ಬಸವಕಲ್ಯಾಣ
‘ಮಾತಾಜಿ ನಿಧನದ ನಂತರ ನಗರದ 108 ಅಡಿ ಎತ್ತರದ ಬಸವಣ್ಣನವರ ಪುತ್ಥಳಿ ಆವರಣದಲ್ಲಿನ ಬಸವ ಮಹಾಮನೆಯಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಆಸ್ತಿ ಹಾಳಾಗುತ್ತಿದೆ,’ ಎಂದು ರಾಷ್ಟ್ರೀಯ ಬಸವದಳದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ ಬುಧವಾರ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ‘ಮಾತೆ ಗಂಗಾದೇವಿಯವರು ಅಲ್ಲಮಪ್ರಭು ಶೂನ್ಯ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿಯ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ಬಸವಧರ್ಮ ಪೀಠದ ಟ್ರಸ್ಟಿಯಿಂದ ಚನ್ನಬಸವಾನಂದ ಸ್ವಾಮೀಜಿ ಅವರ ಉಚ್ಚಾಟನೆಗೆ ಹಾಗೂ ಸಂಸ್ಥೆಗಾಗಿ ದುಡಿದ 50 ಜನರ ಮೇಲೆ ವಿನಾಕಾರಣ ಪ್ರಕರಣ ದಾಖಲಾಗುವುದಕ್ಕೂ ಅವರೇ ಕಾರಣ,” ಎಂದು ಆರೋಪಿಸಿದರು.
ಸಂಸ್ಥೆಯಿಂದ ಹೊರ ಹಾಕಿದವರನ್ನು ಮತ್ತೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಸಾವಿರಾರು ಬೆಂಬಲಿಗರೊಂದಿಗೆ ಬಸವ ಮಹಾಮನೆಗೆ ನುಗ್ಗಲಾಗುವುದು. ಕಾನೂನು ಪ್ರಕಾರವೂ ಕ್ರಮ ತೆಗೆದುಕೊಳ್ಳಲಾಗುವುದು, ಎಂದರು.
`ಲಿಂ.ಮಾತೆ ಮಹಾದೇವಿಯವರು ಬರೆದಿದ್ದ ಇಚ್ಛಾಪತ್ರದಲ್ಲಿ ಅಸಮರ್ಥ ಅಧ್ಯಕ್ಷರನ್ನು ತೆಗೆದು ಹೊಸಬರಿಗೆ ಸ್ಥಾನ ಕೊಡುವ ಅಧಿಕಾರ ಬಸವ ಭಕ್ತರ ಸಭೆಗೆ ಕೊಟ್ಟಿದ್ದಾರೆ. ಆದ್ದರಿಂದ ಈಚೆಗೆ ನಡೆದ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ನೆರೆದಿದ್ದ ಅಪಾರ ಬಸವಾನುಯಾಯಿಗಳು ಬಸವಧರ್ಮ ಪೀಠಾಧ್ಯಕ್ಷರನ್ನಾಗಿ ಚನ್ನಬಸವಾನಂದ ಸ್ವಾಮೀಜಿ ಅವರನ್ನು ನೇಮಿಸಿದ್ದಾರೆ,” ಎಂದರು.
ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಜಿಲ್ಲಾ ಗೌರವ ಅಧ್ಯಕ್ಷ ವಸಂತರಾವ್ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ, ರಾಜ್ಯ ಸಮಿತಿ ಸಲಹೆಗಾರ ಓಂಪ್ರಕಾಶ ರೊಟ್ಟೆ, ರವಿಕಾಂತ ಬಿರಾದಾರ ಹಾಜರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಪಾಟೀಲ ಶಿವಪುರ ಅವರು ಲಿಂ.ಮಾತೆ ಮಹಾದೇವಿಯವರು ಬರೆದ ಇಚ್ಛಾಪತ್ರದ ಪ್ರತಿಯನ್ನು ತೋರಿಸಿದರು.