ಬದಾಮಿ
ಲಿಂಗಾಯತ ಶಿವಶಿಂಪಿ ಸಮಾಜಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಶಿವಶಿಂಪಿ ಸಮಾಜವನ್ನು ಚಿನ್ನಪ್ಪರಡ್ಡಿ ವರದಿ ಪ್ರಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಶರಣ ಶಿವದಾಸಿಮಯ್ಯನವರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕೆಂದು ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಒತ್ತಾಯಿಸಿದರು.
ಭಾನುವಾರ ನಗರದ ಎಸ್.ವಿ.ಪಿ. ಸಂಸ್ಥೆಯ ಬಸವ ಭವನದಲ್ಲಿ ಶಿವಸಿಂಪಿ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾವೇಶ, ಶರಣ ಶಿವದಾಸಿಮಯ್ಯನವರ ಜಯಂತಿ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಸಮಾಜದ ಬಡಮಕ್ಕಳನ್ನು ದತ್ತು ಪಡೆದು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಘಟನೆಯಿಂದ ಯೋಜನೆ ಸಹ ಹಾಕಿಕೊಳ್ಳಲಾಗಿದೆ ಎಂದು ಲೋಣಿ ತಿಳಿಸಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡುತ್ತ, ಬಟ್ಟೆ ಹೊಲಿದು ಜೀವನ ನಡೆಸುವ ಶಿವಸಿಂಪಿ ಸಮಾಜದವರು ಶ್ರಮಿಕರು. ಸಣ್ಣ ಸಮಾಜ ಜಿಲ್ಲೆಯಲ್ಲಿ ಸಂಘಟಿತರಾಗುತ್ತಿದ್ದೀರಿ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಒಟ್ಟಾಗಿ ಮುನ್ನಡೆಸುವುದು ತುಂಬಾ ಕಷ್ಟ. ಮಹಿಳೆಯರು ಸೇರಿದಂತೆ ಎಲ್ಲರೂ ಸಮಾಜವನ್ನು ಮುನ್ನಡೆಸಲು ಸಹಾಯ, ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಪಂ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ಈ ಹಿಂದಿನಂತೆ ಮುಂಬರುವ ದಿನಗಳಲ್ಲಿಯೂ ಸಹಿತ ನಾವು ಶಿವಶಿಂಪಿ ಸಮಾಜದವರಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ಹೇಳಿದರು.
ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಸಣ್ಣ ಸಮಾಜವಾಗಿದೆ. ನಮ್ಮ ಸಮಾಜಕ್ಕೆ ರಾಜಕೀಯವಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಲ್ಲ. ಮುಂಬರುವ ದಿನಮಾನಗಳಲ್ಲಿ ನಮ್ಮ ಸಮಾಜಕ್ಕೆ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ನೀಡಿ ಪ್ರತಿನಿಧಿಗಳು ಆಯ್ಕೆಯಾಗಲು ಅವಕಾಶ ಮಾಡಿಕೊಡಬೇಕೆಂದು ಬದಾಮಿ ತಾಲ್ಲೂಕ ಅಧ್ಯಕ್ಷ ನಾಗಪ್ಪ ಶಿವಣಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹೇಳಿದರು.

ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ, ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವ ತತ್ವ ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಜವಳಿ, ಅಶೋಕ ದೊಮ್ಮಲೂರು ಉಪನ್ಯಾಸ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.
ಮಲ್ಲಿಕಾರ್ಜುನ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಫಾರೂಖ ದೊಡ್ಡಮನಿ, ಚನ್ನಬಸಪ್ಪ ಅಥಣಿ, ವೀರಣ್ಣ ಬೆಳವಣಿಕಿ, ವಿನೋದ ಲೋಣಿ, ಯು.ಜಿ.ತಾಳಿಕೋಟಿ, ವೀರಣ್ಣ ಗಂಗಾವತಿ, ಅಶೋಕ ವಿ. ಶಿವಶಿಂಪಗೇರ, ಎಸ್.ಎಸ್. ಶಿರಶಿ, ಗಣೇಶ ಕುಬಸದ, ವೀರಣ್ಣ ಮುತ್ತಗಿ, ರಮೇಶ ಹೆಬ್ಬಳ್ಳಿ, ಶಿವಾನಂದ ಗಂಗಾವತಿ, ಸಂಗಮೇಶ ಸಿಂದಗಿ, ಸಂಗಮೇಶ ಅಂದೇಲಿ, ಚಂದ್ರಶೇಖರ ಸೂಡಿ, ಬಸವಂತಪ್ಪ ಶಿವಶಿಂಪಿ ಸೇರಿದಂತೆ ಮಹಿಳಾ ಹಾಗೂ ಯುವ ವೇದಿಕೆ ಸದಸ್ಯರು ಇದ್ದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಜನ ಶಿವಶಿಂಪಿ ಸಮಾಜ ಬಾಂಧವರು ಭಾಗವಹಿಸಿದ್ದರು.
