ಧಾರವಾಡ
ನಮ್ಮ ಪರಂಪರೆಗೆ ನಾವು ಕುರುಡಾಗಿರುವುದರಿಂದ ವಚನ ದರ್ಶನದಂತಹ ಪ್ರಯತ್ನಗಳು ಹುಟ್ಟಿಕೊಳ್ಳುತ್ತವೆ, ಎಂದು ಪತ್ರಕರ್ತ ಡಾ ಎಚ್ ವಿ ವಾಸು ಹೇಳಿದರು.
ಮಂಗಳವಾರ ಸಂಜೆ ಧಾರವಾಡದ ಬಸವ ಕೇಂದ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮಗ್ರಂಥ ವಚನ ಸಾಹಿತ್ಯದ ಮೇಲೆ ಆಗುತ್ತಿರುವ ಸಾಂಸ್ಕೃತಿಕ ದಾಳಿ ಕುರಿತು “ಜಾಗೃತ ಕಾರ್ಯಕ್ರಮ”ದಲ್ಲಿ ಮಾತನಾಡಿದರು.
ಬಸವ ಧರ್ಮವೆಂದರೆ ಕನ್ನಡ ಧರ್ಮ. ಕನ್ನಡ ರಾಷ್ಟ್ರೀಯತೆ ಹುಟ್ಟಿದ್ದೇ 12ನೇ ಶತಮಾನದಲ್ಲಿ. ದುಡಿಯುವ ವರ್ಗದವರು ಸರಳ ಕನ್ನಡದಲ್ಲಿ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳಲು, ಕಾಯಕಗಳಿಗೆ ಘನತೆ ನೀಡಲು, ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ವಚನಗಳನ್ನು ಬರೆದರು.
ದುರಂತವೆಂದರೆ ಈ ಧರ್ಮ ಸಾಂಸ್ತೀಕರಣಗೊಂಡಾಗ ಮಠೀಯ ವ್ಯವಸ್ಥೆ ಹುಟ್ಟಿ ಮಧ್ಯವರ್ತಿಗಳು ಬಂದು ಇದನ್ನು ಒಂದು ಜಾತಿಯ ಆಸ್ತಿಯಾಗಿಸಿ ಎಲ್ಲರಿಗೂ ತಲುಪದಂತೆ ತಡೆದರು. ಬಸವಣ್ಣನವರ ಬದಲು ಫೇಕ್ ವೇಷ ಹಾಕುವವರು ವಿಶ್ವ ಗುರುಗಳಾದರು.
ನಮ್ಮ ಪರಂಪರೆಗೆ ನಾವು ಈ ರೀತಿ ಕುರುಡಾದಾಗ ವಚನಗಳನ್ನು ತಿರುಚುವಂತಹ ವಚನ ದರ್ಶನಗಳಂತಹ ಪುಸ್ತಕಗಳು ಬರುತ್ತವೆ. ಈಗ ನಾವು ಮತ್ತೆ ಎಚ್ಛೆತ್ತುಕೊಂಡು ನಮ್ಮ ರಾಷ್ಟೀಯತೆಯ ಪರಂಪರೆ, ಆಶಯಗಳನ್ನು ಎಲ್ಲರಿಗೂ ತಿಳಿಸಬೇಕು, ಎಂದು ಎಚ್ಚರಿಸಿದರು.
ಕಳೆದ ಬಾರಿ ಧಾರವಾಡಕ್ಕೆ ಬಂದಾಗ ಯಾರೋ ವಚನಗಳ ಬಗ್ಗೆ ಪುಸ್ತಕ ಬರೆದು ಬಿಡುಗಡೆ ಮಾಡುತ್ತಿದ್ದಾರೆ ಅನಿಸಿತ್ತು. ನನ್ನ ಮೊಬೈಲಿನಲ್ಲಿ ಅದರ ಫೋಟೋ ಕೂಡ ತೆಗೆದುಕೊಂಡಿದ್ದೆ. ಈ ವಿವಾದ ಇಷ್ಟು ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ ರಂಜಾನ್ ದರ್ಗಾ ಲಿಂಗಾಯತ ಧರ್ಮದ ಪರಿಚಯ ಮಾಡಿಕೊಟ್ಟರು. ಉಪನ್ಯಾಸಕರೊಂದಿಗೆ ವೇಧಿಕೆಯಲ್ಲಿ ಬಸವಕೇಂದ್ರದ ಕಾರ್ಯದರ್ಶಿ ಶ್ರೀ ಬಸವಂತಪ್ಪ ತೋಟದ, ಕೆಲಗೇರಿ ಜಾಗತಿಕ ಲಿಂಗಾಯತ ಮಹಾಸಭಾ ಕಲಘಟಗಿ ತಾಲೂಕಾ ಘಟಕದ ಅಧ್ಯಕ್ಷ ಫಕ್ಕೀರಪ್ಪಾ ಉಪಸ್ಥಿತರಿದ್ದರು.


