ಬಜೆಟ್ ಕುರಿತಂತೆ ಬಸವ ಮಿಡಿಯಾ ಪ್ರಶ್ನೆಗಳಿಗೆ ಬಸವ ರೇಡಿಯೋ ಸಂಪಾದಕ ಶರಣ ಎಚ್ ಎಂ ಸೋಮಶೇಖರಪ್ಪ ಅವರ ಅಭಿಪ್ರಾಯ.
- ಶರಣ ಸಮಾಜದ ಬೇಡಿಕೆಗಳ ಬಗ್ಗೆ ಬಜೆಟ್ ಸ್ಪಂದಿಸಿದೆಯೇ?
ಲಿಂಗಾಯತ ಸಮುದಾಯದ ಮುಖಂಡರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬಸವ ತತ್ವ ಪ್ರಸಾರಕ್ಕಾಗಿ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದರು.
ಈ ಬಾರಿಯ ಬಜೆಟ್ ನಲ್ಲಿ ಒಂದು ಆಶ್ವಾಸನೆ ಬಿಟ್ಟರೆ ನಿರ್ದಿಷ್ಟವಾದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದೇ ಹೇಳಬೇಕು. ಲಿಂಗಾಯತ ಸಮಾಜಕ್ಕೆ ಅಲ್ಲದಿದ್ದರೂ, ಸರ್ಕಾರವೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತು ಸಮಸಾಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಸಲುವಾಗಿ ಬಸವ ತತ್ವದ ಹೆಚ್ಚಿನ ಸಂಶೋಧನೆ, ಪ್ರಸಾರಕ್ಕೆ ಹಾಗೂ ಶರಣರ ಸ್ಮಾರಕಗಳ ರಕ್ಷಣೆಗೆ ಈ ಬಜೆಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು.
- ಸ್ಪಂದಿಸದಿರಲು ಕಾರಣವೇನು?
ಬಸವತತ್ವದ ಅಭಿಮಾನಿಯಾಗಿರುವ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಬಸವಣ್ಣನವರಿಗಾಗಿ ಈ ಹಿಂದೆ ಯಾವುದೇ ಮುಖ್ಯಮಂತ್ರಿಗಳೂ ಮಾಡಿರದ (ಹಲವು ಲಿಂಗಾಯತ ಮುಖ್ಯಮಂತ್ರಿಗಳೂ ಸೇರಿದಂತೆ) ಕೆಲಸಗಳನ್ನು ಮಾಡಿದ್ದಾರೆ.
ಬಸವಣ್ಣನವರ ಭಾವಚಿತ್ರಗಳನ್ನು ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಹಾಕಿಸುವ ಆದೇಶ; ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು; ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿಯವರ ಹೆಸರು; ಶಿವಮೊಗ್ಗದ ಉದ್ಯಾನವನವೊಂದಕ್ಕೆ ಅಲ್ಲಮ ಪ್ರಭುಗಳ ಹೆಸರು, “ಬಸವಣ್ಣ-ಕರ್ನಾಟಕದ ಸಾಂಸ್ಕೃತಿಕ ನಾಯಕ” ಘೋಷಣೆ ಇತ್ಯಾದಿ.
ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗಲೂ ಬಿಜೆಪಿಯಲ್ಲಿರುವ ಒಬ್ಬನೇ ಒಬ್ಬ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಅದನ್ನು ಸ್ವಾಗತಿಸುವ ಎದೆಗಾರಿಕೆಯನ್ನೂ ತೋರಿಸಲಿಲ್ಲ. ಇದನ್ನು ನೋಡಿದರೆ ಸಿದ್ದರಾಮಯ್ಯನವರ ಕೊಡುಗೆಯ ಮಹತ್ವ ಅರ್ಥವಾಗುತ್ತದೆ.
ಅನುದಾನ ಮನವಿಗೆ ಅವರು ಸ್ಪಂದಿಸದಿರಲು ಲಿಂಗಾಯತ ಸಮಾಜ ಅವರನ್ನು ಬೆಂಬಲಿಸಿಲ್ಲ ಅನ್ನುವ ನೋವು ಇರಬಹುದೇ ಅನ್ನುವ ಪ್ರಶ್ನೆ ಏಳುತ್ತದೆ.
ಸಿದ್ದರಾಮಯ್ಯ ತೊಂದರೆಯಲ್ಲಿದ್ದಾಗ ಸ್ವತಂತ್ರ ಧರ್ಮದ ಮಾನ್ಯತೆಗೆ ಸರ್ಕಾರದ ಮೇಲೆ ಒತ್ತಡ ತಂದ ಹಲವು ಮಠಾಧೀಶರುಗಳು ಅವರ ಸಹಾಯಕ್ಕೆ ಬಾರದೆ ಅಡ್ಡಗೋಡೆ ಮೇಲೆ ಕುಳಿತಿದ್ದರು.
ಸೈದ್ಧಾಂತಿಕವಾಗಿ ಲಿಂಗಾಯತ ಧರ್ಮದ ವಿರುದ್ಧವಿರುವ ಸಂಘಟನೆ ಮತ್ತು ರಾಜಕೀಯ ಪಕ್ಷದೊಟ್ಟಿಗೆ ಬಹುಸಂಖ್ಯಾತ ಲಿಂಗಾಯತ ಸಮುದಾಯ ಗುರುತಿಸಿಕೊಂಡಿರುವುದು ಎದ್ದು ಕಾಣುತ್ತಿದೆ.
ಜೊತೆಗೆ ಲಿಂಗಾಯತ ಸಮಾಜ ಸಮಯ ಮತ್ತು ಸಂದರ್ಭಕ್ಕೆ ಸರಿಯಾಗಿ ಸರಿಯಾದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೋತಿರುವುದು ಮತ್ತೊಂದು ಪ್ರಮುಖ ಕಾರಣವಾಗಿ ಕಾಣುತ್ತಿದೆ.
- ಇದಕ್ಕೆ ಬಸವ ಅನುಯಾಯಿಗಳ ಪ್ರತಿಕ್ರಿಯೆ ಹೇಗಿರಬೇಕು?
ಬಸವ ಅನುಯಾಯಿಗಳು ಅಂದರೆ ಲಿಂಗಾಯತ ಸಮಾಜ ಯಾವುದೇ ಪಕ್ಷದ ಅಥವಾ ರಾಜಕೀಯ ಮುಖಂಡರ ಗುಲಾಮರಲ್ಲ ಬದಲಾಗಿ ಸಮಾಜದ ಏಳಿಗೆಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ ಅನ್ನುವ ಸಂದೇಶವನ್ನು ಕೊಡಬೇಕಾಗಿದೆ.
ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಸಿಕ್ಕಿರುವ ಕೇಂದ್ರ ಸರ್ಕಾರದ ಮಾನ್ಯತೆ ಲಿಂಗಾಯತ ಧರ್ಮಕ್ಕೆ ಇನ್ನೂ ಸಿಕ್ಕಿಲ್ಲ. ನಮ್ಮ ಏಕೈಕ ಗುರಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ಆಗಬೇಕು.
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಲಿಂಗಾಯತ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಬಿಂಬಿಸಲು ಸಂಘಪರಿವಾರ ಮತ್ತು ಅದರ ರಾಜಕೀಯ ಮುಖವಾಗಿರುವ ಬಿಜೆಪಿ ಹರಸಾಹಸ ಪಡುತ್ತಿದೆ. ಅದಕ್ಕೆ ಲಿಂಗಾಯತ ಸಮಾಜ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲಾ ಬಸವಪರ ಸಂಘಟನೆಗಳು ತೆಗೆದುಕೊಳ್ಳಬೇಕು.
ಲಿಂಗಾಯತರು ವೈದಿಕ ಆಚರಣೆಯಲ್ಲಿ ಮುಳುಗಿರುವುದರಿಂದ ತಾವು ಬಸವಣ್ಣನವರ ಅನುಯಾಯಿಗಳೆನ್ನುವುದೆ ಮರೆತು ಹೋಗಿದೆ. ಹಿಂದೂ ಧರ್ಮದ ಸಂಘಟನೆಗಳಲ್ಲಿ ಇವರಿಗೆ ಯಾವ ಸ್ಥಾನಮಾನವೂ ಇಲ್ಲ. ಇತ್ತ ಲಿಂಗಾಯತ ಸಂಘಟನೆಯಲ್ಲೂ ಇಲ್ಲ.
ಇದಕ್ಕೆಹಿಂದಿಯಲ್ಲಿ ಒಂದು ಕಹಾವತ್ ಇದೆ
“ದೋಭಿ ಕಾ ಕುತ್ತಾ ನ ಘರ್ ಕಾ ನ ಘಾಟಕಾ”
ಅಂದರೆ ಅಗಸನ ನಾಯಿ ಇತ್ತ ಮನೆಯದೂ ಅಲ್ಲಾ ಅತ್ತ ಹಳ್ಳದ್ದೂ ಅಲ್ಲ.