ಮಾನ್ವಿ
“ಕೊಟ್ಟ ಕುದುರೆ ಏರಲಾರದ ಕುಮಾರಸ್ವಾಮಿ ವೀರನೂ ಅಲ್ಲ, ಶೂರನೂ ಅಲ್ಲ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಮ ಪ್ರಭುಗಳ ಪ್ರಸಿದ್ಧ ವಚನ ಬಳಸಿಕೊಂಡು ಕೇಂದ್ರ ಸಚಿವ ಕುಮಾರಸ್ವಾಮಿಯವರ ಮೇಲೆ ಶನಿವಾರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಷವನ್ನು ಉದ್ಘಾಟಿಸಿ ಮಾತನಾಡುತ್ತಾ “ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶವೂ ಇತ್ತು.
ಅಧಿಕಾರ, ಅವಕಾಶ ಇದ್ದಾಗ ಜನಪರ ಕೆಲಸ ಮಾಡದ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಈಗ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ,” ಎಂದು ಹೇಳಿದರು.
“ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏನಿದ್ದರೂ ಆಪರೇಷನ್ ಕಮಲದ ಮೂಲಕ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಬೈಪಾಸ್ ಹಾದಿಯಲ್ಲೇ ಅಧಿಕಾರ ಹಿಡಿಯಲು ಕಾದು ಕುಳಿತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೂ ಜನರ ಕೆಲಸ ಮಾಡಲಿಲ್ಲ,” ಎಂದು ಕಿಡಿಕಾರಿದರು.
“ಕಾರಣವೇ ಇಲ್ಲದೆ ರಾಜೀನಾಮೆ ಕೊಡಿ, ರಾಜಿನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ. ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗೋನೂ ಅಲ್ಲ. ಬಗ್ಗೋನೂ ಅಲ್ಲ. ಹೋರಾಟ ಮುಂದುವರೆಸ್ತೀನಿ” ಎಂದರು.