ಶಹಾಪುರ
ಬಸವಣ್ಣನವರು ಕೇವಲ ಒಂದು ಹೆಸರು ಅಥವಾ ವ್ಯಕ್ತಿಯಾಗಿರಲಿಲ್ಲ. ಅವರು ಅಂದಿನ ಸಮಾಜದ ಕಂದಾಚಾರಗಳನ್ನು ಪ್ರಶ್ನಿಸಿದ, ದುಡಿಯುವ ವರ್ಗಕ್ಕೆ ಗೌರವ ತಂದುಕೊಟ್ಟ ಮಹಾನ್ ನಾಯಕ. ಬಸವಣ್ಣನವರು ಬರುವ ಮುಂಚೆ ಸಮಾಜದಲ್ಲಿ ಕಾಯಕಕ್ಕೆ ಯಾವುದೇ ಬೆಲೆ ಇರಲಿಲ್ಲ.
ದೈಹಿಕ ಶ್ರಮವನ್ನು ಕೀಳಾಗಿ ಕಾಣಲಾಗುತ್ತಿತ್ತು. ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಒಂದು ವರ್ಗ, ದೈಹಿಕ ದುಡಿಮೆಯಿಲ್ಲದೆ ಬೌದ್ಧಿಕ ಶ್ರಮವೇ ಶ್ರೇಷ್ಠವೆಂಬ ನಂಬಿಕೆಯನ್ನು ಸಮಾಜದಲ್ಲಿ ಬಿತ್ತಿತ್ತು. ಇದರಿಂದಾಗಿ ದುಡಿಯುವ ಜನರು ತಮ್ಮ ಕೆಲಸವನ್ನು ಕೀಳಾಗಿ ಕಾಣುವಂತಾಗಿತ್ತು.
ಆದರೆ ಬಸವಣ್ಣನವರು ಈ ತಾರತಮ್ಯವನ್ನು ಮುರಿದು ಹಾಕಿದರು. “ಯಾವ ಕೆಲಸವೂ ಕೀಳಲ್ಲ” ಎಂದು ಸಾರಿದರು. ತಮ್ಮ ವಚನಗಳ ಮೂಲಕ ಕಾಯಕದ ಮಹತ್ವವನ್ನು ಸಾರುತ್ತಾ, ಸಮಾಜದಲ್ಲಿ ಕಾಯಕ ಕ್ರಾಂತಿಯನ್ನೇ ಹುಟ್ಟುಹಾಕಿದರು. ಕಾಯಕ ಮಾಡುವ ಕಮ್ಮಾರ, ಮಡಿವಾಳ, ಸಾಲಿಗ ಹಾಗೂ ವೇದವನ್ನು ಓದುವ ಹಾರುವನ ನಡುವೆ ಯಾವುದೇ ಭೇದವಿಲ್ಲ ಎಂದು ಸಾರಿದರು.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ
ಹಾರವನಾದ,
ಕರ್ಣನಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೆವಾ
ಲಿಂಗಸ್ಥಲವನರಿದವನೇ ಕುಲಜನು!!
ಎಂದು ಪ್ರಶ್ನಿಸುವ ಮೂಲಕ ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಈ ಪ್ರಶ್ನೆ ಅಂದಿನ ಸಮಾಜದ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು.
ಹಳ್ಳಿ ಸೊಗಡಿನ ತಾಯಿಯೊಬ್ಬಳು ಹೇಳುವಂತೆ, “ಕಾಯಕವ ಕೊಟ್ಟುದಕೆ ನಾಯಕರು ಬಸವಣ್ಣ”. ಈ ಮಾತಿನಲ್ಲಿರುವ ಸತ್ಯ ಮತ್ತು ಶಕ್ತಿ ಯಾವುದೇ ಶಾಸ್ತ್ರ ಪಂಡಿತರ ಮಾತಿಗಿಂತಲೂ ದೊಡ್ಡದು. ಬಸವಣ್ಣನವರು ಸ್ವತಃ ಜಾತಿಯ ಶ್ರೇಷ್ಠತೆಯನ್ನು ನಿರಾಕರಿಸಿದರು. ಹೊನ್ನು, ಹೆಣ್ಣು, ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ ವೃಥಾ ಬರುದೂರ ಹೋಹ ಕೆಡುಕ ಹಾರುವ ನಾನಲ್ಲ ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ ಕೂಡಲ ಸಂಗಮ ದೇವನು ವಿಪ್ರ ಕರ್ಮವ ಬಿಡಿಸಿ ಅಶುದ್ಧನ ಶುದ್ಧನ ಮಾಡಿದನಾಗಿ, ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ.
ಯಾರು ತಮ್ಮ ದುಡಿಮೆಯಿಂದ ಅನ್ನವನ್ನು ಸಂಪಾದಿಸಿ ತಿನ್ನುತ್ತಾರೋ ಅವರೇ ಶ್ರೇಷ್ಠರು. ಬೇರೆಯವರ ದುಡಿಮೆಯ ಮೇಲೆ ಬದುಕುವವನು ಕನಿಷ್ಠ ಎಂದು ದುಡಿಮೆಗೆ ಗೌರವ ತಂದುಕೊಟ್ಟವರು ಬಸವಣ್ಣನವರು. ಹೀಗಾಗಿಯೇ ಅವರು ನಿಜವಾದ ನಾಯಕರಾದರು. ಅಂದಿನ ಸಮಾಜ ಅವರನ್ನು ನಾಯಕನೆಂದು ಒಪ್ಪಿಕೊಂಡಿತು. ಅಂತಹ ಮಹಾನ್ ದಾರ್ಶನಿಕನ ಜಯಂತಿಯನ್ನು ನಾವು “ಕಾಯಕ ಜಯಂತಿ” ಎಂದು ಆಚರಿಸುವುದು ಅತ್ಯಂತ ಅರ್ಥಪೂರ್ಣ. ಅದು ನಿಜಕ್ಕೂ ಬಸವ ಜಯಂತಿಯೇ ಆಗುತ್ತದೆ.
ಆದರೆ ಈ ಜಯಂತಿಗೆ ತೊಗಲು ಬಾವಲಿಗಳನ್ನು ತಳಕು ಹಾಕುವ ಹುನ್ನಾರ ನಡೆದಿದೆ. ಅದರಿಂದ ಆದಷ್ಟು ದೂರವಿದ್ದರೆ ಸಮಾಜಕ್ಕೆ ಗೌರವ ನಮ್ಮತಂದೆಯ ಜಯಂತಿಯನ್ನು ನಾವು ಗೌರವದಿಂದ ಆಚರಿಸೋಣ. ನಾವೆಲ್ಲರೂ ಬಸವಣ್ಣನ ಮಕ್ಕಳು ಎಂಬುದನ್ನು ಎಂದಿಗೂ ಮರೆಯದಿರೋಣ.