ಕುಂಭಮೇಳ ಭಾಗ್ಯ: ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ. (ಟಿ ಆರ್ ಚಂದ್ರಶೇಖರ್)

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಟಿ ಆರ್ ಚಂದ್ರಶೇಖರ್ ಅವರ ಪ್ರತಿಕ್ರಿಯೆ.

ನಿಮ್ಮ ಮತ

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ



  1. ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು?

ಇತ್ತೀಚಿಗಿ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ್ ಅವರು ಕುಂಭಮೇಳಕ್ಕೆ ವಿಶೇಷವಾಗಿ ಕರ್ನಾಟಕದ ಲಿಂಗಾಯತರನ್ನು ಕರೆದುಕೊಂಡು ಬರುವಂತೆ ಆರ್‌ಎಸ್‌ಎಸ್ ಮುಖ್ಯಸ್ಥರುಗಳಿಗೆ(ದತ್ತಾತ್ರೇಯ ಹೊಸಬಾಳೆ)ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಅವರ ಪ್ರಕಾರ ಕುಂಭಮೇಳವು ಧಾರ್ಮಿಕ ಆಚರಣೆ ಮಾತ್ರವಲ್ಲ; ಇದೊಂದು ಸಾಂಸ್ಕೃತಿಕ ಹಬ್ಬ. ಆದರೆ ಅವರು ಹೇಳದೆ ಹೋದ ಸಂಗತಿಯೆಂದರೆ ಈ ಆಹ್ವಾನದ ಮೂಲದಲ್ಲಿ ‘ರಾಜಕೀಯ’ವೂ ಇದೆ ಎಂಬುದಾಗಿದೆ. ಮೋದಿ ಈಗ ಆರ್‌ಎಸ್‌ಎಸ್‌ನ ಅಚ್ಚುಮೆಚ್ಚಿನ ನಾಯಕರಾಗಿ ಉಳಿದಿಲ್ಲ. ಇದನ್ನು ಮನಗಂಡ ಆಧಿತ್ಯನಾಥ್ ಅವರು ಆರ್‌ಎಸ್‌ಎಸ್ ಮೆಚ್ಚಿಸುವುದಕ್ಕಾಗಿ, ಉತ್ತರ ಪ್ರದೇಶದಲ್ಲಿ ತಮ್ಮ ಬೆಂಬಲ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಆರ್‌ಎಸ್‌ಎಸ್ ಮೊರೆ ಹೋಗಿದ್ದಾರೆ. ಇದು ಆರ್‌ಎಸ್‌ಎಸ್ ವಿಸ್ತರಣಾ ಕಾರ್ಯಯೋಜನೆಯಾಗಿದೆ.

ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ, ಹಿಂದುತ್ವ್ವಕ್ಕೆ ಪ್ರಬಲವಾದ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ವಿರೋಧಿ ಸಮುದಾಯ ಲಿಂಗಾಯತ ಸಮುದಾಯ, ಬಸವ ಧರ್ಮ. ಕಳೆದುಕೊಳ್ಳುತ್ತಿರುವ ಲಿಂಗಾಯತದ ಮೇಲಿನ ತನ್ನ ಹಿಡಿತವನ್ನು ಮರುಸ್ಥಾಪಿಸುವುದಕ್ಕಾಗಿ ಲಿಂಗಾಯತರನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಯೋಜನೆಯನ್ನು ಅದು ಸಿದ್ಧಪಡಿಸುತ್ತಿದೆ. ಇದಕ್ಕೆ ಅಗತ್ಯವಾದ ಹಣಕಾಸಿನ ಕೊರತೆಯೇನು ಆರ್‌ಎಸ್‌ಎಸ್‌ಗಿಲ್ಲ. ಅದೊಂದು ದೇಶದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಸಂಘಟನೆಯಾಗಿದೆ.

ಹೀಗೆ ಕುಂಭಮೇಳಕ್ಕೆ ಲಿಂಗಾಯತರನ್ನು ಕರೆದೊಯ್ಯವ ಮೂಲಕ, ಅವರಲ್ಲಿ ಬ್ರಾಹ್ಮಣ್ಯದ ಬಗ್ಗೆ(ಬ್ರಾಹ್ಮಣರ ಬಗ್ಗೆ) ಒಂದು ಬಗೆಯ ಭಯವನ್ನು, ಆರಾಧನೆಯ ಭಾವನೆಯನ್ನು ಉಂಟು ಮಾಡುವುದು ಸದರಿ ಆಹ್ವಾನದ ಹಿಂದಿನ ಉದ್ದೇಶವೂ ಆಗಿರಬಹುದು. ಈ ಆಹ್ವಾನದ ಹಿಂದಿನ ಮೂಲ ಉದ್ದೇಶ ಇದಾಗಿದೆ.

  1. ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ?

ಮೊದಲನೆಯದಾಗಿ ಆರ್‌ಎಸ್‌ಎಸ್‌ನ ದೊಡ್ಡ ಪ್ರಬಲ ಪ್ರಭಾವಿ ಬೆಂಬಲಿಗ ಲಿಂಗಾಯತ ಸ್ವಾಮೀಜಿಗಳಿಗೆ ಆಹ್ವಾನ ಬರುತ್ತದೆ. ಅವು ಯಾವುವೆಂದು ಹೇಳಬೇಕಾಗಿಲ್ಲ.

ಎರಡನೆಯ ಹಂತದಲ್ಲಿ ಹಣಕ್ಕಾಗಿ ಹಾತೊರೆಯುತ್ತಿರುವ ಸಣ್ಣ-ಪುಟ್ಟ (ಕಾಂಜಿಪಿಂಚಿ)ಮಠಾಧೀಶರುಗಳಿಗೆ ಆಹ್ವಾನ ಬರುತ್ತದೆ. ಹಣದ ಆಮಿಷವೂ ಇದರ ಹಿಂದಿರುತ್ತದೆ. ಇದರ ಮೂಲಕ ಹೆಚ್ಚು ಹೆಚ್ಚು ಲಿಂಗಾಯತರನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗಬಹುದು ಎಂಬುದು ಇದರ ಮೂಲದಲ್ಲಿನ ಹುನ್ನಾರವಾಗಿದೆ.

ನಂತರ ಕುಂಕುಮಧಾರಿ (ಪ್ರಚ್ಛನ್ನ)ಬಸವ-ವಿರೋಧಿ ರಾಜಕೀಯ ನಾಯಕರುಗಳಿಗೆ ಆಹ್ವಾನ ಬರುತ್ತದೆ. ಕೊನೆಯದಾಗಿ ಅಧಿಕಾರ-ಸ್ಥಾನಮಾನಗಳಿಗಾಗಿ ಹಾತೊರೆಯುತ್ತಿರುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು, ಶಿಕ್ಷಕರು, ಸರ್ಕಾರ ಅಧಿಕಾರಿಗಳು, ಕೋಮುವಾದಿಗಳು, ಉದ್ದಿಮೆದಾರರು ಮುಂತಾದವರಿಗೆ ಆಹ್ವಾನ ಬರಬಹುದು.

ಈ ಆಹ್ವಾನ ಯಾವ ರೂಪದಲ್ಲಿ ಬರಬಹುದೆಂದರೆ ಮಂತ್ರಾಕ್ಷತೆ ಮೂಲಕ, ಪ್ರಯಾಣದ ಹಣವನ್ನು ತುಂಬಿಕೊಡುವ ಆಶ್ವಾಸನೆ ರೂಪದಲ್ಲಿ, ಸ್ಥಾನಮಾನದ ಆಶ್ವಾಸನೆ ರೂಪದಲ್ಲಿ, ಒಕ್ಕೂಟ ಸರ್ಕಾರದ ವಿಶೇಷ ಯೋಜನೆಗಳು ಆದ್ಯತೆಯ ಮೇಲೆ ನೆರವು ನೀಡುವ ಆಶ್ವಾಸನೆ ರೂಪದಲ್ಲಿ ಆಹ್ವಾನ ಬರಬಹುದು. ಎಲ್ಲ ರೀತಿಯ ನ್ಯೈತಿಕ-ಅನೈತಿಕ, ರಾಜಕೀಯ, ಧಾರ್ಮಿಕ ಮತಾಂಧತೆಯ, ಕೋಮುವಾದದ, ಆಮಿಷಗಳನ್ನು ನೀಡುವುದರ ಮೂಲಕವೂ ಆಹ್ವಾನ ಬರಬಹುದು.

  1. ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?

ಲಿಂಗಾಯತ ಧರ್ಮದಲ್ಲಿ ಬಸವ ಪ್ರಣಾಳಿಕೆಯಲ್ಲಿ, ವಚನ ಸಂವಿಧಾನದಲ್ಲಿ ತೀರ್ಥಯಾತ್ರೆ, ಲಿಂಗ ದರ್ಶನಗಳಿಗೆ ಸ್ಥಾನವಿಲ್ಲ. ಹಡಪದ ಅಪ್ಪಣ್ಣಗಳು ‘ತೀರ್ಥಯಾತ್ರೆ, ಲಿಂಗದರ್ಶನಕ್ಕೆ ಹೋಗಿ ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು’ ಎನ್ನುತ್ತಾರೆ. ಅಲ್ಲಿಮಪ್ರಭುದೇವರು ಇದರ ಬಗ್ಗೆ ಹೀಗೆ ಹೇಳುತ್ತಾರೆ

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ, ತುಟ್ಟತುದಿಯ
ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ, ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ
ನಿಚ್ಚಕ್ಕೆ ನಿಚ್ಚ ನೆನವ ಮನವ ಅಂದಂದಿಗೆ ಅತ್ತನಿತ್ತ ಹರಿವ ಮನವ ಚಿತ್ತದಲ್ಲಿ ನಿಲಿದಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು

ಕುಂಭಮೇಳಕ್ಕೆ ಸಂಬಂಧೀಸಿದ ನಂಬಿಕೆಯೆಂದರೆ ಅಲ್ಲಿ ತ್ರಿವೇಣಿ ಸಂಗಮದಲ್ಲಿ(ಗಂಗಾ ನದಿ, ಯಮುನಾ ನದಿ ಮತ್ತು ಮೂರನೆಯದು ಕುರುಡು ನಂಬಿಕೆಯ ಸರಸ್ವತಿ ನದಿಗಳ ಸಂಗಮ) ಮಿಂದರೆ ಎಲ್ಲ ಪಾಪಗಳು ಪರಿಹಾರವಾಗುತ್ತವೆ ಎಂಬುದಾಗಿದೆ. ಅಲ್ಲಮಪ್ರಭುಗಳು ಇವೆಲ್ಲವನ್ನು ಅಲ್ಲಗಳೆಯುತ್ತಾರೆ.

ಇದೊಂದು ಗಾಡ ಮೂಡನಂಬಿಕೆ, ಆರ್‌ಎಸ್‌ಎಸ್‌ಗೆ ವೈಜ್ಞಾನಿಕತೆಯ ಬಗ್ಗೆ, ವೈಚಾರಿಕೆತೆಯ ಬಗ್ಗೆ ನಂಬಿಕೆಯಿಲ್ಲ,. ಅದೊಂದು ‘ಮೌಢ್ಯ’ವನ್ನು ಸಮಾಜದಲ್ಲಿ ಹರಡುತ್ತಿರುವ ಒಂದು ಕೋಮುವಾದಿ-ಮತಾಂಧತೆಯ ಸಂಘಟನೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯವು ಬಸವ ಮೌಲ್ಯಕ್ಕೆ ಬದ್ಧರಾಗಿ ಕುಂಭಮೇಳದ ಆಹ್ವಾನವನ್ನು ತಿರಸ್ಕರಿಸಬೇಕು. ಇದಕ್ಕೆ ಬೆಂಬಲವಾಗಿ ನಿಲ್ಲುವ ಮಠಗಳನ್ನು, ಮಠಾಧೀಶರನ್ನು ತಿರಸ್ಕರಿಸಬೇಕು. ಇದು ನಿಜವಾದ ಲಿಂಗಾಯತ ಧರ್ಮ.
ಇದಕ್ಕೆ ಪ್ರತಿಕ್ರಿಯೆಯು ಸಂಘಟನಾತ್ಮಕವಾಗಿರಬೇಕು. ವೈಯುಕ್ತಿಕ ಮಟ್ಟದಲ್ಲಿ ಇದನ್ನು ಎದುರಿಸುವುದು ಯಶಸ್ವಿಯಾಗುವುದಿಲ್ಲ. ಸಂಘಪರಿವಾರದ ಗುಂಡಾಗಿರಿಯನ್ನು ಎದುರಿಸಬೇಕಾಗುತ್ತದೆ. ‘ವಚನ ದರ್ಶನ’ದ ಸಂದರ್ಭದಲ್ಲಿ ನಮ್ಮ ಕೆಲವು ವ್ಯಕ್ತಿಗಳು ಹಲ್ಲೆ ಮಾಡುವ, ದೈಹಿಕ ಹಿಂಸೆ ನೀಡುವ ಪ್ರಕರಣಗಳನ್ನು ಎದುರಿಸಿದ್ದಾರೆ.

  1. ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ ಏನು? ನೀವೇನು ಮಾಡುತ್ತೀರಿ?

ಈಗಾಗಲೆ ಹೇಳಿರುವಂತೆ ಇದನ್ನು ವೈಯುಕ್ತಿಕ್ಕಿಂತ ಸಂಘಟನಾತ್ಮಕವಾಗಿ ಎದುರಿಸಬೇಕು. ವೈಯುಕ್ತಿಕವಾಗಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಬಹುದು. ಕರಪತ್ರವನ್ನು ಮುದ್ರಸಿ ಹಂಚಬಹುದು. ಈ ಬಗ್ಗೆ ಜನಜಾಗೃತಿಗಾಗಿ ಬುಕ್‌ಲೆಟ್‌ಗಳನ್ನು ಪ್ರಕಟಿಸಬಹುದು. ಈ ಆಹ್ವಾನಕ್ಕೆ ಬೆಂಬಲ ನೀಡುವ ಮಠಗಳ ಎದುರಿಗೆ ಮತ್ತು ಅವುಗಳ ಸ್ವ್ವಾಮೀಜಿಗಳ ಎದುರಿಗೆ ಪ್ರತಿಭಟನೆ ನಡೆಸಬಹುದು. ಇಡೀ ಲಿಂಗಾಯತ ಸಮುದಾಯವು ಇದರ ವಿರುದ್ಧ ಎದ್ದು ನಿಲ್ಲಬೇಕು. ಕುಂಭಮೇಳಕ್ಕೆ ಲಿಂಗಾಯತದಲ್ಲಿ ಸ್ಥಾನವಿಲ್ಲ ಎಂಬುದನ್ನು ನಮ್ಮ ಸ್ವಾಮೀಜಿಗಳು ಭಕ್ತರಿಗೆ ಮನವರಿಕೆ ಮಾಡಿಕೊಡಬೇಕು.

ಈ ಆರ್‌ಎಸ್‌ಎಸ್ ಹುನ್ನಾರದ ವಿರುದ್ದ ರಾಜ್ಯದಲ್ಲಿ ಒಂದು ಅಥವಾ ಎರಡು ಸಮಾವೇಶಗಳನ್ನು, ವಿಚಾರ ಸಂಕಿರಣಗಳನ್ನು ನಡೆಸುವ ಬಗ್ಗೆ ಸಂಘಟನೆಗಳ ಮೇಲೆ ವೈಯುಕ್ತಿಕವಾಗಿ ಒತ್ತಡ ತರಲು ನಾನು ಪ್ರಯತ್ನಿಸುತ್ತೇನೆ. ಇಂದು ಲಿಂಗಾಯತರು ಜಾಗೃತರಾಗಿದ್ದಾರೆ, ಎಚ್ಚರಗೊಂಡಿದ್ದಾರೆ. ಇದನ್ನು ಲಿಂಗಾಯತರು ವಿಪ್ರೋತ್ತಮರ ‘ವಚನ ದರ್ಶನ’ ಕೃತಿಗೆ ಮತ್ತು ‘ಶರಣ ಶಕ್ತಿ’ ಚಲನಚಿತ್ರಕ್ಕೆ ಸಂಬಂಧಿಸಿದಂತೆ ತೋರಿದ ಶಕ್ತಿಯನ್ನು ನೋಡಬಹುದು. ಪಾಪ-ಪುಣ್ಯಗಳು ನದಿ ಸ್ನಾನದಿಂದ ನಿವಾರಣೆಯಾಗುತ್ತವೆ ಎಂಬುದನ್ನು ನಂಬುವ ಲಿಂಗಾಯತದ ಸಂಖ್ಯೆ ಕಡಿಮೆ. “ಪವಿತ್ರ ಸ್ನಾನ” ಎಂಬುದು ಬ್ರಾಹ್ಮಣ್ಯವು ರೂಪಿಸಿರುವ ಒಂದು ತಟ್ಟೆಕಾಸಿನ ಆಚರಣೆ. ಈ ಬಗೆಯ ಗಂಗೆಯ ಪವಿತ್ರ ಸ್ನಾನದ ಬಗ್ಗೆ ಸಿದ್ಧರಾಮಣ್ಣಗಳು ಹೇಗೆ ವ್ಯಂಗ್ಯವಾಡಿದ್ದಾರೆ ಎಂಬುದನ್ನು ಕೆಳಗಿನ ವಚನದಲ್ಲಿ ನೋಡಬಹುದು.

ಗಂಗೆಯ ಘನ ಮುಟ್ಟಿದ ಪ್ರಾಣಿಗಳೆಲ್ಲ ದೇವತೆಗಳೆಂದರೆ
ಗಂಗೆಯ ಸಂಚಾರ ಸಾವಿರಾರು ಗಾವುದ
ಅದರಲ್ಲಿನ ಪ್ರಾಣಿಗಳು ಅನಂತಾನಂತ
ಇಷ್ಟು ಜೀವಿಗಳೆಲ್ಲಾ ದೇವರಾದಡೆ
ಸ್ವರ್ಗದಲ್ಲಿ ನಿಯಮಿತ ದೇವತೆಗಳೆಂಬುದು ಅಪ್ರಸಿದ್ಧ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

ಗಂಗೆಯಲ್ಲಿನ ಸ್ನಾನದ ಬಗ್ಗೆ ಸಿದ್ಧರಾಮಣ್ಣಗಳು ಅಣಕವಾಡುತ್ತಿದ್ದಾರೆ. ಇದು ಲಿಂಗಾಯತ ಸಂಹಿತೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಎಂಬುದು ಒಂದು ಬೂಟಾಟಿಕೆ. ಪುರೋಹಿತಶಾಹಿಯ ಒಂದು ಹುನ್ನಾರ, ಬ್ರಾಹ್ಮಣ್ಯವು ಬೀಸುತ್ತಿರುವ ಒಂದು ರಾಜಕೀಯ ದಾಳ. ಶ್ರೀರಾಮ ಗುಡಿಯ ರಾಜಕೀಯ ಇಲ್ಲಿ ಲಿಂಗಾಯತರ ಮುಂದೆ ಇಂದು ಕುಂಭಮೇಳಕ್ಕೆ ಸಂಬಂಧಿಸಿದಂತೆ ನಡೆಯುವುದಿಲ್ಲ. ಇಟ್ಟಿಗೆ ಹೊತ್ತ ಕಾಲ ಹೋಯಿತು. ಇದು ಲಿಂಗಾಯತ ಯುಗ.

Share This Article
5 Comments
  • ಪ್ರಗತಿಪರ ಚಿಂತಕ, ಸಾಹಿತಿಗಳ ಸಂಘಟನೆ ಹಾಗೂ ಪ್ರಗತಿಪರ ಮಠಾಧೀಶರ ಸಂಘಟನೆ ಇವುಗಳ ಒಕ್ಕೂಟದ ಮೂಲಕ ಲಿಂಗಾಯತ ಶಕ್ತಿಯನ್ನು ಕ್ರೂಢೀಕರಿಸಿಕೊಂಡು ಸಂಘಟನಾತ್ಮಕವಾಗಿ ಶರಣ ಶಕ್ತಿಯನ್ನು ಹುರಿಗೊಳಿಸಿಕೊಂಡು ಪ್ರಸ್ತುತ ದಿನಗಳಲ್ಲಿ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಜನಮಾನಸದಲ್ಲಿ ಬಿತ್ತುವ ಹಾಗೂ ವಿರೋಧಿ ಶಕ್ತಿಯನ್ನು ಎದುರಿಸಿ ಮುನ್ನಡೆಯುವುದು ಅತ್ಯಗತ್ಯವಾಗಿದೆ.

