ಯಲಬುರ್ಗಾ ಗ್ರಾಮದಲ್ಲಿ ವಚನ ತತ್ವದಂತೆ ಮಗುವಿಗೆ ನಾಮಕರಣ

ಬಸವರಾಜ ಎಸ್. ಹೂಗಾರ
ಬಸವರಾಜ ಎಸ್. ಹೂಗಾರ

ನಾಮಕರಣ ಕೇವಲ ಪ್ರದರ್ಶನವಲ್ಲ, ಅದೊಂದು ಸಂಸ್ಕಾರ

ಯಲಬುರ್ಗಾ :

ತಾಲೂಕಿನ ವನಜಭಾವಿ ಗ್ರಾಮದ ನೀಲಮ್ಮ ಮತ್ತು ದೇವಪ್ಪ ಕೋಳೂರು ಶರಣ ದಂಪತಿಯ ಮಗಳ ನಾಮಕರಣ ಕಾರ್ಯಕ್ರಮ ಲಿಂಗಾಯತ ಧರ್ಮದ ವಚನತತ್ವಗಳಂತೆ ನಡೆಯಿತು.

ರಾಷ್ಟ್ರೀಯ ಬಸವ ದಳದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಮಗುವಿಗೆ ಲಿಂಗದೀಕ್ಷೆ ನೀಡುವುದರ ಮೂಲಕ “ಅಕ್ಕಮಹಾದೇವಿ” ಎಂದು ನಾಮಕರಣ ಮಾಡಲಾಯಿತು.

ಆರಂಭದಲ್ಲಿ ವೇದಿಕೆಯ ಷಟಸ್ಥಲ ಧ್ವಜಾರೋಹಣವನ್ನು ಮಾಜಿ ತಾಲೂಕ ಪಂಚಾಯತ ಸದಸ್ಯರಾದ ರುದ್ರಪ್ಪ ಮರಕಟ್ಟ ನೆರವೇರಿಸಿದರು. ವಿದ್ಯುಕ್ತವಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಪೂಜ್ಯರು, ಅನುಭಾವಿಗಳು ಅನುಭಾವದ ನುಡಿಗಳನ್ನು ಆಡಿದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು ಅನುಭಾವ ನೀಡುತ್ತ, ಇಂದಿನ ದಿನಮಾನದಲ್ಲಿ ಪೋಷಕರ ಜವಾಬ್ದಾರಿ ಮಗುವಿಗೆ ಶರಣರ ಹೆಸರಿಡುವುದು ಎಷ್ಟು ಮುಖ್ಯವೋ, ಆ ಹೆಸರಿಗೆ ತಕ್ಕಂತೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ.

ಮನೆಯಲ್ಲಿ ದಿನಾಲೂ ಶರಣರ ವಚನಗಳನ್ನು ಪ್ರಾರ್ಥನೆಯ ರೂಪದಲ್ಲಿ ಹೇಳಿಕೊಡುವುದರಿಂದ ಮಗುವಿನಲ್ಲಿ ಉತ್ತಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ನಾಮಕರಣ ಮಾಡುವುದೆಂದರೆ ಕೇವಲ ಹೆಸರಿಡುವುದಲ್ಲ; ಬದಲಿಗೆ ಮಗುವನ್ನು ಸಮಾಜದ ಜವಾಬ್ದಾರಿಯುತ, ಸಂಸ್ಕಾರವಂತ ಮತ್ತು ಕಾಯಕನಿಷ್ಠ ಪ್ರಜೆಯನ್ನಾಗಿ ರೂಪಿಸುವಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಬಸವದಳದ ಬಸವನಗೌಡ ಪೋಲಿಸ ಪಾಟೀಲ ಅವರು, ನಾಮಕರಣ ಕೇವಲ ಪ್ರದರ್ಶನವಲ್ಲ, ಅದೊಂದು ಸಂಸ್ಕಾರ. ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳು ಕೇವಲ ಆಡಂಬರ ಮತ್ತು ಅತಿಥಿಗಳ ಸತ್ಕಾರಕ್ಕೆ ಸೀಮಿತವಾಗುತ್ತಿರುವುದು ವಿಷಾದದ ಸಂಗತಿ.

ಮಗುವಿನ ಮನಸ್ಸು ಹಸಿಗೋಡೆಯಿದ್ದಂತೆ. ಆರಂಭದಲ್ಲೇ ಮಗುವಿಗೆ ವಚನಗಳ ಸಂಸ್ಕಾರ ಹಾಗೂ ಉತ್ತಮ ನಡತೆಯ ಪಾಠಗಳನ್ನು ಪರಿಚಯಿಸುವುದು ಬಹಳ ಮಹತ್ವದ್ದಾಗಿದೆ ಎಂದರು.

ಗೌರವ ಉಪಸ್ಥಿತರಾಗಿ ಅನುಭಾವಿ ಅಮರೇಶಪ್ಪ ಬಳ್ಳಾರಿ ಅವರು ಮಾತನಾಡಿ, ನಾಮಕರಣದ ದಿನದಿಂದಲೇ ಮಗುವಿನ ಸುತ್ತಮುತ್ತ ಜ್ಞಾನ ಮತ್ತು ಭಕ್ತಿಯ ವಾತಾವರಣ ನಿರ್ಮಾಣವಾಗಬೇಕು.

ಅಂಧಶ್ರದ್ಧೆ ಮುಕ್ತ ನಾಮಕರಣ ಕಾರ್ಯ ನಡೆಯಬೇಕು. ವಚನ ಸಾಹಿತ್ಯ ಮೂಢನಂಬಿಕೆ ಮತ್ತು ಜಾತೀಯತೆಯನ್ನು ವಿರೋಧಿಸಿದೆ. ಆದ್ದರಿಂದ ಮಗುವಿಗೆ ಹೆಸರಿಡುವಾಗ ಯಾವುದೇ ಗ್ರಹಬಲ, ಜಾತಕದ ಅಂಧಶ್ರದ್ಧೆ ಅಥವಾ ಭಯಕ್ಕೆ ಬಿದ್ದು ಹೆಸರಿಡುವ ಬದಲು, ಮಗುವಿನ ಭವಿಷ್ಯಕ್ಕೆ ಘನತೆ ತರುವಂತಹ ಸಾರ್ವತ್ರಿಕ ಮತ್ತು ಮಾನವೀಯ ಮೌಲ್ಯಗಳುಳ್ಳ ಹೆಸರನ್ನು ಇಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಹೂಗಾರ ಅವರು, ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಅನುಗುಣವಾಗಿ ಮಗುವಿಗೆ ನಾಮಕರಣವನ್ನು ವಿಶೇಷವಾಗಿ ಮಾಡುವುದರ ಮೂಲಕ, ಸಂಸ್ಕಾರ ಹಾಗೂ ಬಸವಾದಿ ಶಿವಶರಣರ ವಚನ ಸಾಹಿತ್ಯದ ಮಹತ್ವದ ಕುರಿತು ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವನಿಗೆ ಎಂಬಂತೆ, ನೀಲಮ್ಮ ಮತ್ತು ದೇವಪ್ಪ ಕೋಳೂರು ಈ ದಂಪತಿಗಳು ಏಕದೇವೋಪಾಸಕರಾಗಿ, ಶರಣ ಸಂಸ್ಕೃತಿ ಪ್ರಕಾರ ಮಗುವಿಗೆ ನಾಮಕರಣ ಮಾಡುವುದರ ಮೂಲಕ ಜನಸಮುದಾಯದ ಆಚರಣೆಗಳ ಬದಲಾವಣೆಗೆ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶರಣ ದಂಪತಿಗಳಾದ ಅಮರೇಶಪ್ಪ ಬಳ್ಳಾರಿ ಮತ್ತು ಬಸವರಾಜ ಹೂಗಾರ ದಂಪತಿಗಳಿಗೆ ಗೌರವ ಸತ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ದೇವಪ್ಪ ಕೋಳೂರು, ಹಂಪಣ್ಣ ತಾವರಗೇರಾ, ರುದ್ರಪ್ಪ ಹಳ್ಳಿ, ಶಂಕ್ರಪ್ಪ ಬೇವೂರ, ಶರಣಪ್ಪ ಅಬ್ಬಿ, ಗಿರಮಲ್ಲಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಶರಣಮ್ಮ, ಯಮನಮ್ಮ ಗೌಡ್ರು, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ, ಬಸಮ್ಮ ಹೂಗಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *