‘ಮೊದಲ ಬಾರಿಗೆ’ ಬಸವಶಕ್ತಿಯ ರುಚಿ ನೋಡಿದ ಕನ್ನೇರಿ ಸ್ವಾಮಿ, iLYF
ಬೆಂಗಳೂರು
ಕನ್ನೇರಿ ಸ್ವಾಮಿ ಮತ್ತು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF)ವಿರುದ್ಧ ಬಸವ ಸಂಘಟನೆಗಳ ಆಕ್ರೋಶ ಇಂದು ಮಧ್ಯಾಹ್ನ ಸ್ಪೋಟವಾಯಿತು.
ನಗರದ ಅರಮನೆ ಮೈದಾನದಲ್ಲಿ ಕನ್ನೇರಿ ಸ್ವಾಮಿ ಮಾತನಾಡಲು ಶುರುಮಾಡುತ್ತಿದ್ದ ಹಾಗೆಯೇ ಸಭಾಂಗಣದಲ್ಲಿದ್ದ ಬಸವಭಕ್ತರು ಅವರ ಭಾಷಣವನ್ನು 15 ನಿಮಿಷ ನಿಲ್ಲಿಸಿದರು.

ಎದ್ದು ನಿಂತು, ಘೋಷಣೆ ಕೂಗಿ, ಕೋಲಾಹಲವೆಬ್ಬಿಸಿದ ಬಸವಭಕ್ತರನ್ನು ಹೊರಕಳಿಸಲು ಆಯೋಜಕರು ಬೌನ್ಸರ್ ಗಳ ಸಹಾಯ ಪಡೆಯಬೇಕಾಯಿತು.
ಲಿಂಗಾಯತರನ್ನು ದೂಷಿಸಿರುವ ಕನ್ನೇರಿ ಸ್ವಾಮಿಯನ್ನು ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ’ಕ್ಕೆ ಕರೆದದ್ದು ಗುರುವಾರದಿಂದಲೇ ಬಸವಭಕ್ತರ ಆಕ್ರೋಶಕ್ಕೆ ಗುರಿಯಾಗಿತ್ತು.
ಹಲವಾರು ಬಸವ ಸಂಘಟನೆಗಳ ಸುಮಾರು 60 ಕಾರ್ಯಕರ್ತರು ಸಮಾವೇಶಕ್ಕೆ ಹೋಗಿ ಪ್ರತಿಭಟಿಸಿದರು. ಸುಮಾರು 300 ಜನರಿದ್ದ ಸಭಾಂಗಣದಲ್ಲಿ ಬಸವಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ಹಲವಾರು ಕಡೆ ಕುಳಿತಿದ್ದವರು ಕನ್ನೇರಿ ಸ್ವಾಮಿಯ ವಿರುದ್ಧ ಒಮ್ಮೆಗೆ ಎದ್ದು ಪ್ರತಿಭಟಿಸಿದರು.
25 ವಯಸ್ಸಿನಿಂದ 86 ವರ್ಷದ ಬಸವ ಕಾರ್ಯಕರ್ತರು, ಹಲವಾರು ಮಹಿಳೆಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


ಇಂದಿನ ಘಟನೆಗಳು
- * ತಡವಾಗಿ ಶುರುವಾದ ಕಾರ್ಯಕ್ರಮದಲ್ಲಿ ಮೊದಲು ಸಂಘಟಕರ ನೆಚ್ಚಿನ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ ಸುಮಾರು 1.15ಕ್ಕೆ ಭಾಷಣ ಮುಗಿಸಿ ಹೊರಟರು.
- * ನಂತರ ನಿರೂಪಕಿ ಒಂದು ಸಂಸ್ಕೃತ ಶ್ಲೋಕ ಹೇಳಿ, ಕೆಳಗೆ VIP ಆಸನದಲ್ಲಿ ಕುಳಿತ್ತಿದ್ದ ಕನ್ನೇರಿ ಸ್ವಾಮಿಯನ್ನು ಆಹ್ವಾನಿಸಿದರು. ಅವರ ಜೊತೆಯಿದ್ದ ಮರಿ ಸ್ವಾಮಿಗಳ ಜಯಘೋಷದೊಂದಿಗೆ ಕನ್ನೇರಿ ಸ್ವಾಮಿ ವೇದಿಕೆ ಏರಿದರು.
- * ಮೈಕ್ ಮುಂದೆ ನಿಂತು ಭಾಷಣ ಶುರು ಮಾಡುತ್ತಿದ್ದಂತೆಯೇ ಕೆಲವು ಕಾರ್ಯಕರ್ತರು ಎದ್ದು ನಿಂತು ಕನ್ನೇರಿ ಸ್ವಾಮಿಗೆ ಧಿಕ್ಕಾರ ಕೂಗಿದರು.
- * ತಕ್ಷಣ ಸಂಘಟಕರು ಬಂದು ಬಸವ ಕಾರ್ಯಕರ್ತರ ಜೊತೆ ಘರ್ಷಣೆಗೆ ಇಳಿದರು. ಆದರೆ ಹಲವಾರು ಕಡೆ ಕುಳಿತಿದ್ದ ಬಸವ ಕಾರ್ಯಕರ್ತರು ಎದ್ದು ಘೋಷಣೆ ಕೂಗಲು ಪ್ರಾರಂಭಿಸಿದ್ದು ಅವರಿಗೆ ಗಲಿಬಿಲಿ ಉಂಟು ಮಾಡಿತು. ಅವರು ಬಸವ ಕಾರ್ಯಕರ್ತರ ಜೊತೆ ವಾದಕ್ಕಿಳಿದರು, ಬ್ಯಾನರ್ ಗಳನ್ನು ಕಿತ್ತು ಹರಿದರು.
- * ಬೌನ್ಸರ್ ಗಳ ಸಹಾಯದಿಂದ ಒಬ್ಬೊಬ್ಬ ಕಾರ್ಯಕರ್ತರನ್ನು ಹರಸಾಹಸದಿಂದ ಹೊರ ಹಾಕಿದರೂ, ಘೋಷಣೆ, ಘರ್ಷಣೆ ಸಭಾಂಗಣದ ಮುಂದಿದ್ದ ಕಾರಿಡಾರ್ ನಲ್ಲಿ ಮುಂದುವರೆಯಿತು.
- * ಅಲ್ಲಿಂದಲೂ ಸಂಘಟಕರು ಶ್ರಮಪಟ್ಟು ಕಾರ್ಯಕರ್ತರನ್ನು ಕಟ್ಟಡದ ಹೊರಕಳಿಸಿದರೂ ಘೋಷಣೆ, ಘರ್ಷಣೆ ಮುಂದುವರೆಯಿತು. ಪೊಲೀಸರು ಬಸವ ಕಾರ್ಯಕರ್ತರ ಮತ್ತು ಆಯೋಜಕರ ನಡುವೆ ಘರ್ಷಣೆ ತಪ್ಪಿಸಲು ಸಾಹಸಪಟ್ಟರು.
- * ಪೊಲೀಸರು ಆಯೋಜಕರನ್ನು ಒಳಗೆ ಕಳಿಸಿದ ನಂತರ, ಬಸವ ಕಾರ್ಯಕರ್ತರು ಕಟ್ಟಡದ ಮುಂದೆ ಘೋಷಣೆ ಕೂಗಿ, ಗ್ರೂಪ್ ಫೋಟೋ ತೆಗೆಸಿಕೊಂಡು ನಿರ್ಗಮಿಸಿದರು.
ಕನ್ನೇರಿ ಸ್ವಾಮಿ ಸುತ್ತ ಕಾವಲು
ಪ್ರತಿಭಟನೆ ಶುರುವಾಗುತ್ತಿದ್ದ ಹಾಗೆಯೇ ಕನ್ನೇರಿ ಸ್ವಾಮಿ ಮೌನವಾದರು. ಅವರ ಸುತ್ತ ಬೌನ್ಸರ್ ಗಳು ಹೋಗಿ ರಕ್ಷಣೆಗೆ ನಿಂತ ಮೇಲೆ ಮಾತು ಮುಂದುವರೆಸಿದರು.
“ನಾನೊಮ್ಮೆ ಯಾವಾಗೋ ಹೇಳಿದ್ದೆ ಇವ್ರು ತಾಲಿಬಾನಿಗಳು ಅಂಥ. ನನಗೆ ಪುರಾವೆ ಕೊಡ್ಲಿಕ್ಕೆ ಆಗಿರ್ಲಿಲ್ಲ. ಇವತ್ತು ಸಿಕ್ತು ಬಹಳ ಒಳ್ಳೇದಾಯ್ತು. ಬಸವಣ್ಣವರ ಹೆಸರ ಹೇಳಕೊಂಡು ಇವರು ಮಾಡಕತ್ತಿದ್ದು ನೋಡಿದ್ರ ಬಹಳ ನಾಚಿಕೆ ಬರ್ತದೆ,” ಎಂದು ಹೇಳಿದರು.


ಪ್ರತಿಭಟನೆಗೆ ಸಿದ್ದವಾಗಿದ್ದ ಆಯೋಜಕರು
ಗುರುವಾರ ರಾತ್ರಿ ಪ್ರತಿಭಟನೆಯ ಬಗ್ಗೆ ಬಸವ ಸಂಘಟನೆಗಳು ನಡೆಸಿದ ಗೂಗಲ್ ಮೀಟ್ ನಲ್ಲಿ iLYFನ ಕೆಲವರು ಭಾಗವಹಿಸಿದ್ದರು. “ಕರ್ನಾಟಕದಲ್ಲಿ ಬಸವ ಭಕ್ತರು ಯಾವುದೇ ಕೆಲಸವನ್ನು ಮುಚ್ಚು ಮರೆಯಿಂದ ಮಾಡುವ ಅಗತ್ಯವಿಲ್ಲವೆಂದು ಗೂಗಲ್ ಮೀಟಿನಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿತ್ತು,” ಎಂದು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೋಂಡಿ ಹೇಳಿದರು.
ಇಂದಿನ ಪ್ರತಿಭಟನೆ ತಡೆಯಲು ಆಯೋಜಕರು ಬೌನ್ಸರ್ ಗಳನ್ನು ಕರೆಸಿ ಅವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿದ್ದರು. ಸಭಾಂಗಣ ತುಂಬಿದೆ ಎಂದು ಹೇಳಿ ಹಲವಾರು ಬಸವ ಕಾರ್ಯಕರ್ತರನ್ನು ಒಳಗೆ ಬಿಡಲಿಲ್ಲ. ರಾಷ್ಟ್ರೀಯ ಬಸವ ದಳದ ಕೆಲವು ಶರಣೆಯರು ಹೊರಗೆಯೇ ಕುಳಿತ್ತಿದ್ದು ಕಂಡು ಬಂದಿತು.
“ಆಯೋಜಕರು ಸಿದ್ಧವಾಗಿದ್ದರೂ ಪ್ರತಿಭಟನೆ ಈ ಪ್ರಮಾಣದಲ್ಲಿ ನಡೆಯುತ್ತದೆ ಎಂದು ಅವರು ಊಹಿಸಿರಲಿಲ್ಲ ಎಂದು ಅನಿಸುತ್ತದೆ. ಅವರು ನಾವು ಸೂಜಿಯಿಂದ ಚುಚ್ಚಬಹುದೆಂದು ಅಂದುಕೊಂಡಿದ್ದರು. ನಾವು ದಬ್ಬಳದಿಂದ ಚುಚ್ಚಿ ಬಂದೆವು,” ಎಂದು ವಿಶ್ವನಾಥ್ ಪಾಟೀಲ ಹೇಳಿದರು.
ಒಂದೇ ರಾತ್ರಿಯಲ್ಲಿ ಸಂಘಟನೆಯಾದ ಬಸವ ಕಾರ್ಯಕತರು
ಒಂದೇ ರಾತ್ರಿಯಲ್ಲಿ ಬಸವ ಕಾರ್ಯಕತರು ಸಂಘಟನೆಯಾಗಿದ್ದು ಪ್ರತಿಭಟನೆಯ ವಿಶೇಷವಾಗಿತ್ತು. ಕನ್ನೇರಿ ಸ್ವಾಮಿಯನ್ನು ಸಮಾವೇಶಕ್ಕೆ ಕರೆದಿದ್ದು ಬುಧವಾರ ರಾತ್ರಿ ಬಸವ ಸಂಘಟನೆಗಳ ಗಮನಕ್ಕೆ ಬಂದಿತು.
ಗುರುವಾರ ತಮ್ಮ ತಮ್ಮಲ್ಲೇ ಚರ್ಚೆ ಮಾಡಿಕೊಂಡು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಂಜೆ ಗೂಗಲ್ ಮೀಟ್ ಮಾಡಿ ಪ್ರತಿಭಟನೆಗೆ ಕರೆ ಕೊಟ್ಟರು. ಈ ನಡುವೆ ಪೊಲೀಸ್ ಕಮಿಷನರ್ ಅವರಿಗೆ ಕನ್ನೇರಿ ಸ್ವಾಮಿಯನ್ನು ನಿರ್ಬಂಧಿಸುವ ಮನವಿ ಕೊಡುವ, ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸುವ ಕೆಲಸವೂ ನಡೆಯಿತು.
“ಈ ವೇಗದಲ್ಲಿ, ಈ ಪ್ರಮಾಣದಲ್ಲಿ ಎಂದೂ ಪ್ರತಿಭಟನೆ ನಡೆದಿರಲಿಲ್ಲ. ರಾಜಧಾನಿಯಲ್ಲಿ ಇದು ಇತಿಹಾಸ. ಇವರು ಇಟ್ಟಿಗೆ ಹೊರುವ ಲಿಂಗಾಯತರಲ್ಲ,” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಚಿಂತಕ ಟಿ.ಆರ್. ಚಂದ್ರಶೇಖರ ಹೇಳಿದರು.
“ಇಷ್ಟು ಜನ ಒಂದೇ ರಾತ್ರಿಯಲ್ಲಿ ಸೇರಿದರು. ಹೆಚ್ಚಿನ ಸಮಯವಿದ್ದಿದ್ದರೆ ಅಥವಾ ಶನಿವಾರ, ಭಾನುವಾರ ಪ್ರತಿಭಟನೆ ನಡೆದಿದ್ದರೆ ಸಭಾಂಗಣದಲ್ಲಿ ನಾವೇ ಹೆಚ್ಚು ಇರುತ್ತಿದ್ದೆವು,” ಎಂದು ರಾಷ್ಟ್ರೀಯ ಬಸವ ದಳದ ಎನ್. ಚಂದ್ರಮೌಳಿ ಹೇಳಿದರು.


ಆಯೋಜಕರ ಜೊತೆ ವಾಗ್ವಾದ, ಘರ್ಷಣೆ
ಆಯೋಜಕರ ಮತ್ತು ಬಸವ ಸಂಘಟನೆಗಳ ನಡುವೆ ಮೂರು ಕಡೆ ಘರ್ಷಣೆಯಾಯಿತು. ಮೊದಲು ಸಭಾಂಗಣದಲ್ಲಿ, ನಂತರ ಮುಂದಿದ್ದ ಕಾರಿಡಾರ್ ನಲ್ಲಿ ಕೊನೆಗೆ ಕಟ್ಟಡದ ಹೊರಗೆ.
“ಕೋಟ್ಯಂತರ ರೂಪಾಯಿ ಹಾಕಿ ಇದನ್ನು ಮಾಡುತ್ತಿದ್ದೇವೆ, ಇದು ಖಾಸಗಿ ಕಾರ್ಯಕ್ರಮ, ಅಡ್ಡ ಬರಬೇಡಿ ನಾವೂ ಲಿಂಗಾಯತರೇ,” ಎಂದು ಆಯೋಜಕರು ಹೇಳಿದರು.
“ನೀವು ಲಿಂಗಾಯತರಾಗಿದ್ದರೆ ಬಸವ ದ್ರೋಹಿ ಕನ್ನೇರಿ ಸ್ವಾಮಿಯನ್ನು ಯಾಕೆ ಕರೆಸಿದ್ದೀರಾ? ಲಿಂಗಾಯತ ಪೂಜ್ಯರನ್ನು ನಿಂದಿಸಿರುವುದು, ಬಸವ ತಾಲಿಬಾನ್ ಎಂದು ಕರೆದಿರುವುದು ನಿಮಗೆ ಗೊತ್ತಿಲ್ಲವೇ,” ಎಂದು ಅವರಿಗೆ ಪ್ರಶ್ನಿಸಲಾಯಿತು.
“ಬಸವಣ್ಣನವರಿಗೆ ಕೊಂಡಿ ಮಂಚಣ್ಣ ಮಾಡಿದ ದ್ರೋಹ ಈ iLYFನಂತವರು ಲಿಂಗಾಯತ ಸಮಾಜಕ್ಕೆ ಮಾಡುತ್ತಿದ್ದಾರೆ. ಲಿಂಗಾಯತರ ಹೆಸರಿನಲ್ಲಿ ದಂಧೆ ಮಾಡುತ್ತ ಲಿಂಗಾಯತ ವಿರೋಧಿ ಕನ್ನೇರಿ ಸ್ವಾಮಿ, ಅಜಿತ್ ಹನುಮ್ಮಕ್ಕನವರನ್ನು ಕರೆಸುತ್ತಾರೆ. ಲಿಂಗಾಯತರ ಹೆಸರಿನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಇಂತವರ ಬಗ್ಗೆ ಜಾಗೃತಿ ಮೂಡಿಸಲು ಸಭೆ ಸೇರುತ್ತಿದ್ದೇವೆ,” ಎಂದು ಎಚ್. ಸಿ. ಉಮೇಶ ಹೇಳಿದರು.

ಇದು ಸಂಘರ್ಷದ ಶುರು
ಪ್ರತಿಭಟನೆಯಲ್ಲಿ ಹಲವಾರು ಬಸವಭಕ್ತರು ಆಕ್ರೋಶದಿಂದ ಮಾತನಾಡಿದರು.
“ಇನ್ನು ಮುಂದೆ ಕನ್ನೇರಿ ಸ್ವಾಮಿ ರಾಜ್ಯದಲ್ಲಿ ಎಲ್ಲೇ ಬಂದರೂ ಇಂಥ ಪ್ರತಿಭಟನೆ ಎದುರಿಸಬೇಕಾಗುತ್ತದೆ,” ಎಂದು ಶಾಂತಕುಮಾರ ಹರ್ಲಾಪುರ ಹೇಳಿದರು.
“ಈ ಬಸವಪ್ರಜ್ಞೆ ನಮ್ಮ ಸಮಾಜದಲ್ಲಿ ಮುಂಚೆಯಿರಲಿಲ್ಲ. ಆದರೆ ಇದು ಸಾಲದು. ನಮ್ಮ ಸಂಘಟನೆ, ರಾಜಕೀಯ ಶಕ್ತಿ ಬೇಗ ಬೆಳೆಯಬೇಕು. ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಬೇಗ ಶುರು ಮಾಡಬೇಕು,” ಎಂದು ಶಿವಕುಮಾರ ಸ್ವಾಮಿ ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಘಟನೆಗಳು
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ರಾಷ್ಟ್ರೀಯ ವೀರ ಗಣಾಚಾರಿ ಪಡೆ, ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಸಂಘಟನೆ, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ಸಿದ್ದಗಂಗಾ ಚಾರಿಟಬಲ್ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರ ವೇದಿಕೆ, ಕುವೆಂಪು ಹೋರಾಟ ಸಮಿತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಮ್ಮ ಭಾಷಣ ಮುಗಿಸಿ ಹೊರಟಿದ್ದ ಅಜಿತ್ ಹನುಮಕ್ಕನವರ್ ಬಸವ ಸಂಘಟನೆಗಳ ಘೋಷಣೆ ಕೇಳಿ ಹಿಂತಿರುಗಿ ಬಂದು ದೂರದಿಂದ ಪ್ರತಿಭಟನೆ ನೋಡುತ್ತಾ ನಿಂತಿದ್ದು ದಿನದ ಮತ್ತೊಂದು ವಿಶೇಷವಾಗಿತ್ತು.

ಬಸವ ದಳದ ರಾಜಕೀಯ ಶಕ್ತಿ ಕೇವಲ ಲಿಂಗಾಯತರ ವಿರುದ್ಧವೇ
ಇಂತಹ ಪ್ರತಿಭಟನೆಗಳನ್ನು ರಾಜ್ಯದ್ಯಂತ ಕನ್ನೇರಿ ಸ್ವಾಮೀಜಿ ಭಾಗವಹಿಸುವ ಎಲ್ಲಾ ಸಭೆಗಳಲ್ಲೂ ಮಾಡಬೇಕು. ಅವರು ಕ್ಷಮೆ ಕೇಳುವವರೆಗೆ ಮುಂದುವರಿಸಬೇಕು.
ಕನ್ನೇರಿ ಸ್ವಾಮಿಗೆ ಧಿಕ್ಕರಿಸಿದ ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿಗಳು 🙏🙏
Good coverage. Keep it up
Yrs
ILYF ಒಂಥರಾ ವೀರಶೈವ ಮಹಾಸಭಾ ಇದ್ದಂತೆ! ತಮಗೆ ಇಷ್ಟವಿಲ್ಲದಿದ್ದರೂ ಬೇಕಂತಲೇ ಈ ಎರಡೂ ಸಂಸ್ಥೆಗಳು ಲಿಂಗಾಯತವನ್ನು ಫೆವಿಕಾಲ್ ನಂತೆ ಅಂಟಿಸಿಕೊಂಡು ಒದ್ದಾಡುತ್ತಿವೆ! ಒಂದೋ ವೀರಶೈವಾಗಿ ಉಳಿಯಬೇಕು ಇಲ್ಲವೇ ಲಿಂಗಾಯತ ಧರ್ಮದಲ್ಲಿನ ಕಾಯಕ ಪಂಗಡಗಳಲ್ಲೊಂದಾಗಿ ಬಸವನನ್ನು ಒಪ್ಪಿ ಅಪ್ಪಿಕೊಂಡು ಜೀವ ಉಳಿಸಿಕೊಳ್ಳಬೇಕು! ವಿಜಯ ಸಂಕೇಶ್ವರ, ಯಡ್ಡಿ ಮರಿ, ಕೆಂಚಾಂಬಗಳು ಇನ್ನು ಮುಂದಾದರೂ ಇಂತಹ ಕುಚೋದ್ಯಗಳಲ್ಲಿ ತೊಡಗಬಾರದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ಉಳಿಯಿತು!
ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು