ಬಸವನಬಾಗೇವಾಡಿಗೆ ತೆರಳಲಿರುವ ಬಸವಾಭಿಮಾನಿಗಳು
ಕಲಬುರಗಿ
ಬಸವ ಅನುಯಾಯಿಗಳನ್ನು ಅವಮಾನಿಸಿರುವ ಕೋಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಆಳಂದ ಶ್ರೀ ತೋಂಟದಾರ್ಯ ಮಠದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿರುವುದನ್ನು ಸಹಿಸಿಕೊಳ್ಳದೆ ಸ್ವಾಮೀಜಿ ಅನಗತ್ಯವಾಗಿ ಟೀಕೆ ಮಾಡುತ್ತ ವಿವಾದ ಸೃಷ್ಟಿಸುತ್ತಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ವಿಶ್ವಗುರು ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ರಾಜ್ಯದ ಎಲ್ಲಾ ಕಡೆ ತಿಂಗಳ ಕಾಲ ನಡೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಿದ್ದು, ಲಕ್ಷಾಂತರ ಜನ ಭಾಗವಹಿಸಿ ಯಶಸ್ವಿಯಾಗಿರುವುದನ್ನು ಸಹಿಸದ ಇವರಿಗೆ ಅಘಾತವಾಗಿದೆ ಎಂದರು.
ದ್ವೇಷ, ಅಸೂಯೆ, ಹೊಟ್ಟೆಕಿಚ್ಚಿನಿಂದ ಅಶ್ಲೀಲ ಪದ ಬಳಸಿ ಹೇಳಿಕೆ ನೀಡಿದ್ದಾರೆ. ಇವರೊಬ್ಬ ಬರೀ ಕಾವಿ ಧರಿಸಿ ಮಠಾಧೀಶರಾಗಿದ್ದಾರೆ ಹೊರತು ಇವರಲ್ಲಿ ಯಾವುದೇ ಚಾರಿತ್ರ್ಯ ಮತ್ತು ಸಾಮಾನ್ಯ ಜ್ಞಾನವಿಲ್ಲ.

ಕಾವಿ ತ್ಯಾಗದ ಸಂಕೇತ. ಆದರೆ, ಈ ಸ್ವಾಮೀಜಿ ಕಾವಿ ಮೌಲ್ಯವನ್ನು ಹರಾಜು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ ಮತ್ತು ರವೀಂದ್ರ ಶಹಾಬಾದಿ ಮಾತನಾಡಿ, ಈ ಸ್ವಾಮೀಜಿಗಳು ಅಶ್ಲೀಲ ಭಾಷೆ ಬಳಸುವುದರ ಜೊತೆಗೆ ಸುಳ್ಳು ಪ್ರತಿಪಾದನೆ ಮಾಡಿದ್ದಾರೆ. ಬಸವ ಅನುಯಾಯಿಗಳು ಮದ್ಯಪಾನ, ಮಾಂಸಹಾರಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ. ಸಮಗ್ರ ಬಸವಾಭಿಮಾನಿಗಳು ಉದ್ರೇಕಗೊಂಡು ಅಹಿತಕರ ಘಟನೆಗಳು ನಡೆಯುವ ಮುಂಚೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಎಚ್ಚೆತ್ತುಕೊಂಡು ಈ ಸ್ವಾಮೀಜಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಸ್ವಾಮೀಜಿ ಕ್ಷಮೆಯಾಚಿಸಬೇಕು. ನೀಡಿದ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ಬಸವ ಅನುಯಾಯಿಗಳನ್ನು ಅವಮಾನಿಸಿರುವ ಈ ಸ್ವಾಮೀಜಿ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದರು.
ಶಾಂತಪ್ಪ ಪಾಟೀಲ, ರಾಜಶೇಖರ ಯಂಕಂಚಿ, ಬಸವರಾಜ ಧೂಳಾಗುಂಡಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಅಯ್ಯಣ್ಣ ನಂದಿ ಸೇರಿ ಇತರರಿದ್ದರು.
ಸ್ವಾಮೀಜಿ ಕಂಡಲ್ಲಿ ಘೇರಾವ್
ಬಸವ ಧರ್ಮ ಹಾಗೂ ಬಸವ ಅನುಯಾಯಿಗಳನ್ನು ವಿನಾಕಾರಣ ನಿಂದಿಸಿರುವ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಇದೇ 16, 17ರಂದು ಬಸವನಬಾಗೇವಾಡಿಗೆ ಆಗಮಿಸಲಿದ್ದು, ಸಮಸ್ತ ಬಸವಾಭಿಮಾನಿಗಳು ಅಲ್ಲಿಗೆ ತೆರಳಿ ಕ್ಷಮೆ ಕೋರುವಂತೆ ಸಾತ್ವಿಕವಾಗಿ ಒತ್ತಾಯಿಸಲಾಗುವುದು.
ಮಾತ್ರವಲ್ಲ ಕರ್ನಾಟಕದ ಯಾವ ಮೂಲೆಗೆ ಅವರು ಬಂದರೂ ಪ್ರತಿಭಟನೆ ನಡೆಸುವುದಾಗಿ ಬಸವಪರ ಸಂಘಟನೆಯ ಪ್ರಮುಖರು ತಿಳಿಸಿದರು.