, ಮೌನಪ್ಪ ತಾತಾ, ರಮೇಶ, ಸಿದ್ಧಿ ಆಂಜನಪ್ಪ, ವೀರಭದ್ರಪ್ಪ, ಕೆಂಚಪ್ಪ, ರಂಗಪ್ಪ, ಲೋಕಪ್ಪ, ರುದ್ರಪ್ಪ, ರೇಣುಕಮ್ಮ, ತಾಯಮ್ಮ, ಭಾಗ್ಯಮ್ಮ, ಗಂಗಾಂಬಿಕೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶರಣ ಚನ್ನಬಸಪ್ಪ ಸ್ವಾಗತಿಸಿದರೆ, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವೀರೇಶ ರೆಡ್ಡಿ ಗಂಗಾವತಿ ನಿರೂಪಿಸಿದರು, ಶರಣ ಪಾಮಯ್ಯ ವಂದಿಸಿದರು.