ಬೀದರ್
ಹುಟ್ಟನ್ನು ಸಂಭ್ರಮಿಸಿ, ಸಾವನ್ನು ಸೂತಕವೆನ್ನುವುದು ಸರಿಯಲ್ಲ. ಶರಣರಂತೆ ಸನ್ನಡತೆ ರೂಢಿಸಿಕೊಂಡು ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಶಿವಕುಮಾರ ಸ್ವಾಮಿ ಹೇಳಿದರು.
ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ನಾಲ್ಕನೇ ದಿನವಾದ ಭಾನುವಾರ ನಡೆದ ಮರಣವೇ ಮಹಾನವಮಿ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆತ್ಮವಿಕಾಸದೆಡೆಗೆ ಮೈ, ಮನಸ್ಸುಗಳನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಮಾಜದಲ್ಲಿ ಮೂಢತನ, ಶೋಷಣೆ ತೊಲಗಿಸಲೆಂದೇ ವಚನ ರಕ್ಷಣೆಗೆ ಪಣ ತೊಟ್ಟ ಬಸವಾದಿ ಶರಣರು ಬಲಿದಾನಕ್ಕೆ ಮುಂದಾದರು ಎಂದು ಹೇಳಿದರು.
ಶರಣರು ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳನ್ನು ಜನಮನದಲ್ಲಿ ಬಿತ್ತಿದ್ದೇ ಪುರೋಹಿತಶಾಹಿ, ರಾಜಶಾಹಿಗಳ ಹೊಟ್ಟೆಕಿಚ್ಚಿಗೆ ಕಾರಣವಾಯಿತು. ಬಸವಣ್ಣನವರ ವೈಚಾರಿಕ ಪ್ರಜ್ಞೆಯನ್ನು ಯುವ ಪೀಳಿಗೆ ಅರ್ಥೈಸಿಕೊಂಡು ಕರ್ಮಠತನದ ಸಿದ್ಧಾಂತ ಬಿಟ್ಟು ಕಾಯಕ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಲೇಸೆನಿಸಿಕೊಂಡು ಬದುಕಬೇಕು. ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಪ್ರಗತಿಯ ಲಕ್ಷಣವಲ್ಲ. ಯುವ ಪೀಳಿಗೆ ಸಮಾಜಕ್ಕೆ ಕಂಟಕರಾಗಿ ಬೆಳೆಯದೆ, ಸ್ಫೂರ್ತಿಯಾಗಿ ಬೆಳೆಯಲು ಇಂಥ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಸಾವೆಂದರೆ ಹೆದರಿಕೆ ಬೇಡ, ಒಳಗೆ ಸುಳಿವ ಆತ್ಮ ಅವಿನಾಶಿ. ಈ ಸತ್ಯವನರಿತು ಜನನ-ಮರಣಗಳನ್ನು ಸಮನಾಗಿ ಕಾಣಬೇಕು ಎಂದರು.
ಪರಮಾತ್ಮನ ಅಂಶವಾದ ಜೀವಿಗಳು ಮತ್ತೆ ಪರಮಾತ್ಮನಲ್ಲಿ ಬೆರೆವುದೆ ಸಾವು. ಬದುಕಿನಲ್ಲಿ ನಿರ್ಮೋಹತ್ವ ಅಳವಡಿಸಿಕೊಂಡು, ಸಾವನ್ನು ಎದುರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶರಣರು ಜಗದಾಟವನ್ನು ಮರೆದು ಪರಮಾತ್ಮನ ಒಲವೊಂದನ್ನೇ ಬಯಸಿದರು. ಮಾನವೀಯ ಮೌಲ್ಯಗಳ ಸ್ಥಾಪನೆಗಾಗಿ ಪ್ರಾಣ ಕೊಡಲು ಹಿಂಜರಿಯಲಿಲ್ಲ. ಅದಕ್ಕಾಗಿಯೇ ಶರಣರನ್ನು ಮರಣದಲ್ಲಿ ನೋಡು ಎಂಬ ಮಾತು ಜನಜನಿತವಾಗಿದೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಕೃಷಿ ಉಪನಿರ್ದೇಶಕ ಸೂರ್ಯಕಾಂತ ಬಿರಾದಾರ ಮಾತನಾಡಿ, ಎಲ್ಲ ರಂಗಗಳಲ್ಲಿ ಕ್ರಾಂತಿಗೈದ ಕಾರಣ ಬಸವಣ್ಣ ಕ್ರಾಂತಿಯೋಗಿ ಎನಿಸಿದ್ದರು. ನಿಜವಾದ ಕಾಯಕಯೋಗಿಗಳೆಂದರೆ ಜಗತ್ತಿಗೆ ಅನ್ನ ನೀಡುವ ರೈತ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ನೀಲಮ್ಮ ರೂಗನ್ ಮಾತನಾಡಿ, ಬಸವ ತತ್ವದ ಮೊದಲ ಪಾಠ ಹೇಳಿಕೊಟ್ಟಿದ್ದ ಅಕ್ಕ ಅನ್ನಪೂರ್ಣತಾಯಿ ಅವರು ನಮ್ಮನ್ನೆಲ್ಲ ತಿದ್ದಿ ತಿದ್ದಿ ಲಿಂಗಸ್ವರೂಪಿ ಮಾಡಿದ್ದರು ಎಂದು ನೆನೆದು ಭಾವುಕರಾದರು.
ನೀಲಮ್ಮನ ಬಳಗದ ಪ್ರಭಾವತಿ ಮಾಣಿಕಪ್ಪ ಗೋರನಾಳೆ, ಕೆ.ಎಂ.ಎಫ್. ಉಪನಿರ್ದೇಶಕಿ ಅಂಬುಜಾ ಸಂಗಮೇಶ ಪಾಟೀಲ, ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ ಮೂಲಗೆ, ಚಿಂತಕ ಕಾಶೀನಾಥ ಲದ್ದೆ, ಸಾಹಿತಿ ರಮೇಶ ಮಠಪತಿ ಇದ್ದರು.
ಪ್ರೇಮ ರಾಜಭವನ ವಚನ ಪಠಣ, ಜ್ಯೋತಿ ಎಸ್. ಪಾಟೀಲ, ವಿಷ್ಣುಕಾಂತ ಜ್ಯೋತಿ ವಚನ ಗಾಯನ, ನೀಲಮ್ಮನ ಬಳಗದ ಸಿದ್ದಮ್ಮ ಶರಣಬಸಪ್ಪ ಹಾಗೂ ಮಹಾದೇವಿ ಮಠಪತಿ ಪ್ರಾರ್ಥನೆ ನಡೆಸಿಕೊಟ್ಟರು.
ಜಯಶ್ರೀ ಪ್ರಕಾಶ ಮಠಪತಿ ಭಕ್ತಿ ದಾಸೋಹಗೈದರು. ಲಾವಣ್ಯ ಹಂಗರಗಿ ನಿರೂಪಿಸಿದರು. ಅಭಿಲಾಶ ಪುರಾಣಿಕಮಠ ಸ್ವಾಗತಿಸಿದರು.
fine.