(ಜುಲೈ 25 ಶರಣ ಲಿಂಗಣ್ಣ ಸತ್ಯಂಪೇಟೆಯವರ 12ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ)
ಶಹಾಪುರ
ಅಣ್ಣಾ ಲಿಂಗಣ್ಣ ಸತ್ಯಂಪೇಟೆಯವರು ಯಾರಾದರೂ ಹೆಚ್ಚು ಹೊತ್ತು ಮಾತನಾಡುತ್ತಿದ್ದರೆ, “ಏ, ಏನ ಮಾತನಾಡುತ್ತೀಯಪ್ಪಾ ಮಾರಾಯಾ? ಕೆಟ್ಟ ಅನಾಸಿನ್ ಇದ್ದ ಹಾಗೆ ಅದಾನೆ” ಎನ್ನುತ್ತಿದ್ದರು. ಅವರ ಈ ಮಾತುಗಳನ್ನು ಕೇಳಿ ನಾವೆಲ್ಲಾ ನಗುತ್ತಿದ್ದೆವು.
ಒಮ್ಮೆ ನಮ್ಮ ಗೆಳೆಯರ ಬಳಗವನ್ನು ಕರೆದುಕೊಂಡು ಕೂಡಲಸಂಗಮಕ್ಕೆ ಹೋಗಿದ್ದರು. ಅಲ್ಲಿ ಮಾತೆ ಮಹಾದೇವಿ ತಾಯಿಯವರ ಶರಣ ಮೇಳ ನಡೆಯುತ್ತಿತ್ತು. “ಅಲ್ಲಿಗೆ ಹೋಗೋಣ” ಎಂದು ನಮ್ಮೆಲ್ಲರನ್ನು ಕರೆದುಕೊಂಡು ಹೋದರು. ನಾನು “ಸರ್, ನಿಮಗ ಅವರಿಗೆ ಸರಿ ಬರೊದಿಲ್ಲ, ಸುಮ್ಮನೆ ಯಾಕೆ ಅಲ್ಲಿಗೆ ಹೋಗುವುದು? ನೋಡಿದರೆ ಅವರು ಏನಾದರೂ ಮಾತನಾಡುತ್ತಾರೆ, ಬೇಡ” ಅಂದೆ. ಆದರೆ ಅವರು ಕೇಳಲಿಲ್ಲ, ಅಲ್ಲಿ ಹೋಗಿ ಕುಳಿತೆವು. ಲಿಂಗಣ್ಣನವರು ಬಂದಿದ್ದಾರೆ ಎಂದು ಅವರಿಗೆ ಗೊತ್ತಾಯಿತು. ಮಾತೆ ಮಹಾದೇವಿಯವರು ಮಾತನಾಡುವಾಗ ಪತ್ರಕರ್ತರ ಬಗ್ಗೆ ಹೆಸರು ಹೇಳದೆ ಟೀಕೆ ಶುರುಮಾಡಿದರು. ಆಗ ಅಣ್ಣನವರು, “ಏ, ನಡಿರಿ ಹೋಗೋಣ, ಇವರದ್ದೇ ಇದೆ ಹಣೆಬರ” ಎಂದು ಹೊರಗೆ ಬಂದೆವು.
ಅಲ್ಲಿಂದ ಐಹೊಳೆ, ಪಟ್ಟದಕಲ್ಲನ್ನು ನೋಡಿಕೊಂಡು ಬರುವುದರೊಳಗೆ ಸಂಜೆ ಆಗಲಿಕ್ಕೆ ಬಂತು. “ಇಲಕಲ್‌ಗೆ ಹೋಗೋಣ, ಅಲ್ಲಿ ವಾಸ್ತವ್ಯ ಮಾಡಿ ನಾಳೆ ಶಹಾಪುರಕ್ಕೆ ಹೋಗೋಣ” ಅಂದರು. ಇಲಕಲ್‌ಗೆ ಹೋಗಲು ಕೊನೆಯ ಬಸ್ಸು. ನಾವು ಹತ್ತು ಮಂದಿ ಇದ್ದೆವು: ನಾನು, ಸೂಗಯ್ಯ ಹಿರೇಮಠ, ಮಹಾಂತಗೌಡ ಸರ್, ಚಂದ್ರಕಾಂತ ಕರದಳ್ಳಿ, ದಾವಲಸಾಬ್ ಗುಂಡಳ್ಳಿ, ಶಂಕ್ರಪ್ಪ ಮಾಸ್ತರ ಮಣ್ಣುರ, ಸಿದ್ದಣ್ಣಗೌಡ ಬಾಚಿಮಟ್ಟಿ, ವಿಶ್ವ – ಹೀಗೆ ಎಲ್ಲರೂ ಬಸ್ಸಿನಲ್ಲಿ ಜಾಗ ಇರಲಾರದೆ ಟಾಪ್ ಮೇಲೆ ಕುಳಿತು ಇಲಕಲ್ ತಲುಪಿದೆವು. ಆಗಲೇ ರಾತ್ರಿ ಆಗಿತ್ತು. ಅಣ್ಣನವರು ಮಠದೊಳಗೆ ಹೋಗಿ, “ಅಪ್ಪಾಜಿ ಅವರು ಇದ್ದಾರೆಯೇ?” ಎಂದು ಕೇಳಿದರು. ಆಗ ಅವರ ಮಠದ ಮರಿ ಬಂದವರು ಅವರನ್ನು ಕೂರಲು ಹೇಳಿ, “ಸರ್, ಅಪ್ಪಾಜಿ ಊರಿನಲ್ಲಿ ಇಲ್ಲ. ಏನು ಸಮಾಚಾರ?” ಅಂದಾಗ, “ನಮಗೆ ಬಸ್ಸು ತಪ್ಪಿದೆ, ಅದಕ್ಕೆ ನಮಗೆ ಇವತ್ತು ಇಲ್ಲಿ ಇರಲು ವ್ಯವಸ್ಥೆ ಮಾಡಬೇಕು” ಅಂದರು. ಆಗ ಅವರು, “ಆಗಲಿ ಸರ್, ಇಪ್ಪತ್ತು ನಿಮಿಷ ತಾಳಿ, ಪ್ರಸಾದದ ವ್ಯವಸ್ಥೆ ಮಾಡಿಸುತ್ತೇನೆ” ಎಂದು ಒಳಗೆ ಇದ್ದವರಿಗೆ ಹೇಳಿ ಬಂದು ಅಣ್ಣನವರ ಜೊತೆ ಮಾತನಾಡುತ್ತಾ ನಿಂತರು.
ಅಣ್ಣನವರು ಮತ್ತು ಮರಿಸ್ವಾಮಿ ಮಾತನಾಡುತ್ತಾ ಇದ್ದರು. ನಾವು ಬೇರೆ ಕಡೆ ಮಾತನಾಡುತ್ತಿದ್ದೆವು. ಕರದಳ್ಳಿ, ನಾನು, ಮಾಂತಗೌಡ – ನಮಗೆ ಹಸಿವು ಜೋರಾಗಲಿಕ್ಕೆ ಶುರುವಾಗಿತ್ತು. ಆಗ ಕರದಳ್ಳಿ, “ಎಷ್ಟು ಹೊತ್ತು ಮಾತನಾಡುತ್ತಾರೆಪ್ಪಾ? ನಮಗೆ ಹಸಿವಿನಿಂದ ಸಾಯುವ ಹಾಗಾಗಿದೆ” ಅಂದನು. ಆಗ ನಾನು ಕರದಳ್ಳಿಗೆ, “ಮಾಸ್ತರ, ಮಂದಿ ಹೆಚ್ಚು ಹೊತ್ತು ಮಾತನಾಡಿದರೆ ‘ಏನೋ ಅನಾಸಿನ್ ಇದ್ದ ಹಾಗೆ ಅದಾವೊ’ ಎನ್ನುತ್ತಿದ್ದರು. ಈಗ ನೋಡು, ಆ ಮರಿಸ್ವಾಮಿಗೆ ಜಂಡುಬಾಮ್ ಗಂಟುಬಿದ್ದ ಹಾಗೆ ಗಂಟುಬಿದ್ದಾನ” ಎಂದು ಅಂದೆ. ಕರದಳ್ಳಿ ನಗಲಿಕ್ಕೆ ಶುರುಮಾಡಿದ. “ಯಾಕೆ ನಗಲಿಕ್ಕೆ ಶುರುಮಾಡಿದ್ದೀರಿ?” ಎಂದು ಅಣ್ಣನವರು ನಮ್ಮ ಕಡೆ ಬಂದರು. ಆಗ ಕರದಳ್ಳಿ, “ಶಿವಣ್ಣ ನಿಮಗೆ ‘ಜಂಡು ಬಾಮ್’ ಅಂದ, ಅದಕ್ಕೆ ನಗುತ್ತಿದ್ದೇವೆ” ಎಂದು ಹೇಳಿಬಿಟ್ಟ. ಆಗ ಅಣ್ಣನವರು ಮುಖ ಕೆಂಪಗೆ ಮಾಡಿ, “ಹಾ! ಮತ್ತೇ ಮಾತನಾಡಿದರೆ ನಿಮಗೆಲ್ಲರಿಗೂ ಊಟಕ್ಕೆ ಸಿಗುತ್ತದೆ. ಇಲ್ಲ ಅಂದರೆ ಉಪವಾಸ ಬೀಳಬೇಕಾಗುತ್ತದೆ” ಅಂದರು. ಆಗ ಮಠದವರು ಊಟಕ್ಕೆ ಕರೆದರು. ಎಲ್ಲರೂ ಊಟ ಮಾಡಿ ರಾತ್ರಿ ಅಲ್ಲಿ ಮಲಗಿಕೊಂಡು ಮುಂಜಾನೆ ಶಹಾಪುರಕ್ಕೆ ಬಂದೆವು.
ಸಿಟ್ಟು ಶಾಶ್ವತ ಅಲ್ಲ, ಪ್ರೀತಿ ಶಾಶ್ವತ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮುಂಜಾನೆ ಬೈದದ್ದು ಅವರಿಗೆ ಸಂಜೆಗೆ ನೆನಪಿರುತ್ತಿರಲಿಲ್ಲ. ಮತ್ತೆ ಫೋನ್ ಮಾಡಿ “ಬಾ” ಎಂದು ಕರೆಯುತ್ತಿದ್ದರು. ಅಣ್ಣಾ ನಮ್ಮನ್ನು ಬಿಟ್ಟು ಹೋಗಿ ೧೨ ವರ್ಷಗಳಾಯಿತು, ಆದರೂ ಆ ನೆನಪು ಮರೆಯಲು ಸಾಧ್ಯವೇ? ಇವತ್ತು ಅವರ ೧೩ನೇ ಪುಣ್ಯಸ್ಮರಣೆಯ ನಿಮಿತ್ತ ಈ ಮಾತುಗಳನ್ನು ಬರೆದಿರುವೆ, ಆದರೆ ಅವರನ್ನು ನೆನೆಯದ ದಿನವೇ ಇಲ್ಲ.