ಶೇಗುಣಸಿ
ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ
ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್
ಕಣ್ತೆರೆಸಿದ ತೇರದಾಳ 3: ಅಲ್ಲಮರ ಪ್ರಭಾವ, ಬಸವಣ್ಣನವರ ಜನಪ್ರಿಯತೆ
ಕಣ್ತೆರೆಸಿದ ತೇರದಾಳ 4: 21,000 ಜನರಿಂದ 11 ವಚನ ಹೇಳಿಸಿದ ಅದ್ಭುತ ಅನುಭವ
(ಇತ್ತೀಚೆಗೆ ತೇರದಾಳದಲ್ಲಿ ಅಲ್ಲಮ ಪ್ರಭುಗಳ ದೇವಾಲಯದ ಲೋಕಾರ್ಪಣೆಗಾಗಿ ನಡೆದ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದವು. ಅಲ್ಲಿ ಹರಿದು ಬಂದ ಜನಸಾಗರ, ಅವರು ನಡೆಸಿದ ನಿಸ್ವಾರ್ಥ ದಾಸೋಹ, ಅಲ್ಲಮ ಬಸವಾದಿ ಶರಣರಿಗೆ ಅವರು ತೋರಿದ ಭಕ್ತಿ ಗೌರವ ಎಲ್ಲರ ಮನಸ್ಸುಗಳನ್ನು ಕಲಕಿದವು. 28 ದಿನಗಳು (ಅಕ್ಟೋಬರ್ 14 ರಿಂದ ನವೆಂಬರ್ 11) ಸಹಸ್ರಾರು ಶರಣ ಬಂಧುಗಳನ್ನು ಸೆಳೆದ ಬಸವ ಪುರಾಣ ಪ್ರವಚನ ಈ ಕಾರ್ಯಕ್ರಮಗಳ ಕೇಂದ್ರಬಿಂದುವಾಗಿತ್ತು.ಅದನ್ನು ನಡೆಸಿಕೊಟ್ಟ ಶೇಗುಣಸಿಯ ಪೂಜ್ಯ ಮಹಾಂತಪ್ರಭು ಸ್ವಾಮೀಜಿ ತಮ್ಮ ಮರೆಯಲಾಗದ ತೇರದಾಳದ ಅನುಭವಗಳನ್ನು ಬಸವ ಮೀಡಿಯಾದ ಓದುಗರೊಡನೆ ಹಂಚಿಕೊಂಡಿದ್ದಾರೆ.)
ಬಸವ ಮೀಡಿಯಾ: ಒಂದು ತಿಂಗಳು ನಡೆದ ಕಾರ್ಯಕ್ರಮಗಳಿಗೆ ಅದ್ಬುತ ಅನ್ನಬಹುದಾದ ರೀತಿಯಲ್ಲಿ ಜನ ಸ್ಪಂದಿಸಿದರು. ಎಂದೆಂದಿಗೂ ನಿಮ್ಮ ನೆನಪಿನಲ್ಲಿ ಉಳಿಯುವಂತಹ ಅನುಭವಗಳನ್ನು ಹಂಚಿಕೊಳ್ತೀರಾ
ಮಹಾಂತಪ್ರಭು ಸ್ವಾಮೀಜಿ
ಎರಡು ಮೂರು ಅನುಭವ ಹೇಳಲೇಬೇಕ್ರಿ…
ಅಕ್ಟೋಬರ್ 19 ಮಳೆಯೊಳಗ ಪ್ರವಚನ ಕೇಳಿದರು, ರೊಜ್ಜಿನೊಳಗ ಕೂತ್ಕೊಂಡು ಕೇಳಿದರು, ಇದನ್ನ ನಾವು ಯಾವಾಗಲೂ ಮರೆಯೋದಿಲ್ಲ ನೋಡ್ರಿ.
ನೀವು ಮ್ಯಾಟ್ ಹಾಕಿ, ಚೇರ್ ಹಾಕಿ ಬರ್ರೆಪ ಅಂದ್ರ ಜನಾ ಬರಂಗಿಲ್ಲ. ಮಳೆ ಬರೋದಲ್ರಿ, ಮೋಡ ಕವಿದ ವಾತಾವರಣ ಇದ್ರ ಮಂದಿ ಹೊರಗ ಬರಂಗಿಲ್ಲ. ಅಂತದರೊಳಗ ಜೋರಾಗಿ ಮಳೆ ಬಂತು, ರೊಜ್ಜು ಒಳಗ ಕೂತ್ಕೊಂಡು ಪ್ರವಚನ ಕೇಳ್ಯಾರಿ ಮಂದಿ. ಮಗ್ಲ ನೀರು ಐತಿ, ಅದ್ರಾಗ ಕೂತ್ಕೊಂಡು ಪ್ರವಚನ ಕೇಳ್ಯಾರ ಜನ.
ಆಮೇಲೆ ಪ್ರವಚನ ಮುಗಿಯುವವರೆಗೂ ಅವರಿಗೆ ಗೊತ್ತಾಗಿಲ್ಲ… ಒಬ್ಬರು ಬಂದು ಹೇಳಿದರಿ… ಅಪ್ಪಾವ್ರ ಪ್ರವಚನ ಮುಗಿದು ಎದ್ದ ಮೇಲೆನ ನಮಗ ಗೊತ್ತಾಗಿದೆ ರೀ. ನಮ್ಮ ಮೈಮ್ಯಾಗಿನ ಬಟ್ಟೆಯೆಲ್ಲ ತೊಯ್ದಾವು ಅನ್ನೋದು, ನಮ್ಮ ಲಕ್ಷ್ಯ ಎಲ್ಲ ನಿಮ್ಮ ಪ್ರವಚನದ ಕಡೆಗೆ ಇತ್ತು ಅಂತಾರು.
ಮಂದಿಗೆ ಪ್ರವಚನ ಕೇಳೋ ಗುಂಗು ಹೋಗಿದೆ ಅನ್ನೋರಿದ್ದಾರೆ, ಆದರೆ ಅದು ಹೋಗಿಲ್ರಿ ಅದು ಇನ್ನೂ ಐತ್ರಿ, ಅದನ್ನ ಉದ್ದೀಪನಗೊಳಿಸಬೇಕು ನಾವು. ಆದರೆ ಅದನ್ನ ಮಾಡುವವರ ಕೊರತೆ ಐತೆ ನಮ್ಮಲ್ಲೆ.
ನೋಡ್ರಿ ಪ್ರವಚನಕ್ಕೆ ಎಷ್ಟು ಸ್ಪಂದನ ಸಿಕ್ತು ಅಂತಂದ್ರ… ಆವತ್ತು ಇಂಟೆಲಿಜೆನ್ಸ್ ಪೊಲೀಸರು ಸಹ ಫೋನ್ ಹಚ್ಚಿ ಕೇಳುವಷ್ಟರ ಮಟ್ಟಿಗೆ. ಯಾಕಷ್ಟು ಜನ ಸೇರಾಕತ್ತಾರ ಅಂತ ಪೊಲೀಸರೇ ನಮಗೆ ಕೇಳಿದರು… 20 ಸಾವಿರ ಜನ ಪ್ರವಚನ ಕೇಳಾಕ ಸೇರ್ತಾರಂತಂದ್ರ ಸಣ್ಣದಲ್ರಿ ಇಂಥ ಕಾಲದ ಸಮಯದೊಳಗ.
ಅಲ್ಲಮಪ್ರಭುದೇವರ ಕಾರ್ಯ ಐತೆ, ಪ್ರವಚನ ಕಾರ್ಯಕ್ರಮ ಇದು. ಯಾವುದೇ ರಾಜಕೀಯ ಉದ್ದೇಶಕ್ಕೆ ನಡೆಯುತ್ತಿರುವ ಕಾರ್ಯಕ್ರಮ ಅಲ್ಲ ಇದು, ನಾವು ಯಾವುದೇ ಪ್ರತಿಭಟನೆ ಮಾಡ್ತಾ ಇಲ್ಲ. ನಮ್ಮದು ಒಟ್ಟು ಧಾರ್ಮಿಕ ಕಾರ್ಯಕ್ರಮ. ಪ್ರವಚನಕ್ಕೆ ಇಷ್ಟು ಜನ ಕೇಳಾಕ್ಕೆ ಸೇರಕತ್ತಾರ ಎಂದು ಅಂದಾಗ ಪೊಲೀಸರೂ ಆಶ್ಚರ್ಯಕ್ಕೊಳಗಾದರು.
ಅಲ್ಲಮಪ್ರಭುಗಳ ಜೋಳಗಿ ಒಳಗ ಹೋಳಿಗೆ
ಎರಡನೆಯದು ನಾವು ಪ್ರವಚನದೊಳಗ ಅಲ್ಲಮಪ್ರಭುವಿನ ಆರೋಗನೆ ಬಗ್ಗೆ ಜನರಿಗೆ ಹೇಳಿದ್ದೆ, 1 ಲಕ್ಷ 96 ಸಾವಿರ ಜನಗಳಿಗೆ ಮಾಡಿದ ಪ್ರಸಾದವನ್ನು ಅಲ್ಲಮಪ್ರಭು ಒಬ್ಬರೇ ಸ್ವೀಕಾರ ಮಾಡ್ತಾರ ಅನ್ನೋದು. ಇದು ಶೂನ್ಯಸಂಪಾದನೆ ಒಳಗೆ ಬರ್ತದೆ, ಚಾಮರಸ ವಿರಚಿತ ಪ್ರಭುಲಿಂಗಲೀಲೆ ಒಳಗೂ ಬರುತ್ತದೆ ಎಂದು.
ಹೀಗಾಗಿ ನಾವು ಅಲ್ಲಮಪ್ರಭುಗಳ ಜೋಳಗಿ ಒಳಗ ಹೋಳಿಗೆ ಹಾಕಬೇಕು, ಅಂತಂದು ನೆರೆದ ನಮ್ಮ ತಾಯಂದಿರಿಗೆ ಒಂದು ಕರೆ ಕೊಟ್ಟರೆ, ಆರು ಸಾವಿರ ಜನ ತಾಯಂದಿರು ಒಂದೊಂದು ಬುಟ್ಟಿಯೊಳಗ ನೂರು-ನೂರು ಹೋಳಿಗೆ ಹಾಕೊಂಡು ಮೆರವಣಿಗೆ ಮಾಡಿಕೊಂತ ತಗೊಂಡು ಬಂದರು. ಎಲ್ಲಾ ಸೇರಿ 5 ಲಕ್ಷಕ್ಕೂ ಅಧಿಕ ಹೋಳಿಗೆ ತಯಾರಾದವು, ಸಂಗ್ರಹವಾದವು.
5 ಲಕ್ಷ ಹೋಳಿಗೆ ಒಂದು ಜಾತ್ರೆಯೊಳಗ ತಯಾರಿಸಿ ತಂದು ಕೊಟ್ಟ ದಾಖಲೆ ಕರ್ನಾಟಕದೊಳಗ ಎಲ್ಲೂ ಇಲ್ಲಾ. ಇದೆಲ್ಲ ಕಾರ್ಯ ಇಲ್ಲಿ ಆಗಿ ದಾಖಲೆ ನಿರ್ಮಾಣ ಆಯಿತು. ಎಲ್ಲಾರು ಸ್ವೀಕರಿಸಿದ ನಂತರವೂ ಸಿಕ್ಕಾಪಟ್ಟೆ ಹೋಳಿಗೆ ಉಳಿದವು. ನಾವು ಅವನ್ನು ಏನು ಮಾಡಿದೆವು ಅಂದ್ರೆ, ಅವನ್ನು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ನಮ್ಮ ಎರಡು ಜಿಲ್ಲೆಗಳಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ದಾಸೋಹ ಪರಂಪರೆ ನಡೆಯುತ್ತಿರುವ ಮಠಗಳಿಗೆ ಅವನ್ನು ಕೊಟ್ಟು ಕಳಿಸಿದೆವು.
2000 ಹೋಳಿಗೆಗಳ ಒಂದೊಂದು ಬಾಕ್ಸ್ ಮಾಡಿ ಕಳಿಸಿದೆವು. ನಮ್ಮ ಉದ್ಧೇಶ ಏನಿತ್ತು ಅಂತಂದ್ರೆ, ಕ್ಷೇತ್ರ ಅಂತಂದ್ರೆ ಬರಿ ಮಠಗಳು ಮಾತ್ರ ಅಲ್ಲ, ಎಲ್ಲೆಲ್ಲಿ ಅನಾಥ ಮಕ್ಕಳು ಇದ್ದಾರೋ ಅದು ಒಂದು ಕ್ಷೇತ್ರ, ಎಲ್ಲೆಲ್ಲಿ ಹಿರಿಯಜೀವಗಳು ಇದ್ದಾವೋ ಅದು ಕ್ಷೇತ್ರಾನೆ. ಅವರಿಗೂ ಮುಟ್ಟಲಿ ಅಂತ ಅವನ್ನು ಅವರಿಗೂ ತಲುಪಿಸಿದೆವು, ಇವೆಲ್ಲ ಕಾರ್ಯಗಳು ನಾವೆಂದೂ ಮರೆಯಲಾರದ ಕ್ಷಣಗಳು.
ಮುಂದುವರೆಯುವುದು