  • ಲಿಂಗಾಯತರನ್ನು ದಾರಿತಪ್ಪಿಸುವ ಗೊಂದಲ ಮೂಡಿಸುವ ಉನ್ನಾರವಾಗಿದೆ…ಲಿಂಗಾಯತರಂತೆ ಜೈನ ಬೌದ್ಧ ಸಿಖ್ಖರು ಕಬೀರ ಪಂಥದವರು ಕೂಡಾ ಗುಡಿಗುಂಡಾರ ಒಪ್ಪುವುದಿಲ್ಲ ಆದರೆ ಇವರನ್ನ ಪ್ರಬಲವಾಗಿ ವಿರೋದಿಸದ ಆರ್.ಎಸ್.ಎಸ್ ಕೇವಲ ಲಿಂಗಾಯತರನ್ನ ವಿರೋದಿಸುವುದಲ್ಲದೆ…ಲಿಂಗಾಯತ ಸಮುದಾಯದವರನ್ನ ದಾರಿತಪ್ಪಿಸುವ ಉನ್ನಾರ ಮಾಡುತ್ತೀರುವ ಕುತಂತ್ರವನ್ನ ಬಸವ ಭಕ್ತರು ಅರಿಯಬೇಕಿದೆ.

  • ಕುಂಭ ಮೇಳ ಬಸವಾದಿ ಶರಣರ ಮತ್ತು ಲಿಂಗಾಯತ ಧರ್ಮದ ಪರಂಪರೆ ಅಲ್ಲ:

    ಬಸವಣ್ಣ

    ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ
    ಅವರಂಗನೆಯರು ಲಿಂಗದ ರಾಣಿವಾಸ.
    ಅಲ್ಲಿಯೂ ಮೇಳ, ಇಲ್ಲಿಯೂ ಮೇಳ,
    #ಚೌಡೇಶ್ವರಿಯಲ್ಲಿಯೂ ಮೇಳವೇ
    ಮೊಲೆಯುಂಬ ಭಾವ ತಪ್ಪಿ ಅಪ್ಪಿದವರ
    ತಲೆಯ ಕೊಂಬ ಕೂಡಲಸಂಗಮದೇವ

    ಸಿದ್ಧರಾಮೇಶ್ವರ

    ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ;
    ಗುರುವಿನ ಗದ್ದುಗೆ ಬೇಕಿಲ್ಲ ;
    #ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ;
    ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು
    ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ

    ಅಲ್ಲಮಪ್ರಭುದೇವರು

    ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು
    ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು
    ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು.
    ಅಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ
    ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ !
    ಅನಂತ ಮೇಳಾಪದಚ್ಚಗೋಷಿ*ಯ
    ಭಂಡರೆಲ್ಲ ಇನ್ನು ಬಲ್ಲರೆ, ಹೇಳಿರೆ !
    ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಚ್ಛೆಗೆ
    ಹರಿದಾಡುವ ಹಂದಿಗಳೆಲ್ಲ
    ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ

    ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

    ಅಯ್ಯಾ, ಸೂಳೆಗೆ ಹುಟ್ಟಿದ ಮಕ್ಕಳಿಗೆ,
    ಕೊಟ್ಟವರೊಳು ಸಮ್ಮೇಳ, ಕೊಡದವರೊಳು ಕ್ರೋಧ.
    #ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.
    ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ

    ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ

  • ಕುಂಭ ಮೇಳ ಲಿಂಗಾಯತರಿಗೆ ಸಂಬಂಧ ಪಟ್ಟಿದ್ದು ಅಲ್ಲವೇ ಅಲ್ಲ .ಲಿಂಗಾಯತರನ್ನು ಓಲೈಸಲು ಮಾತ್ರ .ಮಠಾಧೀಶರಿಗೆ ಕರೆ ನೀಡಿದ್ದು ವಿಸ್ಮಯ ಸತ್ಯ.ಫ್ರಿಯಾಗಿ ಹೋಗಿ ಬರಲು ಹೋಗಿದ್ದೇನು.
    ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ😀

Leave a Reply

Your email address will not be published. Required fields are marked *