ಕೂಡಲಸಂಗಮ
ಮಹಿಳಾ ದಿನಾಚರಣೆಯನ್ನು ರಾಜ್ಯ ಸರ್ಕಾರ ಮಾತೆ ಮಹಾದೇವಿಯವರ ಹೆಸರಿನಲ್ಲಿ ಆಚರಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಗುರುವಾರ ಮಾತೆ ಮಹಾದೇವಿ ಅವರ ೭೯ನೇ ಜಯಂತಿ ನಿಮಿತ್ಯ ಲಿಂಗೈಕ್ಯ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿಯೂ ಮಹಿಳೆ ಸಾಧನೆ ಮಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ ಮಾತೆ ಮಹಾದೇವಿಯವರ ಬದುಕು, ಹೋರಾಟ, ಸಂಘಟನೆ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ.

ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಮಾತೆ ಮಹಾದೇವಿಯವರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಸರ್ಕಾರ ಸ್ಥಾಪಿಸಬೇಕು. ವಚನ ಸಾಹಿತ್ಯ, ಶರಣರ ಸ್ಥಳಗಳ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ.
ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಬದುಕಿನುದ್ದಕ್ಕೂ ಹೋರಾಡಿದರು, ಸಾಮಾಜಿಕ ಕಳಕಳಿಯಯನ್ನು ಹೊಂದಿದ ಅವರು ನುಡಿದಂತೆ ನಡೆದರು. ಅನೇಕ ಅನಾಥ, ವಿಧವೆಯರಿಗೆ ಆಶ್ರಯ ನೀಡಿ ಸುಂದರ ಬದುಕು ರೂಪಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ ಮಾತಾಜಿಯ ಕಾರ್ಯ ಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಮಾತೆ ತುಂಗಾದೇವಿ, ಬೆಂಗಳೂರಿನ ದೇವಿಕಾ ಶರಣಪ್ಪ, ತುಮಕೂರಿನ ಸೋಮಶೇಖರಪ್ಪ, ಲೋಹಿತಾದೇವಿ, ಉಮಾದೇವಿ ಮುಂತಾದವರು ಇದ್ದರು.