ಕನ್ನೇರಿ ಶ್ರೀ ಬಹಿರಂಗ ಕ್ಷಮೆ ಕೇಳದಿದ್ದರೆ ಲಿಂಗಾಯತರು ಮಠ ಬಿಟ್ಟು ತೊಲಗಿ ಎಂದು ಚಳುವಳಿ ಮಾಡಬೇಕಾದೀತು!
ಬೀದರ
ಮಹಾರಾಷ್ಟದ ಕೋಲ್ಹಾಪುರ ಸಮೀಪದ ಕನ್ಹೇರಿ ಮಠ ಬಸವಾದಿ ಶರಣರ ಮತ್ತು ಶೂನ್ಯ ಪೀಠದ ಪರಂಪರೆಯ ಮಠ. ಶರಣರಾದ ಶ್ರೀ ಕನ್ನೇರಿ ಕಾಡಸಿದ್ದೇಶ್ವರರು ಅಪ್ಪಟ ಬಸವ ಭಕ್ತರು.
ಆದರೆ ಆ ಶರಣ ಪರಂಪರೆಯ ಪೀಠದ ಮೇಲೆ ಕುಳಿತಿರುವ ಈಗಿನ ಮಠಾಧೀಶರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಗಳು ಶರಣರ ಪರಂಪರೆಯನ್ನೇ ಅದೃಶ್ಯಗೊಳಿಸಿದ್ದಾರೆ. ಇತ್ತೀಚಿಗೆ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಆರೋಪಿಸಿದ್ದು, ಭಕ್ತರೊಬ್ಬರು ನಿಮ್ಮ ಮಠವು ವೈದಿಕವೋ ಅಥವಾ ಅವೈದಿಕವೋ ಎಂದು ಪ್ರಶ್ನೆ ಕೇಳಿದಾಗ ಅದನ್ನು ಕೇಳಲು ನೀ ಯಾರು? ಎಂದು ಸ್ವಾಮಿಗಳು ಉದ್ಧಟತನ ಪ್ರದರ್ಶಿಸಿದ್ದಾರೆ. ವಚನಗಳನ್ನು ಬೊಗಳು ಬರೀ ಹಂಗೆ ಪ್ರಶ್ನೆ ಕೇಳುತ್ತಿದ್ದಿಯಲ್ಲ ಎಂದು ದುರಹಂಕಾರದಿಂದ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅವಮಾನ ಮಾಡಿದ್ದಾರೆ.
ಈ ಕನ್ನೇರಿ ಮಠವು ವೈದಿಕ ಮಠವೋ ಅಥವಾ ಲಿಂಗಾಯತ ಧರ್ಮದ ಮಠವೋ ಎಂಬುದಕ್ಕೆ ಈ ಮಠದ ಕರ್ತೃ ಅಥವಾ ಮೂಲಪುರುಷ ಕಾಡಸಿದ್ದೇಶ್ವರ ವಚನಗಳಿಂದಲೇ ತಿಳಿದುಕೊಳ್ಳೋಣ.
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇವು ಲಿಂಗಾಯತ ಧರ್ಮದ ಅಂಗವಾಗಿವೆ. ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಮತ್ತು ಭೃತ್ಯಾಚಾರ ಪ್ರಾಣ ಸ್ವರೂಪವಾಗಿವೆ. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಆರು ಸ್ಥಲಗಳು ಲಿಂಗಾಯತ ಧರ್ಮ ಪುರುಷನ ಆತ್ಮದಂತಿವೆ. ಬಸವ ತತ್ವನಿಷ್ಠರಾದ ಕಾಡಸಿದ್ದೇಶ್ವರ ಶರಣರು ಸಹ ಈ ವಿಷಯ ಕುರಿತು ೫೦೦ ವಚನಗಳನ್ನು ರಚಿಸಿದ್ದಾರೆ. ಮತ್ತು ಅದರಂತೆ ನಡೆದುಕೊಂಡಿದ್ದಾರೆ.
ಆದರೆ ಅದೇ ಮಠದ ಮಠಾಧೀಶರಾಗಿರುವ ಈ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಗಾಳಿಗೆ ತೂರಿ ಸಂಪೂರ್ಣವಾಗಿ ಈ ಮಠವನ್ನು ಕಟ್ಟಾ ವೈದಿಕ ಮಠವನ್ನಾಗಿ ಬದಲಿಸಿದ್ದಾರೆ.
ಹಣೆಯ ಮೇಲೆ ವಿಭೂತಿಯಿಲ್ಲ. ಸದಾವಕಾಲ ಕುಂಕುಮ ಧರಿಸಿ ವೈದಿಕನಂತೆ ಪ್ರದರ್ಶಿಸುವ ಈ ಸ್ವಾಮಿಗಳ ಕೊರಳಲ್ಲಿ ಇಷ್ಟಲಿಂಗವಿದೆಯೋ ಇಲ್ಲವೋ ಅನುಮಾನವಿದೆ. ಶ್ರೀ ಕಾಡಸಿದ್ದೇಶ್ವರ ಶರಣರು ಬರೆದ ವಚನಗಳು ಗಣಾಚಾರ ತತ್ವದಿಂದ ಕೂಡಿವೆ.
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ
ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ………
ಎಂಬ ವಚನದಲ್ಲಿ ಬಸವಾದಿ ಶರಣರು ಹೇಳಿದ ತತ್ವಗಳು ಅಲ್ಲಗೆಳೆಯುವ ಮತಿಭ್ರಷ್ಟರನ್ನು ಕಾಲು ಮೇಲಕ್ಕೆ ತಲೆ ಕೆಳಕ್ಕೆ ಮಾಡಿ
ಅವರಂಗದ ಮೇಲಿನ ಚರ್ಮವ
ಹೋತ ಕುರಿತಗಳ ಚರ್ಮ ಹರಿದ ಹಾಗೆ ಹರಿದು
ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ. –
ಎಂಬ ಆಕ್ರೋಶವೂ ಇದೆ (ಕಾಡಸಿದ್ದೇಶ್ವರ ವಚನ ೨೬.)
ಇಷ್ಟಲಿಂಗಕ್ಕೆ ರೂಪು ಮೊದಲಾದ ಪದಾರ್ಥವ ಕೊಟ್ಟು ಸೇವಿಸಬೇಕು. ಪ್ರಾಣಲಿಂಗಕ್ಕೆ ರುಚಿ ಪದಾರ್ಥವನರ್ಪಿಸಿ ಸೇವಿಸಬೇಕು. ಭಾವಲಿಂಗಕ್ಕೆ ತೃಪ್ತಿ ಪದಾರ್ಥವನರ್ಪಿಸಿ ಸೇವಿಸಬೇಕು ಅವನೇ ಶರಣ ಸತಿ ಲಿಂಗಪತಿ ಎಂದು ಶರಣರು ತಮ್ಮ ೧೦೫ನೇ ವಚನದಲ್ಲಿ ಹೇಳುತ್ತಾರೆ.
ಲಿಂಗ ಜಂಗಮ ಒಂದೆಂದರಿಯದೆ
ಭಿನ್ನವಿಟ್ಟು ಅರ್ಚಿಸುವರು
ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೇ?
ಲಿಂಗವೇ ಅಂಗ ಜಂಗಮವೇ ಪ್ರಾಣ ಎಂದು ಶ್ರೀ ಕಾಡಸಿದ್ದೇಶ್ವರರು ತಮ್ಮ ೯೭ನೇ ವಚನದಲ್ಲಿ ಹೇಳಿದ್ದಾರೆ. ಇಷ್ಟಲಿಂಗದ ಹೊರತು ಅನ್ಯದೇವತೆಗಳ ಪೂಜೆಯನ್ನು ಖಂಡಿಸಿದ್ದಾರೆ.
ಇಷ್ಟಲಿಂಗದ ಮಹತ್ವ ಅರಿಯದೆ ದೇವರನ್ನು ಹೊರಗೆ ಹುಡುಕುವವರ ಕುರಿತು ಕಾಡಸಿದ್ದೇಶ್ವರ ಶರಣರು ಕುರುಡನ ಕೈಯಲ್ಲಿ ಕನ್ನಡಿಯ ಕೊಟ್ಟರೆ ನೋಡಬಲ್ಲನೇ? ಎಂದು ನೋವಿನಿಂದ ಹೇಳಿದ್ದಾರೆ.
ಅಂತಹ ಮಹಾನ್ ಶರಣರ ಸ್ಥಾನದಲ್ಲಿ ಕುಳಿತ ಸ್ವಾಮಿಗಳು ಇಷ್ಟಲಿಂಗದ ಮಹತ್ವ ಅರಿಯದೆ ವೈದಿಕರ ಬೆನ್ನು ಹತ್ತಿರುವುದು ಲಿಂಗಾಯತರ ದುರ್ದೈವ ಸರಿ.
ಕಾಡಸಿದ್ದೇಶ್ವರ ಶರಣರು ತಮ್ಮ ಇನ್ನೊಂದು ವಚನದಲ್ಲಿ ಲೌಕಿಕ ಯಾರು ಎಂಬುದನ್ನು ವಿವರಿಸುತ್ತ
ಹೊನ್ನು ಹೆಣ್ಣು ಮಣ್ಣನ್ನು ಹಿಡಿದು
ಆಚರಿಸುವುದು ಲೌಕಿಕವಲ್ಲ
ಸತಿಸುತರ ಹಿಡಿದು ಮನೆಮಾರು ಕಟ್ಟಿ
ಪ್ರಪಂಚ ಮಾಡುವುದು ಲೌಕಿಕವಲ್ಲ
ಯಾವುದು ಲೌಕಿಕವೆಂದರೆ ಶ್ರೀ ಗುರು ಕರುಣದಿಂದ ಪಡಕೊಂಡ
ಕರಕಮಲದ ಲಿಂಗಾಂಗ ಸಮರಸವನರಿಯದೆವರು
ಲೌಕಿಕರು ನೋಡೆಂದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
(ಕಾಡಸಿದ್ದೇಶ್ವರ ವಚನ ಸಂ. ೪೨೭)
ಈಗಿನ ಸ್ವಾಮಿಗಳು ಇಷ್ಟಲಿಂಗ ಯೋಗದ ಮರ್ಮವನರಿಯದೆ ಲೌಕಿಕವಾಗಿ ತಿರುಗುತ್ತಿರುವುದು ಮಹಾದುರಂತವೆಂದೇ ಹೇಳಬೇಕಾಗುತ್ತದೆ.
ಗುರುವಿನಿಂದ ಇಷ್ಟಲಿಂಗ ಧರಿಸಿ ಕಲ್ಲು ಕಟ್ಟಿಗೆ ಮಣ್ಣನ್ನು ಪೂಜಿಸುವವರು ಹುಟ್ಟು ಕುರುಡರು ಎಂದು ಶರಣ ಕಾಡಸಿದ್ದೇಶ್ವರರು ಕುಟುಕಿದ್ದಾರೆ.
ತಮ್ಮ ಮಠದ ಮೂಲ ಕರ್ತೃಗಳ ಆಶಯಕ್ಕೆ ತತ್ವಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈ ಅದೃಶ್ಯ ಸ್ವಾಮಿಗಳು ಬಸವ ಭಕ್ತರಿಗೆ ತಾಲಿಬಾನಿಗಳು ಎಂದು ಹೇಳುವುದು ಹಾಸ್ಯಾಸ್ಪದ. ಗುರುಲಿಂಗ ಜಂಗಮಕ್ಕೆ ದ್ರೋಹ ಮಾಡಿ ಬಸವಾದಿ ಶರಣರ ಮಠವನ್ನು ವೈದಿಕ ಮಠವನ್ನಾಗಿ ಮಾಡಿ ತಾನೂ ವೈದಿಕನಾಗುವುದು ಧರ್ಮದ್ರೋಹದ ಕೆಲಸ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಬಸವ ಭಕ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಿ ಇನ್ನು ಮುಂದೆ ಲಿಂಗಾಯತ ಧರ್ಮದಂತೆ ನಡೆಯುತ್ತೇನೆಂದು ಮಾತು ಕೊಡಬೇಕು. ಇಲ್ಲವಾದರೆ ಲಿಂಗಾಯತರು ಮಠ ಬಿಟ್ಟು ತೊಲಗಿ ಎಂದು ಚಳುವಳಿ ಮಾಡಬೇಕಾದೀತು!
ಇಂತಹ ಕಾವಿಧಾರಿಗಳಿಂದ ಲಿಂಗಾಯತ ಧರ್ಮ ಯುವಸಮುದಾಯ ಎಚ್ಚತ್ತುಕೊಂಡು ಉಗ್ರಹೋರಾಟ ಮಾಡಬೇಕು ಎಂಬುದು ನನ್ನ ಅಬಿಪ್ರಾಯ.🙏