ಸಂಭ್ರಮದಿಂದ ನಡೆದ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ

ಕೂಡಲಸಂಗಮ :

ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ೩೯ನೇ ಶರಣ ಮೇಳದ ಕೊನೆಯ ದಿನವಾದ ಬುಧವಾರ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ನಡೆಯಿತು.

ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆಯ ನಿಮಿತ್ಯ ಶರಣ ಮೇಳಕ್ಕೆ ಆಗಮಿಸಿದ ಶರಣ ಶರಣಿಯರು ಸುಪ್ರಭಾತದಲ್ಲಿ ಎದ್ದು ಸ್ನಾನ-ಇಷ್ಟಲಿಂಗಾರ್ಚನೆ-ಬಸವಾರ್ಚನೆ ಪೂರೈಸಿ ಗಣಲಿಂಗ ದರ್ಶನ ಮತ್ತು ಸ್ಪರ್ಶ, ಧ್ವಜಾರೋಹಣ ಮತ್ತು ಗುರುವಂದನೆ, ಸಮುದಾಯ ಪ್ರಾರ್ಥನೆ, ಕುಸುರೆಳ್ಳು ವಿನಿಮಯ, ವಚನ ಪಠಣ, ಬಸವ ಐಕ್ಯ ಮಂಟಪದ ದರ್ಶನ, ಸಾಮೂಹಿಕ ಇಷ್ಟಲಿಂಗಾರ್ಚನೆ ವಿದಿಗಳಲ್ಲಿ ಭಾಗವಹಿಸಿದರು.

ಮಹಾಮನೆಯ ಮುಂಭಾಗದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆಯ ಧ್ವಜಾರೋಹಣವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಮಾಡಿದರು. ಧ್ವಜಾರೋಹಣದಲ್ಲಿ ಮಾತೆ ಗಂಗಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವ ಕುಮಾರ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಮಾತೆ ಬಸವರತ್ನಾ ಮುಂತಾದವರು ಇದ್ದರು. ಧ್ವಜಾರೋಹಣದ ನಂತರ ಗುರುವಂದನಾ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಸಮಾರಂಭದಲ್ಲಿ ಶರಣ ಶರಣಿಯರು ಭಾಗವಹಿಸಿದ್ದರು.

ಮಹದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ೨೧ನೇ ವಯಸ್ಸಿನಲ್ಲಿ ಜನವರಿ ೧೪, ೧೧೫೫ರಲ್ಲಿ ಲಿಂಗಾಯತ ಧರ್ಮವನ್ನು ಸಂಸ್ಥಾಪಿಸಿದರು, ಆದರಿಂದ ಜನವರಿ ೧೪ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ. ಇದನ್ನು ಬಸವ ಕ್ರಾಂತಿ ದಿನ ಎಂದು ಕರೆಯಲಾಗುತ್ತದೆ.

ದೇವಸಾಕ್ಷಾತ್ಕಾರ ಹೊಂದಿ ಇಷ್ಟಲಿಂಗದ ಪರಿಕಲ್ಪನೆ ನೀಡಿದ ದಿನವೂ ಕೂಡಾ ಇದೆ ಆಗಿದೆ. ಆದ್ದರಿಂದ ಎಲ್ಲ ಲಿಂಗಾಯತರು ಪ್ರತಿವರ್ಷ ಜನವರಿ ೧೪ರಂದು ಕೂಡಲಸಂಗಮಕ್ಕೆ ಬಂದು ೯ ವಿಧಿಗಳಲ್ಲಿ ಪಾಲ್ಗೊಳಬೇಕು ಎಂದು ಹೇಳಿದರು.

ಪ್ರಾರ್ಥನೆ, ವಚನ ಪಠಣ : ಬಸವ ಕ್ರಾಂತಿ ದಿನಾಚರಣೆ ನಿಮಿತ್ಯ ವೇದಿಕೆಯಲ್ಲಿ ಮೂರು ಗಂಟೆಗಳ ಕಾಲ ವಚನ ಪಠಣ, ಸಾಮೂಹಿಕ ಪ್ರಾರ್ಥನೆ ಮಾಡಿದರು. ನಂತರ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವತತ್ವಾನುಯಾಯಿಗಳೆಲ್ಲರೂ ಸಹೋದರ ಭಾವನೆಯಿಂದ ಒಂದೆಡೆ ಸೇರಿ ಸಮುದಾಯ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸಬೇಕು.

ಶರಣಮೇಳದ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದ ಶರಣ ಬಂಧುಗಳು ಕನಿಷ್ಠ ಪಕ್ಷ ಜನವರಿ ೧೪ ರಂದು ಒಂದು ದಿನದ ಮಟ್ಟಿಗಾದರೂ ಸಮುದಾಯ ಪ್ರಾರ್ಥನೆ, ವಚನ ಪಠಣದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.

ವಚನ ಸಾಹಿತ್ಯ ಲಿಂಗಾಯತ ಧರ್ಮದ ಧಾರ್ಮಿಕ ಸಂವಿಧಾನ. ಆದ್ದರಿಂದ ಎಲ್ಲ ಶರಣ ಶರಣೆಯರು ವಚನ ಸಾಹಿತ್ಯವನ್ನು ಪಾರಾಯಣ, ಪಠಣ ಮಾಡಬೇಕು ಎಂದು ಹೇಳಿದರು.

೩೯ನೇ ಶರಣ ಮೇಳದ ನಿರ್ಣಯಗಳು :

ಸಮುದಾಯ ಪ್ರಾರ್ಥನೆ, ವಚನ ಪಠಣ ಸಮಾರಂಭದಲ್ಲಿ ೩೯ನೇ ಶರಣ ಮೇಳ ಕೈಗೊಂಡ ನಿರ್ಣಯಗಳನ್ನು ನ್ಯಾಯವಾದಿ ಕರಬಸಪ್ಪ ಕೋರಿಶೆಟ್ಟರ ಘೋಷಿಸಿದರು. ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಎನ್. ಚಂದ್ರಮೌಳಿ ಅನುಮೋದಿಸಿದರು.

೧. ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮದಲ್ಲಿ ನಿರ್ಮಿಸುತ್ತಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರ ಮ್ಯೂಸಿಯಂ ಕಾಮಕಾರಿಯನ್ನು ಸರ್ಕಾರ ಬೇಗ ಮುಗಿಸಬೇಕು.

೨. ಹಿಂದೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ ನಾಗಮೋಹನದಾಸ ವರದಿಯನ್ನು ಪುನ: ಮರು ಶಿಫಾರಸ್ಸು ಮಾಡಬೇಕು.

೩. ಹುನಗುಂದ ವಿಧಾನಸಭಾ ಮತಕ್ಷೇತ್ರವನ್ನು ಕೂಡಲಸಂಗಮ ಮತಕ್ಷೇತ್ರ ಎಂದು ಮರು ನಾಮಕರಣ ಮಾಡಬೇಕು.

೪. ರಾಜ್ಯದ ೧೨ ಜಿಲ್ಲೆಯಲ್ಲಿ ನಾನು ಲಿಂಗಾಯತ ಅಭಿಯಾನ, ರಾಷ್ಟ್ರೀಯ ಬಸವ ದಳ ಸಮಾವೇಶ ಮಾಡುವುದು.

೫. ಬೆಂಗಳೂರು ಯಶಂವತಪುರ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಕೆಂದ್ರಕ್ಕೆ ಶಿಫಾರಸ್ಸು ಮಾಡಬೇಕು.

೬. ಲಿಂಗಾಯತ ಮಠಾಧೀಶರ ಒಕ್ಕೂಟ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಪಾಲ್ಗೊಳ್ಳಬೇಕು.

೭. ಧಾರವಾಡ-ಉಳವಿ ಮಾರ್ಗದಲ್ಲಿ ಬಗೆಬಗೆಯ ಸುಂದರ ಹೂವಿನ ಗಿಡಗಳನ್ನು ಅರಣ್ಯ ಇಲಾಖೆ ನೆಡಬೇಕು.

೮. ಸರ್ಕಾರಿ, ಅನುದಾನಿತ ಶಾಲೆಯಲ್ಲಿ ರಾಷ್ಟ್ರೀಯ ಬಸವ ದಳದ ಸದಸ್ಯರು ವ್ಯಕ್ತಿತ್ವ ವಿಕಸನ ಶಿಬಿರ ಮಾಡಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *