ಕಾಯಕ ನಿಷ್ಠೆಯ ಶರಣ ದಂಪತಿಗಳು ಹೂಗಾರ ಮಾದಯ್ಯ, ಮಾದೇವಿ

(ಸೆಪ್ಟೆಂಬರ್ 18 ಹಲವಾರು ಜಿಲ್ಲೆಗಳಲ್ಲಿ ಶರಣ ಹೂಗಾರ ಮಾದಯ್ಯ ಮತ್ತು ಶರಣೆ ಮಾದೇವಿಯವಯ ಜಯಂತಿ ಆಚರಿಸಲಾಯಿತು.)

ವಚನಾಂಕಿತ : ವಚನಗಳು ಲಭ್ಯವಾಗಿಲ್ಲ.
ಜನ್ಮಸ್ಥಳ : ತಿಳಿದು ಬಂದಿಲ್ಲ.
ಕಾಯಕ : ಹೂಗಾರ (ಶರಣರ ಮನೆಗಳಿಗೆ ಹೂ-ಪತ್ರೆಗಳನ್ನು ನೀಡುವುದು).
ಐಕ್ಯಸ್ಥಳ : ಬಸವ ಕಲ್ಯಾಣ, ಬೀದರ ಜಿಲ್ಲೆ.

ಕಾಯಕವೇ ಶಿವ ಭಕ್ತಿ | ಕಾಯಕವೇ ಶಿವ ಭಜನೆ ||
ಕಾಯಕವೇ ಲಿಂಗಪೂಜೆ | ಶಿವಪೂಜೆ ಶಿವಯೋಗ ||
ಕಾಯಕವೇ ಆಯಿತ್ತು | ಕೈಲಾಸ ||

ಶರಣರಿಗೆ ಕಾಯಕವೇ ಕೈಲಾಸ. ಜಗತ್ತಿಗೆ ಲಿಂಗಾಯತ ಧರ್ಮ ಕೊಟ್ಟ ಪರಿಣಾಮಕಾರಿ ಮತ್ತು ಶ್ರೇಷ್ಠ ಸೂತ್ರ ಈ ಕಾಯಕ ತತ್ವ. ಇಂಥ ಅಭೂತಪೂರ್ವ ಕಾಯಕ ತತ್ವದಲ್ಲಿ ನಿಷ್ಠೆಯುಳ್ಳ ಶರಣ ದಂಪತಿಗಳಲ್ಲಿ ಹೂಗಾರ ಮಾದಯ್ಯ ಮತ್ತು ಮಾದೇವಿ ದಂಪತಿಗಳು ಅಗ್ರಗಣ್ಯರು. ಇವರ ಜನ್ಮ ಸ್ಥಳದ ಬಗ್ಗೆ ಮಾಹಿತಿ ನನಗೆ ಲಭ್ಯವಾಗಿಲ್ಲ.

ಉತ್ತರ ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಹೂಗಾರ ಮನೆತನದವರು ಸಿಗುತ್ತಾರೆ. ಹೂವಿನ ಮಾಲೆಯನ್ನು ಕಟ್ಟುವ ಕಾಯಕದಿಂದ ಇವರಿಗೆ ಹೂಗಾರರು ಎನ್ನುವ ಹೆಸರು ಬಂದಿದೆ. ಹೂವಿನ, ಮಾಲೆಗಾರ, ಸರವಂದಿಗ, ಪೂವಾಡಿಗ, ಫೂಲಮಾಲಿ, ಸಮಾಳದ, ವೀಣೇಕಾರ, ಗವಾಯಿ ಎಂಬ ಹೆಸರುಗಳು ಚಾಲ್ತಿಯಲ್ಲಿದ್ದವು. ಗೌರವ ವಾಚಕಗಳಾದ ಜೀರ, ಗೊರವ ಎನ್ನುವ ಹೆಸರುಗಳೂ ಬಳಕೆಯಲ್ಲಿವೆ.

ಕಲ್ಯಾಣದಲ್ಲಿ ಅನುಭವ ಮಂಟಪದ ಹತ್ತಿರ ಬಿಲ್ವಪತ್ರಿ ವನವನ್ನು ನಿರ್ಮಾಣ ಮಾಡಿದ್ದರು. ಜಾನಪದರು ಹೇಳುವಂತೆ “ಶಿವಪೂಜೆ ಮಾಡೂದಕ ಮೂಗಂಡ ಹೂಬೇಕ ಬೇಲಪತ್ರಿ ಬೇಕ ನಿತ್ಯದಲಿ” ಬೆಳಗಿನ ಜಾವದಲ್ಲಿ ಕಲ್ಯಾಣದಲ್ಲಿ ಶರಣರ ಮನೆ ಮನೆಗಳಿಗೆ ಸುತ್ತಾಡಿ ಹೂ-ಪತ್ರೆಗಳನ್ನು ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದರು. ಪ್ರತಿ ದಿನ ಹೂಮಾಲೆಗಳನ್ನು ಕಟ್ಟುವಾಗ ವಚನಗಳನ್ನು ಓದುವ ಹವ್ಯಾಸವನ್ನಿಟ್ಟುಕೊಂಡಿದ್ದರು. ಕಾಯಾ, ವಾಚಾ, ಮನಸ್ಸಿನಿಂದ ಹೂ ಮಾಲೆಯನ್ನು ಕಟ್ಟಿ, ಬಿಲ್ವ ಪತ್ರೆಗಳ ಜೊತೆಗೆ ಶರಣರ ಮನೆಗೆ ತಲುಪಿಸುವ ಕಾಯಕವನ್ನು ಮಾಡುತ್ತಿದ್ದುದು ಇವರ ಶ್ರೇಷ್ಠತೆಗೆ ಮತ್ತು ಮಾಡುವ ಕಸುಬಿನ ಬಗ್ಗೆ ಆತ್ಮ ವಿಶ್ವಾಸ ತುಂಬಿಕೊಂಡಂಥವರು.

ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೂಗಾರ (ಮಾಲೇಗಾರ)ರ ಆರಾಧ್ಯ ದೈವ ಮತ್ತು ಇಷ್ಟದೇವನಾದ ಬಾವಿಯ ಬೊಮ್ಮನನ್ನು ಉಲ್ಲೇಖ ಮಾಡಿದ್ದಾರೆ.

ಬಡಹಾರುವನೇಸು ಭಕ್ತನಾದಡೆಯೂ | ನೇಣಿನ ಹಂಗ ಬಿಡ ||
ಮಾಲೆಗಾರನೇಸು ಭಕ್ತನಾದಡೆಯೂ | ಬಾವಿಯ ಬೊಮ್ಮನ ಹಂಗು ಬಿಡ || ಬಣಜಿಗನೇಸು ಭಕ್ತನಾದಡೆಯೂ | ಒಟ್ಟಿಲ ಬೆನಕನ ಹಂಗ ಬಿಡ ||
ಕಂಚುಗಾರನೇಸು ಭಕ್ತನಾದಡೆಯೂ | ಕಾಳಿಕಾದೇವಿಯ ಹಂಗ ಬಿಡ ||
ನಾನಾ ಹಂಗಿನವನಲ್ಲ | ನಿಮ್ಮ ಶರಣರ ||
ಹಂಗಿನವನಯ್ಯಾ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-451)

ಜನನದಿಂದ ಮರಣದವರೆಗೂ ಹೂಗಾರರು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಮದುವೆಗೆ ದಂಡೆ, ಬಾಸಿಂಗಗಳನ್ನೂ ಮಾಡುತ್ತಾರೆ. ರೈತರಿಗೂ ಹೂಗಾರರಿಗೂ ಅವಿನಾಭಾವ ಸಂಬಂಧ. ಬಿತ್ತುವ ಸಮಯದಲ್ಲಿ ಕೂರಿಗೆಗೆ ಮತ್ತು ಎತ್ತುಗಳಿಗೆ ಅಲಂಕಾರ ಮಾಡುವ ಹೂಗಾರರು ಸುಗ್ಗಿಯ ವೇಳೆಯಲ್ಲಿ ಕಣಕ್ಕೆ ಹೂವಿನಿಂದ ಅಲಂಕಾರ ಮಾಡುತ್ತಾರೆ.

ಈ ದಂಪತಿಗಳಿಗೆ ಲಿಂಗಣ್ಣನೆಂಬ ಮಗನಿದ್ದನೆಂದು ತಿಳಿದು ಬರುತ್ತದೆ. ಸಕಳೇಶ ಮಾದರಸರನ್ನು ತಮ್ಮ ಗುರುಗಳೆಂದು ಭಾವಿಸಿ ಗೌರವಿಸುತ್ತಿದ್ದರು.

ಮುಗ್ಧ ಶರಣರ | ಹಾಡು ಸಿದ್ಧಿ ಮಂತ್ರವು ||
ನೋಡು ಸಿದ್ಧಾಗು | ಹಾಡು ಹಾಡುದಕೆ ||
ಎಲೆ ಜೀವ ಶುದ್ಧಾಗಿ | ಹೊಂದು ಶಿವ ಸದವ ||

ಶರಣರು ಲಿಂಗಾಯತರ ಜೀವೋನ್ಮುಖ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಗುರು-ಲಿಂಗ-ಜಂಗಮ ಸೇವೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು. ಇಂಥ ಮಾನವೀಯ ಮೌಲ್ಯಗಳನ್ನು ಅವರು ಕೋಣೆಗಳ ನಡುವೆ ಕುಳಿತುಕೊಂಡು ಕಲಿತದ್ದಲ್ಲ. ಬೆಳ್ಳಿ ಬಂಗಾರದ ಕೀರೀಟವನ್ನಿಟ್ಟುಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿ ಜಪಿಸಿದ ಮಂತ್ರದಿಂದಲ್ಲ. ಕಾಯಕ ಯೋಗಿಗಳಾಗಿ ದಾಸೋಹಿಗಳಾಗಿ ಗಳಿಸಿದ ಅನುಭಾವ. ಇಂಥ ಕಾಯಕವನ್ನೇ ಉಸಿರಾಗಿಸಿಕೊಂಡು ಜೀವಿಸಿದ ಹೂಗಾರ ಮಾದಯ್ಯ ಮತ್ತು ಮಾದೇವಿಯವರು ನಮಗೆಲ್ಲರಿಗೂ ಆದರ್ಶವಾಗಬೇಕು.

ಬಸವ ಕಲ್ಯಾಣದಲ್ಲಿಯೇ ಈ ಶರಣ ದಂಪತಿಗಳು ಐಕ್ಯರಾಗಿದ್ದಾರೆ. ಅನಂತ ಹುಣ್ಣಿಮೆಯಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ.

ಸಂಗ್ರಹ ಮತ್ತು ಲೇಖನ:

ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್‌ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 97413 57132 / 97418 89684
ಈ-ಮೇಲ್‌: vijikammar@gmail.com

Share This Article
1 Comment

Leave a Reply

Your email address will not be published. Required fields are marked *