ಮೆರವಣಿಗೆ:
ಬೆಳಗ್ಗೆ 8 ಗಂಟೆಗೆ ಶಿವಾನಂದ ಮಠದಿಂದ ಬಸವ ಭವನದವರೆಗೆ ಶರಣ ಶಿವದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ, ಮಹಿಳೆಯರಿಂದ ಕುಂಭ, ಜಾನಪದ ಕಲೆ, ಸಂಗೀತ ವಾದ್ಯಗಳ ಮೂಲಕ ಮುಖ್ಯರಸ್ತೆಗಳ ಮೂಲಕ ಮೆರವಣಿಗೆ ಬಸವ ಭವನಕ್ಕೆ ಬಂದು ತಲುಪಿತು.
ಉತ್ತಮ ವರದಿ.
ಶರಣು ಶರಣಾರ್ಥಿಗಳು…
ಯಾವ ಪಂಗಡಗಳನ್ನೂ ಈಗ OBC ಪಟ್ಟಿಗೆ ಸರಕಾರ ಸೇರಿಸುವುದಿಲ್ಲ. ಅದಕ್ಕೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೇಳುವುದು ಉತ್ತಮ
ಈ OBC ಪಟ್ಟಿಗೆ ಸೇರಿಸುವ ಬೇಡಿಕೆ ಬಿಟ್ಟು, ಲಿಂಗಾಯತ ಧರ್ಮವನ್ನು ಅಲ್ಪ ಸಂಖ್ಯಾತ ಧರ್ಮವನ್ನಾಗಿ ಘೋಷಿಸಲು ಹಕ್ಕೊತ್ತಾಯ ಚಳುವಳಿ ಮಾಡಿರಿ.
ಅಲ್ಪ ಸಂಖ್ಯಾತ ಧರ್ಮದ ಅನುಕೂಲದ ಜೊತೆಗೆ, ಬಡ ಪಂಗಡಗಳಿಗೆ ಸಿಗುವ ಸೌಲಭ್ಯಗಳು ಸಿಗುತ್ತವೆ.
ನಾವೆಲ್ಲರು ವಯ್ಯಕ್ತಿಕ ಮೀಸಲಾತಿ ಕೇಳಿದರೆ ಕೊಡುವುದಿಲ್ಲ. ಸಾಮೂಹಿಕವಾಗಿ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ದೊರೆತರೆ ಜೈನ, ಭೌದ್ಧ, ಸಿಖ್ ರಂತೆ ಅಲ್ಪಸಂಖ್ಯಾತ ಸೌಲಭ್ಯ ಅಲ್ಲದೆ ಲಿಂಗಾಯತ ಧರ್ಮದ ಬೆಳವಣಿಗೆ ಸಾಧ್ಯವಾಗುತ್ತದೆ.
ಯಾವುದೇ ಲಿಂಗಾಯತ ಧರ್ಮದ ಕಾಯಕ ವರ್ಗದವರೇ ಆದರೊ ಮೊದಲಿಗೆ ವಿಶ್ವಗುರು ಬಸವಣ್ಣ ನಂತರ ಅವರ ವರ್ಗದ ಆದಿಗುರು ಗಳ ಸ್ಮರಣೆ ಮಾಡುವುದು ಸಮಂಜಸ. ಇಲ್ಲಿ ಅನೇಕ ವ್ಯಕ್ತ ಪಡಿಸಿದ ಅಭಿಪ್ರಾಯದಂತೆ ಲಿಂಗಾಯತ / ಬಸವ ಧರ್ಮಕ್ಕೇ ಆಲ್ಪ ಸಂಖ್ಯಾತ ಸ್ಥಾನಮಾನ ಸಿಕ್ಕರೆ ಅನಂತರ ಸಿಖ್ ಧರ್ಮದವರಂತೆ ನಮ್ಮಲ್ಲೂ ಅವರವರ ವರ್ಗಗಳಲ್ಲಿ ಮೀಸಲಾತಿ ಪಡೆಯಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಕಾಯಕ ವರ್ಗದವರಿಗೇ ಮೀಸಲಾತಿ ಕೇಳುತ್ತಾ ಹೋದರೆ ಅಂತಿಮವಾಗಿ ಬಸವ ಭಕ್ತರಲ್ಲಿ ಒಡಕು ಉಂಟಾಗಿ ಇಡೀ ಬಸವ ಧರ್ಮದ ಅನುಯಾಯಿಗಳ ಅಭಿವೃದ್ಧಿಗೆ ದಕ್ಕೆ ಬರಬಹುದು.