ಶೇಗುಣಸಿ
ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ
ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್
ಕಣ್ತೆರೆಸಿದ ತೇರದಾಳ 3: ಅಲ್ಲಮರ ಪ್ರಭಾವ, ಬಸವಣ್ಣನವರ ಜನಪ್ರಿಯತೆ
ಕಣ್ತೆರೆಸಿದ ತೇರದಾಳ 4: 21,000 ಜನರಿಂದ 11 ವಚನ ಹೇಳಿಸಿದ ಅದ್ಭುತ ಅನುಭವ
(ಇತ್ತೀಚೆಗೆ ತೇರದಾಳದಲ್ಲಿ ಅಲ್ಲಮ ಪ್ರಭುಗಳ ದೇವಾಲಯದ ಲೋಕಾರ್ಪಣೆಗಾಗಿ ನಡೆದ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದವು. ಅಲ್ಲಿ ಹರಿದು ಬಂದ ಜನಸಾಗರ, ಅವರು ನಡೆಸಿದ ನಿಸ್ವಾರ್ಥ ದಾಸೋಹ, ಅಲ್ಲಮ ಬಸವಾದಿ ಶರಣರಿಗೆ ಅವರು ತೋರಿದ ಭಕ್ತಿ ಗೌರವ ಎಲ್ಲರ ಮನಸ್ಸುಗಳನ್ನು ಕಲಕಿದವು.
28 ದಿನಗಳು (ಅಕ್ಟೋಬರ್ 14 ರಿಂದ ನವೆಂಬರ್ 11)ಸಹಸ್ರಾರು ಶರಣ ಬಂಧುಗಳನ್ನು ಸೆಳೆದ ಬಸವ ಪುರಾಣ ಪ್ರವಚನ ಈ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿತ್ತು. ಅದನ್ನು ನಡೆಸಿಕೊಟ್ಟ ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ ತಮ್ಮ ಮರೆಯಲಾಗದ ತೇರದಾಳದ ಅನುಭವಗಳನ್ನು ಬಸವ ಮೀಡಿಯಾದ ಓದುಗರೊಡನೆ ಹಂಚಿಕೊಂಡಿದ್ದಾರೆ.)
ಬಸವ ಮೀಡಿಯಾ: ಬಸವ ಪುರಾಣದ ಯಾವ ಭಾಗಗಳು ಹೆಚ್ಚಿಗೆ ಜನಪ್ರಿಯ ಎಂದು ನಿಮಗೆ ಅನಿಸುತ್ತದೆ …
ಮಹಾಂತಪ್ರಭು ಸ್ವಾಮೀಜಿ
ಬಸವ ಪುರಾಣದ ಯಾವುದೇ ಭಾಗವನ್ನು ಜನಪ್ರಿಯ ಅಥವಾ ಜನಪ್ರಿಯವಲ್ಲ ಅಂತ ಪ್ರತ್ಯೇಕಿಸಲು ಬರುವುದಿಲ್ಲ. ಆದರೆ ಜನರ ತಿಳುವಳಿಕೆ ಮಟ್ಟಕ್ಕೆ ಹೇಳೋದಾದರೆ, ಬಸವಣ್ಣನವರ ಯಾವುದೇ ಪ್ರಸಂಗ, ಕತೆ ಹೇಳಿದರು ಅದು ಜನಪ್ರಿಯವೇ ಆಗಿರುತ್ತದೆ. ಯಾಕಂದ್ರೆ ಬಸವಣ್ಣ ಪುಸ್ತಕಗಳಿಂದ ಜನರ ಮನಸ್ಸಿನೊಳಗಿಲ್ಲರೀ, ಜನರ ಹೃದಯದಿಂದ ಹೃದಯಕ್ಕೆ ಬಂದವರು ಅವರು. ನೀವು ಪುಸ್ತಕದೊಳಗಿರುವಂಥ ವ್ಯಕ್ತಿಯನ್ನು ತಂದು ಜನರ ಹೃದಯಕ್ಕೆ ಹಚ್ಚಿದರಿ ಅಂದರೆ ಅಲ್ಲಿ ನಮಗ ಸ್ವಲ್ಪ ವ್ಯತ್ಯಾಸಗಳು ಗೊತ್ತಾಗ್ತಾವೆ.
ಬಸವಣ್ಣ ಪುಸ್ತಕದಿಂದ ಪುಸ್ತಕಕ್ಕೆ ಬರುವುದಕ್ಕೆ ಮುಂಚಿತವಾಗಿ, ಹೃದಯದಿಂದ ಹೃದಯಕ್ಕೆ ಬಂದವರು. ಬಾಯಿಂದ ಬಾಯಿಗೆ ಬಂದವರು. ನಾಲಿಗೆಯಿಂದ ನಾಲಿಗೆ ಬಂದವರು. ಮನಸ್ಸಿನಿಂದ ಮನಸ್ಸಿಗೆ ಬಂದವರು ಅವರು. ಹೀಗಾಗಿ ಬಸವಣ್ಣನವರ ಯಾವುದೇ ಕತೆ ಹೇಳಿದರೂ ಜನರಿಗೆ ಅದು ಜನಪ್ರಿಯ. ಯಾಕೆಂದರೆ ಬಸವಣ್ಣ ಬೆಣ್ಣೆ ಇದ್ದಂಗೆ. ಬಸವಣ್ಣನಂತಹ ಮೃದು ವ್ಯಕ್ತಿತ್ವ ಜಗತ್ತಿನಲ್ಲಿ ಬೇರೆಲ್ಲೂ ನೋಡಾಕ ಸಿಗೋದೆ ಇಲ್ಲ. ಬೆಣ್ಣೆ ಎಲ್ಲರಿಗೂ ಬೇಕು. ಹೀಗಾಗಿ ಬಸವಣ್ಣನವರ ಎಲ್ಲ ಚರಿತ್ರೆಯೂ ಜನಪ್ರಿಯವೇ ಆಗಿವೆ.
ಬಸವ ಮೀಡಿಯಾ: ತೇರದಾಳ ಪಟ್ಟಣದಲ್ಲಿ ಅಲ್ಲಮರ ಪ್ರಭಾವ ಇಷ್ಟೊಂದು ಬೆಳೆಯಲು ಕಾರಣವೇನು
ಮಹಾಂತಪ್ರಭು ಸ್ವಾಮೀಜಿ:
ಅಲ್ಲಮ ಪ್ರಭುದೇವರ ಶಕ್ತಿನೇ ಅಷ್ಟು ದೊಡ್ಡದು. ಅಲ್ಲಮಪ್ರಭುದೇವರಂತಹ ವ್ಯಕ್ತಿತ್ವ ವಿಶ್ವದೊಳಗೆ ನೀವು ಎಲ್ಲೂ ನೋಡಲಿಕ್ಕೆ ಸಾಧ್ಯನೇ ಇಲ್ಲ. ವ್ಯೋಮಕಾಯ ಅನ್ನುವಂತ ಯೋಗಿ ಒಬ್ಬ ಇದ್ದ ಅಂತ ಯಾವ ಇತಿಹಾಸದೊಳಗೂ, ಯಾವ ಧಾರ್ಮಿಕ ಪರಂಪರೆಯೊಳಗೂ ನೀವು ನೋಡಂಗಿಲ್ಲ. ಶರೀರವನ್ನು ಗಾಳಿ ಮಾಡಿಕೊಂಡವರು ಯಾರಿದ್ದಾರೆ ಹೇಳಿ ಜಗತ್ತಿನಲ್ಲಿ, ಅಲ್ಲಮ ಪ್ರಭುದೇವರು ಗಾಳಿಯೊಳಗೆ ಗಾಳಿಯಾಗಿ ಬಿಡುತ್ತಿದ್ದರು. ಇಂತಹ ಒಂದು ಅದ್ಭುತ ವ್ಯಕ್ತಿತ್ವ ಅಲ್ಲಮಪ್ರಭು ದೇವರದು.
ಅವರು ತೇರದಾಳದಲ್ಲಿ ತಪಸ್ಸು ಮಾಡಿ ಹೋಗಿದ್ದಕ್ಕೆ, ತೇರದಾಳದ ಸುತ್ತಮುತ್ತಲ ಗ್ರಾಮದ ಜನರಿಗೆ ಒಂದು ನಂಬಿಕೆಯಿದೆ. ಅಲ್ಲಮರ ಮಂದಿರ ಏನಿದೆಯಲ್ಲ, ಅದರ ಸುತ್ತಮುತ್ತ ಟೈಲ್ಸ್, ಪರಶಿ, ಮತ್ತೀತರ ಕಲ್ಲು ಹಾಕುವಂಗಿಲ್ಲ.ಗುಡಿ ಆವರಣದಲ್ಲಿನ ಮಣ್ಣು ತಗೊಂಡು ಮನೆಗೆ ಹೊಯ್ದು ಇಟ್ಟರೆ, ಹಾವು-ಚೇಳು ಬರಂಗಿಲ್ಲ ಅನ್ನೋ ನಂಬಿಕೆ ಇದೆ. ಅದರಂಗ ಇಲ್ಲಿ ಪ್ರವಚನದಲ್ಲಿ ಹೇಳುವ ಮಾತು ತಗೊಂಡು ಮನೆಗೆ ಹೋದರೆ ಕೆಟ್ಟ ವಿಚಾರಗಳು ಬರಂಗಿಲ್ಲ, ಅಂತಂದು ಹಿಂಗ್ ಮಂದಿಗೆ ಪ್ರೇರೇಪಣೆ ಕೊಟಗೊಂತ ಬಂದೀವ್ರಿ.
ಹಿಂಗಾಗಿ ಜನರದು ಸ್ಪಂದನ ಒಂದು ದೊಡ್ಡ ಪ್ರಮಾಣದಲ್ಲಿ ಬಂತು. ಅಲ್ಲಮಪ್ರಭುದೇವರು ಇಲ್ಲಿ ತಪಸ್ಸು ಮಾಡಿ ಕರ್ಪೂರದ ಜ್ಯೋತಿಯಾಗಿ ಹೋಗಿದ್ದಾರೆ. ಕರ್ಪೂರ ಹೇಗೆ ಜ್ಯೋತಿಯಾಗಿ ತನಗೆ ತಾನು ಉರಿದುಕೊಂಡು, ಬಯಲೊಳಗೆ ಬಯಲಾಗಿ ಹೋಗುತ್ತದಲ್ಲ… ಶರಣೆ ಅಕ್ಕಮಹಾದೇವಿ ಹೇಳುತ್ತಾರಲ್ಲ, ನಿಮ್ಮ ಶರಣರ ಸಂಗ ಕರ್ಪೂರದ ಗಿರಿಯ ಉರಿಯ ಕೊಂಬಂತೆ ಅನ್ನುವ ಹಾಗೆ ಅವರು ಕರ್ಪೂರ ಜ್ಯೋತಿಯಾಗಿ ಅಲ್ಲಿಂದಲೇ ಮಾಯ ಆಗಿ ಹೋಗ್ಯಾರ್ರಿ. ಮತ್ತೆ ಅಲ್ಲಮಪ್ರಭು ಗುರುಗಳ ಗುಡಿ ಮುಂದ ಪ್ರಭುದೇವರು ಆರೋಗನೆ ಮಾಡಿದ್ದು ಅಂತ ಅಲ್ಲಿ ಹರಿವಾಣ ಕಟ್ಟಿಯೊಂದು ಇದೆ. ಈ ಎಲ್ಲವೂ ಅಲ್ಲಿನ ಜನರಿಗೆ ಪ್ರಭಾವ ಬೀರಿದೆ.