ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ನೂಲಿಯ ಚಂದಯ್ಯ

ದೊರೆಸ್ವಾಮಿ ಮಠದಲ್ಲಿ ಚಂದಯ್ಯ ಜಯಂತಿ

ನರಗುಂದ:

ನುಲಿಯ ಚಂದಯ್ಯ ಶರಣರು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದರು. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ ನುಡಿದಂತೆ ನಡೆದ ಶ್ರೇಷ್ಠ ವಚನಕಾರರು.

ಬಸವಣ್ಣನ ವಿನೂತನ ವಿಚಾರಧಾರೆಗೆ, ಧಾರ‍್ಮಿಕ ಚಿಂತನೆಗೆ ಆಕರ್ಷಿತರಾಗಿ ತಮ್ಮ ಊರು ಶಿವಣಗಿಯಿಂದ ಕಲ್ಯಾಣಕ್ಕೆ ಬಂದು ಹುಲ್ಲಿನಿಂದ ಹಗ್ಗ ಹೊಸೆಯುವ ವೃತ್ತಿಯ ಮೂಲಕ ದುಡಿಮೆಯ ಘನತೆಯನ್ನು ಸಾರಿದರು.

ದುಡಿಮೆಯಿಂದ ಬಂದ ಹಣದಿಂದ ದಾಸೋಹ ಮಾಡಿ ಬದುಕಿದರು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೊದ್ಧೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯ ಶರಣರ ಜಯಂತಿ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

೧೨ನೇ ಶತಮಾನದ ಶರಣ ಪರಂಪರೆಯಲ್ಲಿ ನುಲಿಯ ಚಂದಯ್ಯ ಅವರು ರಚಿಸಿದ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ಆ ಕಾಲದಲ್ಲಿ ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಮ್ಮಲ್ಲಿರುವ ಮೂಢನಂಬಿಕೆಗಳಿಗೆ ಜೋತು ಬೀಳದೆ ಆಧುನಿಕ ಭಾರತದ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕು. ಕಾಯಕ ನಿಷ್ಠೆಯಲ್ಲಿ ನೂಲಿಯ ಚಂದಯ್ಯ ಅವರಂತಹ ಶರಣರ ತತ್ವ ಸಿದ್ದಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಾಯ್. ಎಮ್. ಭಜಂತ್ರಿ ಅವರು ಮಾತನಾಡಿ ಕಲೆ, ಸಾಹಿತ್ಯ, ವೈದ್ಯಮಯ ಸಂಸ್ಕೃತಿ ಹೊಂದಿರುವ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ.

ಬಸವಣ್ಣ ಸೇರಿದಂತೆ ಅನೇಕ ಶಿವಶರಣರು ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ.

ಅನುಭವ ಮಂಟಪದಲ್ಲಿದ್ದ ಶ್ರೇಷ್ಠ ಶರಣರಲ್ಲಿ ನುಲಿಯ ಚಂದಯ್ಯನವರೂ ಒಬ್ಬರು ಎಂದರು.

೨೦೨೬ ನೇ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ‍್ಗಡೆಯಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ರಡ್ಡೇರ ನಾಗನೂರಿನ ಪೂಜಾ ಮಾದರ, ನರಗುಂದದ ಸುಮಿತ್ ಹಿರೇಮಠ ಹಾಗೂ ಶ್ರೇಯಾ ಮುದೋಳೆ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ವೇದಿಕೆ ಮೇಲೆ ವಿಶ್ರಾಂತ ಕುಲಸಚಿವ ಡಾ. ಚಂದ್ರಮೌಳಿ ನಾಯ್ಕರ, ವಿಶ್ರಾಂತ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ, ನರಗುಂದ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಜಿ. ಮಣ್ಣೂರಮಠ, ಎಸ್.ಎಸ್. ಪೂಜಾರ, ಪ್ರಹ್ಲಾದಗೌಡ ಪಾಟೀಲ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಮಂಗಳಾ ಪಾಟೀಲ, ಡಾ.ಸಿ.ಕೆ. ರಾಚನಗೌಡ್ರ, ಪ್ರಾಧ್ಯಾಪಕರಾದ ಡಾ. ಜಗದೀಶ ತಳವಾರ, ಡಾ. ರಾಮು ಎಂ‌.ಎಸ್. ಪ್ರಮುಖರು ಉಪಸ್ಥಿತರಿದ್ದರು.

ಪ್ರೊ. ಆರ್. ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ಕೊನೆಯಲ್ಲಿ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *