ದೇಶೀ ಹಸುಗಳ ಮೇಲೆ ಅಂಜಿಕೆಯಿಲ್ಲದೆ ಕಥೆ ಕಟ್ಟುವ ಕನ್ನೇರಿ ಶ್ರೀ

ದೇಶಿ ಹಸು ಶ್ರೇಷ್ಟ, ಮಿಶ್ರತಳಿಗಳು ಕನಿಷ್ಟ ಎನ್ನುವ ಕನ್ನೇರಿ ಶ್ರೀಗಳ ಎಲ್ಲಾ ವಾದಗಳೂ ಅವೈಜ್ಞಾನಿಕ. ಪ್ರಾಣಿಗಳ ನಡುವೆ ಜಾತಿ ಭೇದ ಬೇಡ.

ಶಿವಮೊಗ್ಗ

ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ವಾಹಿನಿಯಲ್ಲಿ ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವೀಕ್ಷಕರಾದ ವಿಶ್ವನಾಥ ಅಣೇಕಟ್ಟೆ ಅವರು ದೇಶಿ ಹಸು ಶ್ರೇಷ್ಟ ಮತ್ತು ಮಿಶ್ರತಳಿಗಳು ಕನಿಷ್ಟ ಎಂದು ಹೇಳಲಾಗುತ್ತಿದೆ. ಮಿಶ್ರತಳಿಗಳು ಭಾರತದ ಗ್ರಾಮೀಣ ಭಾಗದ ಆರ್ಥಿಕತೆಯ ಬೆನ್ನೆಲುಬಾದ ಹೈನುಗಾರಿಕೆಯ ಪ್ರಮುಖ ಭಾಗ ಅವು ಇಲ್ಲಿಯ ಹಸುಗಳಿಗೆ ಹುಟ್ಟಿದ ಕೂಸುಗಳು. ಅವುಗಳಲ್ಲೇಕೆ ಬೇಧ ಬಾವ ಮಾಡುತ್ತೀರಿ?  ಎಂದು ಪ್ರಶ್ನಿಸಿದರು.

ಅದಕ್ಕೆ ಅತ್ಯಂತ ತಜ್ಞರ ರೀತಿಯಲ್ಲಿ ಉತ್ತರಿಸುತ್ತಾ ಸ್ವಾಮಿಜಿಗಳು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

1) ಇವುಗಳ ದೇಹ ರಚನೆಯೇ ಭಿನ್ನ. ಎರಡರ ದೇಹದಲ್ಲಿನ ಬ್ಯಾಕ್ಟಿರಿಯಾಗಳು, ಅವುಗಳ ಉತ್ಪನ್ನಗಳು ಭಿನ್ನ. ಯಾವುದು ೩೬೦ ಡಿಗ್ರೀಯಲ್ಲಿ ಬಾಲ ತಿರುಗಿಸುತ್ತದೆ ಮತ್ತು ಜರ್ಸಿ ೧೮೦ ಡಿಗ್ರ‍ಿ ತಿರುಗಿಸುವುದರಿಂದ ಅದರ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ.

ದೇಶಿ ಜಾನುವಾರು ತಳಿಗಳು ತಮ್ಮ ಬಾಲವನ್ನು 360 ಡಿಗ್ರಿಗಳಷ್ಟು ತಿರುಗಿಸುತ್ತವೆ ಮತ್ತು  ಆದರೆ ಜರ್ಸಿ ಮತ್ತು  ಹೆಚ್ ಎಫ್  ಕೇವಲ 180 ಡಿಗ್ರಿಗಳನ್ನು ತಿರುಗಿಸುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಅಂಗರಚನಾಶಾಸ್ತ್ರದ ಪ್ರಕಾರ ಯಾಂತ್ರಿಕವಾಗಿ ಅಸಾಧ್ಯ. 

ಸ್ಥಳೀಯ ಜಾನುವಾರುಗಳು ಹೆಚ್ಚು ಹೊಂದಿಕೊಳ್ಳುವ ಮತ್ತು ಉದ್ದವಾದ ಬಾಲಗಳನ್ನು ಹೊಂದಿದ್ದರೂ 360-ಡಿಗ್ರಿ ತಿರುಗುವಿಕೆಯ ಪರಿಕಲ್ಪನೆಯು ಅತ್ಯಂತ ತಪ್ಪಾದ ವಿಚಾರ. ಹಸುಗಳಲ್ಲಿನ ಬಾಲದಲ್ಲಿ  ಕಶೇರುಖಂಡಗಳ ಸಂಖ್ಯೆ ಸಾಮಾನ್ಯವಾಗಿ 18 ರಿಂದ 20 ರವರೆಗೆ ಇರುತ್ತದೆ. ಇವುಗಳ ರಚನೆಯನ್ನು ಗಮನಿಸಿದರೆ ಯಾವುದೇ ಹಸು ೩೬೦ ಡಿಗ್ರಿಯಲ್ಲಿ ಬಾಲ ತಿರುಗಿಸಲು ಸಾಧ್ಯವೇ ಇಲ್ಲ. ಆದರೂ ಸಹ ಸ್ವಾಮಿಗಳು ಹೇಳುತ್ತಾರೆ. ಕೇಳಬೇಕಲ್ಲ?.

2) ಜರ್ಸಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ಗೊತ್ತಿಲ್ಲ. ಆದರೆ ಜವಾರಿ  ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ತಿಳಿದಿರುತ್ತದೆ.

ಸ್ವಾಮಿಗಳು ಮುಂದುವರೆಸುತ್ತಾ ಜರ್ಸಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ಗೊತ್ತಿಲ್ಲ. ಅವುಗಳ ಮುಂದೆ ಹಿಂಡಿಯ ಚೀಲ ಇಟ್ಟರೆ ಸಿಕ್ಕಪಟ್ಟೆ ತಿಂದು ಹೊಟ್ಟೆ ಉಬ್ಬಿ ಬಿದ್ದು ಬಿಡುತ್ತವೆ. ಆದರೆ ಜವಾರಿ  ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ತಿಳಿದಿರುತ್ತದೆ. 

ಇದೂ ಸಹ ತಪ್ಪೇ. ಜರ್ಸಿ ಮತ್ತು ಹೆಚ್ ಆಕಳುಗಳು ಹೆಚ್ಚಿನ ಹಾಲನ್ನು ಉತ್ಪಾದಿಸುವುದರಿಂದ ಅವುಗಳ ದೇಹದ ಆಹಾರದ ಅವಶ್ಯಕತೆಯೂ ಜಾಸ್ತಿ ಇರುತ್ತದೆ. ಜವಾರಿ ಆಕಳುಗಳು ಕೊಡುವುದೇ ಕಡಿಮೆ ಹಾಲು ಆಗಿರುವುದರಿಂದ ಮತ್ತು ಅವುಗಳ ಮೆಲುಕು ಚೀಲದ ಗಾತ್ರವೂ ಸಹ ಚಿಕ್ಕದಾಗಿರುವುದರಿಂದ ಅವು ಕಡಿಮೆ ತಿನ್ನುತ್ತವೆ. ಇದರಲ್ಲಿ ಅಂತಹದ್ದೇನಿದೆ ವಿಶೇಷ ಕಾಣಿಸಿತೋ ಮಾಹಾಮಹಿಮರಿಗೆ?

3) ಜವಾರಿ  ದನ ದನ ಚುರುಕು. ಜರ್ಸಿ ಆಕಳ ಸೆಗಣಿಯನ್ನು ಒಂದೇ ಕೈಯಿಂದ ತೆಗೆಯಲು ಸಾಧ್ಯವಿಲ್ಲ. ಜವಾರಿ ಆಕಳ ಸಗಣಿಯನ್ನು ಒಂದೇ ಕೈಯಿಂದ ತೆಗೆಯಬಹುದು. ಜವಾರಿ ಆಕಳುಗಳಲ್ಲಿ ಉತ್ತಮ ಬ್ಯಾಕ್ಟಿರಿಯಾಗಳಿದ್ದರೆ ಮಿಶ್ರತಳಿಯ ಆಕಳುಗಳಲ್ಲಿ ಅಪಾಯಕಾರಿ ಬ್ಯಾಕ್ಟಿರಿಯಾಗಳಿವೆ. ಜವಾರಿ ಆಕಳುಗಳ ಆಕಳುಗಳಲ್ಲಿ ಸುವರ್ಣಕ್ಷಾರ ಇದೆ. ಸೂರ್ಯಕೇತು ನಾಡಿ ಕಾಸ್ಮಿಕ್ ಶಕ್ತಿಯನ್ನು ಸುವರ್ಣಕ್ಷಾರವಾಗಿ ಪರಿವರ್ತಿಸಿ ಹಾಲಿನಲ್ಲಿ, ಮೂತ್ರದಲ್ಲಿ ಬಂದು ಅದು ದಿವ್ಯೌಷಧಿಯಾಗುತ್ತದೆ. ಬಂಗಾರ ವರ್ಣದ ಸುವರ್ಣಕ್ಷಾತ್ರವನ್ನು ರಾಸಾಯನಿಕ ಬಳಸಿ ಪ್ರತ್ಯೇಕಿಸಬಹುದು.

ಇದನ್ನೆಲ್ಲಾ ಹೇಗೆ ಸ್ವಾಮಿಗಳು ಅರಿತುಕೊಂಡರೋ ತಿಳಿದಿಲ್ಲ. ಸಗಣಿಯು ಆಯಾ ಹಸುವು ತಿನ್ನುವ ಆಹಾರ ಮತ್ತು ಅದರ ದೇಹದ ಪೃಕೃತಿಯಿಂದ ನಿರ್ಧಾರವಾಗುತ್ತದೆ. ಅದನ್ನು ಮಲವೆಂದು ಕರೆಯಬಹುದು. ವಿವಿಧ ಪ್ರಾಣಿಗಳಲ್ಲಿ ಇದರ ಭೌತಿಕ ಮತ್ತು ರಾಸಾಯನಿಕ ಗುಣಗಳು ನಿರ್ಧಾರವಾಗುತ್ತವೆ. ಒಂದು ತಳಿಯಿಂದ ಮತ್ತೊಂದು ತಳಿಗೆ ಇದು ವ್ಯತ್ಯಾಸವಾಗುವುದು ಸಹಜ. ಆದರೆ ಇದರಿಂದ ಅಂತಹ ಗುರುತರ ಬದಲಾವಣೆ ಇಲ್ಲ. ಎಲ್ಲಾ ಸಗಣಿಯಲ್ಲೂ ಕ್ಲಾಸ್ಟ್ರಿಡಿಯಂ, ಇ ಕೊಲೈ, ಸಾಲ್ಮೊನೆಲ್ಲಾ, ಶಿಗೆಲ್ಲಾ, ಕ್ಷಯ, ಲಿಸ್ಟಿರಿಯಾ ಇತ್ಯಾದಿ ಅಪಾಯಕಾರಿ ಬ್ಯಾಕ್ಟಿರಿಯಾಗಳು ಮತ್ತು ಕೋಟಿಗಟ್ಟಲೆ  ಉಪಕಾರಿ ಬ್ಯಾಕ್ಟಿರಿಯಾಗಳು ಎಲ್ಲಾ ಸಗಣಿಯಲ್ಲಿಯೂ ಇವೆ. 

ಇದರಿಂದ ಸಗಣಿಯ ಮಹತ್ವ ಏನೂ ಬದಲಾಗುವುದಿಲ್ಲ. ಕಾಡಸಿದ್ದೇಶ್ವರರು ಉಲ್ಲೇಖಿಸದ ವಿಷಯವೆಂದರೆ ಎಮ್ಮೆಯ ಸಗಣಿ ಜೈವಿಕ ಅನಿಲದ ಉತ್ಪಾದನೆಗೆ ಮತ್ತು  ಎಲ್ಲವುಗಳಿಗಿಂತ ಉತ್ತಮವಾದ ಸಸಾರಜನಕದ ಸತ್ವ, ಉತ್ತಮ ಬ್ಯಾಕ್ಟಿರಿಯಾಗಳು ಇವೆ ಎಂಬುದು ಸಾಬೀತಾಗಿದೆ. ಸುವರ್ಣಕ್ಷಾರ, ಸೂರ್ಯಕೇತು ನಾಡಿ, ಕಾಸ್ಮಿಕ್ ಶಕ್ತಿ ಇತ್ಯಾದಿಗಳೆಲ್ಲಾ ಕಾಲ್ಪನಿಕವಾದ ಮತ್ತು ಯಾವುದೇ ಆಧಾರವಿಲ್ಲದ ಹಳಸಲು ಶಬ್ಧಗಳು. 

4) ಜರ್ಸಿ ಹಸುವಿನ ಹಾಲು ಎ ೧ ಮತ್ತು ದೇಶಿ ಹಸುವಿನ ಹಾಲು ಎ೨. ಜರ್ಸಿ ಹಸುವಿನ ಹಾಲಿನಲ್ಲಿ ಮೋರ್ಫಿನ್ ಇದೆ, ಸಿಝೊಪ್ರೆನಿಯಾ, ಕ್ಯಾನ್ಸರ್, ರಕ್ತದೊತ್ತಡ, ಸಂಧಿವಾತ, ಬಂಜೆತನ ಹೀಗೆ ೧೨ ರೋಗವನ್ನು ಮಿಶ್ರತಳಿಗಳ ಹಾಲು ಉಂಟು ಮಾಡುತ್ತದೆ.

ಯಾವ ಆಧಾರದ ಮೇಲೆ ಈ ಆರೋಪವನ್ನು ಮಾಡುತ್ತಾರೋ ಅಥವಾ ಸಾರ್ವಜನಿಕವಾಗಿ ಇಂತಹ ಸಿದ್ಧಪಡಿಸದ ಆರೋಪ ಮಾಡುವಾಗ ಸ್ವಲ್ಪವೂ ಅಂಜಿಕೆ ಇಲ್ಲವಲ್ಲ ಎಂಬುದು ಬಹಳ ಆಶ್ಚರ್ಯ. ಇದೊಂದು ಹಳೆಯ ಮಾಸಲು ಪದ. 

ಇದಕ್ಕೆ ಈಗ ಸ್ವಲ್ಪವೂ ಬೆಲೆ ಇಲ್ಲ, ನಮ್ಮ ದೇಶದ ಮಿಶ್ರತಳಿಗಳೂ ಎಮ್ಮೆ ಸೇರಿದಂತೆ ಸೇರಿದಂತೆ ಎಲ್ಲಾ ತಳಿಗಳ ಹಾಲೂ ಎ೨. ಇದರಲ್ಲಿ ಅಂತಹ ರೋಗ ಪ್ರತಿರೋಧಕ ಗುಣ ಇಲ್ಲ  ಎಂಬುದು ಮತ್ತು ಎ೧ ಹಾಲಿನಿಂದ ರೋಗ ಬರುತ್ತದೆ ಎಂಬುದಕ್ಕೆ ಚಿಕ್ಕಾಸಿನ ಪುರಾವೆಯೂ ಇಲ್ಲ. ಅವರು ಮಾಡುವ ಒಂದು ಆರೋಪಗಳೂ ಸಿದ್ಧವಾಗಿಲ್ಲ. ಪಕ್ಕಾ ಸುಳ್ಳಿನ ಕಂತೆ. 

ಎ1 ಮತ್ತು ಎ2 ಹಾಲಿನ ಬಗ್ಗೆ ಚರ್ಚೆ ಈ ದಿನದ್ದಲ್ಲ. ಅನೇಕ ವರ್ಷಗಳಿಂದ ಸಹ ಬಹುಚರ್ಚಿತ ವಿಷಯ. ಮಿಶ್ರತಳಿಗಳಿಂದ ಬರುವ ಹಾಲು ಎ1 ಹಾಲು ಮತ್ತು ಇದನ್ನು ಕುಡಿದರೆ ತರತರದ ಕಾಯಿಲೆಗಳು ಬರುತ್ತವೆ ಎಂದು ಅನೇಕರು ವಾದಿಸಿದರು. ಎ2 ಹಾಲು ಸರ್ವಶ್ರೇಷ್ಠ. ಇದನ್ನು ಕುಡಿಯುವುದೂ ಒಂದೇ ಅಮೃತ ಕುಡಿಯುವುದೂ ಒಂದೇ ಎಂಬೆಲ್ಲಾ ವಾದಗಳ ಸರಣಿಗಳೇ ನಡೆದವು. 

ದೇಶಿ ದನಗಳ ಹಾಲಿನಲ್ಲಿ ಎ2 ಇರುತ್ತಿದ್ದು ಇದು ಅತ್ಯಂತ ಶ್ರೇಷ್ಠ ಔಷಧಿ ಗುಣಗಳನ್ನೆಲ್ಲಾ ಹೊಂದಿದೆ ಎಂಬ ನಂಬಿಕೆ ಹೊಂದಿ ಈ ತಳಿಯನ್ನು ರಕ್ಷಿಸಲು ಇದನ್ನೊಂದು ಪೂರಕವಾದ ವೈಜ್ಞಾನಿಕ ದಾಖಲೆ ಎಂಬಂತೆ ಬಳಸಲಾಯಿತು.

ಹಾಲಿನಲ್ಲಿ ಶೇ. 82 ನೀರು ಮತ್ತು ಇನ್ನುಳಿದಂತೆ ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೋಟೀನು ಇರುತ್ತದೆ. ಪ್ರೋಟಿನಿನಲ್ಲಿ ಬೀಟಾ ಕೆಸೀನ್ ಎಂಬ ಅಂಶವೇ ಪ್ರಮುಖವಾಗಿರುತ್ತದೆ. ಅದರಲ್ಲೂ ಅನೇಕ ವಿಧಗಳಿವೆ ಎಂದು ಒಂದೊ೦ದಕ್ಕೂ ವಿಜ್ಞಾನಿಗಳು ಗುರುತಿನ ಸಂಖ್ಯೆ ಕೊಡುತ್ತ ಹೋದರು. 

ಹೋಲ್ಸ್ಟೀನ್ ಮತ್ತು ಇತರ ಕೆಲವು ಹಸು ತಳಿಗಳ ಹಾಲಿನಲ್ಲಿ ಗುರುತಿಸಿದ ಬೀಟಾ ಕೆಸೀನ್ ಎ1 ಎಂದು ಹೆಸರಿಟ್ಟಿದ್ದಾಯ್ತು. ಆಫ್ರಿಕಾ, ಭಾರತೀಯ ಮೂಲದ ತಳಿಗಳ ಹಾಲಿನಲ್ಲಿರುವುದನ್ನು ಎ2 (ಎ ಟೂ) ಎಂದು ಕರೆದದ್ದಾಯಿತು.

ನ್ಯೂಜಿಲೆಂಡಿನ ಆಕ್ಲೆಂಡ್ ವಿವಿಯ ಶಿಶು ಆರೋಗ್ಯ ವಿಜ್ಞಾನಿ ಬಾಬ್ ಎಲಿಯೆಟ್ ಎಂಬಾತ 1999 ನೇ ಸಾಲಿನಲ್ಲಿ ಅಲ್ಲಿನ ಅನಿವಾಸಿ ಮಕ್ಕಳಲ್ಲಿ ಮಧುಮೇಹ ಹೆಚ್ಚಿಗೆ ಇರುವುದನ್ನು ಗಮನಿಸಿ, ಅವು ಕುಡಿಯುವ ಹಾಲಿನ ಮೂಲವನ್ನು ಹುಡುಕುತ್ತ ಹೋದ. ಎ1 ಹಾಲಿನ ಸೇವನೆಯಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಕ್ಕರೆ ಕಾಯಿಲೆ ಬರುತ್ತದೆಂದು ವಾದಿಸಿದ. 

ಅಷ್ಟೇ ಅಲ್ಲ, 20 ದೇಶಗಳಲ್ಲಿ ಹೃದ್ರೋಗ ಮತ್ತು ಸಕ್ಕರೆ ಕಾಯಿಲೆಗಳ ಹೆಚ್ಚಳಕ್ಕೂ ಎ1 ಹಾಲಿಗೂ ನೇರ ಸಂಬ೦ಧ ಇದೆಯೆಂದು ಘೋಷಿಸಿದ. ಇಲಿಗಳಿಗೆ ಎರಡೂ ಬಗೆಯ ಹಾಲುಗಳನ್ನು ಕುಡಿಸಿ, ಅವಕ್ಕೂ ಎ1 ಹಾಲು ಅಪಾಯಕಾರಿ ಎಂದು ತೋರಿಸುವ ನಾನಾ ಸಂಶೋಧನೆಗಳು ಅವನಿಂದ ಮತ್ತವನ ತಂಡದಿ೦ದ ನಡೆದವು. ಅವನ್ನೆಲ್ಲ ಆಧರಿಸಿ ಡೇರಿ ವಿಜ್ಞಾನಿ ಕೇತ್ ವುಡ್ಫೋರ್ಡ್ ಎಂಬಾತ ’ಹಾಲಿನಲ್ಲಿ ಯಮದೂತ” ಹೆಸರಿನ ಪುಸ್ತಕವನ್ನೇ ಬರೆದ. 

ಅವನನ್ನೇ ಅನುಸರಿಸಿ ಅನೇಕ ಜನ ಸಂಶೋಧಕರು ಈ ಕುರಿತು ಸಂಶೋಧನೆ ಮಾಡಿ ಎ1 ಹಾಲು ಕಾರ್ಕೋಟಕ ವಿಷ ಎಂಬ೦ತೆ ಬಿಂಬಿಸಿದರು. ಇದನ್ನೇ ಮಾನ್ಯ ಕಾಡ ಸಿದ್ದೇಶ್ವರರು ಉಲ್ಲೇಖಿಸಿದ್ದು. 

ಆದರೆ ಅವನ ವಾದಗಳನ್ನೆಲ್ಲಾ ತಲೆಬುಡ ಮಾಡುವಂತ ಅನೇಕ ಸಂಶೋಧನೆಗಳು ನಡೆದವು. 2004 ರಲ್ಲಿ ನ್ಯೂಝಿಲ್ಯಾಂಡಿನ ವಿಜ್ಞಾನಿಗಳು ಎ1 ಮತ್ತು ಎ2 ಎರಡರಿಂದಲೂ ತೊಂದರೆಯೇನಿಲ್ಲ.  ಲ್ಯಾಕ್ಟೋಸ್ ಅಲರ್ಜಿಯಿಂದ ಈ ತೊಂದರೆಯಾಗಿರಬಹುದು ಎಂದು ಸಿದ್ಧ ಮಾಡಿದರು. 

ಎ2 ಹಾಲು ಶ್ರೇಷ್ಠ ಎನ್ನುವವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಎ2  ಹಾಲಿನ ಪ್ರತಿಪಾದಕ ಸಂಘಟನೆಗಳೊಡನೆ ಸಹಯೋಗ ಹೊಂದಿದ್ದರಿಂದ ಅವರ ಸಂಶೋಧನೆ ಪಕ್ಷಪಾತದಿಂದ ಕೂಡಿದೆ ಎಂದು ತೀರ್ಮಾನಿಸಲಾಯಿತು. ಅಲ್ಲದೇ ಯಾವುದೇ ಸಂಶೋಧನೆಯಲ್ಲೂ ಸಹ ಎ2 ಹಾಲು ಮಧುಮೇಹಕ್ಕೆ, ರಕ್ತದ ಒತ್ತಡ ಕಡಿಮೆ ಮಾಡಲು ಪ್ರಯೋಜನಕ್ಕೆ ಬರುತ್ತದೆ ಎಂದು ಸಾಬೀತು ಪಡಿಸಲು ಸಾಧ್ಯವಾಗಲೇ ಇಲ್ಲ. ಹಾಗೆಯೇ ಎ1 ಸಹ ಈ ರೀತಿಯ ರೋಗಗಳನ್ನು ತರುತ್ತದೆ ಎನ್ನಲು ನಿಖರ ಸಂಶೋಧನೆಗಳು ಬರಲಿಲ್ಲ. 

ಮಾನ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳಲ್ಲಿ ವಿನಂತಿಸುವುದೇನೆಂದರೆ ನಿಮ್ಮ ಮಾತನ್ನು ಅನೇಕ ಭಕ್ತರು, ಅಭಿಮಾನಿಗಳು ಮತ್ತು ಗೋಪಾಲಕರು ಆಲಿಸುತ್ತಾರೆ. ಅದೇ ನಿಜ ಎಂದು ಅನುಸರಿಸಲೂಬಹುದು.  ದಯವಿಟ್ಟು ತಪ್ಪು ಮಾಹಿತಿ ನೀಡಬೇಡಿ. ನೀವು ಹೇಳಿದ್ದು ವೈಜ್ಞಾನಿಕವಾಗಿ ತಪ್ಪು ಎಂದರೆ ನಿಮ್ಮ ಭಕ್ತರು ನನ್ನನ್ನು ಹಿಂದೂ ವಿರೋಧಿ, ದೇಶ ವಿರೋಧಿ, ಎಡಪಂಥೀಯ  ಎಂದೆಲ್ಲಾ ಕೊಳಕು ಭಾಷೆಯಲ್ಲಿ ಜರಿಯುವುದು ಖಚಿತ. ಇದೆಲ್ಲಾ ಈಗ  ಅಭ್ಯಾಸವಾಗಿದೆ.  

ತಾವು  ಯಾವಾಗ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ನೈಜ ವೈಜ್ಞಾನಿಕ  ಮಾಹಿತಿ ನೀಡಲು ಸದಾ ಸಿದ್ಧ ಲಭ್ಯ. ಅತ್ಯಂತ ಉತ್ತಮವಾದ ನಮ್ಮದೇ ದೇಶದ, ಕಸವನ್ನು ತಿಂದು ರಸ ನೀಡುವ ಕರ್ನಾಟಕದಲ್ಲಿ ವಿನಾಶದತ್ತ ತೆರಳುತ್ತಿರುವ ಎಮ್ಮೆಯನ್ನು ಅದರ  ಮೇಲಿನ ಧಾರ್ಮಿಕ ನಿರ್ಭಂಧ ತೆಗೆದು ಅದನ್ನೂ ಸಹ ಗೋವಿನ ಮಟ್ಟದಲ್ಲಿ ಸ್ಥಾನಮಾನ ನೀಡಿದಲ್ಲಿ, ಅದರ ಸಂರಕ್ಷಣೆಗೆ ಬದ್ಧರಾಗ್ದಲ್ಲಿ ನನ್ನನ್ನೂ ಸೇರಿದಂತೆ ಅನೇಕರು ಶ್ರೀ ಕಾಡಸಿದ್ದೇಶ್ವರರ ಅಭಿಮಾನಿಗಳಾಗುವುದು ಖಚಿತ. 

ಮಠ ಮಾನ್ಯಗಳು ಸಮಾಜದ ಅವಿಭಾಜ್ಯ ಅಂಗ. ಅವರ ಮಾತಿಗೆ ಸಮಾಹದಲ್ಲಿ ಇಂದಿಗೂ ಸಹ ಗೌರವ ಇದೆ. ಈ ಕಾರಣದಿಂದ ಸಾರ್ವಜನಿಕವಾಗಿ ವಿಷಯವನ್ನು ಪ್ರಸ್ತಾವಿಸುವಾಗ ಅದು ಸತ್ಯಕ್ಕೆ ಹತ್ತಿರವಿದ್ದರೆ ಅದು ಜನಮಾನಸದಲ್ಲಿ ದೂರಗಾಮಿಯಾಗಿ ನಿಲ್ಲುತ್ತದೆ. 

Share This Article
2 Comments
  • ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳಿಗೆ ದಿ ಡಾ ರಾಜಕುಮಾರ ಅವರು ಸಂಪತ್ತಿಗೆ ಸವಾಲ ಚಾಲಚಿತ್ರದ ಹಾಡು ಕೇಳಿಸಿ ಯಾರೇ ಕೂಗಾಡಲಿ ಯಾರೇ ಹೋರಾಡಲ್ಲಿ ಎಮ್ಮೆ ನಿನಗೆ ಸಾಟಿ ಇಲ್ಲ ಮಾನವನಿಗೆ ಹಾಲು ನೀಡುವ ಪ್ರಾಣಿಗಳಲ್ಲಿ ವರ್ಣ ಬೇಧ ಮಾಡುವುದು ಸಲ್ಲದು ಹಾಲಿನಲ್ಲಿ ಪೌಷ್ಟಿಕಾಂಶ ಹೆಚ್ಚು ಕಡಿಮೆ ಇರಬಹುದು ಆದರೆ ಒಳ್ಳೆಯದು ಕೆಟ್ಟದ್ದು ಇರಲಾರದು

  • ಅನುಭವಿಸಿದ್ರೆ ಗೊತಾಗುತ್ತೆ ಪುಸ್ತಕ ದಲ್ಲಿ ಇರೋದೆಲ್ಲ ನಿಜ ಅಲ್ಲ

Leave a Reply

Your email address will not be published. Required fields are marked *

ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