ಬೆಳಗಾವಿ:
ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ಡಾ. ಫ. ಗು. ಹಳಕಟ್ಟಿ ಭವನದಲ್ಲಿ “ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ” ಆಚರಣೆ ಹಾಗೂ ಅನುಭಾವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ಧಣ್ಣ ವಾಲಿಶೆಟ್ಟಿ ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಮಹಾನ್ ಶರಣೆಯಾದ ಅಕ್ಕಮಹಾದೇವಿ ಅವರು ಭಕ್ತಿ, ವೈರಾಗ್ಯ ಮತ್ತು ಆತ್ಮಜ್ಞಾನದ ಪ್ರತೀಕವಾಗಿದ್ದಾರೆ ಎಂದು ಹೇಳಿದರು.
ಭೌತಿಕ ಸಂಪತ್ತು ಹಾಗೂ ಆಸೆ-ಆಕಾಂಕ್ಷೆಗಳಿಂದ ದೂರವಿದ್ದು ಆತ್ಮಶಾಂತಿಯನ್ನು ಸಾಧಿಸುವುದೇ ಅಕ್ಕನ ಸಂದೇಶವಾಗಿದ್ದು, ಅವರ ಜೀವನವೇ ಶುದ್ಧ ಭಕ್ತಿಗೆ ಉತ್ತಮ ಉದಾಹರಣೆಯಾಗಿದೆ ಎಂದು ವಿವರಿಸಿದರು.

ದೇವರೊಂದಿಗೆ ನೇರ ಸಂಬಂಧ ಬೆಳೆಸಿಕೊಳ್ಳುವುದು ಮತ್ತು ತನ್ನೊಳಗಿನ ಆತ್ಮವನ್ನು ಅರಿಯುವುದೇ ಜೀವನದ ಗುರಿ ಎಂದು ಅವರು ತಿಳಿಸಿದರು. ಸಮಾಜದಲ್ಲಿ ಲಿಂಗಭೇದ ಹಾಗೂ ವರ್ಣಭೇದಗಳನ್ನು ವಿರೋಧಿಸಿದ ಅಕ್ಕನವರು ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಚಿಂತಕಿ ಎಂದು ಹೇಳಿದರು.
ಇಂದಿನ ನಮ್ಮ ಜೀವನದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಂಡರೆ ಶಾಂತಿಯುತ ಮತ್ತು ಅರ್ಥಪೂರ್ಣ ಬದುಕನ್ನು ನಡೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಮಾತನಾಡಿ, ಅಕ್ಕ ಮಹಾದೇವಿಯವರ ಭಕ್ತಿ ಕರ್ತವ್ಯವಲ್ಲ, ಅದು ಪ್ರೀತಿ ಮತ್ತು ಬದುಕಾಗಿದೆ. ವೈರಾಗ್ಯ ಎಂದರೆ ಓಡಿಹೋಗುವುದು ಅಲ್ಲ, ಅದು ಒಳಗಿನ ಶಕ್ತಿಯ ಅಭಿವ್ಯಕ್ತಿ ಎಂದು ವಿಶ್ಲೇಷಿಸಿದರು.

ಸುರೇಶ ನರಗುಂದ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶ್ರೀ ವಿ. ಕೆ. ಪಾಟೀಲ ವಚನಗಳನ್ನು ವಿಶ್ಲೇಷಣೆ ಮಾಡಿದರು. ಎಂ. ವೈ. ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕಲ್ಪನಾ ಗುತ್ತಿಗೋಳಿ ದಾಸೋಹ ಸೇವೆ ಸಲ್ಲಿಸಿದರು. ಆನoದ ಕರಕಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗುರುಸಿದ್ಧಪ್ಟ ರೇವಣ್ಣವರ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಬಸವರಾಜ ಕರಡಿಮಠ, ಶಂಕರ ಗುಡಸ, ಬಸವರಾಜ ಬಿಜ್ಜರಗಿ, ಜಯಶ್ರೀ ಚವಲಗಿ, ನಂದಾ ಬಗಲಿ, ರುದ್ರಮ್ಮ ಅಕ್ಕನವರ, ಶಿವಲೀಲಾ ಗೌಡರ, ಪ್ರಸಾದ ಹಿರೇಮಠ ಸೇರಿದಂತೆ ಅನೇಕ ಬಸವಭಕ್ತರು ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
