ಬಸವಕಲ್ಯಾಣ
ಬೆಳಗಾವಿಯಲ್ಲಿ ಸನಾತನಿಗಳು ಸಭೆ ಸೇರಿ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಬೇಕೆಂದೂ ಮತ್ತು ಕನ್ನೇರಿ ಸ್ವಾಮಿಯ ನಿರ್ಬಂಧ ಖಂಡಿಸಿ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಕೊಡಬೇಕೆಂದು ಕರೆ ನೀಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.
ಕನ್ನೇರಿ ಸ್ವಾಮಿಗೆ ವಿಧಿಸಿರುವ ನಿರ್ಬಂಧವನ್ನು ಎತ್ತಿ ಹಿಡಿದ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಕನ್ನೇರಿ ಶ್ರೀಗಳಿಗೆ ‘ನೀವು ಒಳ್ಳೆಯ ಪ್ರಜೆಯಲ್ಲ’ ಎಂದು ಹೇಳಿ ಛೀಮಾರಿ ಹಾಕಿದೆ.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಕನ್ನೇರಿ ಸ್ವಾಮಿಯ ಅಂಧಭಕ್ತರು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಬೆಳಗಾವಿಯಲ್ಲಿ ಸಭೆ ಮಾಡಿ, ರಾಜ್ಯಾದ್ಯಂತ ಸಹಿ ಸಂಗ್ರಹಿಸಿ ಬಬಲೇಶ್ವರದಲ್ಲಿ ಸಮಾವೇಶ ಮಾಡಲು ಮುಂದಾಗುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಇದರಿಂದ ಗೊತ್ತಾಗುತ್ತದೆ ಕಾನೂನಿನ ಆದೇಶ ಮೀರಿ ನಡೆಯುವಷ್ಟು ಜಗಭಂಡರು ನೀವು ಅಂತ. ದೇಶದ ಕಾನೂನಿಗೆ ಬೆಲೆ ಕೊಡದಿರುವುದು, ಇದೇನಾ ನಿಮ್ಮ ಆರ್ ಎಸ್ ಎಸ್ ಸಂಸ್ಕೃತಿ.

“ಆಪ್ಯಾಯನಕ್ಕೆ ನೀಡುವೆ ಲಾಂಛನಕ್ಕೆ ಶರಣೆಂಬೆ ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದರೆ ಕೂಡಲ ಸಂಗಮದೇವ ನೀ ಸಾಕ್ಷಿಯಾಗಿ ಛೀ ಎಂಬೆ” ಎಂದು ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೇಳುವ ಹಾಗೆ ಕನ್ನೇರಿ ಸ್ವಾಮಿ ಈ ನೆಲದ ಸಂವಿಧಾನ ಮತ್ತು ಧಾರ್ಮಿಕ ಸಂವಿಧಾನ ಎರಡನ್ನು ಮೀರಿ ತಾವು ತೊಟ್ಟ ಲಾಂಛನಕ್ಕೆ ಅಪಚಾರ ಎಸಗಿದ್ದಾರೆ. ಇಂಥವರನ್ನು ಬೆಂಬಲಿಸಿ ಹೋರಾಟ ಮಾಡುವವರು ಅಪರಾಧಿಗಳ ಸ್ಥಾನದಲ್ಲಿ ನಿಂತು, ತಾವೂ ಸಹಿತ ಉತ್ತಮ ಪ್ರಜೆಗಳಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.
ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡು ಅಪರಾಧಿ ಸ್ಥಾನದಲ್ಲಿ ನಿಂತವನಿಗೆ ಬೆಂಬಲಿಸಿ ಕಾರ್ಯಕ್ರಮ ಮಾಡಲು ಮುಂದಾಗುವುದು ನ್ಯಾಯಾಲಯವನ್ನೇ ತಿರಸ್ಕರಿಸಿದಂತಾಗುತ್ತದೆ ಎಂಬ ಸಾಮಾನ್ಯ ವಿವೇಕವೂ ಇವರಲ್ಲಿ ಇಲ್ಲವಾಯಿತೇ?
ಇದರಿಂದ ಗೊತ್ತಾಗುತ್ತದೆ ಇವರ ತಲೆಯಲ್ಲಿ ಸನಾತನ ಧರ್ಮದ ಮನುಸ್ಮೃತಿ ಸಂವಿಧಾನ ಅದೆಷ್ಟು ತುಂಬಿದೆ ಎಂದು. ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವ ಇಂತಹ ದೇಶದ್ರೋಹಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸುತ್ತೇವೆ.
ಮಾತೆತ್ತಿದರೆ ಹೊಲಸು ಮಾತಾಡುವ, ಬಸವಭಕ್ತರನ್ನು ತಾಲಿಬಾನ್, ನಕ್ಸಲೈಟರಿಗೆ ಹೋಲಿಸಿ ಮಾತಾಡುವ ಬಸವನಗೌಡ ಪಾಟೀಲ ಯತ್ನಾಳ ಮೇಲೂ ಕಾನೂನು ಕ್ರಮ ಜರುಗಿಸಬೇಕು. ಸಾಮಾನ್ಯ ಮಗುವಿಗೂ ಅರ್ಥವಾಗುತ್ತದೆ ಕನ್ನೇರಿ ಸ್ವಾಮಿಯ ಹೇಳಿಕೆ ತಪ್ಪು ಎಂದು. ಆದರೆ
ಶ್ರೀಗಳ ಮಾತುಗಳು ಸಹಜವಾಗಿ ಬಂದಿವೆ ಎಂದೂ, ಒಬ್ಬ ಸಂತನ ವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆ ಎಂದು ಬೊಬ್ಬೆಯೊಡೆಯುತ್ತಿರುವ ಚಕ್ರವರ್ತಿ ಸೂಲಿಬೆಲೆ ಒಬ್ಬ ಮನುಷ್ಯನೇ ಎಂಬ ಸಂಶಯ ಮೂಡುತ್ತಿದೆ.
“ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
ಮುತ್ತಿನ ಬಲೆಯಾದಡೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?” ಅಕ್ಕಮಹಾದೇವಿಯ ಈ ವಚನದಂತೆ ಕನ್ನೇರಿ ಸ್ವಾಮಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೀಳು ಭಾಷೆ ಬಳಸಿ ನಿಂದಿಸಿದ್ದಕ್ಕಾಗಿ ಮತ್ತು ದೇಶದ ಸಂವಿಧಾನದ ವಿರುದ್ಧ ನಡೆದುಕೊಂಡಿದ್ದಕ್ಕಾಗಿ ಅವರು ಈಗ ಅಪರಾಧಿ ಸ್ಥಾನದಲ್ಲಿದ್ದಾರೆ, ನಾಗರಿಕ ಪ್ರಜೆಗಳ ಸಾಲಿನಿಂದ ದೂರವಾದ ಕ್ರಿಮಿಯಾಗಿದ್ದಾರೆ, ಇವರ ಬೆನ್ನಿಗೆ ವಿವೇಕ ಪ್ರಜ್ಞೆಯುಳ್ಳವರು ಯಾರೂ ನಿಲ್ಲಬಾರದು.

ಈಗ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಧ್ಯಾನ ಮಾಡಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಪುನಃ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಮುಂದಾದರೆ ನೀವು ಹೋದಲ್ಲೆಲ್ಲ ಬಸವಭಕ್ತರು ಪ್ರತಿಭಟಿಸುವುದು ಖಚಿತ ಮತ್ತು ಇದೇ ರೀತಿ ಪ್ರತೀ ಜಿಲ್ಲೆಯಿಂದಲೂ ಗಡಿಪಾರಾಗಬೇಕಾಗುತ್ತದೆ.
ಸದ್ಯಕ್ಕೆ ಬಸವತತ್ವಕ್ಕೆ ಜಯ ಸಿಕ್ಕಂತಾಗಿದೆ. ಗೆದ್ದೆವೆಂಬ ಗರ್ವದಲ್ಲಿ ಸುಮ್ಮನೇ ಕೂಡದೆ ಲಿಂಗಾಯತ ಧರ್ಮ ಹೋರಾಟದ ಕಡೆ ಗಮನ ಕೊಟ್ಟು ಮಾನ್ಯತೆ ಸಿಗುವವರೆಗೂ ಹೋರಾಡುವ ಸಂಕಲ್ಪ ಮಾಡೋಣ ಮತ್ತು ಕನ್ನೇರಿ ಸ್ವಾಮಿಯಂತಹ ಒಳ್ಳೆಯ ಪ್ರಜೆಯಲ್ಲದ ಅನಾಗರಿಕರನ್ನ ಬಸವತತ್ವ ಮಾರ್ಗಕ್ಕೆ ತಂದು ಉತ್ತಮ ನಾಗರಿಕ ಪ್ರಜೆಯನ್ನಾಗಿ ರೂಪಿಸೋಣ.
