ಲಿಂಗಾಯತ ಮಹಿಳಾ ಸಮಾಜದಿಂದ ಮಹಿಳಾ ಕಲಾ ಸಂತೆ, ಜನಪದ ಜಾತ್ರೆ

ಕಲಾ ಸಂತೆಯಿಂದ ಸ್ಥಳೀಯ ಕಲೆ, ಸಂಸ್ಕೃತಿ, ಉದ್ಯಮಿಗಳಿಗೆ ಪ್ರೋತ್ಸಾಹ: ಅಲ್ಲಮಪ್ರಭು ಸ್ವಾಮೀಜಿ

ಬೆಳಗಾವಿ:

ನಮ್ಮ ನಾಡಿನ ಕಲಾವಿದರು ತಮ್ಮ ಕೈಚಳಕದಿಂದ ತಯಾರಿಸಿದ ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಜನಪದ ಪರಂಪರೆಯ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ನೀಡುವ “ಕಲಾ ಸಂತೆ” ಒಂದು ವಿಭಿನ್ನ ಜನಪದ ಜಾತ್ರೆಯಾಗಿದ್ದು, ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಗ್ರಾಮೀಣ ಉದ್ಯಮಿತ್ವವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಲಿಂಗಾಯುತ ಮಹಿಳಾ ಸಮಾಜದಿಂದ ನಾಗನೂರು ರುದ್ರಾಕ್ಷಿಮಠದ ಎಸ್.ಜಿ.ಬಿ.ಐ.ಟಿ. ಕಾಲೇಜು ಆವರಣದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ  “ಕಲಾ ಸಂತೆ – 2026” ಜನಪದ ಜಾತ್ರೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ನಾಡಿನ ಜನಪದ ಸಂಸ್ಕೃತಿ, ಕಲೆ ಮತ್ತು ಮಹಿಳಾ ಉದ್ಯಮಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಜಾತ್ರೆಯನ್ನು ಶ್ರೀಮಠದ ಆವರಣದಲ್ಲಿ ನಡೆಸಲಾಗುತ್ತಿದೆ. ಜನಪದ ಕಲೆಗಳ ಪ್ರದರ್ಶನ, ಸಾಂಪ್ರದಾಯಿಕ ಜನಪದ ಸಂಸ್ಕೃತಿಯ ಸೊಗಡನ್ನು ಪರಿಚಯಿಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಕಲಾಸಂತೆಯ ಪ್ರಯೋಜನವನ್ನು ನಾಡಿನ ಜನತೆ ಪಡೆದುಕೊಳ್ಳಬೇಕು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿ, ಮಹಿಳೆ ಎಂದರೆ ಪ್ರಕೃತಿ, ಅಮ್ಮಾ ಎಂದರೆ ಸಂಸ್ಕೃತಿ. ಪ್ರಕೃತಿ ಮತ್ತು ಸಂಸ್ಕೃತಿಗಳ ಸಮ್ಮಿಳತವಾಗಿರುವ  ಮಹಿಳೆ ಒಂದು ವಿಶ್ವವಿದ್ಯಾಲಯವಿದ್ದಂತೆ ಎಂದರು.

ಮುಂದುವರಿದು ಮಾತನಾಡಿದ ಅವರು ಸಹಾಯಮಾಡುವ ಕೈಗಳು ಪ್ರಾರ್ಥಿಸುವ ತುಟಿಗಳಿಗಿಂತ ಶ್ರೇಷ್ಠವಾಗಿರುವುದರಿಂದ ಎಲ್ಲರೂ ಸಂಕಟದಲ್ಲಿರುವವರಿಗಾಗಿ ಪ್ರಾರ್ಥಿಸುವ ಬದಲು ಸಹಾಯ ಮಾಡುವ ಒಳ್ಳೆಯ ಗುಣ ಅಳವಡಿಸಿಕೊಳ್ಳೋಣ. ಏಕೆಂದರೆ ಒಳ್ಳೆಯತನದ ಬೆಲೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮರಾಠಾ ಮಂಡಳ ಸಮೂಹ ಸಂಸ್ಥೆಗಳ ಅಧ್ಯಕ್ಷೆ ರಾಜಶ್ರೀ ಹಲಗೇಕರ ಮಾತನಾಡಿ, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ. ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳು ಅನೇಕ ದುಶ್ಚಟಗಳಿಗೆ ದಾಸರಾಗುತ್ತಿದ್ದು ಇದಕ್ಕೆ ಮಕ್ಕಳು ಹಾಗೂ ಪಾಲಕರ ನಡುವಿನ ಅಂತರವೇ ಕಾರಣವಾಗಿದೆ. ಕಾರಣ ತಾಯಂದಿರು ಶಾಲಾ-ಕಾಲೇಜಿನ ಅವಧಿಯ ನಂತರ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾ ಅವರೊಂದಿಗೆ ಬೆರೆಯಬೇಕು ಎಂದರು.

ವೇದಿಕೆಯ ಮೇಲೆ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಸೇಠ್, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ವೀ.ಲಿಂ. ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ನಯನಾ ಗಿರಿಗೌಡರ ಪ್ರಾರ್ಥಿಸಿದರು. ಶಾರದಾ ಭೋಜ, ಲತಾ ವಿಜಾಪೂರೆ ಪರಿಚಯಿಸಿದರು. ರಕ್ಷಾ ದೇಗಿನಹಾಳ ನಿರೂಪಿಸಿದರು. ಕೊನೆಗೆ ಸರೋಜಾ ನಿಶಾನದಾರ ವಂದಿಸಿದರು.

ಕಲಾ ಸಂತೆಯಲ್ಲಿ  ಬೆಳಗಾವಿಯ ಮಹಿಳೆಯರು ಮಾತ್ರವಲ್ಲದೆ ಸೊಂಡೂರು, ವಿಜಯಪುರ, ದಾವಣಗೆರೆ, ಧಾರವಾಡ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *